More

    8 ಜನ ಮನೆಗಳ್ಳರ ಬಂಧನ

    ಗೋಕರ್ಣ: ಗೋಕರ್ಣ, ಅಂಕೋಲಾ ಮತ್ತು ಕಾರವಾರದ ವಿವಿಧೆಡೆ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 7 ಕಳ್ಳರನ್ನು ಮತ್ತು ಅವರಿಂದ ಕಳುವಿನ ಮಾಲು ಸ್ವೀಕರಿಸುತ್ತಿದ್ದ ಒಬ್ಬನನ್ನು ಕುಮಟಾ ಸಿಪಿಐ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯ ಪಿಎಸ್​ಐ ನವೀನ ನಾಯ್ಕ ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ಬಂಗಾರ ಸೇರಿ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
    ಸೋಮವಾರ ಸ್ಥಳೀಯ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಈ ಬಗ್ಗೆ ಮಾಹಿತಿ ನೀಡಿದರು. ಗೋಕರ್ಣ ಠಾಣೆಯ 5, ಅಂಕೋಲಾದ 11 ಮತ್ತು ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ 2 ಸೇರಿ ಒಟ್ಟು 18 ಪ್ರಕರಣಗಳನ್ನು ಭೇದಿಸಿ 8 ಜನರನ್ನು ಬಂಧಿಸಲಾಗಿದೆ ಎಂದರು. ಒಂದು ವರ್ಷ ಅವಧಿಯಲ್ಲಿ ಈ ಕೃತ್ಯ ನಡೆಸಲಾಗಿದೆ. ದುಷ್ಕೃತ್ಯ ನಡೆಸಿದವರಲ್ಲಿ ಐಐಟಿ ಪದವೀಧರರು ಮತ್ತು 30 ವರ್ಷಕ್ಕಿಂತ ಕೆಳಗಿನವರಿದ್ದಾರೆ. ಕೋವಿಡ್ ಕಾರಣದಿಂದ ತನಿಖೆಯಲ್ಲಿ ವಿಳಂಬವಾಗಿದೆ. ಆರೋಪಿತರಿಂದ 351 ಗ್ರಾಂ ಚಿನ್ನ ಮತ್ತು 1 ಕೆಜಿ ಬೆಳ್ಳಿ ಆಭರಣ, 5 ಮನೆ ಬಳಕೆಯ ಗ್ಯಾಸ್ ಸಿಲೆಂಡರ್, 1 ಏರ್​ಗನ್, 3 ಬೈಕ್​ಗಳು ಮತ್ತು 8 ಮೊಬೈಲ್​ಗಳು ಸೇರಿ 19 ಲಕ್ಷ ರೂ. ಗೂ ಹೆಚ್ಚಿನ ಬೆಲೆಯ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದರು.
    ಗೋಕರ್ಣ ಠಾಣೆಯಿಂದ ಈವರೆಗೆ ಪತ್ತೆ ಮಾಡಲಾದ ಅತ್ಯಂತ ದೊಡ್ಡ ಪ್ರಕರಣ ಇದಾಗಿದೆ. ಜಿಲ್ಲಾ ಹೆಚ್ಚುವರಿ ಎಸ್​ಪಿ ಬದ್ರಿನಾಥ, ಭಟ್ಕಳ ಡಿಎಸ್​ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಗೋಕರ್ಣ ಪಿಎಸ್​ಐ ನವೀನ ನಾಯ್ಕ, ಅಂಕೋಲಾ ಪಿಎಸ್​ಐ ಪ್ರವೀಣಕುಮಾರ, ಎಎಸ್​ಐ ಅರವಿಂದ ಶೆಟ್ಟಿ, ಎಎಸ್​ಐ ನಾರಾಯಣ ಗುನಗಿ, ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಎಲ್ಲರೂ ಮೆಚ್ಚುಗೆಗೆ ಅರ್ಹರಾಗಿದ್ದಾರೆ. ಇವರು ಮಾಡಿದ ಸಾಧನೆಗೆ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ವರಿಷ್ಠರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಬಬ್ರುವಾಡದ ಪ್ರಶಾಂತ ಕಿಶೋರ ನಾಯ್ಕ, ಅಂಕೋಲಾ ತೆಂಕಣಕೇರಿಯ ಹರ್ಷ ನಾಗೇಂದ್ರ ನಾಯ್ಕ, ಶಿರಸಿ ಕಸ್ತೂರಬಾ ನಗರದ ಶ್ರೀಕಾಂತ ಗಣಪತಿ ದೇವಾಡಿಗ ಮತ್ತು ನಿಹಾಲ ಗೋಪಾಲಕೃಷ್ಣ ದೇವಳಿ, ಶಿರಸಿ ಲಂಡಕನಳ್ಳಿಯ ಸಂದೀಪ ಹನುಮಂತ ಮರಾಠೆ, ಅಂಕೋಲಾ ಶಿರಕುಳಿಯ ಗಣೇಶ ಮಾರುತಿ ನಾಯ್ಕ, ಅಂಕೋಲಾ ಕೇಣಿಯ ರಾಹುಲ ಕೃಷ್ಣಾನಂದ ಬಂಟ ಹಾಗೂ ಅವರಿಂದ ಕಳವಿನ ವಸ್ತು ಸ್ವೀಕರಿಸುತ್ತಿದ್ದ ಶಿರಸಿ ಬನವಾಸಿ ರಸ್ತೆಯ ಅಶೋಕ ಗಣಪತಿ ರಾಯ್ಕರ ಅವರನ್ನು ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts