More

    ಮಹಿಳೆಯರ ಜೈಲ್ ಭರೋ ಚಳವಳಿ

    ಹಾಸನ: ಸಮಾನ ವೇತನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಮಹಿಳೆಯರ ಜೈಲ್ ಭರೋ ಚಳವಳಿ ನಡೆಯಿತು.


    ಹೇಮಾವತಿ ಪ್ರತಿಮೆಯಿಂದ ಪ್ರಧಾನ ಅಂಚೆ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಮೂಲಸೌಕರ್ಯ ಕಲ್ಪಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.


    ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಇದುವರೆಗೆ ಜಾರಿಯಾಗಿಲ್ಲ. ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವ ದುಡಿಯುವ ವರ್ಗ ಸಾಕಷ್ಟು ತೊಂದರೆ ಅನುಭವಿಸುತ್ತಿದೆ. ಕಾರ್ಖಾನೆಗಳಲ್ಲಿ ಭತ್ಯೆ, ಸಮರ್ಪಕ ರಜೆ, ಬಡ್ತಿ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಬಂಧಿಯಾಗಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳಾ ಕಾರ್ಮಿಕರ ಸಂಬಳವು ಪುರುಷರಿಗಿಂತ ಶೇ. 34 ರಷ್ಟು ಕಡಿಮೆಯಿದೆ. ಶೇ.19 ರಷ್ಟು ಪಟ್ಟಣ ಪ್ರದೇಶಗಳಲ್ಲಿ ಕಡಿಮೆ ಇದೆ. ಭಾರತದಲ್ಲಿ ಲಿಂಗ ಭೇದದ ವ್ಯತ್ಯಾಸ ಮಿತಿ ಮೀರಿದೆ. ಈ ತಾರತಮ್ಯವು ವಿದ್ಯಾರ್ಹತೆ ಮತ್ತು ಸೇವಾ ಜ್ಯೇಷ್ಠತೆ ಹೆಚ್ಚಿದಷ್ಟು ವಿಸ್ತಾರಗೊಳ್ಳುತ್ತಿದೆ. ಬಹಳಷ್ಟು ಮಹಿಳಾ ಕಾರ್ಮಿಕರು, ಅದರಲ್ಲೂ ಅಸ್ಸಾಂ ಪ್ರಾಚೀನ ವಲಯದಲ್ಲಿ ಕೆಲಸ ಮಾಡುವವರು, ಹೆರಿಗೆ ರಜೆ ಮತ್ತು ಕ್ರೆಶ್ ಸೌಲಭ್ಯ ಪಡೆದಿಲ್ಲ. ರಾತ್ರಿ ಪಾಳಿಯ ಕೆಲಸವನ್ನು ಅವರ ಮೇಲೆ ಹೇರಲಾಗುತ್ತಿದೆ. ಸಮಾನತೆಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ಗಣಿಗಾರಿಕಾ ವಲಯದಲ್ಲಿ ಮಹಿಳೆಯರನ್ನು ಬಳಸಿ ಕೆಲಸ ಮಾಡಲು ಅನುಮತಿ ನೀಡಿದೆ ಎಂದು ಆರೋಪಿಸಿದರು.


    ಸಿಎಎ ವಿರುದ್ಧ ಆಕ್ರೋಶ: ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಯೋಚನೆಯಿಂದ ಹೊರ ಬರಬೇಕು. ಆರ್ಥಿಕ ಹಿಂಜರಿತ, ನಿರುದ್ಯೋಗ, ಅನಾರೋಗ್ಯ, ಭಯೋತ್ಪಾದಕ ದಾಳಿಗಳಿಂದ ದೇಶ ನಲುಗುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅನವಶ್ಯಕ ಪೌರತ್ವದ ಕುರಿತು ಚಿಂತಿಸುತ್ತಿದ್ದಾರೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆಗೆ ಕ್ರಮ ವಹಿಸುವ ಬದಲು ಬೇರೆ ಕೆಲಸಗಳ ಮೂಲಕ ಜನರಲ್ಲಿ ಅಸಹನೆ ಮೂಡಿಸುತ್ತಿದ್ದಾರೆ ಎಂದರು.


    ಸಿಐಟಿಯು ಮುಖಂಡರಾದ ಇಂದ್ರಮ್ಮ, ಎಂ.ಬಿ. ಪುಷ್ಪಾ, ಎಚ್.ಕೆ. ಜಯಂತಿ, ಕಾಮಾಕ್ಷಿ, ಶಾರದಾ, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts