More

    ಮಹಾವೀರರ ಆದರ್ಶ ಅನುಸರಿಸೋಣ: ಇಂದು ಜಯಂತಿ

    ಮಹಾವೀರರ ಆದರ್ಶ ಅನುಸರಿಸೋಣ: ಇಂದು ಜಯಂತಿ| ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ

    ನಾವೆಲ್ಲರೂ ಕೋವಿಡ್-19ರ ಸಂಕಟ ಕಾಲದಲ್ಲಿದ್ದೇವೆ. ಅಪರಿಗ್ರಹ, ಸಾತ್ವಿಕ ಶುದ್ಧ ಆಹಾರ, ಶುದ್ಧ ಗಾಳಿ ಸೇವನೆ, ಶುದ್ಧ ಚಿಂತನೆಯಿಂದ ಪರಿಶುದ್ಧ ಆತ್ಮರಾಗಬಹುದು ಎಂಬ ಅಣುವ್ರತ ನೀಡಿದ ಮಹಾವಿರಾಗಿ ಭಗವಾನ್ ಮಹಾವೀರರು. ಈಗಿನ ಬಿಹಾರ ರಾಜ್ಯದ ವೈಶಾಲಿ ಕುಂಡ ಗ್ರಾಮದಲ್ಲಿ ವೀರಕ್ಷತ್ರಿಯ ಕಾಶ್ಯಪ ಗೋತ್ರದ ಜ್ಞಾತೃ ವಂಶದ ಸಿದ್ಧಾರ್ಥ ರಾಜ, ತ್ರಿಶಲಾ ದೇವಿಯ ಪುತ್ರರಾಗಿ ಚೈತ್ರ ಶುಕ್ಲ ತ್ರಯೋದಶಿ ಉತ್ತರ ಫಾಲ್ಗುಣಿ ನಕ್ಷತ್ರ ಸೋಮವಾರ ಕ್ರಿ.ಪೂ. 27. 03. 598ರಂದು ಮಹಾವೀರರು ಜನಿಸಿದರು. ವೈಶಾಲಿ ರಾಜ್ಯವು ಭಾರತದ ಪ್ರಾಚೀನ ಶ್ರೀಮಂತ ನಗರವಾಗಿತ್ತು. ಅಲ್ಲಿ ಪ್ರಜಾಪ್ರಭುತ್ವ ಮಾದರಿಯ ರಾಜ್ಯಭಾರ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಜೀವಹಿಂಸೆ, ಮೂಢಭಕ್ತಿ, ಸಾಮಾಜಿಕ ಅಸಮತೆಯನ್ನು ಹೋಗಲಾಡಿಸುವ ಕೆಲಸವನ್ನು ಭಗವಾನ್ ಮಹಾವೀರರು ಮಾಡಿದರು.

    ಭಾರತದ ಪಾರ್ಲಿಮೆಂಟ್ ಕಲ್ಪನೆಗೆ ಇವರ ಅನುಭವ ಮಂಟಪ ಸಮವಸರಣವೆ ಪ್ರೇರಣೆ. ಭಗವಂತರಾದ ಮಹಾವೀರರು ತತ್ಕಾಲೀನ ಸಮಾಜದಲ್ಲಿ ರೂಢಿಯಲ್ಲಿದ್ದ ಅನೇಕ ಅಜ್ಞಾನಗಳನ್ನೂ, ಕಂದಾಚಾರಗಳನ್ನೂ, ಯಜ್ಞಯಾಗದ ಹೆಸರಲ್ಲಿ ನಡೆಯುತ್ತಿದ್ದ ನರಬಲಿ, ಪಶುಬಲಿ, ಪ್ರಾಣಿಬಲಿ ನಿಷೇಧ ಮಾಡಲು ಆ ಕಾಲದ ರಾಜರಿಗೆ ಬೋಧಿಸಿದ ಸದಾಚಾರ, ಸರಳತೆ, ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ, ಮೋಕ್ಷಮಾರ್ಗದ ಸೂತ್ರವಾಗಿದೆ. ಭಗವಂತನನ್ನು ಪೂಜಿಸುವುದು ಅಂದರೆ ಅವರ ದಿವ್ಯ ಸಂದೇಶ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿ ಆಚರಿಸುವುದು. ಸಸ್ಯ ವನಸ್ಪತಿ, ವಾಯು, ಅಗ್ನಿ, ಜಲ, ಆಕಾಶ, ಪೃಥ್ವಿ ಕಾಯ, ಏಕೇಂದ್ರಿಯ ಜೀವಗಳು ಹೀಗೆ ಎಲ್ಲಾ ಜೀವಿಗಳೂ ಕ್ರಮವಾಗಿ ಇಂದ್ರಿಯ ಬಡ್ತಿ ಪಡೆದು ಮಾನವನಾಗಿ ರತ್ನತ್ರಯ ಧರ್ಮಸ್ವೀಕಾರ ಮಾಡಿ ಮಾನವ ಅಣುವ್ರತ ಪಾಲಿಸಿ ಯತಿಯಾಗಿ ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವ ಎನ್ನುವ ಪಂಚ ಪರಾವರ್ತನೆಯ ಪುರುಷಾರ್ಥ ಪ್ರಾಪ್ತಿಸಿಕೊಂಡಲ್ಲಿ ಭಗವಂತನಾಗಬಹುದು ಎಂಬುದನ್ನು ತಿಳಿಸಿದರು. ನಿರ್ಲಕ್ಷ್ಯ ಹಾಗೂ ತಪ್ಪು ತಿಳುವಳಿಕೆಗಳಿಂದ ನಾವು ಕರ್ಮಬಂಧನದಲ್ಲಿ ಸಿಲುಕಿಕೊಳ್ಳುತ್ತೇವೆ. ನಾವು ವಿವೇಕಿಗಳಾದಲ್ಲಿ ಪ್ರಮಾದಗಳನ್ನು ಮಾಡದಿರುವ ಶ್ರೇಷ್ಠರಾಗಿ ಕ್ರಮದಿಂದ ಸಂನ್ಯಾಸತ್ವವನ್ನು ಸ್ವೀಕರಿಸಿ ಪುರುಷಾರ್ಥ ಚತುಷ್ಟಯ ಸಾಧಿಸಿ ಮೋಕ್ಷ ಪಡೆಯಬಹುದು ಎಂದು ಸಾರಿದರು.

    ಅಹಿಂಸೆ ಪರಮಧರ್ಮ ಎಂದು ಹೇಳಿ, ಮೂಕಪ್ರಾಣಿಗಳ ಬಗ್ಗೆಯೂ ದಯೆ ತೋರಿಸಿದವರು ಭಗವಾನ್ ಮಹಾವೀರರು. ಇಂದು ಪ್ರಾಣಿಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರಾಣಿಗಳ ರಕ್ಷಣೆಗಾಗಿ ಇರುವ ನಿಯಮಾವಳಿ ಇಡೀ ಭಾರತದಲ್ಲಿ ಏಕರೂಪವಾಗಲಿ. ಆದಷ್ಟು ಶೀಘ್ರ ಜಮ್ಮು ಕಾಶ್ಮೀರದಲ್ಲೂ ಅಳವಡಿಕೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ. ಕೋವಿಡ್-19 ಕಾರಣ ಮಹಾವೀರ ಜಯಂತಿಯನ್ನು ಮನೆಮನೆಯಲ್ಲೆ ಸರಳವಾಗಿ ಆಚರಿಸೋಣ, ಅರೋಗ್ಯ ನಿಯಮ ಕಟ್ಟುನಿಟ್ಟಾಗಿ ಪಾಲಿಸೋಣ. ಸರ್ವರಿಗೂ ಭಗವಾನ್ ಮಹಾವೀರ ಸ್ವಾಮಿ 2620ನೇ ಜಯಂತಿ ಶುಭ ತರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts