ವಿದೇಶಗಳನ್ನು ನೋಡಲೆಂದೇ ಗಗನಸಖಿ ಆಗುವವರಿದ್ದಾರೆ. ಆದರೆ ಈತ ಗಗನಸಖಿ(ಖ) ಅಲ್ಲ, ಆದರೂ ದೇಶದಿಂದ ದೇಶಕ್ಕೆ ಹಾರಾಡುವ ಗಗನಸುಖಿ. ತಾನಷ್ಟೇ ಅಲ್ಲ, ಕನ್ನಡಿಗರೂ ಕುಳಿತಲ್ಲೇ ವಿಶ್ವವನ್ನು ನೋಡುವಂತಾಗಬೇಕು ಎಂದು ವಿಶ್ವಪರ್ಯಟನೆಗೆ ಹೊರಟಿರುವ ಇವರು, ಜಗತ್ತಿನ ಅಷ್ಟೂ ದೇಶಗಳ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಸದ್ಯ ಉಜ್ಬೇಕಿಸ್ತಾನದಲ್ಲಿದ್ದು ಈತ ಅಲ್ಲಿಂದಲೇ ವಿಜಯವಾಣಿ ಜತೆ ಮಾತಾಡಿದ್ದಾರೆ.
| ರವಿಕಾಂತ ಕುಂದಾಪುರ
‘ನಮಸ್ಕಾರ, ನಮಸ್ಕಾರ, ನಮಸ್ಕಾರ..’ ಹೀಗೆ ಮೂರು ಸಲ ನಮಸ್ಕಾರ ಎಂದಿದ್ದನ್ನು ಕೇಳಿದರೆ ಕನ್ನಡಿಗರಿಗೆ ಸಾಮಾನ್ಯವಾಗಿ ನೆನಪಾಗುವುದು ಬೇರಾರೂ ಅಲ್ಲ, ಗೋಲ್ಡನ್ ಸ್ಟಾರ್ ಗಣೇಶ್. ಆದರೆ ‘ನಮಸ್ಕಾರ ದೇವರು’ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರಿಗೆ ತಕ್ಷಣ ನೆನಪಿಗೆ ಬರುವುದು ರೋಮಿಂಗ್ ಸ್ಟಾರ್ ‘ಡಾಕ್ಟರ್ ಬ್ರೋ..’ ಹೌದು.. ‘ನಮಸ್ಕಾರ ದೇವರು’ ಎನ್ನುತ್ತಲೇ ‘ಡಾ. ಬ್ರೋ. ಕನ್ನಡ..’ ಯೂ-ಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪೇಜ್ ಮೂಲಕ ದರ್ಶನ ಕೊಡುವ, ಜಗತ್ತಿನ ಅಷ್ಟೂ ದೇಶಗಳನ್ನು ಕನ್ನಡಿಗರಿಗೆ ತೋರಿಸಲು ಹೊರಟಿರುವ ಈ ಸಾಹಸಿಯ ಅಸಲಿ ಹೆಸರು ಗಗನ್ ಶ್ರೀನಿವಾಸ್. ಆದರೆ ಈತ ‘ಡಾಕ್ಟರ್ ಬ್ರೋ.’ ಎಂದೇ ಹೆಸರುವಾಸಿ. ಸದ್ಯ ಉಜ್ಬೇಕಿಸ್ತಾನದಲ್ಲಿದ್ದು, ಅಲ್ಲಿಂದಲೇ ವಿಜಯವಾಣಿ ಜತೆ ಮಾತುಕತೆ ನಡೆಸಿರುವ ಗಗನ್, ಇನ್ನು ಕೆಲವು ದಿನ ಇಲ್ಲಿರುತ್ತೇನೆ. ಇಲ್ಲಿಂದ ಮುಂದೆ ಥಾಯ್ಲೆಂಡ್ ನಂತರ ಮತ್ತೊಂದು ದೇಶ. ಹೀಗೆ ಒಂದರ ಹಿಂದೊಂದರಂತೆ ಹತ್ತು ದೇಶಗಳನ್ನು ಸುತ್ತಾಡಿ ನಂತರ ಭಾರತಕ್ಕೆ ಮರಳುತ್ತೇನೆ’ ಎನ್ನುತ್ತ ತಮ್ಮ ವಿಶ್ವಪರ್ಯಟನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕಲ್ಪನೆಯಲ್ಲೇ ಕಳೆದುಹೋಗಬೇಕಾ?
ಚಿಕ್ಕ ವಯಸ್ಸಲ್ಲೇ ನನಗೆ ಜಗತ್ತು ಸುತ್ತಬೇಕು ಎಂಬ ಆಸೆ ಇತ್ತು. ಆಮೇಲೆ ಶಾಲಾದಿನಗಳಲ್ಲಿ ಕೆಲವು ಸ್ನೇಹಿತರು ವಿದೇಶ ಪ್ರವಾಸ, ಅವರ ತಂದೆ-ತಾಯಿ ಯೊಂದಿಗೆ ಅಲ್ಲಿದ್ದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಆಗ ‘ವಿದೇಶ ಅಂದರೆ ಹೀಗಿರುತ್ತೆ, ಒಂಚೂರೂ ಕಸ ಇರಲ್ಲ, ರೋಡ್ ಫುಲ್ ನೈಸ್..’ ಹೀಗೆ ಅವರು ಹೇಳಿದ್ದನ್ನೆಲ್ಲ ಕೇಳಿದಾಗ ಅಲ್ಲಿಗೆ ಹೋಗಬೇಕು ಅನಿಸುತ್ತಿತ್ತು. ಇನ್ನು 9ನೇ ತರಗತಿಯಲ್ಲಿ ನಮಗಿದ್ದ ಪಠ್ಯವೊಂದರಲ್ಲಿ ಕವಿಯೊಬ್ಬರು ವಿಮಾನದ ವಿವರಣೆ ತಿಳಿಸಿದ್ದು ನನ್ನ ಗಮನಸೆಳೆಯಿತು. ‘ಮೆಟಡೋರ್ಗೆ ರೆಕ್ಕೆ ಕಟ್ಟಿದ ಹಾಗೆ’ ಎಂದು ಅವರು ವಿಮಾನವನ್ನು ವರ್ಣಿಸಿದ್ದರು. ಆಗ ನಾನು ವಿದೇಶ, ವಿಮಾನಪ್ರಯಾಣ ಎಲ್ಲವನ್ನೂ ಹಾಗೆ ಹೀಗೆ ಎಂದೆಲ್ಲ ಕಲ್ಪನೆ ಮಾಡಿಕೊಳ್ಳುತ್ತಿದ್ದೆ. ನಮ್ಮಂತೆ ಇತರರೂ ಹೀಗೆ ಕಲ್ಪನೆಯಲ್ಲೇ ಕಳೆದುಹೋಗಬೇಕಾ? ಎಂದುಕೊಂಡು ಜಗತ್ತು ಸುತ್ತಬೇಕು ಅಂತ ನಿರ್ಧರಿಸಿದೆ. ‘ಜಗತ್ತಿನ ಅಷ್ಟೂ ದೇಶಗಳನ್ನು ನಿಮಗೆ ತೋರಿಸುತ್ತೇನೆ’ ಎಂದು 2020ರಲ್ಲಿ ನನ್ನ ಚಾನೆಲ್ ವೀವರ್ಸ್ಗೆ ಪ್ರಾಮಿಸ್ ಮಾಡಿದ್ದೆ. ಅದಕ್ಕೆ ಎಷ್ಟು ಸಮಯ ಬೇಕಾಗುತ್ತೋ ಗೊತ್ತಿಲ್ಲ, ಆದರೆ ಅಷ್ಟೂ ದೇಶಗಳನ್ನು ಕನ್ನಡಿಗರಿಗೆ ತೋರಿಸುತ್ತೇನೆ ಎನ್ನುತ್ತಾರೆ ಗಗನ್.
ಮೊದ್ಲು ಮೊಬೈಲೂ ಇರ್ಲಿಲ್ಲ..
‘ಮೊದಲಿನಿಂದಲೂ ವಿಡಿಯೋ ಕಂಟೆಂಟ್ ಮಾಡುವ ಆಸೆ ಇತ್ತು. ಆದರೆ ನನ್ನ ಬಳಿ ಫೋನ್ ಇರಲಿಲ್ಲ. ಗೆಳೆಯನ ಮೊಬೈಲ್ಫೋನ್ ಪಡೆದು ವಿಡಿಯೋ ಮಾಡಿ, ಸೈಬರ್ ಸೆಂಟರ್ಗೆ ಹೋಗಿ ಎಡಿಟ್ ಮಾಡಿ ಅಪ್ಲೋಡ್ ಮಾಡುತ್ತಿದ್ದೆ. ಬಳಿಕ ಮೊಬೈಲ್ಫೋನ್ ತೆಗೆದುಕೊಂಡರೂ ಮೈಕ್, ಟ್ರೖೆಪಾಡ್ ಇರಲಿಲ್ಲ, ಕ್ರಮೇಣ ಅವುಗಳ ಜತೆ ಕಂಪ್ಯೂಟರ್ ಸೇರಿ ಒಂದೊಂದನ್ನೇ ತಗೊಂಡೆ. ಈಗ ಕ್ಯಾಮರಾ ಇದೆ, ಲ್ಯಾಪ್ಟಾಪ್ ಇದೆ ಎನ್ನುವ ಗಗನ್, ನನಗೆ ಯಾರೂ ಗುರು ಇಲ್ಲ. ಯೂಟ್ಯೂಬ್ ಮೂಲಕವೇ ಎಲ್ಲವನ್ನೂ ನೋಡಿ-ಕೇಳಿ ತಿಳಿದುಕೊಂಡೆ’ ಎನ್ನುತ್ತಾರೆ.
ಲೋಕಲ್ ಟು ಗ್ಲೋಬಲ್
ಗಗನ್ ಇದ್ದಕ್ಕಿದ್ದ ಹಾಗೆ ಆಕಾಶಕ್ಕೆ ಹಾರಿಲ್ಲ. ಮೊದಲು ಇಲ್ಲೇ ಬೆಂಗಳೂರಿನಲ್ಲಿನ ಕೆಲ ಸ್ಥಳಗಳನ್ನು ತೋರಿಸುತ್ತ, ನಂತರ ರಾಜ್ಯದಲ್ಲೇ ಬೆಂಗಳೂರಿನಿಂದಾಚೆಗಿನ ಜಾಗಗಳ ವಿಡಿಯೋ ಮಾಡಿ ಹಾಕಿದ್ದರು. ಆಮೇಲೆ ಒಂದು ದಿನ ಗೋವಾಗೆ ಹೋದರು. ಇದು ಅವರ ಪ್ರಪ್ರಥಮ ಹೊರರಾಜ್ಯದ ಪ್ರಯಾಣ. ಮಧ್ಯಪ್ರದೇಶ, ಹಿಮಾಚಲಪ್ರದೇಶ, ರಾಜಸ್ಥಾನ ಹೀಗೆ ದೇಶದ ಬಹುತೇಕ ರಾಜ್ಯಗಳನ್ನು ಸುತ್ತಾಡಿ ಕೊನೆಗೆ ದೇಶದಿಂದ ದೇಶಕ್ಕೆ ಸುತ್ತಾಡಲು ಪ್ರಾರಂಭಿಸಿದರು. ಹೀಗೆ ಮೊದಲಿಗೆ ಹೋದ ದೇಶವೇ ಪಾಕಿಸ್ತಾನ, ಅದೂ ನಡೆದುಕೊಂಡೇ. ಭಾರತ-ಪಾಕ್ ಗಡಿಯಲ್ಲಿ ನಡೆದುಕೊಂಡು ಹೋಗಲು ಅವಕಾಶವಿದೆ. ಆದರೆ ಅದು ಪಾಕ್ನಲ್ಲಿನ ಗುರುದ್ವಾರಕ್ಕೆ ಒಂದು ಹಗಲಿನ ಮಟ್ಟಿಗೆ ಹೋಗಿ ಬರಲು ಮಾತ್ರ. ಅಲ್ಲಿಂದ ಮತ್ತೆ ಊರಿಗೆ ಬಂದ ಗಗನ್, ಮೇ ತಿಂಗಳಲ್ಲಿ ರಷ್ಯಾಗೆ ಹೋಗಿದ್ದು, ಅಲ್ಲಿಂದ ಉಜ್ಬೇಕಿಸ್ತಾನಕ್ಕೆ ಹೋಗಿ ಈಗ ಅಲ್ಲೇ ಸುತ್ತಾಡುತ್ತ ಕನ್ನಡಿಗರಿಗೆ ಆ ದೇಶವನ್ನು ತೋರಿಸುತ್ತಿದ್ದಾರೆ.
ಎಲ್ಲಿ ಹೋದ್ರೂ ಕನ್ನಡ…
ಇವರ ವಿಶೇಷ ಎಂದರೆ ಯಾವುದೇ ದೇಶಕ್ಕೆ ಹೋದರೂ ಕನ್ನಡದಲ್ಲೇ ಮಾತಾಡುತ್ತಾರೆ. ನಾನು ಕನ್ನಡದಲ್ಲಿ ಮಾತನಾಡಿದರೆ ನಮ್ಮ ಜನರಿಗೆ ಹೆಚ್ಚು ಆಪ್ತವಾಗುತ್ತದೆ, ಅವರಿಗೆ ತಾವೇ ಹೋಗಿ ನೋಡಿದಂಥ ಫೀಲ್ ಇರುತ್ತದೆ ಎನ್ನುವ ಗಗನ್, ತಮ್ಮ ಹಿಂದಿ-ಇಂಗ್ಲಿಷ್ ಎರಡೂ ಅಷ್ಟಕ್ಕಷ್ಟೇ ಎಂಬುದನ್ನೂ ತಿಳಿಸುತ್ತಾರೆ. ಜತೆಗೆೆ ಕನ್ನಡ ಮಾತಾಡಿಯೇ ಪ್ರಪಂಚ ಸುತ್ತಬಹುದು ಎಂಬ ಸಂದೇಶವನ್ನೂ ಸಾರುತ್ತಾರೆ. ಉದಾಹರಣೆಗೆ ಉಜ್ಬೇಕಿಸ್ತಾನದಲ್ಲಿ ನಾನು ಗೂಗಲ್ ಟ್ರಾನ್ಸ್ಲೇಟರ್ ಮೂಲಕ ಕನ್ನಡದಲ್ಲೇ ಮಾತಾಡಿದರೆ ಅದು ಅನುವಾದ ಆಗಿ ಅವರಿಗೆ ಅವರ ಭಾಷೆಯಲ್ಲೇ ಸಂವಹನ ಆಗುತ್ತದೆ. ಇನ್ನು ಅವರು ಅವರ ಭಾಷೆಯಲ್ಲಿ ಮಾತಾಡಿದ್ದು ಅದೇ ಥರ ನನಗೂ ಅನುವಾದವಾಗಿ ಸಿಗುತ್ತದೆ ಅಂತಾರೆ.
ಪ್ರಪಂಚ ಚಿಕ್ಕದು
ಜಗತ್ತು ವಿಶಾಲವಾಗಿದೆ ನಿಜ. ಆದರೆ ಗಗನ್ ಪ್ರಕಾರ ಪ್ರಪಂಚ ತುಂಬಾ ಚಿಕ್ಕದು. ‘ದುಬೈಗೆ ಹೋಗಿಬಿಟ್ಟರೆ ಜಗತ್ತಿನ ಯಾವುದೇ ದೇಶಕ್ಕೆ ಬೇಕಾದರೂ ಹೋಗುವ ವಿಮಾನ ಸಿಗುತ್ತದೆ. ಸುಮಾರು ಐದು ಗಂಟೆಗಳಲ್ಲಿ ಅಂದು ಕೊಂಡ ದೇಶದಲ್ಲಿ ಹೋಗಿ ಇಳಿಯ ಬಹುದು’ ಎನ್ನುತ್ತಾರೆ ಈ ರೋಮಿಂಗ್ ಸ್ಟಾರ್.
ಫೇಕ್ ಡಾಕ್ಟರ್!
‘ಡಾ. ಬ್ರೋ. ಕನ್ನಡ’ ಎಂಬ ಹೆಸರು ಏಕೆ ಎಂಬ ಕುತೂಹಲ ಹಲವರಿಗೆ ಇರುತ್ತದೆ. ‘ಡಾಕ್ಟರ್ ಮನುಷ್ಯನ ದೇಹದೊಳಗೆ ಎಕ್ಸ್ ಪ್ಲೋರ್ ಮಾಡುತ್ತಾರೆ. ಆದರೆ ನಾನು ಹೊರಗೆ ಎಕ್ಸ್ಪ್ಲೋರ್ ಮಾಡಬೇಕು, ನನ್ನ ಜನರಿಗೆ ಇಡೀ ಜಗತ್ತನ್ನೇ ಕನ್ನಡದಲ್ಲೇ ಮಾತಾಡಿ ತೋರಿಸಬೇಕು ಎಂಬ ಕಾರಣಕ್ಕೆ ಡಾ ಬ್ರೋ ಕನ್ನಡ ಎಂದು ಹೆಸರಿಟ್ಟೆ. ಇನ್ನು ಕೆಲವರು ಈ ಹೆಸರು ಕೇಳಿ, ನೀವು ಒರಿಜಿನಲ್ ಡಾಕ್ಟರಾ, ಪಿಎಚ್ಡಿ ಡಾಕ್ಟರಾ ಎಂದು ಕೇಳುತ್ತಾರೆ. ಆಗ ನಾನವರಿಗೆ ಫೇಕ್ ಡಾಕ್ಟರ್ ಅಂತ ಹೇಳುತ್ತೇನೆ’ ಎಂದು ನಗುತ್ತಾರೆ ಗಗನ್.
ಖರ್ಚಿಗೆ ಕಾಸು?
‘ನಮ್ಮ ಮನೆ ಕಡೆ ಅಂಥ ಅನುಕೂಲವೇನೂ ಇಲ್ಲ. ತಂದೆ ಅರ್ಚಕರು, ತಾಯಿ ಹಸು ಕಟ್ಟಿದ್ದಾರೆ. ನಾನೂ ಒಂದಷ್ಟು ದಿನ ಹಾಲು ಕರೆದಿದ್ದೆ. ನಂತರ ಸ್ವಿಗ್ಗಿ-ಜೊಮ್ಯಾಟೊ ಡೆಲಿವರಿ ಬಾಯ್, ಕಾರ್ ಡ್ರೖೆವಿಂಗ್, ಅರ್ಚಕ ವೃತ್ತಿ ಹೀಗೆ ಎಲ್ಲ ಕೆಲಸ ಮಾಡಿದ್ದೆ, ಮಾಡುತ್ತಿದ್ದೇನೆ. ಒಂದು ತಿಂಗಳು ಕೆಲಸ ಮಾಡಿ, ಸ್ವಲ್ಪ ಹಣ ಹೊಂದಿಸಿಟ್ಟುಕೊಂಡು ಮತ್ತೆ ಒಂದು ತಿಂಗಳು ಸುತ್ತುತ್ತೇನೆ. ಈಗೀಗ ಯೂಟ್ಯೂಬ್ ಮಾನಿಟೈಸೇಷನ್ನಿಂದಲೂ ಒಂದಷ್ಟು ಆದಾಯ ಬರುತ್ತಿದ್ದು ಅದನ್ನೂ ಈ ಸುತ್ತಾಟಕ್ಕೇ ಬಳಸುತ್ತಿದ್ದೇನೆ. ಮನೆಯವರಿಂದ ಯಾವತ್ತೂ ಖರ್ಚಿಗೆ ಕಾಸು ಕೇಳಿಲ್ಲ. ಇನ್ನು ಹೋದಲ್ಲಿ ನನ್ನ ಜತೆ ಟೆಂಟ್ ಇರುತ್ತದೆ. ಹೋಟೆಲ್ ರೂಮ್ ಭರಿಸಲು ಆಗದಿದ್ದರೆ, ಅಷ್ಟು ಹಣ ಇರದಿದ್ದರೆ, ಅಲ್ಲೇ ಯಾವುದಾದರೂ ಸೇಫ್ ಜಾಗ ನೋಡಿ ಟೆಂಟ್ ಹಾಕಿಕೊಂಡು ಮಲಗುತ್ತೇನೆ. ಈಗ ಉಜ್ಬೇಕಿಸ್ತಾನದಲ್ಲಿ ಓಲ್ಡ್ ರೇಡಿಯೋ ಹೌಸ್ ಎಂಬ ಹಾಸ್ಟೆಲ್ನಲ್ಲಿದ್ದೇನೆ. ಇಲ್ಲಿ 20 ರೂ. ಕೊಟ್ಟರೆ ಒಂದು ದೊಡ್ಡ ಬ್ರೆಡ್ ಸಿಗುತ್ತೆ, ಬೇಕಾದಷ್ಟು ಚೆರ್ರಿ ಹಣ್ಣು ಸಿಗುತ್ತೆ, ಇವೆರಡರಲ್ಲೇ ದಿನ ಕಳೆದುಬಿಡಬಹುದು’ ಎನ್ನುತ್ತಾರೆ ಡಾ.ಬ್ರೊ. ಅಂದಹಾಗೆ ಇವರ ಕೆಲಸ ಅಷ್ಟು ಸುಲಭದ್ದಲ್ಲ. ಒಂದಿಡೀ ದಿನ ವಿಡಿಯೋ ಮಾಡಿದರೆ ಎಡಿಟಿಂಗ್ ಮಾಡಲು ಇನ್ನೊಂದಿಡೀ ದಿನವೇ ಬೇಕು.
ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್ಡೇಟ್ಸ್?