More

    ಗೌರವಧನ ಅಲ್ಪವಾದರೂ ಸೇವೆ ಅಪಾರ: ಆಶಾ ಕಾರ್ಯಕರ್ತೆಯರ ಸೇವೆ ಸ್ಮರಣೀಯ

     ಚನ್ನಪಟ್ಟಣ : ಕೋವಿಡ್ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಸ್ಮರಣೀಯ. ಸೋಂಕಿನ ವಿರುದ್ಧ ಯಾವುದೇ ಭಯ ಹಾಗೂ ಅಂಜಿಕೆ ಇಲ್ಲದೇ ಕರ್ತವ್ಯ ನಿರ್ವಹಿಸಿದ ಕಾರ್ಯಕರ್ತೆಯರ ಬಗ್ಗೆ ಕಾಂಗ್ರೆಸ್ ಪಕ್ಷ ಅಪಾರ ಗೌರವ ಹೊಂದಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

    ನಗರದ ಸರ್ಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ಪಕ್ಷದ ವತಿಯಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಮಡಿವಾಳ, ಸವಿತಾ ಸಮಾಜ, ಅಲ್ಪಸಂಖ್ಯಾತ ಹಾಗೂ ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

    ಈ ಅನೀರೀಕ್ಷಿತ ಸೋಂಕು ಸಮಾಜದಲ್ಲಿ ಕರಾಳ ಛಾಯೆಯನ್ನು ಮೂಡಿಸಿದೆ. ಪ್ರಾಣ ಉಳಿಸಿಕೊಳ್ಳಲು ಎಲ್ಲರೂ ಮನೆ ಸೇರಿದ್ದ ವೇಳೆಯಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದೀರಿ. ಸಿಗುವ ಅಲ್ಪ ಗೌರವಧನಕ್ಕೆ ಅಪಾರವಾದ ಸೇವೆ ನಿಮ್ಮಿಂದ ಈ ನಾಡಿಗೆ ದಕ್ಕಿದೆ. ನಿಮ್ಮ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಅಪಾರವಾದ ಗೌರವ ಮತ್ತು ವಿಶ್ವಾಸವಿದೆ.

    ಈ ಕಾರಣಕ್ಕಾಗಿ ನಿಮ್ಮ ಜತೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬಲು ಎಲ್ಲೆಡೆ ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇನೆ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಡವಟ್ಟುಗಳೇ ಸೋಂಕಿನಿಂದಾಗಿ ಅಪಾರ ಸಾವುನೋವಿಗೆ ಕಾರಣವಾಯತು. ಸೋಂಕು ನಿಯಂತ್ರಣಕ್ಕೆ ಯಾವುದೇ ಸ್ಪಷ್ಟ ನೀತಿ ರೂಪಿಸಲು ವಿಲವಾದವು. ವಿಶ್ವದ ಹಲವು ದೇಶದ ಪ್ರಧಾನಿಗಳು ಕರೊನಾ ವಿರುದ್ಧದ ಲಸಿಕೆಯನ್ನು ತಮ್ಮ ಹಾಗೂ ಕುಟುಂಬದವರ ಮೇಲೆ ಮೊದಲು ಪ್ರಯೋಗಿಸಿದರೆ, ನಮ್ಮ ಪ್ರಧಾನಿಗಳು ಆಶಾ ಕಾರ್ಯಕರ್ತೆಯರು ಹಾಗೂ ಡಿ ಗ್ರೂಪ್ ನೌಕರರ ಮೇಲೆ ಪ್ರಯೋಗಿಸಿದರು.

    ಇದು ಬಡವರ್ಗದ ಜನತೆ ಮೇಲೆ ಪ್ರಧಾನಿಗಿರುವ ತಾತ್ಸಾರ ಮನೋಭಾವ ಎಂದು ಸಂಸದ ಸುರೇಶ್ ಕುಟುಕಿದರು.ಆಶಾ ಕಾರ್ಯಕರ್ತೆಯರಿಗೆ ನೀಡುವ ಅಲ್ಪ ಗೌರವಧನವನ್ನು ಸಹ ಬಿಡುಗಡೆ ಮಾಡದಿರುವುದು ನಾಚಿಕೆಗೇಡು. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ 10 ಸಾವಿರ ರೂ. ಗೌರವಧನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಈ ಸರ್ಕಾರ ಸ್ಪಂದಿಸಿಲ್ಲ.
    ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂಕಷ್ಟದ ಸಮಯದಲ್ಲಿ ವಿವಿಧ ವರ್ಗಗಳಿಗೆ ಆದ್ಯತೆ ಮೇರೆಗೆ ಸಹಾಯ ಮಾಡುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸಲಾಯಿತು. ವಿಧಾನಪರಿಷತ್ ಸದಸ್ಯ ಎಸ್.ರವಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಎಚ್.ಎಸ್.ಸುನೀಲ್‌ಕುಮಾರ್, ಪಕ್ಷದ ಮುಖಂಡರಾದ ಬೋರ್‌ವೆಲ್ ರಂಗನಾಥ್, ಶಿವಮಾದು, ಮುದ್ದುಕೃಷ್ಣೇಗೌಡ, ಎ.ಸಿ.ವಿರೇಗೌಡ, ನಿಜಾಮ್ ಪೌಜ್ದಾರ್, ಕೋಟೆ ರಮೇಶ್, ಎಸ್.ಸಿ.ಶೇಖರ್, ಮತ್ತೀಕೆರೆ ಹನುಮಂತಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ ಸೇರಿದಂತೆ ಹಲವು ಮುಖಂಡರು ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts