More

    ಸ್ನೇಹದ ಕಡಲಲ್ಲಿ

    ಸ್ನೇಹದ ಕಡಲಲ್ಲಿಡಾ.ವಿ.ಎಸ್. ಆರಾಧ್ಯಮಠ
    ಸ್ನೇಹದ ಸ್ನೇಹದ ಕಡಲಿನಲ್ಲಿ ದೊರಕುವುದು ಮುತ್ತು. ಸಂಸಾರದ ಕಡಲಿನಲ್ಲಿ ಮುತ್ತುಗಳು ದೊರಕಿದರೂ ಅಲ್ಲಿ ಕಣ್ಣೀರಿನ ಮುತ್ತುಗಳೇ ಹೆಚ್ಚು. ಸ್ನೇಹ, ಪ್ರೀತಿ, ಪ್ರೇಮ, ಗೆಳೆತನ ಮೊದಲಾದ ಪದಗಳು ವ್ಯಕ್ತಿಗಳಿಬ್ಬರ ಆತ್ಮೀಯತೆಯನ್ನು ಬೆಸೆಯುವ ಪದಗಳು. ಈ ಎಲ್ಲ ಪದಗಳ ಜೀವಂತಿಕೆಯನ್ನು ಸ್ನೇಹಿತರಿಬ್ಬರ ಜೀವನದಲ್ಲಿ ಕಾಣಲು ಸಾಧ್ಯ. ಬೇರೆಡೆ ಕಂಡು ಬಂದರೂ ಅದು ಬಿಸಿಲ್ಗುದುರೆಯಾಗಿ ಮಾತ್ರ. ನೈಜ ಗೆಳೆತನದಲ್ಲಿ ಸ್ವಾರ್ಥ ಅಪನಂಬಿಕೆ, ಮೋಸ, ಸಂಶಯಗಳಿಗೆ ಜಾಗ ಇಲ್ಲ. ಅಲ್ಲಿ ಸ್ನೇಹಮಯ ಹೃದಯಕ್ಕೆ ಮಾತ್ರ ಆದ್ಯತೆ.

    ಸ್ನೇಹಿತ ಹಾಗೂ ಸ್ನೇಹ ಎಂದಾಗ ನಮಗೆ ಮಹಾಭಾರತದಲ್ಲಿ ಬರುವ ದುರ್ಯೂೕಧನ ಮತ್ತು ಕರ್ಣನ ಪಾತ್ರಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಅವರ ಸ್ನೇಹ ಪ್ರಪಂಚಕ್ಕೇನೇ ಮಾದರಿ. ದುರ್ಯೂೕಧನ ಕೌರವ ಪಕ್ಷದ ಅಧಿಪತಿಯಾಗಿದ್ದರೂ ಕರ್ಣ ಮಾತ್ರ ಅವನಿಗೆ ಪರಮ ಮಿತ್ರ. ಕರ್ಣನೂ ಕೂಡ ದುರ್ಯೂೕಧನನನ್ನು ತನ್ನ ಜೀವನದ ಆತ್ಮೀಯತೆಯ ಒಂದು ಭಾಗವೆಂದೇ ಭಾವಿಸಿದ್ದ. ಒಂದರ್ಥದಲ್ಲಿ ಅವರಿಬ್ಬರೂ ಎರಡು ದೇಹ, ಒಂದೇ ಜೀವ ಎಂಬ ರೀತಿಯಲ್ಲಿ ಬದುಕಿ ಬಾಳಿದವರು. ದುರ್ಯೂೕಧನನಿಗೆ ಕರ್ಣನ ಬಗೆಗೆ ಅಪಾರವಾದ ವಿಶ್ವಾಸ.

    ಒಂದು ದಿನ ದುರ್ಯೂೕಧನನ ಹೆಂಡತಿ ಭಾನುಮತಿ ಹಾಗೂ ಕರ್ಣ ಪಗಡೆ ಆಟದಲ್ಲಿ ತೊಡಗಿದ್ದರು. ಭಾನುಮತಿ ತನ್ನ ಕೊರಳಲ್ಲಿದ್ದ ಮುತ್ತಿನ ಸರವನ್ನು ಪಣಕ್ಕೆ ಒಡ್ಡಿದಳು. ಆಟದಲ್ಲಿ ಭಾನುಮತಿ ಸೋತಳು. ಒಡ್ಡಿದ ಪಣವನ್ನು ನೀಡಬೇಕೆಂದು ಕರ್ಣ ಕೈಚಾಚಿದ. ಭಾನುಮತಿ ಮುತ್ತಿನಸರ ಕೊಡಲು ಹಿಂದೇಟು ಹಾಕಿ ಹೊರಟು ನಿಂತಾಗ, ಕೊಡಲೇಬೇಕೆಂದು ಹಠಮಾಡಿ ಕರ್ಣ ಅವಳ ಕೊರಳಿಗೆ ಕೈಹಾಕಿ ಮುತ್ತಿನ ಸರ ಸೆಳೆಯುವುದಕ್ಕೂ, ಹೊರಗೆ ಹೋಗಿದ್ದ ದುರ್ಯೂೕಧನ ಅಲ್ಲಿಗೆ ಬರುವುದಕ್ಕೂ ಸರಿಹೋಯ್ತು. ಸೆಳೆದ ರಭಸಕ್ಕೆ ಮುತ್ತುಗಳು ನೆಲದ ಮೇಲೆ ಚೆಲ್ಲಾಡಿದವು. ಅದೇ ಸಮಯಕ್ಕೆ ಅಲ್ಲಿಗೆ ಬಂದ ದುರ್ಯೂೕಧನನನ್ನು ಕಂಡ ಕರ್ಣ ಹೆದರಿ ಕಂಪಿಸತೊಡಗಿದ. ಆಗ ದುರ್ಯೂೕಧನ ಏನಪ್ಪಾ ಕರ್ಣ, ಬಿದ್ದಿರುವ ಮುತ್ತುಗಳನ್ನು ಆಯ್ದು ಕೊಡಲಾ ಎಂದು ಮುಗುಳ್ನಗೆ ಸೂಸಿದ. ದುರ್ಯೂೕಧನನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಯಾವ ಘಟನೆ ನಡೆಯಬಹುದಿತ್ತು? ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮನಸ್ಸರಿತು ನಡೆದಾಗ ಯಾವ ಸಮಸ್ಯೆಯೂ ಉದ್ಭವಿಸದು. ತಾನು ಯಾರು ಎಂಬುದು ಗೊತ್ತಾದ ಮೇಲೂ ಮಿತ್ರನಾದ ದುರ್ಯೂೕಧನನನ್ನು ಕರ್ಣ ನೆರಳಂತೆ ಕಾಪಾಡಿದ.

    ಇಂತಹ ಸ್ನೇಹ ಮತ್ತು ಸ್ನೇಹಿತರು ಆಧುನಿಕ ಯುಗದಲ್ಲಿ ಸಿಗಲು ಸಾಧ್ಯವೇ? ಸ್ನೇಹ ಎನ್ನುವುದು ಸಿಹಿಗಿಂತಲೂ ಹೆಚ್ಚು ಸಿಹಿ, ಇದಕ್ಕೆ ಸಕ್ಕರೆ ಕಾಯಿಲೆ ಬರುವುದಿಲ್ಲ. ಎಷ್ಟು ತಿಂದರೂ ಸಿಹಿಯಾಗಿಯೇ ಉಳಿಯುತ್ತದೆ ಅಲ್ಲದೆ ಸ್ನೇಹದಾರೋಗ್ಯ ಶತಾಯುವಾಗುತ್ತದೆ.

    (ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

    ಗ್ರೀನ್‌ ಆಪಲ್ ಸೇವನೆಯಿಂದ ಆಗಲಿದೆ ಹಲವಾರು ಲಾಭ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts