More

    ಅಶೋಕ್‌ಗೆ ಪ್ರತಿಪಕ್ಷ ನಾಯಕನ ಪಟ್ಟ ; ಜೆಡಿಎಸ್‌ನಲ್ಲಿ ಜಾತಿ ಮತದ ಜಿಜ್ಞಾಸೆ

    ಬೆಂಗಳೂರು: ಒಕ್ಕಲಿಗ ಸಮುದಾಯದ ಆರ್.ಅಶೋಕ್ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಿರುವುದು ಜೆಡಿಎಸ್‌ನಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ.

    ಮೊದಲಿನಿಂದಲೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಿಡಿತದಲ್ಲಿಟ್ಟುಕೊಂಡು ಬಂದಿದೆ. ಸಮುದಾಯದಲ್ಲಿ ಪ್ರತಿಸ್ಪರ್ಧಿಯಾಗುವ ನಾಯಕನ ಬೆಳವಣಿಗೆಗೂ ಇಂಬು ಇಲ್ಲದಂತೆ ನೋಡಿಕೊಂಡು ಬಂದಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಅಸ್ಮಿತೆಯನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಭದ್ರಕೋಟೆಯನ್ನು ಬೇಧಿಸಿದ್ದರು. ಪರಿಣಾಮವಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲ ಕಚ್ಚಿತು.

    ಈಗ ಬಿಜೆಪಿ ಅದೇ ಸಮುದಾಯದ ಹಿರಿಯ ನಾಯಕ ಆರ್.ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ ಒಕ್ಕಲಿಗ ಮತ ಬುಟ್ಟಿಗೆ ಕೈ ಹಾಕುವ ತಂತ್ರಗಾರಿಕೆ ಹೆಣೆದಿದೆ.

    ಲೋಕಸಭೆ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಕುಮಾರಸ್ವಾಮಿ ಕೈಕೊಟ್ಟರೆ ಅಥವಾ ಬಿಜೆಪಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂಬ ಸಂದೇಶ ಹೋಗಬಾರದೆಂಬ ಹಿನ್ನೆಲೆಯಲ್ಲಿ ಬಿಜೆಪಿ ಅಶೋಕ್‌ಗೆ ಮಣೆ ಹಾಕಿದೆ ಎನ್ನಲಾಗಿದೆ. ಇದು ಜೆಡಿಎಸ್ ನಾಯಕರನ್ನು ಚಿಂತೆಗೀಡು ಮಾಡಿದೆ.

    ಅಶೋಕ್ ಆಯ್ಕೆಯ ಹಿಂದೆ ಬಿಜೆಪಿಯ ಲೆಕ್ಕಾಚಾರವೇನು? ತಮ್ಮನ್ನು ಸೈಡ್‌ಲೈನ್ ಮಾಡಲು ಅಶೋಕ್ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಲಾಯಿತೆ? ದೂರ ದೃಷ್ಟಿಯ ಪರಿಣಾಮಗಳೇನು ಎಂಬ ಚರ್ಚೆ ಜೆಡಿಎಸ್‌ನಲ್ಲಿ ಒಳಗೊಳಗೇ ಶುರುವಾಗಿವೆ.

    ಕುಮಾರಸ್ವಾಮಿ ಮೇಲೆ ಅನುಮಾನ

    ಜೆಡಿಎಸ್-ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದೇನೋ ನಿಜ. ಆದರೆ ಕುಮಾರಸ್ವಾಮಿ ನಡೆ ಯಾವಾಗಲೂ ನಿಗೂಢ. ಹಾಗಾಗಿ ಲೋಕಸಭೆ ಮಾತ್ರವಲ್ಲದೆ ಭವಿಷ್ಯದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಕ್ಕಲಿಗ ಸಮುದಾಯದ ಓಲೈಕೆಗೆ ಬಿಜೆಪಿ ಮುಂದಾಗಿದೆ ಎಂಬ ಮಾತುಗಳೂ ರಾಜಕೀಯ ವಲದಯಲ್ಲಿ ಕೇಳಿ ಬರುತ್ತಿವೆ.

    ಗೌಡರ ಕುಟುಂಬದ ಹಿಡಿತ ಸಡಿಲ?

    ಬಿಜೆಪಿಯ ಈ ತಂತ್ರದ ಹಿಂದೆ ಒಕ್ಕಲಿಗ ಸಮುದಾಯವನ್ನು ದೇವೇಗೌಡರ ಕುಟುಂಬದ ಹಿಡಿತದಿಂದ ತಪ್ಪಿಸುವುದು ಕೂಡ ಇರಬಹುದೇ ಎಂಬ ಕುತೂಹಲಕರ ಚರ್ಚೆ ಕೂಡ ನಡೆಯುತ್ತಿದೆ. ಯಾವುದು ಸತ್ಯ, ಯಾವುದು ಮಿಥ್ಯ ಎಂಬುದಕ್ಕಿಂತ ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್, ಬಿಜೆಪಿಯಲ್ಲಿ ಆರ್.ಅಶೋಕ್ ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಕ್ಕಲಿಗ ಸಮುದಾಯದ ಮತಗಳನ್ನು ಧೃವೀಕರಣಗೊಳಿಸುವುದರಿಂದ ಜೆಡಿಎಸ್‌ನಲ್ಲಿ ನಡುಕ ಶುರುವಾಗಿರುವುದಂತೂ ನಿಶ್ಚಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts