More

    ಕಾವ್ಯ ತಪಸ್ವಿ ಎಚ್ಚೆಸ್ವಿ; ರೆಕಾರ್ಡಿಂಗ್​ನ ಭಯ ಹೋಗಿಸಿದ ಹಿರಿಯರು 

    ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.

    ಎಚ್ಚೆಸ್ವಿ ಅವರ ಜತೆ ನನ್ನದು ತಂದೆ-ಮಗಳ ಸಂಬಂಧ. ಅವರು ನನ್ನನ್ನು ಪ್ರೀತಿಯಿಂದ ಮಗಳೇ ಎಂದು ಕರೆಯುತ್ತಾರೆ. ಈ ಅನುಬಂಧ ‘ಚಿನ್ನಾರಿಮುತ್ತ’ ಚಿತ್ರದ ಸಮಯದಲ್ಲಿ ಹುಟ್ಟಿದ್ದು. ನಾನು ಮೊಟ್ಟಮೊದಲು ಅವರ ಸಾಹಿತ್ಯ ಇರುವ ಹಾಡುಗಳನ್ನು ಹಾಡಿದ್ದು ‘ಚಿನ್ನಾರಿಮುತ್ತ’ದಲ್ಲಿ. ನಂತರ ಅವರು ರಚಿಸಿದ ಹಲವಾರು ಹಾಡುಗಳನ್ನು ಹಾಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಅವರ ಹಲವು ಕವನಗಳಿಗೆ ಸ್ವರಸಂಯೋಜನೆ ಕೂಡ ಮಾಡಿ ಸಿ.ಡಿ.ಯನ್ನೂ ಹೊರತಂದಿದ್ದೇನೆ.

    ಕಾವ್ಯ ತಪಸ್ವಿ ಎಚ್ಚೆಸ್ವಿ; ರೆಕಾರ್ಡಿಂಗ್​ನ ಭಯ ಹೋಗಿಸಿದ ಹಿರಿಯರು ‘ಚಿನ್ನಾರಿಮುತ್ತ’ದಲ್ಲಿ ಅಶ್ವಥ್ ಅವರು ಹಾಡನ್ನು ಹೇಗೆ ಹಾಡಬೇಕೆಂಬುದನ್ನು ಹೇಳಿಕೊಟ್ಟರೆ, ಇನ್ನೊಂದೆಡೆ ಎಚ್ಚೆಸ್ವಿ ಅವರು ತುಂಬ ಪ್ರೀತಿಯಿಂದ, ಎಲ್ಲಿಯೂ ಗದರದೇ ನಮ್ಮನ್ನು ತಿದ್ದುತ್ತಾ ಆ ಹಾಡಿನ ಸಾಹಿತ್ಯದ ಅರ್ಥ, ಭಾವಾರ್ಥ ಏನು ಎಂಬುದನ್ನು ಹೇಳಿಕೊಟ್ಟರು. ರೆಕಾರ್ಡಿಂಗ್​ನ ಭಯ ಹೋಗಿಸಿದರು. ಯಾವುದೋ ಪಿಕ್​ನಿಕ್​ಗೆ ಬಂದಿದ್ದೇವೇನೊ ಎಂಬ ಭಾವನೆ ಮೂಡುವಂತೆ ನೋಡಿಕೊಂಡರು. ಈಗ 2-3 ವರ್ಷ ಹಿಂದೆ ನನ್ನದೇ ಸ್ವರಸಂಯೋಜನೆಯಲ್ಲಿ ಒಂದು ಆಲ್ಬಂ ಮಾಡಬೇಕೆಂಬ ಯೋಚನೆ ಬಂತು.

    ಅದಕ್ಕಾಗಿ ಎಚ್ಚೆಸ್ವಿ ಅವರ ಕೆಲವು ಗೀತೆಗಳನ್ನು ಆಯ್ಕೆ ಮಾಡಿಕೊಂಡು ಸ್ವರ ಸಂಯೋಜಿಸಿದೆ. ಕವಿಯ ಆಶಯಕ್ಕೆ, ಸಾಹಿತ್ಯದ ಒಳ ಅರ್ಥ-ಭಾವಕ್ಕೆ ಏನೂ ಧಕ್ಕೆ ಬಂದಿಲ್ಲ ಎಂಬುದನ್ನು ಅವರಿಂದಲೇ ಖಚಿತಪಡಿಸಿಕೊಳ್ಳುವ ಉದ್ದೇಶ ನನಗಿತ್ತು. ‘ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ, ಮಳೆ ಸುರಿಸಿ ಹಗುರಾದ ಮುಗಿಲಿನಂತೆ…’ ಮತ್ತು ‘ಬಾಳೇ ಗಾಯನ, ದೇಹವೇ ವೀಣಾ, ಭಾವವೇ ಹೃದಯದ ಆಲಾಪನ’ ಈ ಸಾಲುಗಳಿಗೆ ಸ್ವರಸಂಯೋಜಿಸಿ, ಅವರ ಮನೆಗೆ ಹೋಗಿ ಎದುರಿಗೆ ಕುಳಿತು ಹಾಡಿದೆ. ಅವರು ಕಣ್ಮುಚ್ಚಿಕೊಂಡು ಕೇಳುತ್ತಿದ್ದರು.

    ಹಾಡುವುದು ಮುಗಿದ ಮೇಲೆ ನೋಡಿದರೆ ಅವರ ಕಣ್ಣಂಚಿನಲ್ಲಿ ನೀರಿತ್ತು. ‘ಮಗಳೇ ತುಂಬಾ ಚೆನ್ನಾಗಿ ಮಾಡಿದ್ದೀಯಾ, ಗೋ ಅಹೆಡ್’ ಅಂತ ಹೇಳಿದರು. ಸಂಗೀತವನ್ನು ಮೊದಲ ಪ್ರಯತ್ನದಲ್ಲೇ ಕವಿ ಒಪ್ಪಿಕೊಂಡು ಬೆನ್ನು ತಟ್ಟುವುದು ಸ್ವರಸಂಯೋಜಕರಿಗೆ, ಗಾಯಕರಿಗೆ ಒಂದು ದೊಡ್ಡ ಆಶೀರ್ವಾದ. ನನ್ನ ಚೊಚ್ಚಲ ಪ್ರಯತ್ನದಲ್ಲೇ ನನಗೆ ಎಚ್ಚೆಸ್ವಿಯವರ ಬೆಂಬಲ ಸಿಕ್ಕಿತು.

    ಕಳೆದ ವರ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಲಹೆಯಂತೆ, ಕೆ.ಎಸ್. ನರಸಿಂಹಸ್ವಾಮಿ ಅವರ ಕೆಲವು ಗೀತೆಗಳನ್ನು ಶಾಸ್ತ್ರೀಯವಾಗಿ ಪ್ರೆಸೆಂಟ್ ಮಾಡಿದ್ದೆ. ಆ ಕಾನ್ಸರ್ಟ್​ಗೆ ಎಚ್ಚೆಸ್ವಿಯೂ ಬಂದಿದ್ದರು. ತುಂಬಾ ಖುಷಿಯಾಗಿ ನನಗೆ ಪುತಿನ ಅವರ ‘ಸಮಗ್ರ’ವನ್ನು ಕೊಟ್ಟರು. ಅದರಲ್ಲಿ ಶಾಸ್ತ್ರೀಯ ಗಾಯನಕ್ಕೆ ಹೊಂದಿಕೊಳ್ಳುವಂಥ ಗೀತೆಗಳನ್ನು ಮಾರ್ಕ್ ಮಾಡಿದ್ದರು.

    ಆ ಗೀತೆಗಳಿಗೆ ಶಾಸ್ತ್ರೀಯವಾಗಿ ಸ್ವರ ಸಂಯೋಜನೆ ಮಾಡಿ ಕ್ಲಾಸಿಕಲ್ ಕಾನ್ಸರ್ಟ್ ರೀತಿಯಲ್ಲಿ ಪ್ರೆಸೆಂಟ್ ಮಾಡುವಂತೆ ಹೊಸದೊಂದು ‘ಚಾಲೆಂಜ್’ ಕೊಟ್ಟರು. ನಿಜಕ್ಕೂ ಅದು ದೊಡ್ಡ ಸವಾಲಾಗಿತ್ತು. ಪ್ರತಿ ಹಾಡಿಗೂ ತಲೆಕೆಡಿಸಿಕೊಂಡು, ಕವನದ ಭಾವಕ್ಕೆ ಹೊಂದುವ ರಾಗ ಆರಿಸಿಕೊಂಡು ಕಂಪೋಸ್ ಮಾಡಿ ಒಂದೊಂದಾಗಿ ಎಚ್ಚೆಸ್ವಿ ಅವರಿಗೆ ಕಳಿಸುತ್ತಿದ್ದೆ. ಅವರು ಪ್ರತಿ ಹಾಡನ್ನು ಕೇಳಿ ‘ಶಭಾಷ್ ಮಗಳೇ, ತುಂಬಾ ಚೆನ್ನಾಗಿದೆ, ಮುಂದುವರಿಸು’ ಅಂತ ಗ್ರೀನ್​ಸಿಗ್ನಲ್ ಕೊಡ್ತಿದ್ರು.

    ಇಡೀ ಕಾರ್ಯಕ್ರಮ ಅವರೇ ಆಯೋಜಿಸಿ ಪ್ರೊಡ್ಯೂಸ್ ಮಾಡಿದರು. ಅವರಿಗೆ ನನ್ನ ಮೇಲೆ ಅಷ್ಟೊಂದು ನಂಬಿಕೆ. ಶ್ರೀರಾಮನ ಕುರಿತು ಎಚ್ಚೆಸ್ವಿ ಬರೆದ ಒಂದು ಕವನಕ್ಕೂ ಸ್ವರಸಂಯೋಜನೆ ಮಾಡಿದ್ದೇನೆ. ಅದನ್ನು ವಿಡಿಯೋ ಮಾಡಬೇಕು, ಅದರಲ್ಲಿ ಅವರೂ ಇರಬೇಕು ಎಂಬುದು ನನ್ನ ಹಂಬಲ. ಇದನ್ನು ಅವರಿಗೆ ಹೇಳಿದ್ದೇನೆ. ಒಪ್ಪಿಕೊಂಡಿದ್ದಾರೆ. ಸಂಗೀತದಲ್ಲಿನ ನನ್ನ ಪಯಣದಲ್ಲಿ ಮುಂದೆಯೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗಿದೆ.

    | ಅರ್ಚನಾ ಉಡುಪ ಹಿನ್ನೆಲೆ ಗಾಯಕಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts