ರಟ್ಟಿಹಳ್ಳಿ: ಶಿಕಾರಿಪುರ ತಾಲೂಕಿನ ಉಡುಗಣಿ-ತಾಳಗುಂದ-ಹೊಸೂರು ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಗೆ ವಿರೋಧಿಸಿ ಹಿರಿಯ ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭಾನುವಾರ ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಭಾನುವಾರ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ನೀರಾವರಿ ಯೋಜನೆಗೆ ಪೈಪಲೈನ್ ಕಾಮಗಾರಿ 10 ಮೀಟರ್ ವಿಸ್ತೀರ್ಣವನ್ನು 4 ಮೀಟರ್ಗೆ ಕಡಿತಗೊಳಿಸಲಾಗುವುದು. ಭೂಸ್ವಾಧೀನ ಮಾಡಿಕೊಂಡ ರೈತರಿಗೆ ಶೀಘ್ರವಾಗಿ ಪರಿಹಾರ ನೀಡಲಾಗುವುದು. ಈ ಬಗ್ಗೆ ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ರೈತರು ಸಹಕಾರ ನೀಡಬೇಕು. ಈ ಯೋಜನೆಗಾಗಿ ಯಾವುದೇ ರಸ್ತೆ ನಿರ್ಮಾಣ ಮಾಡುವುದಿಲ್ಲ. ರೈತರು ಕಾಮಗಾರಿ ಮುಗಿದ ಮೇಲೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಿಕೊಳ್ಳಬಹುದು. ತುಂಗಾ ಮೇಲ್ದಂಡೆ ನೀರಾವರಿ ಯೋಜನೆಗೆ ಇತರ ತಾಲೂಕಿನಲ್ಲಿಯೂ ಅನೇಕ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಆ ಭಾಗದ ರೈತರು ಸಹಕಾರ ನೀಡಿದ್ದಾರೆ. ಆದ್ದರಿಂದ ಈ ಭಾಗದ ನೀರಾವರಿ ಯೋಜನೆಗೆ ರೈತರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಬರಬೇಕಾಗಿರುವ ಪರಿಹಾರದ ಹಣದ ಕುರಿತು ಮುಖ್ಯಮಂತ್ರಿ, ನೀರಾವರಿ ಇಲಾಖೆ ಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ರ್ಚಚಿಸಿ ಶೀಘ್ರವೇ ನೀಡಲಾಗುವುದು. ಈ ಕುರಿತು ನಾವು ಯು.ಬಿ. ಬಣಕಾರ ಬೆಂಗಳೂರಿಗೆ ಹೋಗಿ ರ್ಚಚಿಸುತ್ತೇವೆ. ದಯಮಾಡಿ ಹಿರಿಯ ವಕೀಲರಾದ ನೀವು ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಮನವಿ ಮಾಡಿದರು. ಆರೋಗ್ಯ ಮನುಷ್ಯನಿಗೆ ಅತೀ ಮುಖ್ಯವಾದದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾಪಂ ಮಾಜಿ ಸದಸ್ಯ ಆರ್.ಎನ್. ಗಂಗೋಳ, ಡಿ.ಸಿ. ಪಾಟೀಲ, ದೇವರಾಜ ನಾಗಣ್ಣವರ, ಗಣೇಶ ವೇರ್ಣೆಕರ, ಕೆ.ವಿ. ವರಹದ, ವೀರನಗೌಡ್ರ ಮಕರಿ, ರಿಯಾಜ ನರಗುಂದಕರ, ಶಂಕರಗೌಡ ಚೆನ್ನಗೌಡ್ರ ಪ್ರತಿಭಟನಕಾರರಾದ ವಿನಯ ಪಾಟೀಲ, ಉಜಿನೆಪ್ಪ ಕೋಡಿಹಳ್ಳಿ, ಮಾಲತೇಶಯ್ಯ ಪಾಟೀಲ, ವಸಂತ ದ್ಯಾವಕ್ಕಳವರ ಇತರರಿದ್ದರು.
ಆದೇಶ ಪತ್ರ ಕೈಸೇರುವವರೆಗೆ ಉಪವಾಸ ಹಿಂಪಡೆಯಲ್ಲ
ಹಿರಿಯ ವಕೀಲ ಬಿ.ಡಿ. ಹಿರೇಮಠ ಮಾತನಾಡಿ, ನೀರಾವರಿ ಯೋಜನೆ ಕಾಮಗಾರಿಗೆ ಸಂಪೂರ್ಣವಾಗಿ ನಾವು ವಿರೋಧಿಸುತ್ತಿಲ್ಲ. ಪೈಪ್ಲೈನ್ ಕಾಮಗಾರಿ 4 ಮೀಟರ್ ವಿಸ್ತೀರ್ಣಕ್ಕೆ ಇಳಿಕೆ ಮಾಡುವ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ನೀಡುವ ಬಗ್ಗೆ ಸರ್ಕಾರದಿಂದ ಕಾನೂನುಬದ್ಧ ಆದೇಶ ಪತ್ರ ನೀಡಬೇಕು. ಆದೇಶ ಪತ್ರ ಬಂದ ತಕ್ಷಣವೇ ನಾನು ಪ್ರತಿಭಟನೆ ಕೈಬಿಡುತ್ತೇನೆ ಎಂದು ತಿಳಿಸಿದರು.