More

    ಹರಿ ನಾಮಾಮೃತದ ಚೈತನ್ಯ, ಶರಣೆಂದಿತ್ತು ದುರುಳ ದೌರ್ಜನ್ಯ; ಇಂದು ಶ್ರೀಚೈತನ್ಯ ಜಯಂತಿ

    ಹರಿ ನಾಮಾಮೃತದ ಚೈತನ್ಯ, ಶರಣೆಂದಿತ್ತು ದುರುಳ ದೌರ್ಜನ್ಯ; ಇಂದು ಶ್ರೀಚೈತನ್ಯ ಜಯಂತಿ| ಚಿಂತಾಮಣಿ ಕೊಡ್ಲೆಕೆರೆ 
    ಚೈತನ್ಯ ಪ್ರಭುಗಳ ಕುರಿತ ಈ ಲೇಖನವನ್ನು ಒಂದು ವಿನೋದದ ಪ್ರಸಂಗದೊಂದಿಗೆ ಆರಂಭಿಸಬಹುದು.    ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತನಾಡುವಾಗ” ಬಂಗಾಳದ ಸರಕಾರ ಜಗಾಯಿ ಮಾಧಾಯಿ ಸಿಂಡಿಕೇಟ್ನಂತಾಗಿದೆ” ಎಂದು ಉದ್ಗರಿಸಿದರು. ಕೇಳಿದವರು ಬಿದ್ದು ಬಿದ್ದು ನಕ್ಕರೆ ಏನೂ ಸೋಜಿಗವಿಲ್ಲ. ಚೈತನ್ಯ ಪ್ರಭುಗಳ ಕಾಲದಲ್ಲಿದ್ದ    ಈ ಜಗಾಯಿ ಮಾಧಾಯಿ ಸೋದರರು ಪ್ರಜಾಪೀಡಕರಾಗಿ ಕುಪ್ರಸಿದ್ಧರಾಗಿದ್ದರು. ಅವರು ಮಾಡದ ಕೆಟ್ಟ ಕೆಲಸಗಳೇ ಇಲ್ಲ. ಅಂಥವರನ್ನೂ ಚೈತನ್ಯ ಪ್ರಭುಗಳು ಉದ್ಧರಿಸಿದರು. ಒಬ್ಬ ಮಹಾತ್ಮರನ್ನು ನೆನೆಯಲು ಸದ್ಯದ ವರ್ತಮಾನದ ಒಂದು ಮಾತೂ ಕಾರಣವಾಗಬಹುದು!                            

    ಭರತವರ್ಷದ    ಮಹಾನ್  ಸಾಧು  ಸಂತರ  ಸಾಲಿನಲ್ಲಿ    ಭಗವಾನ್  ಶ್ರೀ  ಚೈತನ್ಯ ಮಹಾಪ್ರಭುಗಳು  ವರಿಷ್ಠ  ಸ್ಥಾನದಲ್ಲಿರುವ  ಆಚಾರ್ಯರು. ಶ್ರೀಕೃಷ್ಣನ ಅವತಾರವೆಂದೇ ಸುಪ್ರಸಿದ್ಧರಾಗಿರುವ    ಈ ಮಹಾಪುರುಷರು    ಜನಿಸಿದ್ದು ಫಾಲ್ಗುಣ ಮಾಸದ  ಪೌರ್ಣಮಿಯಂದು. (ಕ್ರಿ.ಶ. 1486 ಫೆಬ್ರವರಿ 18).   ಅಂದರೆ ಇಂದು  ಮಾರ್ಚ್  ಇಪ್ಪತ್ತೆಂಟರಂದು ಅವರ 535ನೇ ವರ್ಷದ  ಜಯಂತಿ. ಭಕ್ತನಾಗಿ ಭಗವಂತ  ಇಳೆಗೆ ಇಳಿದು ಬರುವುದೊಂದು ಸೋಜಿಗ. ಭಗವಂತನ ಇಂಥ ಅವತಾರಗಳ ಹಿಂದೆ ಮನುಕುಲವನ್ನು ಕಾಪಾಡುವ ಆಶಯವೇ ಇರುವುದೆಂದು ನಮ್ಮ ದೃಢ ನಂಬಿಕೆ. ಅದನ್ನು  ಸಮರ್ಥಿಸುವಂತೆ ಇದೆ ಚೈತನ್ಯರ ಜೀವನಯಾತ್ರೆ. ಭಗವಂತನನ್ನು  ಆಳವಾದ ಪ್ರೀತಿಯಿಂದ ಭಕ್ತಿಪೂರ್ವಕವಾಗಿ ಭಜನೆ ಮಾಡುತ್ತಾ ಭಗವಂತನ ನಾಮಸಂಕೀರ್ತನೆಯ ಮಹಾನ್  ಚಳುವಳಿಯನ್ನು    ಹುಟ್ಟುಹಾಕಿದ ಈ ವಿನಮ್ರ    ಭಕ್ತ ಮಹಾಶಯರು      ತಮ್ಮ ಶಿಷ್ಯರಿಂದ  ಮಹಾಪ್ರಭುಗಳೆಂದೇ  ಗೌರವ ಪಡೆದರು. ಆಗಲೇ ಪ್ರಸ್ತಾಪಿಸಿದ    ಸಿಂಡಿಕೇಟ್ ಸೋದರರ ಪ್ರಕರಣ ಮಾತ್ರವಲ್ಲ, ಪ್ರಭುಗಳು  ಪತಿತರನ್ನು  ತಿದ್ದಿ ತೀಡಿದ,  ಪಾವನಗೊಳಿಸಿದ ಸಂದರ್ಭಗಳು ಅಸಂಖ್ಯ. ಅವರು  ಜಗಾಯಿ ಮಾಧಾಯಿ ಸೋದರರನ್ನು ಹೇಗೆ ಪರಿವರ್ತನೆಗೊಳಿಸಿದರು  ಎಂದು ಕೊಂಚ ವಿವರವಾಗಿ ನೋಡೋಣ. 

    ನವದ್ವೀಪದ ಒಂದು ಉತ್ತಮ ಸಂಸ್ಕಾರಗಳ ಪ್ರತಿಷ್ಠಿತ ಕುಟುಂಬದಲ್ಲೇ ಜನಿಸಿದವರು ಜಗಾಯಿ ಮತ್ತು ಮಾಧಾಯಿ. ಜಗನ್ನಾಥ ಮತ್ತು ಮಾಧವರಾಯ ಅವರ ಪೂರ್ಣ ಹೆಸರು. ಒಮ್ಮೆ ನಿತ್ಯಾನಂದ ಪ್ರಭು ಮತ್ತು ಶ್ರೀಲ ಹರಿದಾಸ ಠಾಕೂರರು ಒಂದೆಡೆ ಹೋಗುತ್ತಿದ್ದಾಗ ಒಂದು ಮುಖ್ಯ ರಸ್ತೆಯಲ್ಲಿ ಜನರು ಗುಂಪಾಗಿ ಸೇರಿದ್ದನ್ನು ಕಂಡರು. ಕಾರಣ ಕೇಳಿದ್ದಕ್ಕೆ  ಕುಡಿದ ಇಬ್ಬರು ಯುವಕರು ಗಲಾಟೆ ಮಾಡುತ್ತಿದ್ದಾರೆ  ಎಂದು ಉತ್ತರ ಸಿಕ್ಕಿತು. ಆ ತರುಣರ  ಕುರಿತು ಜನರು ಇನ್ನಷ್ಟು ವಿಷಯಗಳನ್ನೂ ಹೇಳಿದರು: “ನೋಡಿ, ಎಂಥ ಸ್ಥಿತಿ! ಒಳ್ಳೆಯ ಕುಟುಂಬಗಳಿಂದ ಬಂದೂ  ಕುಡಿದು  ಇಷ್ಟು ಹೀನವಾಗಿ ನಡೆದುಕೊಳ್ಳುತ್ತಿದ್ದಾರೆ! ಇವರು ಮಾಡದ ಅನಾಚಾರಗಳಿಲ್ಲ. ಡಕಾಯಿತಿ, ಸ್ತ್ರೀ ಲೋಲುಪತೆ, ಅನ್ಯಾಹಾರ ಭಕ್ಷಣೆ.. ಇವರ ಪಾಪಗಳಿಗೆ ಲೆಕ್ಕವೇ ಇಲ್ಲ… “. ಈ ಪಾಪಿಗಳು      ಸಾರ್ವಜನಿಕರಿಂದ      ಅಕ್ರಮವಾಗಿ  ಹಣ  ಸಂಗ್ರಹಿಸುತ್ತಿದ್ದರು; ಅವರನ್ನು ತಮ್ಮ ಕೆಟ್ಟ ವರ್ತನೆಗಳಿಂದ ಹಿಂಸಿಸುತ್ತಿದ್ದರು.ಈ ಸಿಂಡಿಕೇಟ್ ಎದುರು ಸಾಮಾನ್ಯ ಜನರು ಅಸಹಾಯಕರಾಗಿದ್ದರು.  ಅದು ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯವಾಗಿಸಿತ್ತು. ಚೈತನ್ಯರ ಭಕ್ತದ್ವಯರು ಈ ದುರುಳರ ಬಗೆಗೆ ಮೊದಲೇ ಕೇಳಿ ತಿಳಿದಿದ್ದರು. ಇಂದು  ಪ್ರತ್ಯಕ್ಷವಾಗಿ ಕಂಡರು.  ಚೈತನ್ಯರ ಅನುಯಾಯಿಗಳಾದ    ನಿತ್ಯಾನಂದ ಪ್ರಭು ಮತ್ತು ಶ್ರೀಲ ಹರಿದಾಸ ಠಾಕೂರರು  ಈ ಇಬ್ಬರು ಯುವಕರನ್ನು ಸರಿ ದಾರಿಗೆ ತರಲೇಬೇಕು ಎಂದು ನಿಶ್ಚಯಿಸಿಬಿಟ್ಟರು! ಪಾನೋನ್ಮತ್ತ ಅಣ್ಣತಮ್ಮಂದಿರ ಬಳಿ ಸಾರಿ ಪ್ರೀತಿಯಿಂದ ಮಾತನಾಡಿಸಿದರು. “ಹರಿ ನಾಮ ಹೇಳಿ, ಪಾಪದ ಕೆಲಸ ಮಾಡಬೇಡಿ” ಎಂದೆಲ್ಲ ಹೇಳಿದರು. ಇಂಥ ವಿವೇಕದ ಮಾತುಗಳೆಲ್ಲ ಅವರಿಗೆ ಹಿಡಿಸುತ್ತವೆಯೇ? ಬುದ್ಧಿ ಹೇಳಬಂದವರನ್ನು ಬೈದು, ಭಂಗಿಸಿ ಓಡಿಸಿಬಿಟ್ಟರು. ತಮ್ಮ ಅನುಯಾಯಿಗಳು ಇಂಥ ಸದುದ್ದೇಶದ ಪ್ರಯತ್ನ ಮಾಡಿದರೆಂದು ಚೈತನ್ಯ ಪ್ರಭುಗಳು ಸಂತಸಗೊಂಡರು. 

    ನಿತ್ಯಾನಂದ ಪ್ರಭುಗಳೂ, ಹರಿದಾಸ ಠಾಕೂರರೂ ತಮ್ಮ ಪ್ರಯತ್ನ ಮುಂದುವರಿಸಿದರು. ಈ ದುಷ್ಟದ್ವಯರ ಬಳಿ ಮತ್ತೆ ಮತ್ತೆ ಹೋಗಿ ಅನುನಯದ ಮಾತಾಡಲು ಯತ್ನಿಸಿದರು. ನೀಚ ಸೋದರಲ್ಲೊಬ್ಬನಿಗೆ ಸಿಟ್ಟು ತಡೆಯಲಾಗಲಿಲ್ಲ. ಮಡಕೆಯ ಚೂರೊಂದನ್ನು ಬೀಸಿ ಎಸೆದ. ನಿತ್ಯಾನಂದರ  ಹಣೆಯಿಂದ ರಕ್ತ ಸುರಿಯಿತು. ಆದರೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. “ಬನ್ನಿ, ಹರಿನಾಮ ಸ್ಮರಣೆ ಮಾಡಿ, ಒಳ್ಳೆಯದಾಗುತ್ತದೆ” ಎಂದೇ ಪರಿಪರಿಯಾಗಿ ಬಿನ್ನೈಸಿದರು. ಇದನ್ನು ನೋಡಿ ಆ ಸೋದರರು ಚಕಿತರಾದರು. ಜಗಾಯಿ ನಿತ್ಯಾನಂದರ ಕಾಲಿಗೆ ಬಿದ್ದು ತನ್ನ ಸಹೋದರನನ್ನು ಕ್ಷಮಿಸಲು ಕೇಳಿಕೊಂಡ. ಇನ್ನೂ ಉದ್ರಿಕ್ತನಾಗೇ ಇದ್ದ ಮಾಧಾಯಿಯನ್ನೂ ನಿಯಂತ್ರಿಸಿದ.

    ತಮ್ಮ ಭಕ್ತರ ಮೇಲೆ ನಡೆದ ಹಲ್ಲೆಯ ಸಂಗತಿ ತಿಳಿದು ಚೈತನ್ಯರು ಕೋಪೋದ್ರಿಕ್ತರಾದರು (ಅಥವಾ ಹಾಗೆ ನಟಿಸಿದರು). ಆ ಇಬ್ಬರು ದುಷ್ಟರನ್ನು ಸಂಹರಿಸುವುದಾಗಿ ಸುದರ್ಶನ ಚಕ್ರವನ್ನೇ ಎತ್ತಿದರು! ಇದೀಗ ನಿತ್ಯಾನಂದ ಪ್ರಭುಗಳು ಮತ್ತು ಠಾಕೂರರು ಅವರನ್ನು ತಡೆದರು. “ಈ ಅವತಾರದಲ್ಲಿ ಪ್ರೇಮದಿಂದ ಜನರನ್ನು ಪರಿವರ್ತಿಸುವುದಲ್ಲವೇ ನಿಮ್ಮ ಆಶಯ? ಇವರನ್ನು ಕೊಲ್ಲಬೇಡಿ, ಸನ್ಮಾರ್ಗದಲ್ಲಿ ಮುನ್ನಡೆಸಿ”. ಸರಿ, ಚೈತನ್ಯರು ಶಾಂತರಾದರು. “ಆದರೆ ಒಂದು ಮಾತು. ಇಂದಿನಿಂದ ಈ ಇಬ್ಬರೂ ಕುಡಿಯುವುದನ್ನು ನಿಲ್ಲಿಸಬೇಕು. ಹರಿನಾಮಸ್ಮರಣೆ ಮಾಡಬೇಕು” ಎಂದು ಕಟ್ಟಳೆ  ಮಾಡಿದರು. ತಮ್ಮೆದುರು ನಡೆಯುತ್ತಿದ್ದ ಘಟನೆಗಳಿಂದ ಜಗಾಯಿ ಮಾಧಾಯಿ ಸಂಭ್ರಾಂತರಾಗಿದ್ದರು, ಈಗ ಅವರು ಚೈತನ್ಯಪ್ರಭುಗಳ ಕಾಲಿಗೇ ಬಿದ್ದರು. ತಮ್ಮನ್ನು  ಉದ್ಧರಿಸಬೇಕೆಂದು ಮೊರೆಯಿಟ್ಟರು. ಮುಂದೆ ಅವರಿಬ್ಬರೂ ಭಕ್ತರಾಗಿ ವಿನೀತ ಬಾಳುವೆ ಸಾಗಿಸಿದರು. ಅದು ಅಂದಿನ ಕಥೆ. 

    ಇಂದು ಆ “ದುಷ್ಟ ಜಗಾಯಿ ಮಾಧಾಯಿ”ಯರ ಸಂಖ್ಯೆ ವೃದ್ಧಿಸಿದೆ! ಅವರ ದೌರ್ಜನ್ಯಕ್ಕೊಂದು ಕೊನೆಯೇ ಇಲ್ಲವೇನೋ ಅನಿಸುತ್ತದೆ. ಆದರೆ ಚೈತನ್ಯರ ಉಪದೇಶಗಳನ್ನು ಅನುಸರಿಸಿದರೆ ಇಂದಿಗೂ ಪರಿಹಾರ ಸಾಧ್ಯವಿದೆ. ಈ ಯುಗದ ಕೇಡು ಕೆಡಕುಗಳಿಗೆ  ಚೈತನ್ಯರು ತೋರಿದ ಭಕ್ತಿ ಮಾರ್ಗ ಚಿಕಿತ್ಸೆ ರೂಪದಲ್ಲಿದೆ. 
                                                    *****

    ಆಗಲೇ ಹೇಳಿದಂತೆ ಹದಿನೈದನೇ ಶತಮಾನದ ಅಂತ್ಯದ ಹೊತ್ತಿಗೆ ಒಂದು ಫಾಲ್ಗುಣ ಹುಣ್ಣಿಮೆಯ ರಾತ್ರಿ  ಬಂಗಾಳದ ನವದ್ವೀಪನಗರದ ಶ್ರೀಧಾಮ ಮಾಯಾಪುರದಲ್ಲಿ ಚೈತನ್ಯರು ಅವತರಿಸಿದರು. ತಂದೆ ಜಗನ್ನಾಥ ಮಿಶ್ರಾ ಪಂಡಿತರು,  ತಾಯಿ ಶಚೀದೇವಿ  ನಿರ್ಮಲ ಸ್ವಭಾವದ ಸಾತ್ವಿಕ    ಸ್ತ್ರೀ.    ಚೈತನ್ಯರು ಈ ತಂದೆ ತಾಯಿಯರ ಹತ್ತನೇ ಮಗು.    ಇಟ್ಟ ಹೆಸರು ವಿಶ್ವ೦ಭರ. ಗೌರ ವರ್ಣದವನಾದುದರಿಂದ ಗೌರಾಂಗ,  ಬೇವಿನಮರದ ಕೆಳಗೆ ಹುಟ್ಟಿದ್ದರಿಂದ ನಿಮಾಯಿ –    ಹೀಗೆ ಇನ್ನೆರಡು ಹೆಸರುಗಳೂ ಇದ್ದವು ಬಾಲಕನಿಗೆ. ತೊಟ್ಟಿಲಲ್ಲಿ ಮಲಗಿದವನು   ಅತ್ತಾಗ  ಹರಿನಾಮ ಹಾಡಿದರೆ  ಸಾಕು, ಶಿಶು    ಶಾಂತವಾಗುತ್ತಿತ್ತು.  ಸ್ವಲ್ಪ ದೊಡ್ಡವರಾದ ಮೇಲೂ ಅಷ್ಟೇ, ಚೈತನ್ಯರು ಆಗಾಗ  ಒಂದೇ ಸಮನೆ ಅಳುತ್ತಿದ್ದರು. ‘ಹರಿಬೋಲ್ ‘ಅಂದರೆ ಅಳು ನಿಲ್ಲಿಸುತ್ತಿದ್ದರು. ಅದರಿಂದಾಗಿ ಅವರ ಮನೆಯಲ್ಲಿ ಸದಾ ಹರಿಬೋಲ್ ಘೋಷ ಹೊಮ್ಮುತ್ತಲೇ ಇರುತ್ತಿತ್ತು. ಮುಂದೆ ತಾನು ಮಾಡಲಿರುವ ಕಾರ್ಯಕ್ಕೆ ಆಗಿನಿಂದಲೇ ಅವರು ಸಿದ್ಧತೆ ನಡೆಸಿದ್ದರು ಎಂದರೆ ತಪ್ಪಾಗಲಾರದು.  ಅವರ ಬಾಲ್ಯದಲ್ಲಿ ಅಸಾಧಾರಣ ಎನಿಸುವಂಥ ಅನೇಕ ಸಂದರ್ಭಗಳು , ಕೀಟಲೆಯಾಗಿ ಮೇಲು ನೋಟಕ್ಕೆ ಕಂಡರೂ ಆಳವಾಗಿ ಯೋಚಿಸಿದರೆ ವಿಶೇಷಾರ್ಥ ಉಳ್ಳ ಘಟನೆಗಳು ನಡೆದವು.  ಮುಖ್ಯವಾದ ಮಾತೆಂದರೆ ಅತಿ ಮುಗ್ಧ  ಅನಿಸಿದರೂ ಅಸಾಮಾನ್ಯ ಪ್ರತಿಭೆ ಉಳ್ಳವರಾಗಿದ್ದರು.

    ಚೈತನ್ಯರು ಎಷ್ಟು ಪ್ರತಿಭಾವಂತರೆಂದರೆ    ಹದಿನಾರನೇ ವಯಸ್ಸಿಗೇ ಅವರು ತಮ್ಮ  ಊರಿನಲ್ಲಿ  ಚತುಷ್ಪಾಠಿ (ಹಳ್ಳಿಯ ಶಾಲೆ) ಆರಂಭಿಸಿದರು! ಅವರ ಪಾಠದಲ್ಲಿ  ಶ್ರೀಕೃಷ್ಣ ಮತ್ತೆ ಮತ್ತೆ ಅವತರಿಸುತ್ತಿದ್ದ ಎಂದು ಬೇರೆ    ಹೇಳಬೇಕಿಲ್ಲ. ಅವರ ಶಿಷ್ಯ ಶ್ರೀಲ ಜೀವ ಗೋಸ್ವಾಮಿಯವರು ಮಹಾಪ್ರಭುಗಳ ಪ್ರೀತ್ಯರ್ಥವಾಗಿ ‘ಹರಿ ನಾಮಾಮೃತ ವ್ಯಾಕರಣ’ ರಚಿಸಿದರು. ಅದರಲ್ಲಿ ವ್ಯಾಕರಣದ ನಿಯಮಗಳನ್ನು ಭಗವಂತನ ದಿವ್ಯನಾಮ ಬಳಸಿ ವಿವರಿಸಲಾಗಿದೆ! ನವದ್ವೀಪದಲ್ಲಿ ಅವರು ನಾಮಸಂಕೀರ್ತನೆಯ ಮೂಲಕ ಲೋಕಶಿಕ್ಷಣವನ್ನೂ ಆರಂಭಿಸಿದರು. ಕಲಿಯುಗದಲ್ಲಿ ಯಜ್ಞಯಾಗಗಳನ್ನು ಕ್ರಮಬದ್ಧವಾಗಿ ಮಾಡುವುದು ಕಷ್ಟ,ಅಂಥ ಸಮರ್ಥ ಬ್ರಾಹ್ಮಣರು ದೊರೆಯುವುದು ಅದಕ್ಕಿಂತ ಹೆಚ್ಚು ಕಷ್ಟ. ಆದರೆ ದೇವರು ಪ್ರೇಮಮಯಿ,ಅವನು ನಾಮಜಪಕ್ಕೆ ಒಲಿಯುತ್ತಾನೆ. ಅದೇ ಯಜ್ಞ ಎಂದು ಚೈತನ್ಯರು ಹೇಳಿದರು.ಆದರೆ ಅವರನ್ನು ಒಪ್ಪದ ಸಂಪ್ರದಾಯವಾದಿಗಳು, ಅಸೂಯಾತತ್ಪರರು ಸಾಕಷ್ಟು ಜನರಿದ್ದರು.ಅಂಥವರು ಒಡ್ಡಿದ ಸಮಸ್ಯೆಗಳನ್ನು ಮಹಾಪ್ರಭುಗಳು  ಶಾಂತಚಿತ್ತರಾಗಿಯೇ ಎದುರಿಸಿದರು. ಅವರ ಪ್ರೇಮಮಯ ಭಕ್ತಿ  ಆ ಎಲ್ಲ ಸಂಕಷ್ಟಗಳಿಂದ ಅವರನ್ನು ಪಾರುಮಾಡಿತು. ಅವರ    ಜೀವನ ಚರಿತ್ರೆಯಲ್ಲಿ ಅಂಥ ಅನೇಕ ಪ್ರಸಂಗಗಳಿವೆ.  ವಾರಾಣಸಿಯ ವಿದ್ವಾಂಸರ ವಾದಗಳನ್ನು ವಿಶಿಷ್ಟವಾಗಿ, ವಿನೋದಪೂರ್ಣವಾಗಿ    ವಿಚ್ಛಿನ್ನಗೊಳಿಸಿ ವಿನಯದಿಂದಲೇ ವಿಜೇತರಾದರು ವಿಶ್ವ೦ಭರಚೈತನ್ಯರು.

    ನಾಮಸಂಕೀರ್ತನ ಒಂದು ಚಳುವಳಿಯಂತೆ ಹಬ್ಬತೊಡಗಿತು.ಶ್ರೀಲ ನಿತ್ಯಾನಂದ ಪ್ರಭು, ಠಾಕುರ ಹರಿದಾಸ, ಅದ್ವೈತಪ್ರಭು, ಶ್ರೀನಿವಾಸ ಠಾಕುರ  ಮುಂತಾಗಿ ಅನೇಕರು ಚೈತನ್ಯರ ಜೊತೆ ಕೈಜೋಡಿಸಿದರು. ಲೌಕಿಕ ಭೋಗಕ್ಕಿಂತ  ಭಕ್ತಿಯೋಗ ಹಿತಕರ,  ಆತ್ಮೋದ್ಧಾರದ ಸರಳ ಸುಂದರ  ಮಾರ್ಗ ಎಂದು ಇವರೆಲ್ಲ ಸಮುದಾಯಕ್ಕೆ ತೋರಿಸಿಕೊಟ್ಟರು. ಕೆಟ್ಟ ಚಟಗಳಿಂದ ದೂರವಾಗಿ ಪರಿಶುದ್ಧವಾಗಿ ಬಾಳುವಂತೆ ಬೋಧಿಸಿದರು. ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಚೈತನ್ಯರು    ವಿಧ್ಯುಕ್ತವಾಗಿ ಸನ್ಯಾಸ ಸ್ವೀಕರಿಸಿದರು. ಸನ್ಯಾಸಧರ್ಮವನ್ನು ಅವರು ಕಟ್ಟುನಿಟ್ಟಾಗಿ  ಪಾಲಿಸಿದರು.    ಆರು ಗೋಸ್ವಾಮಿಗಳು ಹಾಗೂ ಇನ್ನೂ  ಕೆಲವು ಶಿಷ್ಯರನ್ನು ಸಂಕೀರ್ತನ ಪ್ರಚಾರಕ್ಕೆ ಪ್ರಭುಗಳು ನಿಯೋಜಿಸಿದರು. ಸ್ವತಃ  ಚೈತನ್ಯರು ದಕ್ಷಿಣ ಭಾರತದಲ್ಲೂ, ಮಹಾರಾಷ್ಟ್ರಕರ್ನಾಟಕ ಹಾಗೂ ಇನ್ನಿತರ ಅನೇಕ ಪ್ರದೇಶಗಳಲ್ಲೂ  ಸಂಚರಿಸಿ ಹರಿನಾಮ ಸುಧೆ ಹರಿಸಿದರು. ತಾಯಿ ಬಯಸಿದಂತೆ ಪುರಿಯನ್ನು ತಮ್ಮ ಕಾರ್ಯಗಳ ಕೇಂದ್ರವನ್ನಾಗಿ ಮಾಡಿಕೊಂಡರು. ಆ ಪುಣ್ಯಕ್ಷೇತ್ರದಲ್ಲಿ  ಆರಂಭದಲ್ಲಿ ಅವರು ಅನೇಕ  ವಿರೋಧಗಳನ್ನು ಎದುರಿಸಬೇಕಾಯಿತು. “ದೇವರೊಂದಿಗೆ ಮಾನವನ ಸಂಬಂಧ ಶಾಶ್ವತವಾದುದು, ಭಕ್ತಿಪೂರ್ಣ ಸೇವೆಯಿಂದ ಪರಮಾತ್ಮನ ಪ್ರೀತಿ ಪಡೆಯುವ ಪ್ರಯತ್ನ ನಮ್ಮದಾಗಬೇಕು”  ಎಂಬ ಪ್ರಾಯೋಗಿಕ ಪರಿಹಾರವನ್ನು ಪ್ರಪಂಚಕ್ಕೆ ನೀಡಿದ ಪೂಜ್ಯರು ಮಹಾಪ್ರಭುಗಳು. ವರ್ಣಭೇದ ಸಾಮಾಜಿಕ ಅಪರಾಧ ,ವಾಸ್ತವವಾಗಿ ಅಧ್ಯಾತ್ಮದ ಅತ್ಯುನ್ನತ ಅನುಭವಕ್ಕೆ ಅಂಥ ಅಡೆತಡೆಗಳೇ ಇಲ್ಲ ಎಂದು ಎಲ್ಲೆಡೆ ಎಲ್ಲರನ್ನೂ ದೇವರ ಮಮತೆಯ ಮಡಿಲಿಗೆ ಮನದುಂಬಿ ಆಹ್ವಾನಿಸಿದರು. ಸತ್ಸಂಗ , ಹರಿ ಸಂದೇಶ ಶ್ರವಣ  ಮತ್ತು ಹರಿಸಮರ್ಪಣ ಭಕ್ತರ ಸಾಧನಾಮಾರ್ಗದ ಮೂರು ಮುಖ್ಯ ಸಂಗತಿಗಳೆಂದು ಅವರು ತೋರಿಸಿಕೊಟ್ಟರು.ಭಾಗವತದ ಪಠಣ ಇನ್ನೊಂದು ಮುಖ್ಯ ಉಪಾಯ.  ಜಗನ್ನಾಥನ ಅನುಗ್ರಹ, ಜಗದ್ವಿಖ್ಯಾತಿ ಎರಡೂ ಲಭಿಸಿತು ಅವರಿಗೆ. 
     
    ಭಗವಂತನೊಂದಿಗೆ ಶಾಶ್ವತವಾಗಿ ಸಂಬಂಧ ಇಟ್ಟುಕೊಳ್ಳುವುದು, ಅವನೊಂದಿಗೆ ಅನುದಿನದ ಅನುಸಂಧಾನ ಹಾಗೂ ಅವನ ಬಗೆಗೆ ಎಂದೂ ಕುಗ್ಗದ,ಎಂದೆಂದಿಗೂ ಹಿಗ್ಗುವ  ಪ್ರೀತಿಯ ಮಧುರ ಭಾವನೆ – ಇವೇ ಮುಖ್ಯ, ಇವೇ ಸತ್ಯ, ವೇದಗಳ ನಿಜ ಸಾರಾಂಶವನ್ನು ಉಪದೇಶಿಸಿದರು. ತಮ್ಮ ಹಿಂಬಾಲಕರಿಗೆ ಅವರು ಕೊಟ್ಟುದು ದೇವರ ಕುರಿತು ಎಣೆಯಿಲ್ಲದ ಪ್ರೀತಿಯನ್ನು . ನಾಮಸಂಕೀರ್ತನ ಆ ಪ್ರೇಮಸಂಪತ್ತನ್ನು ಸಂಪಾದಿಸುವ ಕ್ರಿಯಾಯೋಗ. ಕಾಲದ ಪ್ರಭಾವದಿಂದ ಈ ಭಕ್ತಿಮಾರ್ಗದಲ್ಲಿ ಕರೀಮುಸುಕು,ಗಾಢ ಅಂಧಕಾರ ಕವಿದಿತ್ತು. ಚೈತನ್ಯರು ಆ ಪಥದ ಕತ್ತಲು ಸರಿಸಿದರು,ಬೆಳಕು ಹರಿಸಿದರು. ಅವರು ಭಗವಂತನ ಅವತಾರವೆಂದು ಭಕ್ತ ಭಾಗವತರು ಭಾವಿಸಿದರೆ, ಭಗವಾನರೆಂದು ಬಾಗಿದರೆ ಬೆರಗಾಗುವದೇನಿದೆ? 
     
    ಶ್ರೀ ಚೈತನ್ಯರು ಬದುಕಿದ್ದು ನಲವತ್ತೆಂಟು ವರ್ಷಗಳು ಮಾತ್ರ. ಆ ಅಷ್ಟೂ  ವರ್ಷಗಳ ಕಾಲ ಚೈತನ್ಯರು ಹರಿಸಂದೇಶ ಪ್ರಚುರ ಪಡಿಸಿದರು, ಪ್ರಚಾರ ಮಾಡಿದರು. ಅವರ ಅಂತ್ಯ ಅತ್ಯಂತ ನಿಗೂಢಕರವಾಗಿದೆ.  ಪುರಿಯ ಟೋಟ ಗೋಪಿನಾಥನ ದೇವಾಲಯದಲ್ಲಿ ಸಂಕೀರ್ತನ ಮಾಡುತ್ತ ಮಾಡುತ್ತಲೇ  ಅಲ್ಲಿಂದ ಅತ್ಯಾಶ್ಚರ್ಯಕರವಾಗಿ ಕಣ್ಮರೆಯಾದರು. ಅಲ್ಲಿಯ ಕೃಷ್ಣನಲ್ಲಿ ಅವರು ಐಕ್ಯರಾದರು ಎಂಬ ನಂಬುಗೆ ಇದೆ.

    ‘ಚೈತನ್ಯ ಚರಿತಾಮೃತ’ ಮಹಾಪ್ರಭುಗಳ ಕುರಿತು ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಬರೆದ ಜೀವನ ಚರಿತ್ರೆ. ಕೃಷ್ಣದಾಸರು ಕುಟುಂಬದ ಮನಸ್ತಾಪದಿಂದ ಬೇಸತ್ತು ವೃ೦ದಾವನಕ್ಕೆ ತೆರಳಿದಾಗ ಹಣ್ಣು ಹಣ್ಣು ಮುದುಕರು. ಆಗ ಅವರಿಗೆ ವಯಸ್ಸು 91. ಅಲ್ಲಿ  ಅವರಿಗೆ ಚೈತನ್ಯ ಪರಂಪರೆಯ ಪ್ರಮುಖ ಗೋಸ್ವಾಮಿಗಳ ಭೆಟ್ಟಿಯಾಯಿತು. ಅವರೆಲ್ಲರ ಆಗ್ರಹದಂತೆ ಕವಿರಾಜರು ಚೈತನ್ಯ ಚರಿತಾಮೃತ ಬರೆದರು. ಅವರ ಆ ವಯೋಮಾನದಲ್ಲಿ  ಇದೊಂದು ಪವಾಡ ಸದೃಶ ಘಟನೆಯೇ ಸರಿ.  ಇದನ್ನು ಮಹಾಪ್ರಭುಗಳ ಜೀವಿತದ ಕುರಿತ ಆಧಾರಕೃತಿ ಎಂದು ಹೇಳಲಾಗುತ್ತದೆ.     
     
    ಜೀವನಾದ್ಯಂತ ಅಷ್ಟೊಂದು ಕಡೆ ಸಂಚರಿಸಿ ಜನಸಾಮಾನ್ಯರಿಗೆ ಉಪದೇಶಿಸಿ ಉದ್ಧರಿಸಿದ ಚೈತನ್ಯರು ಆ ಎಲ್ಲ ನುಡಿಗಳ    ಸಾರ ಸರ್ವಸ್ವವನ್ನೂ ಕೇವಲ ಎಂಟು ಶ್ಲೋಕಗಳಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಅದು ಶಿಕ್ಷಾಷ್ಟಕ ಎಂದು ಪ್ರಸಿದ್ಧವಾಗಿದೆ.ಶ್ರೀ ಕೃಷ್ಣನಲ್ಲಿ ಸಂಪೂರ್ಣ ಶರಣಾಗತಿಯನ್ನು ಅದು ಬೋಧಿಸುತ್ತದೆ.ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣ ಹೇಳಿದುದಕ್ಕೂ,ಶತಮಾನಗಳ ಬಳಿಕ  ಪ್ರಭು ಚೈತನ್ಯರು ನೀಡಿದ ಉಪದೇಶಗಳಿಗೂ ಯಾವುದೇ ಅಂತರವಿಲ್ಲ. ಅಷ್ಟೇ ಅಲ್ಲ,ಅವು ಇಂದಿಗೂ ಪ್ರಸ್ತುತವಾಗಿವೆ. ಭಗವಂತನೇ ಭಕ್ತನಿಗೆ  ಸದಾಕಾಲದ ಆಸರೆ. ಅವನಿಗೆ ಶರಣಾಗಬೇಕೆಂಬುದೇ ಅಂತಿಮ ಸತ್ಯ. ಅದೇ ಆದಿ ಸತ್ಯ!    “ಜೀವಿಗಳಿಗೆ ಎಲ್ಲ ಅನುಗ್ರಹಗಳನ್ನೂ ನೀಡಬಲ್ಲದ್ದು ನಿನ್ನ ಪವಿತ್ರ ನಾಮವೊಂದೇ.” ಭಗವಂತನ ಎಲ್ಲ ಆಧ್ಯಾತ್ಮಿಕ ಶಕ್ತಿಯೂ ಅವನ ನಾಮದಲ್ಲಿದೆ. ಅದನ್ನು ಸ್ಮರಿಸುತ್ತಾ ಅವನನ್ನು ಸುಲಭವಾಗಿ ಸಮೀಪಿಸಬಹುದು. 

    “ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ  ಕೃಷ್ಣ  ಹರೇ ಹರೇ,  ಹರೇ ರಾಮ  ಹರೇ ರಾಮ, ರಾಮ ರಾಮ ಹರೇ ಹರೇ”  ಈ ಮಂತ್ರದಲ್ಲಿ ಚೈತನ್ಯವಿದೆ, ಚೈತನ್ಯರಿದ್ದಾರೆ. ಅದರ ನಿರಂತರ ಸ್ಮರಣೆಯಿಂದ ನಾವು ನಮ್ಮ ಜೀವನದಲ್ಲಿ ಎದುರಾಗುವ ಎಂಥ ದುಷ್ಟಚತುಷ್ಟಯಗಳೇ ಇರಲಿ, “ಜಗಾಯಿ ಮಾಧಾಯಿ ” ಸಿಂಡಿಕೇಟುಗಳೇ ಇರಲಿ ಅಂಜದೆ, ಅಳುಕದೆ ಭಗವದ್ ಶಕ್ತಿಯ ಚೈತನ್ಯಶೀಲರಾಗಿ ಬಾಳಬಹುದು.  ಇದೇ ಚೈತನ್ಯರು ನಮಗೆ ಕೊಟ್ಟುಹೋಗಿರುವ “ಭಕ್ತಿಶಕ್ತಿ”ಯ ಸಂದೇಶ.   
                         

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts