More

    ತಾಯಿ ಭಾರತಿಗೆ ಪರಮಾನಂದವಿತ್ತ ಯತಿ; ಸ್ವಾಮಿ ಪರಮಾನಂದ ಭಾರತೀ

    ತಾಯಿ ಭಾರತಿಗೆ ಪರಮಾನಂದವಿತ್ತ ಯತಿ; ಸ್ವಾಮಿ ಪರಮಾನಂದ ಭಾರತೀಸ್ವಾಮಿ ಪರಮಾನಂದ ಭಾರತೀ ಅವರೊಂದಿಗಿನ ನನ್ನ ಒಡನಾಟ ಮೂರು ದಶಕಗಳದ್ದು. ಸ್ವಾಮೀಜಿ ತಮ್ಮ ಶೈಕ್ಷಣಿಕ ಸಾಧನೆ, ವೇದಾಂತ ಚಿಂತನೆ ಹಾಗೂ ಅಧ್ಯಾತ್ಮದಲ್ಲಿ ಸಾಧಿಸಿದ ಔನ್ನತ್ಯ- ಇವು ಅವರ ಬಗ್ಗೆ ನನ್ನಲ್ಲಿ ಅಪಾರವಾದ ಪೂಜ್ಯತೆಯನ್ನು ಮೂಡಿಸಿತು. ಮೂಲತಃ ಕೋಲಾರ ಜಿಲ್ಲೆಯವರಾದ ಕೀರ್ತಿಶೇಷ ವೇದಾಂತಂ ಸುಬ್ಬಯ್ಯನವರ ಸತ್ಪುತ್ರರಾದ ಶಂಕರ್ (ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು) ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಶಿಕ್ಷಣ ಪಡೆದರು. ನಂತರ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಹಾಗೂ ಕ್ವಾಂಟಮ್ ಫಿಜಿಕ್ಸ್​ನಲ್ಲಿ ಪಿ.ಎಚ್.ಡಿ. ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ಮೇಲೆ ಚಿತ್ರದುರ್ಗ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಶ್ರಮಿಸಿದರು.

    ಬೆಂಗಳೂರಿನ ಎನ್​ಎಎಲ್​ನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅಂದಿನ ದಿನಗಳಲ್ಲಿ ಜರ್ಮನಿಗೆ ಶೈಕ್ಷಣಿಕ ವಿಚಾರಗಳ ಅಧ್ಯಯನಕ್ಕೆ ಭೇಟಿ ಇತ್ತರು. ಅವರ ಭೌತಶಾಸ್ತ್ರದ ಕುರಿತಾದ ಪ್ರಬುದ್ಧತೆ ಅಲ್ಲಿನ ಹಲವಾರು ವಿಜ್ಞಾನಿಗಳನ್ನು ಅವರತ್ತ ಆಕರ್ಷಿಸಿತು. ಅಲ್ಲದೆ ಅವರ ವೇದಾಂತ ಕುರಿತಾದ ಅಗಾಧ ಜ್ಞಾನಕ್ಕೆ ಬೆರಗಾದ ಸಮಾಜದ ಕೆಲವು ಪ್ರಮುಖರು ವೇದಾಂತ ತರಗತಿಗಳನ್ನು ನಡೆಸಬೇಕೆಂದು ವಿನಂತಿಸಿದರು. ವೇದ-ಉಪನಿಷತ್ತುಗಳ ಕುರಿತಾದ ಇವರ ವಿಶೇಷ ಉಪನ್ಯಾಸಗಳಲ್ಲಿ ಜರ್ಮನಿಯ ಪ್ರತಿಷ್ಠಿತ ವಿಜ್ಞಾನಿಗಳು ಮತ್ತು ಚಿಂತಕರಷ್ಟೇ ಅಲ್ಲದೆ ಕೆಲವು ನೊಬೆಲ್ ಪುರಸ್ಕೃತರೂ ಆಸಕ್ತಿಯಿಂದ ಭಾಗವಹಿಸುತ್ತಿದ್ದರು!

    ನನ್ನ ಪೂರ್ವಾಶ್ರಮದ ಮಾತಾಮಹರಾದ ಕೀರ್ತಿಶೇಷ ಶ್ರೀಧರಂ ವೆಂಕಟಸುಬ್ಬಾಶಾಸ್ತ್ರಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮದವರು, ಯಜುರ್ವೇದದಲ್ಲಿ ಮಹಾನ್ ಪಂಡಿತರು. ‘ಶ್ರೀಧರಂ’ ಮನೆತನ ಇಡೀ ಕೋಲಾರ ಜಿಲ್ಲೆಯಲ್ಲೇ ಸಜ್ಜನಿಕೆ, ವಿದ್ವತ್ತಿಗೆ ಮನೆಮಾತಾಗಿತ್ತು. ಈ ಮನೆತನದ ಬಗ್ಗೆ ದಾರ್ಶನಿಕರಾದ ಡಿವಿಜಿಯವರು ‘ಜ್ಞಾಪಕಚಿತ್ರಶಾಲೆ’ ಸರಣಿಯ ಐದನೇ ಸಂಪುಟದಲ್ಲಿ ಗೌರವದಿಂದ ಉಲ್ಲೇಖಿಸಿರುವುದು ಗಮನಾರ್ಹ.

    ವೇದಾಂತಂ ಸುಬ್ಬಯ್ಯ ಮತ್ತು ವೆಂಕಟಸುಬ್ಬಾಶಾಸ್ತ್ರಿ ಬಾಲ್ಯಸ್ನೇಹಿತರು. ಶಂಕರ ಭಗವತ್ಪಾದರು ಪ್ರತಿಪಾದಿಸಿದ ಅದ್ವೈತ ತತ್ತ್ವಗಳ ಶ್ರೇಷ್ಠತೆಯನ್ನು ಸುಬ್ಬಯ್ಯ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದರಲ್ಲದೆ ಇತರ ಸಂಪ್ರದಾಯಗಳೊಂದಿಗೆ ಮನೋಜ್ಞವಾಗಿ ರ್ಚಚಿಸಿ ಅದ್ವೈತ ಸಿದ್ಧಾಂತದ ಶ್ರೇಷ್ಠತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು! ಆದ್ದರಿಂದಲೇ ‘ವೇದಾಂತಂ’ ಎಂಬ ಜ್ಞಾನಸೂಚಕ ಪದವು ಅವರ ಹೆಸರಿನೊಂದಿಗೆ ಸೇರ್ಪಡೆಯಾಗಿತ್ತು. ಶಂಕರ್ ತಂದೆ ವೇದಾಂತಂ ಸುಬ್ಬಯ್ಯ 1982ರಲ್ಲಿ ಇಹಲೋಕ ತ್ಯಜಿಸಿದಾಗ, ಅವರ ತಂದೆ ಬರೆಯುತ್ತಿದ್ದ, ಇನ್ನೂ ಪೂರ್ಣವಾಗದಿದ್ದ ‘ಸಮ್ಯಕ್ ದರ್ಶನಮ್ ಎಂಬ ಗ್ರಂಥವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಂದೆಯ ಪ್ರಥಮ ವರ್ಷದ ಪುಣ್ಯತಿಥಿಯಂದೇ ಲೋಕಾರ್ಪಣಗೈದರು!

    ಮದ್ರಾಸಿನ ಐಐಟಿಯಲ್ಲಿ ಶಂಕರ್ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಹನ್ನೆರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆಯಿತ್ತು ನಂತರ ಶೃಂಗೇರಿಯ ಪೀಠಾಧಿಪತಿಗಳಾಗಿದ್ದ ಬ್ರಹ್ಮಲೀನ ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿಗಳ ಆಶೀರ್ವಾದ ಪಡೆದು, 1984ರಲ್ಲಿ ಸಂನ್ಯಾಸ ದೀಕ್ಷೆ ಪಡೆದು ‘ಸ್ವಾಮಿ ಪರಮಾನಂದ ಭಾರತೀ’ ಎಂಬ ಯೋಗಪಟ್ಟವನ್ನು ಪಡೆದರು.

    ವೇದೋಪನಿಷತ್ತುಗಳ ಆಮೂಲಾಗ್ರ ಅಧ್ಯಯನಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ಪೂಜ್ಯರು ರಾಷ್ಟ್ರದ ಉದ್ದಗಲಕ್ಕೂ ಹಾಗೂ ನಾಲ್ಕಾರು ಅನ್ಯ ರಾಷ್ಟ್ರಗಳಲ್ಲೂ ವೇದಾಂತ ಪ್ರಚಾರವನ್ನು ಯಶಸ್ವಿಯಾಗಿ ಮಾಡಿದರು. ಪರಮಾನಂದ ಭಾರತೀ ಸ್ವಾಮೀಜಿ ರಚಿಸಿದ ಸದಂಥಗಳು ಭಾರತೀಯ ಭಾಷೆಗಳಲ್ಲಿ ಪ್ರಕಟಣೆಗೊಂಡು ಲಕ್ಷಾಂತರ ಮುಮುಕ್ಷುಗಳ ಬದುಕಿಗೆ ದಾರಿದೀವಿಗೆ ಆಯ್ತು. ಶಂಕರ ಭಗವತ್ಪಾದರ ಜೀವನ ಸಂದೇಶಗಳ ಕುರಿತಾದ ‘ಮಹಾಪರಿವ್ರಾಜಕ’ ಮೊದಲ್ಗೊಂಡು ‘ಪ್ರಥಮ ಸೋಪಾನ’, ‘ವೇದಾಂತ ಪ್ರಬೋಧ’, ‘ಶ್ರೇಯಸ್ಕರೀ’ ಮೊದಲಾದ ಕೃತಿರತ್ನಗಳು ಅವರ ಕೊಡುಗೆಯಾಗಿವೆ. ಅವರ ಹಲವಾರು ಗ್ರಂಥಗಳು ಆಂಗ್ಲಭಾಷೆಗೂ ತರ್ಜುಮೆ ಆಗಿವೆ.

    ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಸ್ವಾಮೀಜಿಯ ಪ್ರವಚನಗಳು ಜರುಗಿವೆ. ರಷ್ಯಾದಲ್ಲಿ ನೆರವೇರಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತೀಯ ವೇದಾಂತದಲ್ಲಿ ಪ್ರತಿಫಲನಗೊಂಡಿರುವ ವೈಜ್ಞಾನಿಕ ಸತ್ಯಗಳನ್ನು ಅತ್ಯುತ್ಕೃಷ್ಟವಾಗಿ ಪ್ರತಿಪಾದಿಸಿದ ಸ್ವಾಮೀಜಿಯ ಪ್ರಭಾವಕ್ಕೆ ರಷ್ಯಾದ ಅಂದಿನ ಅಧ್ಯಕ್ಷ ಗಾರ್ಬಚೇವ್ ಮಾರುಹೋದರು. ವಾಸಗೃಹಕ್ಕೆ ಪೂಜ್ಯರನ್ನು ಆಹ್ವಾನಿಸಿ ಅವರಿಂದ ಹತ್ತಾರು ಸಂದರ್ಭಗಳಲ್ಲಿ ವೇದಾಂತದ ಸಾರ್ವಕಾಲಿಕ ಸತ್ಯಗಳನ್ನು ತಿಳಿಯಲು ಉತ್ಸಾಹದೋರಿದರು. ಗಾರ್ಬಚೇವ್​ರವರೇ ಒಮ್ಮೆ ಹೇಳಿದ್ದರಂತೆ, ‘ಭಾರತದ ಈ ಸ್ವಾಮಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ವೇದಾಂತ ತತ್ತ್ವಗಳ ಅವಿನಾಸಂಬಂಧ, ಅನ್ಯೋನ್ಯತೆಗಳನ್ನು ಮನವರಿಕೆ ಮಾಡಿಕೊಟ್ಟರು, ಅವರಿಗೆ ನಾನು ಕೃತಜ್ಞ!’

    ಮುಂದಿನ ದಿನಗಳಲ್ಲಿ ರಷ್ಯಾದ ಕಮ್ಯುನಿಸ್ಟ್ ತತ್ತ್ವ ಕಳಚಿ ಬಿದ್ದು ಅದು ಹತ್ತಾರು ಪ್ರಜಾಪ್ರಭುತ್ವ ಆಧಾರಿತ ದೇಶಗಳಾಗಿ ವಿಭಜನೆ ಆದದ್ದು ಇತಿಹಾಸ. ಅಧ್ಯಕ್ಷ ಗಾರ್ಬಚೇವ್ ಮೇಲೆ ಅಪರಿಮಿತ ಪ್ರಭಾವ ಬೀರಿದ್ದ ಭಾರತದ ಈ ಸಂನ್ಯಾಸಿಯ ಮೇಲೆ ಕಮ್ಯೂನಿಸ್ಟ್ ಆಧಾರಿತ ರಷ್ಯಾದ ಬೇಹುಗಾರಿಕೆ ಕಣ್ಣಿಟ್ಟಿತ್ತು. ಆದರೂ ರಷ್ಯಾದ ಇತಿಹಾಸದಲ್ಲಿ ಆಗಬೇಕಾದ್ದು ಆಗಿಯೇ ಹೋಯ್ತು. ವೈದಿಕ ಸಂಪ್ರದಾಯದಲ್ಲಿ ಜನಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಹಾದು, ಅದ್ವೈತ ತತ್ತ್ವ ಪ್ರಚಾರಕ್ಕಾಗಿ ಯತಿಜೀವನ ನಡೆಸುತ್ತ ಜಗತ್ತಿನ ಲೌಕಿಕ ದಿಗ್ಗಜರಾಗಿದ್ದ ರಷ್ಯನ್ನರ ಮೇಲೆ ಪೂಜ್ಯರು ಪ್ರಭಾವ ಬೀರಿದ್ದಂತೂ ಸತ್ಯ. ಸ್ವಾಮೀಜಿಯವರು ಭಾರತದ ಪ್ರಮುಖ ನಗರಗಳಲ್ಲಿ ಅತಿರುದ್ರಹೋಮ, ಲಲಿತಾ ಶತಕೋಟಿ ಜಪಯಜ್ಞ ಮುಂತಾದ ಧಾರ್ವಿುಕ ಸೇವಾ ಚಟುವಟಿಕೆಗಳನ್ನು ನೆರವೇರಿಸಿ ಲಕ್ಷಾಂತರ ಆಸ್ತಿಕ ಮಹಾಶಯರ ಬದುಕಿನಲ್ಲಿ ಧಾರ್ವಿುಕ ಶ್ರದ್ಧೆಯನ್ನು ನೂರ್ಮಡಿಗೊಳಿಸಿದ್ದಾರೆ. ರಾಮಕೃಷ್ಣ ಮಿಷನ್ನಿನ ಆಹ್ವಾನದ ಮೇರೆಗೆ ರಾಷ್ಟ್ರದ ಹಲವಾರು ಕೇಂದ್ರಗಳಲ್ಲಿ ಸಾಧು-ಬ್ರಹ್ಮಚಾರಿಗಳಿಗೆ ವಿಶೇಷ ವೇದಾಂತ ತರಗತಿಗಳನ್ನು ನೆರವೇರಿಸಿ ಕೊಟ್ಟಿರುವುದನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

    ತುಮಕೂರು ಜಿಲ್ಲೆಯೊಂದಿಗೆ ಸ್ವಾಮೀಜಿಗೆ ನಿಕಟ ಸಂಬಂಧವಿತ್ತು. 2000ನೇ ಇಸವಿ ಡಿಸೆಂಬರ್ ಕಡೆಯ ವಾರದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ನೆರವೇರಿದ ‘ಸಾಧು-ಭಕ್ತ ಸಮಾಗಮ’ ರಾಜ್ಯಮಟ್ಟದ ಭಕ್ತಸಮ್ಮೇಳನದ ಸಂತ ಅಧಿವೇಶನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಬ್ರಹ್ಮಲೀನ ರಂಗಪ್ರಿಯ ಸ್ವಾಮಿಗಳು ಮತ್ತು ಹಿರೇಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ವೇದಿಕೆಯಲ್ಲಿದ್ದರು. ಸ್ವಾಮೀಜಿ ಶರೀರವು ಕ್ಯಾನ್ಸರ್ ಬಾಧೆಗೆ ತುತ್ತಾದಾಗ ಅವರ ಆರೋಗ್ಯ ವಿಚಾರಿಸಲು ಸ್ವಾಮಿ ನಿರ್ಭಯಾನಂದರೊಂದಿಗೆ ನಾನು ಹೋಗಿದ್ದೆ. ನಮ್ಮೊಂದಿಗೆ ಮದ್ರಾಸ್ ಐಐಟಿಯ ಹಳೆಯ ವಿದ್ಯಾರ್ಥಿ ತುಮಕೂರಿನ ಪ್ರದೀಪ್​ಸಿಂಹ ಬಂದಿದ್ದರು. ನಮ್ಮೆಲ್ಲರನ್ನು ಕಂಡು ಸ್ವಾಮೀಜಿಗೆ ಆನಂದವಾಯ್ತು. ನಿತ್ರಾಣರಾಗಿದ್ದರೂ ಒಂದು ಗಂಟೆಗೂ ಅಧಿಕ ಕಾಲ ನಮ್ಮೊಂದಿಗೆ ಮಾತನಾಡಿದರು. ‘ಆಗಾಗ ಬರುತ್ತಿರಿ. ನಿಮ್ಮೊಂದಿಗೆ ಮಾತನಾಡಿದ್ದು ನನಗೆ ಸಂತೋಷವಾಯ್ತು’ ಎಂದರು. ಆಗ ಸ್ವಾಮಿ ನಿರ್ಭಯಾನಂದರು, ‘ನಾವು ಮೇಲಿಂದ ಮೇಲೆ ಬಂದರೆ ನಿಮಗೆ ಹೆಚ್ಚು ಮಾತನಾಡಿ ದಣಿವಾಗುತ್ತೆ’ ಎಂದರು. ಆಗ, ‘ನಿಮ್ಮೊಂದಿಗೆ ವೇದಾಂತ ಚಿಂತನೆ ಮಾಡುತ್ತ ಮಾಡುತ್ತ ನನ್ನ ಪ್ರಾಣ ಹೋಗಲಿ, ನಾನು ಲೆಕ್ಕಿಸುವುದಿಲ್ಲ!’ ಎನ್ನುತ್ತ ಎರಡೂ ಕೈಗಳನ್ನೆತ್ತಿ ಮನದುಂಬಿ ಆಶೀರ್ವದಿಸಿದರು. ನಂತರ ಕೆಲವೇ ದಿನಗಳಲ್ಲಿ ಅವರು ಸಮಾಧಿಸ್ಥರಾದರು.

    ಯಾವುದೇ ಲೌಕಿಕ ಪ್ರಚಾರಕ್ಕೆ ಹಾತೊರೆಯದೆ, ಬಿಡಿ ಸಂನ್ಯಾಸಿಯಾಗಿ, ಮೌನಕ್ರಾಂತಿಗೈದ ಮಹಾನ್ ಸಂತ ಸ್ವಾಮಿ ಪರಮಾನಂದ ಭಾರತೀ. ‘ತಾಯಿ ಭಾರತಿಗೆ ಪರಮಾನಂದವಿತ್ತ ಯತಿ ಇವರಲ್ಲವೇ?’ ಎಂದು ಮನಸ್ಸು ನೆನಪಿಸುತ್ತಿತ್ತು. ತ್ಯಾಗತತ್ತ್ವವೊಂದೇ ಮನುಕುಲಕ್ಕೆ ಮಾರ್ಗಸೂಚಿ. ಭಾರತೀಯರಾದ ನಾವು ಈ ಸಂಗತಿಯನ್ನು ಹೃದ್ಗತ ಮಾಡಿಕೊಂಡಷ್ಟೂ ದೇಶಕ್ಕೆ ಒಳಿತು, ಜಗತ್ತಿಗೂ ಮಂಗಳಕಾರಕ.

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts