More

    ಸದ್ಗುಣಗಳ ಅಭಿವ್ಯಕ್ತಿಯ ಸಮಯ; ಇಂದು ಕ್ರಿಸ್​ಮಸ್​

    ಸದ್ಗುಣಗಳ ಅಭಿವ್ಯಕ್ತಿಯ ಸಮಯ; ಇಂದು ಕ್ರಿಸ್​ಮಸ್​‘ನಿಮ್ಮ ಶತ್ರುಗಳನ್ನು ಪ್ರೀತಿಸಿ…’

    ಮಟಮಟ ಮಧ್ಯಾಹ್ನ. ಪಟ್ಟಣದ ಮಹಾದೇವಾಲಯದ ಮುಂದಿನ ಬಯಲಿನಲ್ಲಿ ತೇಜಸ್ವಿ ಯುವ ಬೋಧಕನೊಬ್ಬ ಸಕಲರ ಲೇಸನು ಬಯಸುತ್ತಾ ಪ್ರವಚನ ನೀಡುತ್ತಿದ್ದ. ಜನ ಆಸಕ್ತಿಯಿಂದ ಕೇಳುತ್ತಿದ್ದರು. ತಮ್ಮ ಸಮುದಾಯದ ಈ ಜನ ಮುಂದೆ ತಮ್ಮ ಮಾತುಗಳನ್ನು ಆಲಿಸದೇ ಹೋದಾರು ಎಂದುಕೊಂಡು, ಆ ಬೋಧಕನನ್ನು ಕಂಡರೆ ಧರ್ಮಪಂಡಿತರು ಉರಿದುಬೀಳುತ್ತಿದ್ದರು. ಈ ಧರ್ಮಪಂಡಿತರ ಪಟಾಲಂ ಹಿಂಬಾಲಕರ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಾ, ಒಬ್ಬ ಮಹಿಳೆಯನ್ನು ದರದರ ಎಳೆದು ತಂದು, ಬೋಧಕ ಮತ್ತು ನೆರೆದ ಜನರ ನಡುವೆ ನಿಲ್ಲಿಸಿದರು. ಗದ್ದಲದ ದೆಸೆಯಿಂದ ಮಾತು ನಿಲ್ಲಿಸಿದ ಬೋಧಕ, ಕೆಳಗೆ ಕುಳಿತು ನೆಲದ ಮೇಲೆ ಮರಳಲ್ಲಿ ಕೈಯಾಡಿಸುತ್ತಾ ಯೋಚನಾಮಗ್ನನಾದ.

    ಅಪಾರ ಜನಮನ್ನಣೆ ಗಳಿಸಿದ್ದ ಯುವ ಬೋಧಕನನ್ನು ಮಾತಿನ ಜಾಲದಲ್ಲಿ ಸಿಲುಕಿಸಿ, ಅವನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಧರ್ಮಪಂಡಿತರು, ಹಾದರದಲ್ಲಿ ತೊಡಗಿದ್ದ ಮಹಿಳೆಯನ್ನು ಹಿಡಿದು ತಂದಿದ್ದರು. ‘ಬೋಧಕನೇ, ಈ ಹಾದರದ ಹೆಂಗಸಿಗೆ ನೀನೇನು ಶಿಕ್ಷೆ ವಿಧಿಸುತ್ತಿ? ನಮ್ಮ ಧರ್ಮಶಾಸ್ತ್ರದ ಪ್ರಕಾರ ಇಂಥ ಅಪರಾಧಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕು. ಇದಕ್ಕೆ ನೀನೇನು ಹೇಳುತ್ತಿ?’ ಎಂದು ಪೀಡಿಸತೊಡಗಿದರು.

    ಸಹನೆಯಿಂದ ಅವರ ಮಾತುಗಳನ್ನು ಕೇಳಿದ ಯುವ ಬೋಧಕ ತಲೆಯೆತ್ತಿ, ‘ನಿಮ್ಮಲ್ಲಿ ಪಾಪ ಮಾಡದವನು ಯಾವನೋ, ಅವನು ಅವಳಿಗೆ ಮೊದಲ ಕಲ್ಲು ಹೊಡೆಯಲಿ’ ಎಂದ. ಧರ್ಮಪಂಡಿತರು ಒಡ್ಡಿದ್ದ ವಿವಾದಕ್ಕೆ ತನ್ನ ಶೈಲಿಯಲ್ಲಿಯೇ ನಿಲುವನ್ನು ಸ್ಪಷ್ಟಪಡಿಸಿದ ಬೋಧಕ, ಪುನಃ ತನ್ನ ಕಾಯಕದಲ್ಲಿ ತೊಡಗಿದ. ಆತ್ಮಸಾಕ್ಷಿಗೆ ದ್ರೋಹ ಬಗೆಯದ ಜನ, ತಾವೂ ಒಂದೊಮ್ಮೆ ತಪ್ಪು ಮಾಡಿದುದನ್ನು ಸ್ಮರಿಸಿಕೊಂಡರು. ಕೈಯೊಳಗಿನ ಕಲ್ಲುಗಳನ್ನು ಕೊಡವಿ, ‘ಬಂದ ದಾರಿಗೆ ಸುಂಕವಿಲ್ಲ’ ಎಂದುಕೊಂಡು ಒಬ್ಬೊಬ್ಬರೇ ಜಾಗ ಖಾಲಿ ಮಾಡಿದರು. ಬೋಧನೆ ಕೇಳಲು ಬಂದವರೂ ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರು ಇಬ್ಬರೆ. ಒಬ್ಬ ಆ ಯುವ ಬೋಧಕ, ಇನ್ನೊಬ್ಬಾಕೆ ಆ ಪತಿತೆ. ಗೌಜು ಗದ್ದಲ ನಿಂತು ಶಾಂತಿ ಮೂಡಿದಾಗ ತಲೆ ಎತ್ತಿದ ಬೋಧಕ, ‘ತಾಯಿ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?’ಎಂದು ವಿಚಾರಿಸಿದ. ಅದಕ್ಕವಳು ‘ಇಲ್ಲ’ ಎಂದಳು. ‘ನಾನೂ, ನಿನಗೆ ಶಿಕ್ಷೆ ವಿಧಿಸುವುದಿಲ್ಲ. ಹೋಗು, ಇನ್ನು ಮೇಲೆ ಪಾಪ ಮಾಡಬೇಡ’ ಎಂದು ಬೋಧಕ ಅವಳನ್ನು ಸಂತೈಸಿ ಕಳುಹಿಸಿದ.

    ಇದು, ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಘಟನೆ. ಇದು ನಡೆದದ್ದು, ಪ್ಯಾಲೆಸ್ತೀನ್ (ಇಂದಿನ ಇಸ್ರೇಲ್) ದೇಶದ ಜೆರುಸಲೇಮ್ ಪಟ್ಟಣದಲ್ಲಿದ್ದ ಮಹಾದೇವಾಲಯದ ಮುಂದಿನ ಬಯಲಲ್ಲಿ. ದಾರುಣವಾಗಿ ಸಾವನ್ನು ಕಾಣಬೇಕಾಗಿದ್ದ ಪತಿತಳ ಹೆಸರು ಮಗ್ದಲಿನ ಮೇರಿ ಮತ್ತು ಮಾನವತೆ ಮೆರೆದ, ಕರುಣೆಯ ಕೊಡ ತುಂಬಿದಂತಿದ್ದ ಆ ಯುವ ಬೋಧಕನ ಹೆಸರು ಯೇಸುಕ್ರಿಸ್ತ. ‘ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು. ದುಃಖಿ ಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಅವರು ಬಾಧ್ಯಸ್ಥರು. ನ್ಯಾಯ ನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು.’

    ಸಾಮಾನ್ಯ ಜನರ ಮನಸ್ಸುಗಳನ್ನು ಸೂಜಿಗಲ್ಲಿನಂತೆ ಸೆಳೆಯುವ, ನೊಂದವರಿಗೆ ಜೀವನದಲ್ಲಿ ಭರವಸೆ ರೂಢಿಸುವ ಈ ಉದಾತ್ತ ಚಿಂತನೆಯ ಮಾತುಗಳು, ಯೇಸುಕ್ರಿಸ್ತ ಬೋಧಿಸಿದ ‘ಅಷ್ಟಭಾಗ್ಯಗಳು’ ಎಂದೇ ಪ್ರಸಿದ್ಧವಾಗಿವೆ.

    ‘ಅಪಕಾರ ಮಾಡಿದವರಿಗೆ ಪ್ರತೀಕಾರ ಮಾಡಬಾರದು. ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರ ಒಳಿತಿಗಾಗಿ ಪ್ರಾರ್ಥಿಸಿರಿ. ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ಮುಂದೆ ಮಾಡಿ’ ಎಂತಲೂ ಯೇಸುಕ್ರಿಸ್ತ ಬೋಧಿಸಿದ್ದಾನೆ. ನಾವು ಭಾರತೀಯರು, ಕನಸು ಕಾಣುವ ಮಹಾತ್ಮಾಗಾಂಧಿ ಪ್ರಣೀತ ಸರ್ವಜನರ ಸುಖ ಬಯಸುವ ರಾಮರಾಜ್ಯದ ಕಲ್ಪನೆಗೆ ಸಂವಾದಿಯಾಗಿರುವ ಕಲ್ಪನೆ ಯೇಸುಕ್ರಿಸ್ತನ ಸ್ವರ್ಗ ಸಾಮ್ರಾಜ್ಯ – ದೇವರ ರಾಜ್ಯವಾಗಿತ್ತು.

    ಯಾರು ಈ ಯೇಸುಕ್ರಿಸ್ತ? ಶತಶತಮಾನಗಳಿಂದ ವಿದ್ವಜ್ಜನರಿಗೆ ಇದು ಯಕ್ಷಪ್ರಶ್ನೆಯಾಗಿ ಕಾಡುತ್ತಲೇ ಇದೆ. ಒಂದು ಸರ್ವಸಮ್ಮತ ಉತ್ತರ ಕಂಡುಕೊಳ್ಳಲಾಗುತ್ತಿಲ್ಲ. ಆದರೆ, ಆತ್ಮಜ್ಞಾನದ ಜ್ಯೋತಿಯಾಗಿರುವ ಯೇಸುಕ್ರಿಸ್ತನು, ಸಾಮಾನ್ಯ ಜನರ ಕೈಗೆ ಎಟುಕಿಬಿಟ್ಟಿದ್ದಾನೆ. ಆಸ್ತಿಕರು, ಅವನಲ್ಲಿ ದೇವರನ್ನು ಕಂಡಿದ್ದಾರೆ, ಅವನನ್ನು ದೇವರೆಂದು ಆರಾಧಿಸುತ್ತಿದ್ದಾರೆ. ಬಾಲಕೃಷ್ಣನ ಬಾಯಲ್ಲಿ ತಾಯಿ ಯಶೋದೆ ಬ್ರಹ್ಮಾಂಡವನ್ನು ಕಾಣುವುದು, ಹಣ್ಣು ತಿಂದ ದಶರಥನ ಹೆಂಡಂದಿರಿಗೆ ಮಕ್ಕಳಾಗುವುದು, ಕುಂತಿ ಕನ್ಯೆಯಾಗಿಯೇ ಸೂರ್ಯದೇವನಿಂದ ಮಗು ಪಡೆಯುವುದು- ಮುಂತಾದವು ಅತಿಮಾನುಷ ಸಂಗತಿಗಳು. ಇಂಥದೇ ಅತಿಮಾನುಷ ಘಟನೆಗಳು ಯೇಸುಕ್ರಿಸ್ತನ ಜೀವನದಲ್ಲೂ ಸಾಕಷ್ಟಿವೆ. ಅವು ಆಸ್ತಿಕರ ವಿಶ್ವಾಸಗಳು.

    ‘ಕಾಯಕವೇ ಕೈಲಾಸ, ದಯವೇ ಧರ್ಮ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂದು ಸಾರುತ್ತಿದ್ದ ಬಸವಣ್ಣ, ತನ್ನ ಕರ್ಮಭೂಮಿ ಕಲ್ಯಾಣವನ್ನು ತೊರೆದು ಕೂಡಲ ಸಂಗಮದಲ್ಲಿ ಐಕ್ಯವಾಗುವ ಅನಿವಾರ್ಯತೆಗೆ ತುತ್ತಾಗಿದ್ದ. ‘ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ಬಲಿಯಾಗಿ, ತನ್ನವರಿಂದಲೇ ಧರ್ಮದ್ರೋಹದ ಆರೋಪಹೊತ್ತು, ಅಂದಿನ ರೋಮನ್ ಆಡಳಿತಗಾರರಿಂದ ಶಿಲುಬೆ ಮರಣದ ಶಿಕ್ಷೆ ಅನುಭವಿಸಿದ ಯೇಸುಕ್ರಿಸ್ತ, ಮೂರನೇ ದಿನ ಸಮಾಧಿಯಿಂದ ಎದ್ದುಬಂದ’ ಎಂಬುದು ಕ್ರೖೆಸ್ತರ ವಿಶ್ವಾಸ. ಕಾಲಾಂತರದಲ್ಲಿ ಶಿಲುಬೆ ಮರಕ್ಕೆ ಪಾವಿತ್ರ್ಯವನ್ನು ಆರೋಪಿಸ ಲಾಯಿತು ಎನ್ನಲಾಗುತ್ತದೆ. ಸರಳ, ನೇರ ನಡೆನುಡಿಯ ಯೇಸು ಕ್ರಿಸ್ತನ ಬೋಧನೆಗಳನ್ನು ಸಾರುತ್ತಾ ಸಾಗಿದ ಶಿಷ್ಯರು, ಅವನ ಜೀವನ ವಿಧಾನವನ್ನು ಅನುಸರಿಸಿದರು. ಆ ಜೀವನಪಥವೇ ಮುಂದೆ ಕ್ರೖೆಸ್ತಮತದ ಸ್ವರೂಪ ಪಡೆಯಿತು. ರೋಮನ್ನರ ಆಧಿಪತ್ಯದಲ್ಲಿ ಆದಿಕ್ರೖೆಸ್ತರು ಕಿರುಕುಳ ಅನುಭವಿಸಿದರು. ನಂತರ, ನಮ್ಮ ನಾಡಿನ ಅಶೋಕ ಚಕ್ರವರ್ತಿ ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ, ಅದು ದೇಶವಿದೇಶಗಳಲ್ಲಿ ಹರಡಲು ಕಾರಣವಾದಂತೆ, ರೋಮನ್ ಚಕ್ರವರ್ತಿಗಳು ಕ್ರೖೆಸ್ತರಾದಾಗ, ಅವರ ಆಡಳಿತವಿದ್ದ ದೇಶಗಳಲ್ಲೂ ಕ್ರೖೆಸ್ತ ಧರ್ಮ ಪಸರಿಸಿತು. ಕ್ರಮೇಣ ಅದು ವಿವಿಧ ಆಚರಣೆಗಳ, ಕಟ್ಟುಪಾಡುಗಳ ಸಾಂಸ್ಥಿಕ ಧರ್ಮದ ಸ್ವರೂಪ ಪಡೆಯಿತು. ‘ಯೇಸುಕ್ರಿಸ್ತನ ಕೊನೆಯ ಭೋಜನ’ದ ಅನುಕರಣೆಯ ಆಚರಣೆ, ‘ಪ್ರಭು ಭೋಜನ’ ಎಂಬ ಧಾರ್ವಿುಕ ವಿಧಿಯಾಯಿತು.

    ಪುರಾತನ ಜನಾಂಗದ ಯಹೂದಿಗಳು, ಒಳ್ಳೆಯ ಜೀವನ ನಡೆಸಲು ದೇವರು ತಮ್ಮೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದಾಖಲಿಸುತ್ತ ಬಂದಿದ್ದರು. ಯೇಸುಕ್ರಿಸ್ತ ಹುಟ್ಟುವ ಸಂದರ್ಭದಲ್ಲಿ ಅವರು ದಾಸ್ಯದಲ್ಲಿ ಬಳಲಿದ್ದರು. ಅವರು ಬಿಡುಗಡೆಯ ಹರಿಕಾರನ, ರಕ್ಷಕನ ನಿರೀಕ್ಷೆಯಲ್ಲಿದ್ದರು. ಯೇಸುಕ್ರಿಸ್ತ ತನ್ನ ಬೋಧನೆಗಳಲ್ಲಿ, ಸಕಲ ಚರಾಚರಗಳ ಲೇಸನು ಬಯಸುವ ದೇವರಿಗೆ ತಂದೆಯ ಸ್ಥಾನಕೊಟ್ಟ. ಹಿಂದಿನ ಪ್ರವಾದಿಗಳ ಪ್ರವಾದನೆಗಳ ಸಾಕಾರ ರೂಪದಲ್ಲಿ ಯೇಸುಕ್ರಿಸ್ತ ಕಂಡಾಗ, ಆತ ‘ದೇವಸುತ’ನಾದ. ಹಳೆಯ ಒಡಂಬಡಿಕೆಯೊಂದಿಗೆ ಯೇಸುಕ್ರಿಸ್ತನ ಜೀವನ ಕಥನ ಮತ್ತು ನಂತರದ ಶಿಷ್ಯರ ಚಿಂತನ ಮಂಥನಗಳು, ವ್ಯಾಖ್ಯಾನಗಳು ಹೊಸ ಒಡಂಬಡಿಕೆ ಸೇರಿಕೊಂಡ ಬೈಬಲ್ ಗ್ರಂಥ, ಕ್ರೖೆಸ್ತರ ಪವಿತ್ರ ಗ್ರಂಥವಾಯಿತು. ಈ ನಮ್ಮ ನೆಲದ ವೇದಗಳ ಸೊಗಡಿನಲ್ಲಿ, ಕೆಲವರು ಅದನ್ನು ‘ಸತ್ಯವೇದ’ ಎಂದೂ ಕರೆಯುತ್ತಾರೆ.

    ಬುದ್ಧ ಪೂರ್ಣಿಮೆ ಬುದ್ಧನ ಹುಟ್ಟುಹಬ್ಬದ ದಿನವಾದರೆ, ಡಿಸೆಂಬರ್ 25 ಯೇಸುಕ್ರಿಸ್ತನ ಹುಟ್ಟು ಹಬ್ಬದ ದಿನ. ಹಸುಗೂಸು ಯೇಸುಕ್ರಿಸ್ತನ ಪೂಜೆ, ಇಂಗ್ಲಿಷ್ ಭಾಷೆಯಲ್ಲಿ ಕ್ರೖೆಸ್ಟ್ ಮಾಸ್- ನಂತರ ಕ್ರಿಸ್​ವುಸ್ ಎಂದಾಗಿದೆ. ಶತ ಶತಮಾನಗಳ ಹಿಂದೆ, ಈ ದಿನ ಮಕರ ಸಂಕ್ರಮಣದ ದಿನವಾಗಿತ್ತು ಎನ್ನಲಾಗುತ್ತದೆ. ಮತ್ತೆ ಸೂರ್ಯ ಹೆಚ್ಚುಹೊತ್ತು ಬೆಳಗುವ ಹಂಗಾಮಿನ ಆರಂಭದ ದಿನವೂ ಆಗಿತ್ತು. ಅದು, ‘ಅಜೇಯ ಸೂರ್ಯ’ ಎಂದು ಸೂರ್ಯನನ್ನು ಆರಾಧಿಸುವ ದಿನವಾಗಿತ್ತು. ರೋಮನ್​ರ ಈ ‘ಬೆಳಕಿನ ಹಬ್ಬ’ವನ್ನು ಕ್ರೖೆಸ್ತರು ತಮ್ಮ ತೆಕ್ಕೆಗೆ ತೆಗೆದುಕೊಂಡಾಗ, ಯೇಸುಕ್ರಿಸ್ತ ನೀತಿ ಸೂರ್ಯನಾದ, ಲೋಕದ ಬೆಳಕಾದ.

    ಹಬ್ಬವೆಂದಾಗ ಅದರ ಸುತ್ತಲೂ ಹತ್ತಾರು ಸಂಪ್ರದಾಯಗಳು ಹುಟ್ಟಿಕೊಳ್ಳುತ್ತವೆ. ಹಬ್ಬದ ಊಟ, ಮಕರ ಸಂಕ್ರಾಂತಿಯ ದಿನ ಪರಸ್ಪರ ಎಳ್ಳುಬೆಲ್ಲ ಬೀರುವಂತೆ, ಪಂಚಮಿ ಮತ್ತು ದೀಪಾವಳಿ ಹಬ್ಬಗಳಲ್ಲಿನಂತೆ, ನೆರೆಹೊರೆಯವರಲ್ಲಿ ಫರಾಳದ (ಖುಸ್ವಾರ) ಹಂಚಿಕೆ ನಡೆಯುತ್ತದೆ. ಮನೆಗಳ ಸಿಂಗಾರದೊಂದಿಗೆ, ಬಾಲ ಯೇಸುವನ್ನು ಕಾಣಲು ಬಂದ ಮೂವರು ರಾಯರಿಗೆ ದಾರಿ ತೋರಿದ ನಕ್ಷತ್ರದ ನೆನಪಿನಲ್ಲಿ ನಕ್ಷತ್ರಗಳನ್ನು, ಆಕಾಶ (ಶಿವನ) ಬುಟ್ಟಿಗಳನ್ನು ಕಟ್ಟುವುದು, ದಸರಾ ಹಬ್ಬದಲ್ಲಿ ಗೊಂಬೆಗಳ ಕೂಡಿಸುವ ಮಾದರಿಯಲ್ಲಿ, ಯೇಸುಕ್ರಿಸ್ತನ ದೀನ ಹುಟ್ಟಿನ ಪ್ರತೀಕವಾಗಿ ದನದ ಕೊಟ್ಟಿಗೆಯ ಪ್ರತಿಕೃತಿಯ ಗೋದಲಿಯಲ್ಲಿ ಬಾಲಯೇಸು ಮತ್ತಿತರರ ಗೊಂಬೆಗಳನ್ನು ಕೂರಿಸುವುದು, ಹಿಮಾಚ್ಛಾದಿತ ಸೂಚಿಪರ್ಣಿ ಗಿಡಗಳನ್ನು ಕ್ರಿಸ್​ವುಸ್ ಮರಗಳೆಂದು ಅಲಂಕರಿಸುವುದು, ಮಕ್ಕಳಿಗೆ ಉಡುಗೊರೆ ಕೊಡುವ ಅಚ್ಚುಮೆಚ್ಚಿನ ಕ್ರಿಸ್​ವುಸ್ ತಾತಾ ಸಾಂತಾಕ್ಲಾಸ್ ಪ್ರತ್ಯಕ್ಷನಾಗುವುದು- ಮೊದಲಾದ ಆಚರಣೆಗಳು ಕ್ರಿಸ್​ವುಸ್ ಹಬ್ಬದೊಂದಿಗೆ ಬೆರೆತುಕೊಂಡಿವೆ. ಇಂದು ಕ್ರಿಸ್​ವುಸ್ ಹಬ್ಬ ಕೇವಲ ಕ್ರೖೆಸ್ತರ ಧಾರ್ವಿುಕ ಆಚರಣೆಗೆ ಸೀಮಿತಗೊಂಡಿಲ್ಲ. ಜಾತಿ, ಮತ, ಪಂಥ, ದೇಶ, ಭಾಷೆಗಳ ಗಡಿ ದಾಟಿದೆ. ಜಾತ್ಯತೀತ ಹಬ್ಬದ ಲಕ್ಷಣಗಳನ್ನು ರೂಢಿಸಿಕೊಂಡಿದೆ. ಕ್ರಿಸ್​ವುಸ್ ಹಬ್ಬದ ಸಮಯ, ಭರ್ಜರಿ ವ್ಯಾಪಾರ ವಹಿವಾಟಿನ ಹಂಗಾಮಿನ ರೂಪತಾಳಿದೆ. ಯುರೋಪಿಯನ್ನರ ಸಂಪರ್ಕದ ಫಲವಾಗಿ ಕ್ರೖೆಸ್ತರ ಉಪಸ್ಥಿತಿ ಇರಲಿ ಬಿಡಲಿ, ಅವರವರ ಆಸಕ್ತಿಗೆ ತಕ್ಕಂತೆ ಜಗತ್ತಿನ ಬಹತೇಕ ದೇಶಗಳಲ್ಲಿ ಕ್ರಿಸ್​ವುಸ್ ಸಡಗರ ಇದ್ದೇ ಇರುತ್ತದೆ.

    ಕ್ರಿಸ್​ವುಸ್ ಸಮಯ ಯೇಸುಕ್ರಿಸ್ತ ಬೋಧಿಸಿದ ಔದಾರ್ಯ, ದಯೆ, ಕರುಣೆ, ಅನುಕಂಪ, ಸಹನೆ, ಕ್ಷಮಾಗುಣ, ಸೋದರ ಪ್ರೀತಿ ಮುಂತಾದ ಸದ್ಗುಣಗಳು ಅಭಿವ್ಯಕ್ತಗೊಳ್ಳಬೇಕಾದ ಸಮಯ. ಜೊತೆಗೆ ಕ್ರಿಸ್​ವುಸ್ ಸ್ನೇಹ, ಶಾಂತಿ, ಪ್ರೀತಿ, ಪ್ರೇಮ, ಸೌಹಾರ್ದತೆಗಳ ಸಂಕೇತವೂ ಆಗಿದೆ. ಈ ಸಾಲಿನ ಕ್ರಿಸ್​ವುಸ್ ಹಬ್ಬ ಬಂದಿದೆ. ಜಗತ್ತಿನಾದ್ಯಂತ ಕರೊನಾ ವೈರಸ್​ನ ಸಾಂಕ್ರಾಮಿಕ ಕಾಯಿಲೆ ಬಂದು ಒಂದು ವರ್ಷ ಗತಿಸಿದೆ. ಸದ್ಯಕ್ಕೆ ಅದರ ಅಟ್ಟಹಾಸವನ್ನು ಸ್ವಲ್ಪಮಟ್ಟಿಗೆ ಮೆಟ್ಟಲಾಗಿದೆ. ಸಮಾಜಜೀವಿ ಮಾನವ ಇನ್ನಷ್ಟು ದಿನ ಬದುಕಿರಲು, ಇದ್ದಲ್ಲೇ ಇದ್ದು ಆದಷ್ಟು ಪರಸ್ಪರ ದೈಹಿಕ ಉಪಸ್ಥಿತಿಯ ಮುಖಾಮುಖಿ ಭೇಟಿ ನಡೆಸದೇ, ಒಂಟಿಯಾಗಿ ಇರುವುದೇ ಶ್ರೇಯಸ್ಸಾಗಿ ರುವ ಸಂದರ್ಭ, ಸಂಭ್ರಮದ ಸಾಮೂಹಿಕ ಹಬ್ಬದ ವಿಜೃಂಭಣೆಯ ಆಚರಣೆಗೆ ಸಂಚಕಾರ ತಂದಿದೆ. ಮನಸ್ಸಿದ್ದರೆ ಮಾರ್ಗ. ಡಿಜಿಟಲ್ ಯುಗದಲ್ಲಿರುವ ನಮಗೆ, ಹಬ್ಬದ ಆಶಯದ ಸಾಕಾರಕ್ಕೆ ನೂರೆಂಟು ದಾರಿಗಳು ಕಣ್ಣಮುಂದೆಯೇ ಇರುತ್ತವೆ.

    (ಲೇಖಕರು ಹಿರಿಯ ಪತ್ರಕರ್ತರು)

    ಸಂಬಂಧಗಳನ್ನು ಬೆಸೆಯಲಿ

    | ಬಿಷಪ್​ ರವಿಕುಮಾರ ನಿರಂಜನ ಹುಬ್ಬಳ್ಳಿ 

    ಸದ್ಗುಣಗಳ ಅಭಿವ್ಯಕ್ತಿಯ ಸಮಯ; ಇಂದು ಕ್ರಿಸ್​ಮಸ್​

    ಕ್ರಿಸ್​ವುಸ್ ಕೇವಲ ಕ್ರೖೆಸ್ತರಿಗೆ ಸೀಮಿತವಾದ ಹಬ್ಬವಲ್ಲ. ನಾವು ಜಾತಿಭೇದ ಎಂದೆಣಿಸದೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಈ ಹಬ್ಬ ನಾಡಿಗೆ ಸಂತಸ ತರುವ ಹಬ್ಬವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಬಾಂಧವ್ಯ, ಸಂಬಂಧಗಳು ಅಗತ್ಯ. ಭಿನ್ನಾಭಿಪ್ರಾಯ ಮರೆತು, ಮತಪಂಥಗಳೆಂಬ ಗೋಡೆಯನ್ನು ತೆಗೆದುಹಾಕಿ ಉತ್ತಮ ಸಂಬಂಧ ಹೊಂದಬೇಕು.

    2020ನೇ ಇಸ್ವಿ ಆತಂಕ, ದುಗುಡದಿಂದ ತುಂಬಿದ ವರ್ಷವಾಗಿದ್ದು, ಕರೊನಾ ಎಂಬ ಮಹಾಮಾರಿಯಿಂದ ಪ್ರಪಂಚ ಕಂಗೆಟ್ಟು ಹೋಗಿದೆ. ಆದರೂ ಯೇಸುವಿನ ಆಶೀರ್ವಾದದಿಂದ ನಾವು ಆರೋಗ್ಯವಾಗಿದ್ದೇವೆ. ಆದರೆ ಎಷ್ಟೋ ಜನರು ಕರೊನಾದಿಂದ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರು ಬಿಟ್ಟು ಹೋದ ಕುಟುಂಬ ವರ್ಗಕ್ಕೆ ಕ್ರಿಸ್ತನ ಕರುಣೆ, ಸಾಂತ್ವನ ದೊರಕಲಿ. ಈಗ ನಾವು ಸಹೋದರತ್ವ, ಪ್ರೀತಿ, ಅನ್ಯೋನ್ಯದಿಂದ ಸಾಗಬೇಕು. ಅಂದಾಗ ಕ್ರಿಸ್​ವುಸ್ ಹಬ್ಬಕ್ಕೆ ನಿಜವಾದ ಮಹತ್ವ ಬರಲಿದೆ. ಯೇಸುವು ಎಲ್ಲರಿಗೂ ಆರೋಗ್ಯ, ಸಮೃದ್ಧಿ, ಸಮಾಧಾನ ಹಾಗೂ ನೆಮ್ಮದಿ ನೀಡಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts