More

    ಕಿಂಗ್ ಚಾರ್ಲ್ಸ್: ಮೂರನೇ ಚಾರ್ಲ್ಸ್ ಎಂಬ ಅಭಿದಾನ

    ಲಂಡನ್: ರಾಣಿ 2ನೇ ಎಲಿಜಬೆತ್ ಮರಣದ ಹಿನ್ನೆಲೆಯಲ್ಲಿ ಅವರ ಹಿರಿಯ ಪುತ್ರ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ಬ್ರಿಟನ್ ರಾಜನಾಗಿ ಶನಿವಾರ ಸಿಂಹಾಸನಾರೂಢರಾದರು. ಇವರಿಗೆ ‘ಕಿಂಗ್ 3ನೇ ಚಾರ್ಲ್ಸ್’ ಎಂಬ ಅಭಿದಾನವನ್ನು ಔಪಚಾರಿಕವಾಗಿ ಘೋಷಣೆ ಮಾಡಲಾಯಿತು. ಲಂಡನ್​ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ 73 ವರ್ಷದ ಚಾರ್ಲ್ಸ್ ಅಧಿಕೃತವಾಗಿ ನೂತನ ರಾಜನಾಗಿ ಪ್ರತಿಜ್ಞೆ ಸ್ವೀಕರಿಸಿದರು. ಚಾರ್ಲ್ಸ್​ರನ್ನು ರಾಜನೆಂದು ಅಕ್ಸೆಷನ್ ಸಮಿತಿ ಸಭೆ ಘೋಷಿಸಿದ್ದನ್ನು ಟಿವಿಯಲ್ಲಿ ಇದೇ ಮೊದಲ ಬಾರಿಗೆ ನೇರಪ್ರಸಾರ ಮಾಡಲಾಯಿತು, ರಾಣಿಯ ಮರಣದ ನಂತರ ಹಿರಿಯ ಮಗ ಚಾರ್ಲ್ಸ್ ಅವರೇ ಸಹಜವಾಗಿ ನೂತನ ರಾಜನಾಗುವುದು ನಿಶ್ಚಿತವಾಗಿದ್ದರೂ ಹೊಸ ರಾಜನ ಸಾರ್ವಭೌಮತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಶತಮಾನಗಳ ಹಳೆಯ ಔಪಚಾರಿಕತೆಗೆ ಅನುಗುಣವಾಗಿ ಸಮಿತಿಯ ಸಭೆ ನಡೆಯಿತು. ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಯ ಬಗ್ಗೆ ಆಳವಾದ ಅರಿವು ತಮಗಿದೆ ಎಂದು ಚಾರ್ಲ್ಸ್ ಈ ಸಂದರ್ಭದಲ್ಲಿ ಹೇಳಿದರು. 96ನೇ ವಯಸ್ಸಿನಲ್ಲಿ ಬಾಲ್ಮೋರಲ್​ನಲ್ಲಿ ಗುರುವಾರ ನಿಧನರಾದ ತಮ್ಮ ತಾಯಿಯವರು ಜೀವಮಾನದ ಪ್ರೀತಿ, ನಿಸ್ವಾರ್ಥ ಸೇವೆಯ ಉದಾಹರಣೆಯಾಗಿದ್ದು, ತಾವು ಕೂಡ ಅನುಕರಿಸುವುದಾಗಿ ತಿಳಿಸಿದರು.

    ಪ್ರಧಾನಿ ಲಿಜ್ ಟ್ರಸ್, ಮಾಜಿ ಪ್ರಧಾನಿಗಳು, ಚಾರ್ಲ್ಸ್ ಪತ್ನಿ ಕ್ಯಾಮಿಲಾ, ಹಿರಿಯ ಪುತ್ರ ಮತ್ತು ಉತ್ತರಾಧಿಕಾರಿ ವಿಲಿಯಂ ಮತ್ತು ಅವರ ಪತ್ನಿ ಕೇಟ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಲಿಯಂ ಮತ್ತು ಅವರ ಪತ್ನಿಯನ್ನು ವೇಲ್ಸ್ ರಾಜಕುಮಾರ ಮತ್ತು ರಾಜಕುಮಾರಿ ಎಂದು ಘೋಷಿಸಲಾಯಿತು. ಇದುವರೆಗೂ ಈ ಸ್ಥಾನ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾರದ್ದಾಗಿತ್ತು.ಕಡುಗೆಂಪು ಮತ್ತು ಚಿನ್ನದ ಬಣ್ಣದಿಂದ ಅಲಂಕರಿಸ ಲ್ಪಟ್ಟ ಸೇಂಟ್ ಜೇಮ್ಸ್ ಅರಮನೆಯಲ್ಲಿನ ಭವ್ಯವಾದ ಕೋಣೆಯಲ್ಲಿ ಎರಡು ಭಾಗಗಳಲ್ಲಿ ಸೇರ್ಪಡೆ ಸಮಿತಿಯ ಸಭೆ ನಡೆಯಿತು. ಮೊದಲನೆಯದ್ದರಲ್ಲಿ ಚಾರ್ಲ್ಸ್ ಅವರನ್ನು ರಾಜ ಎಂದು ಘೊಷಿಸಿದಾಗ ಅವರು ಆ ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ‘ನಮ್ಮ ಸಾರ್ವಭೌಮ ರಾಣಿ ಸಾವಿನಿಂದಾಗಿ ಈಗ ಪ್ರಿನ್ಸ್ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ಅವರು ನಮ್ಮ ರಾಜ 3ನೇ ಚಾರ್ಲ್ಸ್ ಆಗಿದ್ದಾರೆ. ದೇವರು ರಾಜನನ್ನು ರಕ್ಷಿಸಲಿ’ ಎಂದು ಸೇರ್ಪಡೆ ಸಮಿತಿಯ ಗುಮಾಸ್ತ ಘೋಷಿಸಿದ. ನಂತರ ಅಲ್ಲಿ ನೆರೆದ ಕೌನ್ಸಿಲರ್​ಗಳು ಕೂಡ ‘ದೇವರು ರಾಜನನ್ನು ರಕ್ಷಿಸಲಿ’ ಎಂದು ಪುನರುಚ್ಚರಿಸಿದರು.

    ನಾನು ಯಾರ ಸಾರ್ವಭೌಮ ಎಂದು ಕರೆಯಿಸಿ ಕೊಳ್ಳುತ್ತೇನೆಯೋ ಆ ಜನರ ಪ್ರೀತಿ ಮತ್ತು ನಿಷ್ಠೆಯನ್ನು ಎತ್ತಿಹಿಡಿಯುತ್ತೇನೆ.

    | ಬ್ರಿಟನ್ ರಾಜ 3ನೇ ಚಾರ್ಲ್ಸ್

    ಕೊಹಿನೂರ್ ವಜ್ರ ಕಿರೀಟ ಯಾರು ಧರಿಸುತ್ತಾರೆ?

    ಜಗತ್ತಿನ ಅತ್ಯಂತ ಬೆಲೆಬಾಳುವ ವಜ್ರ ಕೊಹಿನೂರ್. ಇದರ ಮೌಲ್ಯ ಅಂದಾಜು 40 ಕೋಟಿ ಡಾಲರ್ (3,200 ಕೋಟಿ ರೂಪಾಯಿ). ಕೊಹಿನೂರ್ ಎಂದರೆ ಪ್ರಕಾಶದ ಶಿಖರ. 106 ಕ್ಯಾರೆಟ್ (21.6 ಗ್ರಾಂ) ತೂಕದ ಈ ವಜ್ರವು ಭಾರತದ ಗೊಲ್ಕೊಂಡಾ ಗಣಿಯಲ್ಲಿ 14ನೇ ಶತಮಾನದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ. ಇದು ಮೊಘಲರು, ಇರಾನಿನ ಯೋಧರು, ಆಫ್ಘಾನಿಸ್ತಾನದ ಆಡಳಿತಗಾರರು, ಪಂಜಾಬಿನ ಮಹಾರಾಜರು ಹೀಗೆ ಹಲವರ ಕೈ ಬದಲಾಗುತ್ತ ಬಂದಿತು. 1849ರಲ್ಲಿ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡ ನಂತರ ಕೊಹಿನೂರ್ ವಜ್ರವನ್ನು ವಿಕ್ಟೋರಿಯಾ ರಾಣಿಗೆ ಹಸ್ತಾಂತರಿಸಿದ್ದರು. ಅದು ಅವರ ಕಿರೀಟವನ್ನು ಅಲಂಕರಿಸಿತು. ರಾಣಿ ಎಲಿಜಬೆತ್ ನಿಧನದ ಹಿನ್ನೆಲೆಯಲ್ಲಿ ಕೊಹಿನೂರ ಅಲಂಕೃತ ಕಿರೀಟ ಯಾರ ಪಾಲಾಗುತ್ತದೆ, ಯಾರು ಧರಿಸುತ್ತಾರೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ನೂತನ ಅರಸ 3ನೇ ಚಾರ್ಲ್ಸ್ ಇಲ್ಲವೇ ಅವರ ಪತ್ನಿ ರಾಣಿ ಕ್ಯಾಮಿಲಾ ಪಾರ್ಕರ್ ಬೌಲ್ಸ್ ಅವರ ಪಾಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಲಂಡನ್ನಿನ ಜ್ಯುವೆಲ್ ಹೌಸ್ ಟವರ್​ನಲ್ಲಿ ಈಗ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ.

    ಪ್ರಧಾನಿಯಿಂದ ನಿಷ್ಠೆಯ ಪ್ರಮಾಣ ವಚನ

    ಪ್ರಧಾನಿ ಲಿಜ್ ಟ್ರಸ್ ಮತ್ತು ಅವರ ಸರ್ಕಾರದ ಹಿರಿಯ ಸದಸ್ಯರು ಹೌಸ್ ಆಫ್ ಕಾಮನ್ಸ್​ನಲ್ಲಿ ನೂತನ ದೊರೆ ಚಾರ್ಲ್ಸ್ ಅವರಿಂದ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದರು. ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಲಿಂಡ್ಸೆ ಹೊಯ್ಲ್ ಅವರು ಮೊದಲಿಗೆ ಪ್ರಮಾಣವಚನ ಸ್ವೀಕರಿಸಿ, ‘ದೊರೆ ಚಾರ್ಲ್ಸ್ ಮತ್ತು ಅವರ ಉತ್ತರಾಧಿಕಾರಿಗಳಿಗೆ ನಿಜವಾದ ನಿಷ್ಠೆ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು. ನಂತರ ಸುದೀರ್ಘ ಸೇವೆ ಸಲ್ಲಿಸಿದ ಸಂಸದರು ಮತ್ತು ಪ್ರಧಾನಮಂತ್ರಿಗಳು ಇದನ್ನು ಅನುಸರಿಸಿದರು. ಎಲ್ಲ ಸಂಸದರು ಚುನಾಯಿತರಾದ ನಂತರ ರಾಜಪ್ರಭುತ್ವಕ್ಕೆ ನಿಷ್ಠೆ ವ್ಯಕ್ತಪಡಿಸಿ ಪ್ರತಿಜ್ಞೆ ಮಾಡುತ್ತಾರೆ. ದೊರೆ ಬದಲಾದಾಗ ಹೊಸ ಪ್ರತಿಜ್ಞೆ ಮಾಡುವುದು ಕಾನೂನಿನ ಪ್ರಕಾರ ಅಗತ್ಯವಲ್ಲ, ಆದರೆ, ಎಲ್ಲ 650 ಸಂಸದರು ಬಯಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶವಿದೆ.

    19ಕ್ಕೆ ಅಂತ್ಯಕ್ರಿಯೆ: ರಾಣಿ 2ನೇ ಎಲಿಜಬೆತ್​ರ ಅಂತ್ಯಕ್ರಿಯೆ ಸೆ. 19ಕ್ಕೆ ಲಂಡನ್​ನ ವೆಸ್ಟ್​ಮಿನಸ್ಟರ್ ಅಬೆಯಲ್ಲಿ ಬೆಳಗ್ಗೆ 11ಕ್ಕೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts