More

  ಕೇಜ್ರಿವಾಲ್ ಬಂಧನ; ಅಬಕಾರಿ ನೀತಿ ಹಗರಣದಲ್ಲಿ ಇ.ಡಿ.ಯಿಂದ ಲಾಕ್

  ನವದೆಹಲಿ: ಲೋಕಸಭೆ ಚುನಾವಣೆ ಹೊತ್ತಲ್ಲೇ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜೈಲು ಸೇರಿದ್ದಾರೆ. ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ 9 ಬಾರಿ ಜಾರಿ ನಿರ್ದೇಶನಾಲಯದ (ಇ.ಡಿ.) ಸಮನ್ಸ್ ಉಲ್ಲಂಘಿಸಿದ್ದ ಕೇಜ್ರಿವಾಲ್, ಬಲವಂತದ ಕ್ರಮ ಕೈಗೊಳ್ಳದಂತೆ ಇ.ಡಿ.ಯಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ಸಿಎಂ ನಿವಾಸಕ್ಕೆ ತೆರಳಿ ವಿಚಾರಣೆಗೊಳಪಡಿಸಿದ ಬಳಿಕ ಕೇಜ್ರಿವಾಲ್​ರನ್ನು ಬಂಧಿಸಿದರು.

  ಕೇಂದ್ರ ಸರ್ಕಾರ ಇ.ಡಿ. ಮೂಲಕ ಕೇಜ್ರಿವಾಲ್​ರನ್ನು ಬಂಧಿಸುವ ಷಡ್ಯಂತ್ರ ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪ ಮಾಡುತ್ತಲೇ ಇತ್ತು. ಆದರೆ, ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಕ್ರಿಮಿನಲ್ ಪಿತೂರಿ ಬಗ್ಗೆ ಸ್ಪಷ್ಟ ದಾಖಲೆ ಇದೆ ಎಂದು ಪ್ರತಿಪಾದಿಸುತ್ತಿರುವ ಇ.ಡಿ., ಅವರನ್ನು ವಿಚಾರಣೆಗೊಳಪಡಿಸಲು ಹಲವು ಬಾರಿ ಯತ್ನಿಸಿತ್ತು. ಗುರುವಾರ ದಿಲ್ಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾ. ಮನೋಜ್ ಜೈನ್ ಅವರು ಕೇಜ್ರಿವಾಲ್ ವಾದ ತಳ್ಳಿ ಹಾಕಿ, ‘ರಕ್ಷಣೆ ನೀಡಲು ಸಾಧ್ಯವಿಲ್ಲ. ನಿಮ್ಮ ವಾದಗಳೇನೇ ಇದ್ದರೂ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ’ ಎಂದು ಸೂಚಿಸಿತ್ತು. ಈ ಬೆಳವಣಿಗೆ ಇ.ಡಿ.ಗೆ ಕೇಜ್ರಿವಾಲ್ ವಿಚಾರಣೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದರಿಂದ, ರಾತ್ರಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ ಇ.ಡಿ.ಯ 12 ಅಧಿಕಾರಿಗಳ ತಂಡ, ಬಂಧನ ಕುರಿತ ಮೆಮೋ ನೀಡಿ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಇ.ಡಿ. ಬಂಧನದಲ್ಲಿದ್ದ ಹಲವರಿಗೆ ಸುಪ್ರೀಂಕೋರ್ಟ್​ನಿಂದ ರಿಲೀಫ್ ಸಿಕ್ಕಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಶುಕ್ರವಾರದ ಸುಪ್ರೀಂ ವಿಚಾರಣೆಯನ್ನು ಎದುರು ನೋಡುತ್ತಿದ್ದಾರೆ.

  ತಿಹಾರ್ ಜೈಲು ಸೇರ್ತಾರಾ?: ದೆಹಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಮತ್ತು ಆಪ್​ನ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಇ.ಡಿ. ವಿಚಾರಣೆಗೊಳಪಟ್ಟು, ನಂತರ ತಿಹಾರ್ ಜೈಲು ಸೇರಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತೆಲಂಗಾಣದ ಬಿಆರ್​ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರನ್ನು ಇ.ಡಿ. ಅಧಿಕಾರಿಗಳು ತೆಲಂಗಾಣದಲ್ಲಿ ಬಂಧಿಸಿ, ದೆಹಲಿಗೆ ಕರೆ ತಂದಿದ್ದರು. ಈಗ ಕೇಜ್ರಿವಾಲ್​ರನ್ನು ಬಂಧಿಸಿದ್ದು, ಬಹುಶಃ ಇಬ್ಬರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

  ಆಪ್ ಪಡೆಯ ಹೈಡ್ರಾಮಾ: ಇ.ಡಿ. ಅಧಿಕಾರಿಗಳು ಗುರುವಾರ ರಾತ್ರಿ ವಿಚಾರಣೆಗೆ ಬಂದ ಹಿನ್ನೆಲೆಯಲ್ಲಿ ಎಎಪಿಯ ಹಲವು ಮುಖಂಡರು ಕೇಜ್ರಿವಾಲ್ ನಿವಾಸದ ಬಳಿ ಧಾವಿಸಿ ಬೆಂಬಲ ಘೊಷಿಸಿದ್ದಲ್ಲದೆ, ಕೇಂದ್ರದ ವಿರುದ್ಧ ಘೊಷಣೆ ಕೂಗಿದರು. ಕೇಜ್ರಿವಾಲ್​ರನ್ನು ಇ.ಡಿ. ಕೇಂದ್ರ ಕಚೇರಿಗೆ ಕರೆದೊಯ್ಯುವ ವೇಳೆ ಹೈಡ್ರಾಮಾ ಉಂಟಾಗುವ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ದಿಲ್ಲಿ ಪೊಲೀಸರು, ರ್ಯಾಪಿಡ್ ಆಕ್ಷನ್ ಫೋರ್ಸ್ ಸಿಬ್ಬಂದಿ ಜಮಾಯಿಸಿ, ಬೆಂಬಲಿಗರನ್ನು ಕೇಜ್ರಿವಾಲ್ ನಿವಾಸದ ಬಳಿ ಧಾವಿಸದಂತೆ ನೋಡಿಕೊಂಡರು.

  ನೀತಿ ರದ್ದಾಗಿದ್ದೇಕೆ?: ದಿಲ್ಲಿಯಲ್ಲಿ ಆಪ್ ಸರ್ಕಾರ 2021ರಲ್ಲಿ ತನ್ನ ಅಬಕಾರಿ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತು. ಸರ್ಕಾರಿ ಸ್ವಾಮ್ಯದ ಮದ್ಯದ ಅಂಗಡಿಗಳನ್ನು ಖಾಸಗಿ ಸಂಸ್ಥೆಗಳಿಗೆ ನಡೆಸುವ ಪರವಾನಗಿಗಳನ್ನು ನೀಡುವುದು, ಮದ್ಯ ತೆಗೆದುಕೊಳ್ಳುವ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸುವುದು, ದೆಹಲಿಯ ಹೊರ ಪ್ರದೇಶಗಳಲ್ಲಿ ಮದ್ಯದ ಬ್ರಾ್ಯಂಡ್​ಗಳಿಗೆ ಪ್ರತ್ಯೇಕ ನೋಂದಣಿ ಮಾನದಂಡ ಸೇರಿ ವಾರ್ಷಿಕ ಮದ್ಯ ಮಾರಾಟ ಪರವಾನಗಿ ಶುಲ್ಕವನ್ನು ರೂ. 8 ಲಕ್ಷದಿಂದ ರೂ, 75 ಲಕ್ಷ ರೂ.ಗೆ ಹೆಚ್ಚಿಸುವ ಪ್ರಸ್ತಾಪವನ್ನೂ ಮಾಡಿತ್ತು.

  ಮದ್ಯದ ಚಿಲ್ಲರೆ ವ್ಯಾಪಾರ ಹಿಂಪಡೆದುಕೊಂಡು, ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ 849 ಖಾಸಗಿ ಮಾರಾಟಗಾರರಿಗೆ ಪರವಾನಗಿಗಳನ್ನು ನೀಡಿತು. ಆದರೆ, ಪರವಾನಗಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿದ ಆರೋಪಗಳು ಹೆಚ್ಚಾದವು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯ ತನಿಖೆ ಪ್ರಾರಂಭಿಸಿದರು. ಮುಖ್ಯ ಕಾರ್ಯದರ್ಶಿ ವರದಿಯನ್ನು ಆಧರಿಸಿ, ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಸೂಚಿಸಿದರು. ಈ ಹೈಡ್ರಾಮಾಗಳ ನಡುವೆ ಸರ್ಕಾರ ಅಬಕಾರಿ ನೀತಿಯನ್ನು ರದ್ದುಗೊಳಿಸಿತು.

  2022ರ ಆಗಸ್ಟ್​ನಲ್ಲಿ ಅಬಕಾರಿ ನೀತಿಯ ವಿವಿಧ ಅಕ್ರಮಗಳಿಗೆ ಸಂಬಂಧಿಸಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ 15 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತು. 2023ರ ಫೆಬ್ರವರಿಯಲ್ಲಿ ಸಿಸೋಡಿಯಾ ಬಂಧನಕ್ಕೊಳಗಾದರು. ನಂತರ, ಅದೇ ಮಾರ್ಚನಲ್ಲಿ ಇ.ಡಿ. ಕೂಡ ಬಂಧಿಸಿತು. ಸಿಸೋಡಿಯಾಗೆ ಸುಪ್ರೀಂಕೋರ್ಟ್​ನಿಂದಲೂ ರಿಲೀಫ್ ಸಿಕ್ಕಿಲ್ಲ.

  ಹೊಸ ಸಿಎಂ ಯಾರು?: ಕೇಜ್ರಿವಾಲ್ ಬಂಧನ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಯಾರಾಗುತ್ತಾರೆಂಬ ಕುತೂಹಲ ಗರಿಗೆದರಿದೆ. ಮೂಲಗಳ ಪ್ರಕಾರ ಸಚಿವೆ ಅತಿಶಿಗೆ ಸಿಎಂ ಪಟ್ಟ ನಿಶ್ಚಿತ ಎಂದು ಹೇಳಲಾಗುತ್ತಿದೆ. ರಾಘವ್ ಛಡ್ಡಾ ಹೆಸರು ರೇಸ್​ನಲ್ಲಿದ್ದರೂ ಕಣ್ಣಿನ ಚಿಕಿತ್ಸೆಗಾಗಿ ಅವರು ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ ಅತಿಶಿ ಹೆಸರು ಹೆಚ್ಚು ಚರ್ಚೆಯಲ್ಲಿದೆ.

  ಮುಂದಿನ ಪ್ರಕ್ರಿಯೆ?

  • 24 ಗಂಟೆಗಳ ಒಳಗೆ ಕೋರ್ಟ್ ಮುಂದೆ ಹಾಜರುಪಡಿಸಬೇಕು
  • ಹೆಚ್ಚು ದಿನ ವಶಕ್ಕೆ ಪಡೆಯಲು ಅನುಮತಿ ಪಡೆಯಬೇಕು
  • ಅನುಮತಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು
  • ಕೋರ್ಟ್ ಒಪ್ಪಿದರೆ ಮಾತ್ರ ವಶದಲ್ಲಿ ಇಟ್ಟುಕೊಳ್ಳಬಹುದು

  ದೆಹಲಿಯಲ್ಲಿ ಕ್ಷಣಕ್ಷಣ

  • ದೆಹಲಿ ಹೈಕೋರ್ಟಲ್ಲಿ ಕೇಜ್ರಿವಾಲ್ ಅರ್ಜಿ ವಿಚಾರಣೆ
  • ಬಲವಂತದ ಕ್ರಮ ಕೈಗೊಳ್ಳದಂತೆ ರಕ್ಷಣೆಗೆ ಮನವಿ
  • ಕೇಜ್ರಿವಾಲ್ ಕೋರಿಕೆ ತಿರಸ್ಕರಿಸಿದ ದೆಹಲಿ ಹೈಕೋರ್ಟ್
  • ಏ.22ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
  • ಕೋರ್ಟ್ ಆದೇಶದ ಬಳಿಕ ಕೇಜ್ರಿ ನಿವಾಸಕ್ಕೆ ಇ.ಡಿ
  • 9 ಬಾರಿ ಸಮನ್ಸ್ ಉಲ್ಲಂಘಿಸಿದ್ದ ಕೇಜ್ರಿ ವಿಚಾರಣೆ
  • ಸತತ ಎರಡು ಗಂಟೆ ಕೇಜ್ರಿವಾಲ್ ತೀವ್ರ ವಿಚಾರಣೆ
  • ವಿಚಾರಣೆ ವೇಳೆ ಸುಪ್ರೀಂ ಮೊರೆ ಹೋದ ಕೇಜ್ರಿ
  • ಕೇಜ್ರಿ ವಕೀಲರಿಂದ ತುರ್ತು ವಿಚಾರಣೆಗೆ ಮನವಿ
  • ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ
  • ನಾಳೆ ವಿಚಾರಣೆ ಕೈಗೆತ್ತಿಕೊಳ್ಳಲು ತೀರ್ಮಾನ
  • ವಿಚಾರಣೆ ಬಳಿಕ ಕೇಜ್ರಿವಾಲ್ ಬಂಧಿಸಿದ ಇ.ಡಿ.

  ಇ.ಡಿ. ಚಾರ್ಜ್​ಶಿಟ್

  • ಅಬಕಾರಿ ನೀತಿ ರಚನೆ, ಅನುಷ್ಠಾನದಲ್ಲಿ ಅಕ್ರಮ ಲಾಭ ಪಡೆವ ಪಿತೂರಿ
  • ಪಿತೂರಿಯಲ್ಲಿ ಕೇಜ್ರಿವಾಲ್, ಸಿಸೋಡಿಯಾ ಭಾಗಿ
  • ಬಿಆರ್​ಎಸ್ ನಾಯಕಿ ಕೆ. ಕವಿತಾ ಭಾಗಿಯಾಗಿರುವ ಆರೋಪ
  • ಎಎಪಿ ನಾಯಕರಿಗೆ -ಠಿ;100 ಕೋಟಿ ಲಂಚ ನೀಡಿದ್ದರಲ್ಲಿ ಕವಿತಾ ಭಾಗಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts