More

    ಗೊಂದಲದ ಗೂಡಾದ ‘ಎಲ್ಲರಿಗೂ ಸೂರು’ ಸಭೆ

    ಅರಸೀಕೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಎಲ್ಲರಿಗೂ ಸೂರು’ ಯೋಜನೆ ಸಾಫಲ್ಯತೆ ಕುರಿತು ಚರ್ಚಿಸಲು ಸೋಮವಾರ ಪಟ್ಟಣದ ಸುಬ್ರಹ್ಮಣ್ಯ ನಗರ ಬಡಾವಣೆಯ ಬೆಟ್ಟದ ತಪ್ಪಲಿನಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತು.

    ಪೌರಾಯುಕ್ತ ಕಾಂತರಾಜ್ ಮಾತನಾಡಿ, ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಈಗಾಗಲೇ 1310 ಮನೆ ನಿರ್ಮಿಸಲಾಗುತ್ತಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಾಮಾನ್ಯ ವರ್ಗಕ್ಕೆ ಸೇರಿದ 554, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 468 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 211 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸಾಮಾನ್ಯ ವರ್ಗದ ಫಲಾನುಭವಿಗಳು 1,64,000 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು 1,04, 000 ರೂ. ಪಾವತಿಸಲು ಸರ್ಕಾರ ನಿರ್ದೇಶನ ನೀಡಿದೆ. ನಿಗದಿತ ಕಾಲಮಿತಿಯಲ್ಲಿ ಕಂತುಗಳ ಮೂಲಕ ಹಣ ತುಂಬಬೇಕು ಎಂದರು.

    ತಕ್ಷಣವೇ ಎದ್ದು ನಿಂತ ಬಿಜೆಪಿಯ ನಗರಸಭಾ ಸದಸ್ಯ ಸಿ.ಗಿರೀಶ್, ಮುಖಂಡರಾದ ಶಿವನ್‌ರಾಜ್, ಚಂದ್ರಶೇಖರ್ ಮತ್ತಿತರರು ಮಾತನಾಡಿ, ಬಡವರ್ಗದ ಜನರ ಬಳಿ ನೀಡಲು ಹಣವಿಲ್ಲ. ಯಾವುದೇ ಕಾರಣಕ್ಕೂ ಇಂತಹ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.

    ಈ ವೇಳೆ ಮೈಕ್ ಕಸಿದುಕೊಂಡ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಾನು ಹೋರಾಟ ಮಾಡಿ ಮನೆಗಳನ್ನು ತಂದಿದ್ದೇನೆ. ಈಗ ನಿಮಗೆ ಹಣ ನೀಡಲು ಸಾಧ್ಯವಾಗದಿದ್ದರೆ ಬೇರೆಯರನ್ನು ಗುರುತಿಸಿ ಹಕ್ಕುಪತ್ರ ನೀಡಲಾಗುತ್ತದೆ ಎಂದು ಗರಂ ಆಗಿಯೇ ಉತ್ತರಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

    ಕೊನೆಗೆ ಬ್ಯಾಂಕ್ ಹಾಗೂ ನಗರಸಭೆ ಅಧಿಕಾರಿಗಳಿಂದ ಸೂಕ್ತ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರೆ, ಫಲಾನುಭವಿಗಳು ಹಣ ಕಟ್ಟಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸಿದರು.
    ನಗರಸಭೆ ಎಇಇ ಆನಂದ್, ನಗರಸಭೆ ಸದಸ್ಯರಾದ ಜಿ.ಟಿ.ಗಣೇಶ್, ಅನ್ನಪೂರ್ಣ ಸತೀಶ್, ಯುನಸ್, ಮೇಲಗಿರಿಗೌಡ, ಗಿರೀಶ್, ಈಶ್ವರ್, ಝಾಕೀರ್, ದಯಾನಂದ್, ಪುಟ್ಟರಾಜು, ಮುಖಂಡರಾದ ಸಿಕಂದರ್, ಟಿಪ್ಪು, ಮಲ್ಲಿಕಾರ್ಜುನ್, ಬ್ಯಾಂಕ್ ಆಫ್ ಬರೋಡ ಹಾಸನ ವಿಭಾಗದ ಉಪ ಮಹಾ ಪ್ರಬಂಧಕ ಹಾಗೂ ಕ್ಷೇತ್ರೀಯ ಪ್ರಬಂಧಕ ಕೆ.ಆರ್.ಕಗದಾಳ, ನಗರಸಭೆ ವ್ಯವಸ್ಥಾಪಕ ಮಹಾತ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts