More

    ಕ್ಷೇತ್ರ ಶಿಕ್ಷಣಾಧಿಕಾರಿ ಮಾದರಿ ನಡೆಗೆ ಮೆಚ್ಚುಗೆ, ಮನೆ-ಮನೆಗೆ ತೆರಳಿ ಶಿಕ್ಷಕರ ಬೋಧನೆ, ದಸರಾ ರಜೆಯಲ್ಲೂ ಮಕ್ಕಳಿಗೆ ಪಾಠ-ಪ್ರವಚನ

    ಪರಶುರಾಮ ಭಾಸಗಿ ವಿಜಯಪುರ

    ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೊಬ್ಬರು ಕೈಗೊಂಡ ವಿನೂತನ ಕ್ರಮ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ಶೈಕ್ಷಣಿಕ ವಲಯಕ್ಕೂ ಮಾದರಿಯಾಗಿದೆ !

    ದಸರಾ ರಜೆಯಲ್ಲಿರುವ 1 ರಿಂದ 10ನೇ ತರಗತಿ ಮಕ್ಕಳಿಗಾಗಿ ವಿಜಯಪುರ ನಗರ ಕ್ಷೇತ್ರದ ಬಿಇಒ ಬಸವರಾಜ ಎಸ್.ತಳವಾರ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಪಾಲಕರು-ಪೋಷಕರು ಮನಮೆಚ್ಚಿ ಕೊಂಡಾಡುತ್ತಿದ್ದಾರೆ. ಇಂಥ ವಿನೂತನ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲಿವೆ. ಇಂಥ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿರಬೇಕೆಂದು ಗಲ್ಲಿ ಗಲ್ಲಿಗಲ್ಲಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

    ಏನಿದು ಕಾರ್ಯಕ್ರಮ?

    ಸದ್ಯ ನಾಡ ಹಬ್ಬ ದಸರಾ ಅಂಗವಾಗಿ ನಾಡಿನಾದ್ಯಂತ ಶಾಲೆ-ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದೆ. ಅ. 8 ರಿಂದ 24ರವರೆಗೆ ರಜೆ ಘೋಷಿಸಲಾಗಿದ್ದು, ಈ ಅವಧಿಯನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ‘ನಿಯೋಜಿತ ಕಾರ್ಯ’ ಭಾರ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮುಂದಾಗಿದ್ದಾರೆ.

    1 ರಿಂದ 9ನೇ ತರಗತಿ ಮಕ್ಕಳಿಗಾಗಿ ವಿಶೇಷ ಪಠ್ಯಕ್ರಮ ರಚಿಸಿ ರಜೆಯ ದಿನಗಳಲ್ಲಿ ಪೂರ್ಣ ಮಾಡಲು ಯೋಜನೆ ರೂಪಿಸಿದ್ದಾರೆ. ಸ್ಪಷ್ಟ ಓದು, ಶುದ್ಧ ಬರಹ, ಸರಳ ಲೆಕ್ಕಾಚಾರ ತತ್ವಾಧಾರಿತವಾಗಿ ಮಕ್ಕಳಿಗೆ ಹೋಮ್‌ವರ್ಕ್ ನೀಡಲಾಗಿದೆ. ನಕಾಶೆ ಬಿಡಿಸುವುದು, ಚಿತ್ರಬಿಡಿಸುವುದು, ವ್ಯಾಕರಣ, ಗಣಿತ, ವಿಜ್ಞಾನ ಮಾದರಿಗಳು ಮತ್ತಿತರ ಕಾರ್ಯಚಟುವಟಿಕೆ ನೀಡಲಾಗಿದೆ. 19 ತರಗತಿ ಮಕ್ಕಳಿಗೆ ಈವರೆಗೆ ಬೋಧಿಸಲಾದ ಪಠ್ಯಕ್ರಮ ಆಧರಿಸಿ ಮೂರು ಹಂತದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲಾಗಿದೆ. ಅಂತಿಮ ಪರೀಕ್ಷೆ ಮಾದರಿಯಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲಾಗಿದ್ದು, ಅದನ್ನು ಅಭ್ಯಸಿಸಿ, ಅಳವಡಿಸಿಕೊಂಡು, ಅಂತಿಮ ಪರೀಕ್ಷೆಗೆ ತಯಾರಿಯಾಗಲು ಮಾರ್ಗದರ್ಶನ ನೀಡಲಾಗಿದೆ.
    ವರ್ಗವಾರು, ವಿಷಯವಾರು, ಮಾಧ್ಯಮವಾರು ಪ್ರತ್ಯೇಕವಾಗಿ ಪ್ರಶ್ನೋತ್ತರ ಮಾದರಿ ನೀಡಲಾಗಿದೆ. ಮರಾಠಿ, ಕನ್ನಡ, ಉರ್ದು, ಇಂಗ್ಲಿಷ್ ಹೀಗೆ ಭಾಷೆಯಾಧಾರಿತ ವಿಷಯಗಳು ಸೇರಿದಂತೆ ಎಲ್ಲ ವಿಷಯಗಳ ಒಟ್ಟು 1698 ಪುಟಗಳ ಪಠ್ಯಕ್ರಮ ಸಿದ್ಧಪಡಿಸಲಾಗಿದೆ.

    ಮನೆ-ಮನೆಗೆ ತೆರಳಿ ಬೋಧನೆ

    ನಗರ ವಲಯದಲ್ಲಿ ಒಟ್ಟು 17 ಅನುದಾನಿತ ಪ್ರಾಥಮಿಕ, 37 ಅನುದಾನಿತ ಪ್ರೌಢ, 7 ಸರ್ಕಾರಿ ಪ್ರೌಢ, 122 ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಅನುದಾನರಹಿತ ಸೇರಿ ಒಟ್ಟು 586 ಶಿಕ್ಷಣ ಸಂಸ್ಥೆಗಳಿವೆ. ಒಟ್ಟು 82 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ಮಕ್ಕಳ ಪಾಲಕರಿಗೂ ಈ ‘ನಿಯೋಜಿತ ಕಾರ್ಯ’ದ ಕುರಿತು ಮಾಹಿತಿ ನೀಡಲಾಗಿದೆ. ಶಿಕ್ಷಕರೇ ಖುದ್ದಾಗಿ ಮಕ್ಕಳ ಮನೆಗೆ ಭೇಟಿ ನೀಡಿ ಪಾಠ ಮಾಡುತ್ತಿದ್ದಾರೆ. ಹೋಮ್‌ವರ್ಕ್ ಬಿಡಿಸಲು ಸಹಾಯ ಮಾಡುತ್ತಿದ್ದಾರೆ. ಮಕ್ಕಳ ಕಾರ್ಯಚಟುವಟಿಕೆ ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ದಕ್ಷತೆ ಹೆಚ್ಚುತ್ತಿದೆ. ಸಮರೋಪಾದಿಯಲ್ಲಿ ನಡೆಯುತ್ತಿರುವ ಈ ಚಟುವಟಿಕೆ ಶೇ. 100ರಷ್ಟು ಅನುಷ್ಟಾನಗೊಂಡಿದೆ. ಉತ್ತಮವಾಗಿ ಹೋಮ್‌ವರ್ಕ್ ಮಾಡಿದ ಮಕ್ಕಳಿಗೆ ಬಹುಮಾನ ನೀಡಲು ನಿರ್ಧರಿಸಲಾಗಿದ್ದರಿಂದ ಮಕ್ಕಳು ಪೈಪೋಟಿಗಿಳಿದಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಈ ಸ್ಪರ್ಧಾ ಮನೋಭಾವಕ್ಕೆ ಪಾಲಕರು ಖುಷ್ ಆಗಿದ್ದಾರೆ.

    ವಿಜಯಪುರ ನಗರ ಶೈಕ್ಷಣಿಕ ವಲಯದಲ್ಲಿ ಒಂದಿಲ್ಲಾ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಬರಲಾಗುತ್ತಿದೆ. ಇದೀಗ ದಸರೆ ರಜೆಯಲ್ಲಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಂತ ‘ನಿಯೋಜಿತ ಕಾರ್ಯ’ಗಳು ಸಹಕಾರಿಯಾಗಲಿವೆ.
    ಬಸವರಾಜ ಎಸ್. ತಳವಾರ, ಬಿಇಒ ನಗರ ವಲಯ ವಿಜಯಪುರ
    
    ಮಕ್ಕಳ ಸೇವೆ ಮಾಡುವುದು ಇಂದಿನ ತುರ್ತು ಜವಾಬ್ದಾರಿಯಾಗಿದೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಂಥ ಕಾರ್ಯಕ್ರಮಗಳು ಪೂರಕವಾಗಿವೆ. ಇದೊಂದು ಕರ್ತವ್ಯ ಎಂದು ಪರಿಗಣಿಸಿದೆ ಸೇವೆ ಎಂದು ಪರಿಗಣಿಸಿ ಶಿಕ್ಷಕರು ಮನೆ ಮನೆಗೆ ತೆರಳಿ ಮಾಠ ಮಾಡುತ್ತಿರುವ ಉತ್ಸಾಹ ಗಮನಿಸಿದರೆ ನಿಜಕ್ಕೂ ಸಾರ್ಥಕತೆ ಹೆಚ್ಚಿಸಿದೆ.
    ಸುರೇಶ ಶೇಡಶ್ಯಾಳ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts