More

    ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..

    ಭಾಗಶಃ ಸೂರ್ಯ ಗ್ರಹಣಕ್ಕೆ ಜಗತ್ತು ಇಂದು (ಶನಿವಾರ) ಸಾಕ್ಷಿಯಾಗಲಿದೆ. ದಕ್ಷಿಣ ಅಮೆರಿಕದ ನೈಋತ್ಯ ಪ್ರದೇಶ, ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಮಹಾಸಾಗರ ಪ್ರದೇಶ ಜತೆಗೆ, ಅಂಟಾರ್ಟಿಕಾ ಪ್ರದೇಶದಲ್ಲಿ ಗೋಚರವಾಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ 12.15ರಿಂದ ಬೆಳಗಿನ ಜಾವ 4.07 ಗಂಟೆಯವರೆಗೆ ಸಂಭವಿಸಲಿದೆ. ಆದರೆ, ಭಾರತದಲ್ಲಿ ಇದು ಕಾಣಿಸಿಕೊಳ್ಳುತ್ತಿಲ್ಲ.

    ಫಲಾಫಲಗಳು ಇದ್ದೇ ಇರುತ್ತವೆ

    ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..| ನರೇಂದ್ರ ಶರ್ಮಾ ಬ್ರಹ್ಮಾಂಡ ಗುರೂಜಿ

    ಸೂರ್ಯ ಗ್ರಹಣವು ಪ್ರಪಂಚವ್ಯಾಪಿಯಾಗಿ ಸಂಭವಿಸುತ್ತಿದೆ. ನಮಗೆ ಗೋಚರವಿಲ್ಲದಿದ್ದರೂ, ನಾವು ಈ ಗ್ರಹದ ವಾಸಿಗಳೇ ಆಗಿದ್ದೇವೆ, ಭೂಗ್ರಹದಲ್ಲೇ ಇದ್ದೇವೆ. ಒಂದು ವೇಳೆ ಗೋಚರವಾಗುತ್ತಿದ್ದರೆ ಅದನ್ನು ರಾಹುವಿನ ಫಲವೆಂದು ಕರೆಯಬೇಕಾಗುತ್ತದೆ. ರಾಹು ರೋಗಕಾರಕ, ಗಲಾಟೆ, ಘರ್ಷಣೆ, ರಕ್ತಪಾತಗಳಿಗೆ ಕಾರಣವಾಗುತ್ತಾನೆ. ಗೋಚರವಿಲ್ಲದಿದ್ದರೆ ಕೇತುವಿನಿಂದಾಗುವ ಫಲವೆಂದು ಹೇಳಬೇಕಾಗುತ್ತದೆ. ಈ ಬಾರಿ ಶನಿವಾರ ಗ್ರಹಣ ಸಂಭವಿಸುತ್ತಿದೆ. ಶನಿವಾರವೂ ಹಲವು ವಿಶೇಷ ಸಂದರ್ಭಗಳಿಗೆ ಸಾಕ್ಷಿಯಾಗುತ್ತಿದೆ. ಜನವರಿ 1 ಶನಿವಾರ, ಸಂಕ್ರಾಂತಿಯೂ ಶನಿವಾರ, ಯುಗಾದಿಯೂ ಶನಿವಾರವಿತ್ತು. ಹೀಗಾಗಿ ಶನಿವಾರ ವಿಶೇಷವೆನಿಸಿದೆ.

    ಗ್ರಹಣಕ್ಕೂ ಕರೊನಾಕ್ಕೂ ಲಿಂಕ್!: ಸೂರ್ಯ ಗ್ರಹಣಕ್ಕೂ ಕರೊನಾಕ್ಕೂ ನಂಟು. ಕಳೆದ ಮೂರು ವರ್ಷಗಳಲ್ಲಿ ಗ್ರಹಣ ಸಂಭವಿಸಿದಾಗಲೆಲ್ಲ ಕರೊನಾ ವಕ್ಕರಿಸುತ್ತಿದೆ. ಅದರ ಹೊಸ ತಳಿಗಳೂ ಮಾರಕವಾಗುತ್ತಿವೆ. ಹೀಗಾಗಿ ಈ ಬಾರಿಯೂ ರೋಗ ಉಲ್ಬಣಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ಚಿಕ್ಕವಯಸ್ಸಿವರಿಗೆ ಆಪತ್ತು: ಚಿಕ್ಕವಯಸ್ಸಿನವರು, ಅಲ್ಪಾಯುಷಿಗಳಿಗೆ ಆಪತ್ತಿದೆ. 5 ವರ್ಷದಿಂದ 40 ವಯಸ್ಸಿನವರು ಇದರಲ್ಲಿ ಸೇರಿದ್ದಾರೆ. ಅಪಘಾತ, ದುರ್ಮರಣ, ಮಾನವನಿರ್ವಿುತ ವಿಕೋಪಗಳಾದ ವಿಮಾನ ದುರ್ಘಟನೆ, ಹಡಗು ದುರಂತ, ಬೆಂಕಿಗೆ ಬಲಿಯಾಗುವುದು ಇಂಥದಕ್ಕೆಲ್ಲ ಕಾರಣವಾಗಬಹುದು.

    ಹೈನೋದ್ಯಮಕ್ಕೂ ತೊಂದರೆ: ಗ್ರಹಣದ ಇನ್ನೊಂದು ಅಪಾಯ ಹೈನೋದ್ಯಮಕ್ಕೆ ಸಂಬಂಧಿಸಿದ್ದು. ಹಾಲು, ಹಾಲಿನ ಉತ್ಪನ್ನಗಳ ಉದ್ಯಮಕ್ಕೆ ತೊಂದರೆ ಎದುರಾಗಲಿದೆ. ಜತೆಗೆ, ಆಹಾರದಿಂದ ಸೋಂಕು ಹರಡುವ ಸಾಧ್ಯತೆಗಳು ಇಲ್ಲದಿಲ್ಲ.

    ಶನಿ ಸ್ಥಾನ ಬದಲಾವಣೆ: ಶನಿ ಗ್ರಹವು ಗುರುವಾರ ಸ್ಥಾನ ಬದಲಾಯಿಸಿದೆ. ಶನಿವಾರ ಗ್ರಹಣ ಸಂಭವಿಸುತ್ತಿದೆ. ಶನಿಯೇ ಈ ವರ್ಷದ ರಾಜ ಅಥವಾ ಅಧಿದೇವತೆ ಎನ್ನಬಹುದು. ಮಂತ್ರಿ ಸ್ಥಾನದಲ್ಲಿ ಗುರು ಗ್ರಹವಿದೆ. ಹೀಗಾಗಿ ಈ ಬಾರಿ ಶನಿದೇವನಿಗೆ ಧರ್ಮಸಮ್ಮತವಾಗಿ ಪ್ರಾರ್ಥನೆ ಮಾಡಬೇಕು. ಅಧರ್ಮದ ಹಾದಿಯಲ್ಲಿ ಸಾಗುವವರಿಗೆ ಶನಿಯಿಂದ ತೊಂದರೆ ತಪ್ಪಿದ್ದಲ್ಲ. ಜತೆಗೆ ಚುನಾವಣೆಯಲ್ಲೂ ಅಡ್ಡಹಾದಿ ಹಿಡಿಯುವವರಿಗೆ ಯಶಸ್ಸು ಸಿಗದು. ಧರ್ಮಮಾರ್ಗದಲ್ಲಿ ಸಾಗುವವರಿಗೆ ಭಗವಂತನ ಅನುಗ್ರಹವಿರಲಿದೆ.

    ರೈತರಿಗೆ ಉತ್ತಮ ಫಲ: ಈ ಬಾರಿ ರೈತರಿಗೆ ಉತ್ತಮ ಫಲ ದೊರೆಯಲಿದೆ. ಫಸಲು, ಇಳುವರಿ ಹೆಚ್ಚಾಗಲಿದೆ. ಜತೆಗೆ, ಕಳೆದ ಎರಡೂವರೆ ವರ್ಷಗಳಿಂದ ಮನೆ ಖರೀದಿಸಲು ಆಗುತ್ತಿಲ್ಲ ಎಂದೆನ್ನುವವರಿಗೆ ಮತ್ತು ಸೈಟ್, ಸ್ವಂತ ಫ್ಲ್ಯಾಟ್ ಹೊಂದಲು ಇಚ್ಛಿಸುವವರಿಗೂ ಒಳ್ಳೆಯದಾಗಲಿದೆ. ಇನ್ನೂ ಒಂದೂವರೆ ವರ್ಷದಲ್ಲಿ ಅವರ ಬಯಕೆ ಕೈಗೂಡಲಿದೆ.

    ಪರಿಹಾರ: ಶನಿ ತನ್ನ ವಾಹನವಾದ ಕಾಗೆ ಮೇಲೆ ಬಲಗಾಲನ್ನು ಇಟ್ಟುಕೊಂಡು ಪೂಜಿತನಾಗುತ್ತಿರುವ ತಾಣ ತಿರುನಲ್ಲಾರ್. ಅಲ್ಲದೆ, ಬೆಂಗಳೂರಿನ ಜೆಪಿ.ನಗರದಲ್ಲೂ ಇಂಥ ನಾಲ್ಕು ಶತಮಾನಗಳ ಹಳೆಯ ದೇಗುಲವಿದೆ. ಇಲ್ಲಿ ತೈಲಾಭ್ಯಂಜನ ಮಾಡಿಸಿ, ಪ್ರಾರ್ಥನೆ ಸಲ್ಲಿಸಿದರೆ ಉತ್ತಮ. ಶನಿಯ ಪ್ರಭಾವ ಇನ್ನೂ ಎರಡೂವರೆ ವರ್ಷ ಇರಲಿದೆ. ಈ ಬಾರಿ ಶನಿ ದೃಷ್ಟಿ ಉಗ್ರವಾಗಿದ್ದು, ಎಲ್ಲೆಡೆ ಶನಿ ಕಥಾ ಪಠಣವೂ ಫಲ ನೀಡಲಿದೆ.

    ಏನು ಮಾಡಬೇಕು?: ನಮಗೆ ಗೋಚರವಿಲ್ಲದಿರುವುದರಿಂದ ಆ ಪ್ರಶ್ನೆ ಉದ್ಭವಿಸದು. ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಯಕ್ಕೂ ಇಲ್ಲಿನ ಸಮಯಕ್ಕೂ ವ್ಯತ್ಯಾಸವಿದೆ. ಹೀಗಾಗಿ ಸಮಯವನ್ನು ನಿರ್ಧರಿಸಲಾಗದು. ಆದರೆ, ಅಮವಾಸ್ಯೆಯಾಗಿರುವುದರಿಂದ ಇಡೀ ದಿನ ಎಚ್ಚರಿಕೆಯಿಂದ ಇರಬೇಕು. ಶೌಚಗೃಹಗಳನ್ನು ಬಳಸುವಾಗ ಎಚ್ಚರಿಕೆ ಇರಲಿ. ಹೆಣ್ಣುಮಕ್ಕಳು ಅಡುಗೆಮನೆಯಲ್ಲಿ ಕೊಂಚ ಎಚ್ಚರಿಕೆಯಿಂದ ಇರುವುದು ಒಳಿತು. ವಿದ್ಯುತ್, ಬೆಂಕಿ ಅವಘಡಗಳ ಬಗ್ಗೆ ಜಾಗರೂಕರಾಗಿರಬೇಕು.

    ಹಲವು ರಾಷ್ಟ್ರಗಳಿಗೆ ಸಂಕಷ್ಟ

    ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..| ರಾಜಗುರು ದ್ವಾರಕಾನಾಥ

    ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗದ ಕಾರಣ ಅದರ ಆಚರಣೆಯನ್ನು ಭಾರತೀಯರು ಮಾಡುವ ಅಗತ್ಯವಿಲ್ಲ. ಪಿತೃಶ್ರಾದ್ಧವಾಗಲೀ, ಗ್ರಹಣ ಸಂಬಂಧಿ ಪೂಜೆಗಳಾಗಲೀ ಇರುವುದಿಲ್ಲ ಎಂಬುದನ್ನು ಪಂಚಾಂಗದಲ್ಲೂ ಸ್ಪಷ್ಪಪಡಿಸಲಾಗಿದೆ. ಧರ್ಮಶಾಸ್ತ್ರಗಳು ಹೇಳಿರುವುದನ್ನೇ ನಾವು ಪಾಲಿಸಬೇಕಾಗುತ್ತದೆ. ಪ್ರಸ್ತುತ ಶನಿ ಗ್ರಹವು ಮುಂದೆ ಸಾಗಿದೆ. ಮಕರ ರಾಶಿಯಿಂದ ಕುಂಭರಾಶಿಗೆ ಪಯಣಿಸಿದ್ದು, ಇದು ಶನಿಯ ಸ್ವಂತಮನೆಯಾಗಿದೆ. ಅಮವಾಸ್ಯೆಗೂ, ಗ್ರಹಣಕ್ಕೂ ಹಾಗೂ ಶನಿ ಗ್ರಹಕ್ಕೂ ಸಂಬಂಧವಿದೆ. ಸೂರ್ಯನಿಗೆ ಇಬ್ಬರು ಮಕ್ಕಳು ಒಬ್ಬ ಛಾಯಾಪುತ್ರ ಶನಿ, ಇನ್ನೊಬ್ಬ ಯಮ. ನಮ್ಮ ಕೃತ್ಯಗಳಿಗೆ ಶನಿ ನಾವು ಜೀವಂತ ಇರುವಾಗಲೇ ಶಿಕ್ಷೆ ನೀಡಿದರೆ, ಯಮ ಸಾವಿನ ನಂತರ ಶಿಕ್ಷೆ ಕೊಡುತ್ತಾನೆ. ಹೀಗಾಗಿ ಶನಿದೇವರ ಆರಾಧನೆ ಸೂಕ್ತ. ಶನಿದೇವರ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ನಮ್ಮ ದೇಶಕ್ಕೆ ಸಂಕಷ್ಟ, ವ್ಯಾಧಿ ಅಥವಾ ಪ್ರಾಕೃತಿಕ ವಿಕೋಪಗಳು ಸಂಭವಿಸುವುದಿಲ್ಲ. ಅದಕ್ಕೆ ಅವಕಾಶಗಳು ಇಲ್ಲ. ಭಾರತಕ್ಕೆ ಧರ್ಮವೇ ಬುನಾದಿಯಾಗಿದೆ. ಧಾರ್ವಿುಕ ತಾಣಗಳು ಈ ರಾಷ್ಟ್ರವನ್ನು ಸುತ್ತುವರಿದಿವೆ. ಈ ಗ್ರಹಣವು ನಮ್ಮ ದೇಶದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಅಮೆರಿಕದಿಂದ ಆರಂಭವಾಗಿ ವಿವಿಧ ದೇಶಗಳಲ್ಲಿ ಗ್ರಹಣ ಕಾಣಿಸಿಕೊಳ್ಳಲಿದೆ. ಅಂತೆಯೇ, ಗ್ರಹಣ ಗೋಚರವಾಗುವ ರಾಷ್ಟ್ರಗಳಿಗೆ ಹಾನಿ ತಪ್ಪಿದ್ದಲ್ಲ. ಹಣದುಬ್ಬರದಿಂದ ತತ್ತರಿಸಿ ರುವ ಅಲ್ಲಿನ ಆರ್ಥಿಕ ವ್ಯವಸ್ಥೆ ಕುಸಿಯಲಿದೆ. ಜಗತ್ತಿಗೆ ಅಂಟಿರುವ ಮಾರಕ ರೋಗವು ಅವರನ್ನು ಇನ್ನಷ್ಟು ಬಾಧಿಸಲಿದೆ. ಚೀನಾಗೂ ಸಂಕಷ್ಟ ತಪ್ಪಿದ್ದಲ್ಲ.

    ಭಾರತದಲ್ಲಿ ಎರಡು ಗ್ರಹಣ: ಭಾರತದಲ್ಲಿ ಅ.25ರಂದು ಪಾರ್ಶ್ವ ಸೂರ್ಯಗ್ರಹಣ, ನ.8ರಂದು ಪಾರ್ಶ್ವ ಚಂದ್ರಗ್ರಹಣ ಗೋಚರಿಸಲಿದೆ. ದೀಪಾವಳಿ ಅಮಾವಾಸ್ಯೆಯಂದು ಪಾರ್ಶ್ವ ಸೂರ್ಯಗ್ರಹಣವಾದರೆ, ಕಾರ್ತಿಕ ಹುಣ್ಣಿಮೆಯಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಪಾರ್ಶ್ವ ಸೂರ್ಯಗ್ರಹಣ ಸಾಯಂಕಾಲ 5.08ಕ್ಕೆ ಪ್ರಾರಂಭವಾಗಲಿದೆ. 6.28ಕ್ಕೆ ಅಂತ್ಯವಾಗಲಿದೆ. ನ.8ರಂದು ಮಧ್ಯಾಹ್ನ 3.46ಕ್ಕೆ ಖಗ್ರಾಸ ಚಂದ್ರಗ್ರಹಣ ಪ್ರಾರಂಭವಾಗಿ, 5.11ಕ್ಕೆ ಅಂತ್ಯವಾಗಲಿದೆ.

    ನಾವು ಅಬಾಧಿತರು

    ಧರ್ಮ ಮಾರ್ಗವೇ ಪರಿಹಾರ: ಇಂದು ಭಾಗಶಃ ಸೂರ್ಯಗ್ರಹಣ..| ದೈವಜ್ಞ ಸೋಮಯಾಜಿ

    ಸೂರ್ಯ ಗ್ರಹಣ ನಮ್ಮ ವ್ಯಾಪ್ತಿಯಲ್ಲಿ ಸಂಭವಿಸುತ್ತಿಲ್ಲ. ಹೀಗಿರುವಾಗ ಇದರ ಆಗುಹೋಗುಗಳ ಬಗ್ಗೆ ನಾವು ಚಿಂತಿಸಬೇಕಿಲ್ಲ. ನಾವು ಗ್ರಹಣದ ಆಚರಣೆಯನ್ನು ಮಾಡಬೇಕಿಲ್ಲ. ಜತೆಗೆ ಅದು ಶಾಸ್ತ್ರಸಮ್ಮತವೂ ಅಲ್ಲ, ವೈಜ್ಞಾನಿಕವಾಗಿಯೂ ಸರಿಯಲ್ಲ. ಪಕ್ಕದೂರಿನ ಘಟನೆಗೆ ಸಂಬಂಧಿ ಸಿದಂತೆ ನಮಗೆ ಹೇಗೆ ಸೂತಕವಿರುವುದಿಲ್ಲವೋ ಅದೇ ರೀತಿ ಬೇರೆಲ್ಲೋ ನಡೆಯುತ್ತಿರುವ ಅಥವಾ ಕಾಣಿಸಿಕೊಳ್ಳುತ್ತಿರುವ ಗ್ರಹಣಕ್ಕೆ ನಾವು ಅಬಾಧಿತರಾಗಿರುತ್ತೇವೆ. ಈ ರೀತಿಯಾಗಿ ವರ್ಷಕ್ಕೆ 8-10 ಗ್ರಹಣಗಳು ಜಗತ್ತಿನ ಒಂದಿಲ್ಲೊಂದು ಖಗೋಳ ವಿದ್ಯಮಾನವಾಗಿ ಗೋಚರಿಸುತ್ತಲೇ ಇರುತ್ತವೆ. ಇದಕ್ಕೆಲ್ಲ ನಾವು ಆಚರಣೆ ಭಾಗವಾಗಬೇಕಿಲ್ಲ. ಭಾರತದಲ್ಲಿ ದೀಪಾವಳಿ ವೇಳೆಗೆ ಸಂಭವಿಸಲಿರುವ 2 ಗ್ರಹಣಗಳಷ್ಟೇ ಮುಖ್ಯವಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts