More

    ರಾಷ್ಟ್ರೀಯ ಹೆದ್ದಾರಿ ಸೇತುವೆ ಬಿರುಕು

    ಗಂಗೊಳ್ಳಿ: ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಕಾಮಗಾರಿ ಸಂದರ್ಭ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಅರಾಟೆ ಸೇತುವೆ ಶನಿವಾರ ಬಿರುಕು ಬಿಟ್ಟಿದೆ.

    700 ಮೀಟರ್ ಉದ್ದದ ಹೊಸ ಸೇತುವೆಯ ಪಿಲ್ಲರ್ ಮೇಲಿನ ಜೋಡಣೆ ಮೂರ್ನಾಲ್ಕು ಇಂಚುಗಳಷ್ಟು ಆಚೀಚೆ ಸರಿದಿದ್ದು, ರಾಡ್‌ಗಳೂ ತುಂಡಾಗಿವೆ. ಸದ್ಯ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪಕ್ಕದಲ್ಲೇ ಇರುವ ಹಳೇ ಸೇತುವೆ ಮೂಲಕ ವಾಹನಗಳನ್ನು ಬಿಡಲಾಗುತ್ತಿದೆ.

    ಸ್ಥಳಕ್ಕೆ ಗುತ್ತಿಗೆ ನಿರ್ವಹಿಸಿದ ಐಆರ್‌ಬಿ ಸಂಸ್ಥೆಯ ಅಧಿಕಾರಿಗಳು, ಹೊಸಾಡು ಗ್ರಾಮ ಕರಣಿಕರು, ಹೈವೇ ಪ್ಯಾಟ್ರೋಲ್ ಹಾಗೂ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೇತುವೆ ಬಿರುಕು ಬಿಟ್ಟಿರುವುದರಿಂದ ಮುಳ್ಳಿಕಟ್ಟೆಯಿಂದ-ಮೂವತ್ತುಮುಡಿವರೆಗೆ ಈ ಮಾರ್ಗದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸದ್ಯ ಹಳೇ ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    ಇದೇ ಮೊದಲಲ್ಲ: ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪ ಇದ್ದ ಹಳೆಯ ಸೇತುವೆಯನ್ನು ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ದುರಸ್ತಿ ಮಾಡಿ, ಪಕ್ಕದಲ್ಲೇ ಹೊಸ ಸೇತುವೆ ನಿರ್ಮಿಸಲಾಗಿತ್ತು. ಮೂರು ವರ್ಷ ಹಿಂದೆ ಕಾಮಗಾರಿ ಮುಗಿದಿದ್ದು, ಎರಡು ವರ್ಷಗಳಿಂದ ಇದರಲ್ಲಿ ವಾಹನಗಳು ಸಂಚರಿಸುತ್ತಿವೆ.

    ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಸೇತುವೆಯಲ್ಲಿ ಕುಸಿತ ಉಂಟಾಗಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪನಿ ದುರಸ್ತಿಗೊಳಿಸಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈಗ ಸೇತುವೆಯ ಇನ್ನೊಂದು ಬದಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

    ಅಪಾಯವಿಲ್ಲವೆಂದ ಎನ್‌ಎಚ್‌ಎಐ: ಅರಾಟೆ ಸೇತುವೆಯ ಮೇಲ್‌ಸ್ತರದಲ್ಲಷ್ಟೇ ಬಿರುಕು ಕಂಡುಬಂದಿದೆ, ಇದು ಗಂಭೀರ ವಿಷಯವಲ್ಲ. ಸ್ಪಾನ್ ಜಾಯಿಂಟ್‌ನಲ್ಲಿ ಕಂಡು ಬಂದಿರುವ ಬಿರುಕು ಇದಾಗಿದೆ. ಸೇತುವೆಯ ಮೂಲರಚನೆಗೆ ಯಾವುದೇ ಸಮಸ್ಯೆಯಾಗಿಲ್ಲ. ನಮ್ಮ ಸೇತುವೆ ತಜ್ಞರು ಸ್ಥಳದಲ್ಲಿದ್ದು ದುರಸ್ತಿ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಯೋಜನಾ ನಿರ್ದೇಶಕ ಶಿಶುಮೋಹನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts