More

    ಜ.25ರಿಂದ ಕಾರಂತ ಲೇಔಟ್‌ನಲ್ಲಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಡಾ. ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಗೆ ಜ.25ರಿಂದ ಅರ್ಜಿ ಆಹ್ವಾನಿಸಲಿದ್ದು, ಮೊದಲ ಆದ್ಯತೆಯಲ್ಲಿ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪರಿಹಾರದ ಸೈಟ್‌ಗಳನ್ನು ವಿತರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

    ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಈ ವಿಷಯ ಪ್ರಕಟಿಸಿದರು. ಸೈಟ್ ಆಕಾಂಕ್ಷಿಗಳಿಗೆ ಸುಲಭವಾಗಲೆಂದು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ಕೇಂದ್ರ ಕಚೇರಿ ಹೊರತುಪಡಿಸಿ ಪ್ರಾಧಿಕಾರದ ವಲಯ ಕಚೇರಿಗಳಲ್ಲಿ ಆ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಿದ ಬಳಿಕ ಒಂದು ತಿಂಗಳಲ್ಲಿ ನಿವೇಶನ ಒಟ್ಟು ಮೊತ್ತದ ಶೇ.12.5 ಆರಂಭಿಕ ಠೇವಣಿಯನ್ನು ಪಾವತಿಸಬೇಕು. ಪರಿಶಿಷ್ಟರು ವರ್ಗದವರು ಶೇ.5 ಠೇವಣಿ ಪಾವತಿಸಬೇಕು. ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದರು.

    ಪ್ರತಿ ಚದರ ಅಡಿಗೆ 4,900 ರೂ. ನಿಗದಿ:

    ಬಡಾವಣೆಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವ ನಿವೇಶನಕ್ಕೆ ಪ್ರತಿ ಚದರ ಅಡಿಗೆ 4,900 ರೂ. ನಿಗದಿ ಮಾಡಲಾಗಿದೆ. ರೈತರಿಗೆ ಅಭಿವೃದ್ಧಿಪಡಿಸಿರುವ ಸೈಟ್‌ಗಳನ್ನು ಪರಿಹಾರ ರೂಪದಲ್ಲಿ ನೀಡಬೇಕಾದ ಹಿನ್ನೆಲೆಯಲ್ಲಿ ಸೈಟ್‌ಗಳ ಬೆಲೆ ಹಿಂದಿಗಿಂತ ಹೆಚ್ಚಾಗಿದೆ ಎಂದು ದುಬಾರಿ ದರವನ್ನು ಡಿಸಿಎಂ ಸಮರ್ಥಿಸಿಕೊಂಡರು.

    ಕಾರಂತ ಲೇಔಟ್ ಆನ್ನು 3,069 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ಒಟ್ಟು 17 ಗ್ರಾಮಗಳ 18 ಸಾವಿರ ಮಂದಿ ಭೂಮಿ ಕಳೆದುಕೊಂಡಿದ್ದು, ಅವರಿಗೆ ಮೊದಲ ಆದ್ಯತೆಯಲ್ಲಿ ಶೇ.40 ಅಭಿವೃದ್ಧಿಪಡಿಸಿದ ಸೈಟ್‌ಗಳನ್ನು (9,500) ನೀಡಲಾಗುವುದು. ಅವರದೇ ಜಮೀನಿನಲ್ಲಿ ನಿವೇಶನ ನೀಡಲಿದ್ದು, ಸಾಧ್ಯವಾಗದಿದ್ದರೆ ಅವರದೇ ಊರಿನಲ್ಲಿ ನೀಡಲಾಗುವುದು. 4,750ಕ್ಕೂ ಹೆಚ್ಚು ಕಾರ್ನರ್ ಸೈಟ್‌ಗಳನ್ನು ಇ-ಹರಾಜು ಮೂಲಕ ವಿಲೇ ಮಾಡಲಾಗುವುದು. ಸಾರ್ವಜನಿಕರಿಗೆ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಿದ್ದು, ಈ ಪ್ರಕ್ರಿಯೆಗೆ 9 ಬ್ಯಾಂಕ್‌ಗಳನ್ನು ಗುರುತಿಸಲಾಗಿದೆ ಎಂದು ಡಿಸಿಎಂ ವಿವರಿಸಿದರು.

    ಪಿಆರ್‌ಆರ್ ರಸ್ತೆ ಈಗ ಬಿಬಿಸಿ:

    ಉದ್ದೇಶಿತ ಫೆರಿಫೆರಲ್ ರಿಂಗ್ ರಸ್ತೆಯನ್ನು (ಪಿಆರ್‌ಆರ್) ಮಾಡಿಯೇ ಸಿದ್ಧ. ಯಾವುದೇ ಕಾರಣಕ್ಕೂ ಅಧಿಸೂಚನೆಯನ್ನು ಹಿಂಪಡೆಯುವುದಿಲ್ಲ. ಆದರೆ, ಪಿಆರ್‌ಆರ್ ಅನ್ನು ಈಗ ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ಎಂಬುದಾಗಿ ಮರು ನಾಮಕರಣ ಮಾಡಿದ್ದೇವೆ. ಮುಂದಿನ ಒಂದು ವಾರದಲ್ಲಿ ಈ ರಸ್ತೆಯ ಜಾಗತಿಕ ಟೆಂಡರ್ ಆಹ್ವಾನಿಸಲಾಗುವುದು. ಜಮೀನು ಕಳೆದುಕೊಳ್ಳುವ ರೈತರಿಗೆ ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಆಯುಕ್ತ ಎನ್.ಜಯರಾಮ್, ಅಭಿಯಂತರ ಸದಸ್ಯ ಡಾ. ಶಾಂತಾರಾಜಣ್ಣ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಪಿಪಿಪಿ ಮಾದರಿಯಲ್ಲಿ ಕಾಂಪ್ಲೆಕ್ಸ್ ನಿರ್ಮಾಣ:

    ಬಿಡಿಎ ಹಾಲಿ ಕಾಂಪ್ಲೆಕ್ಸ್‌ಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಹಿಂದಿನ ಸರ್ಕಾರವೂ ಅನುಮೋದನೆ ನೀಡಿದ್ದರೂ, ಟೇಕ್‌ಆ್ ಆಗಿರಲಿಲ್ಲ. ಈಗ ಎಲ್ಲವನ್ನು ಕ್ಲಿಯರ್ ಮಾಡಿ ಕಟ್ಟಡ ತೆರವುಗೊಳಿಸಿ ಕೆಲಸ ಶುರು ಮಾಡಲಿದ್ದೇವೆ. ಹಿಂದೆ ಕೈಗೊಂಡಿರುವ ನಿರ್ಧಾರದಂತೆ ಬಿಲ್ಡರ್ ಹಾಗೂ ಪ್ರಾಧಿಕಾರಕ್ಕೆ ಇಂತಿಷ್ಟು ಅನುಪಾತದಂತೆ ಕಟ್ಟಡದ ಜಾಗವು ಹಂಚಿಕೆಯಾಗಲಿದೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗದು ಎಂದು ತಿಳಿಸಿದರು.

    ಹೊಸ ಅಧ್ಯಕ್ಷರ ಆಯ್ಕೆ ಸಿಎಂಗೆ ಬಿಟ್ಟಿದ್ದು:

    ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎನ್.ಎ ಹ್ಯಾರಿಸ್ ಹೆಸರು ಕೇಳಿಬರುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ, ನಿಗಮ-ಮಂಡಳಿ ಪಟ್ಟಿಗೆ ಮುಖ್ಯಮಂತ್ರಿಯವರು ಇನ್ನಷ್ಟೇ ಸಹಿ ಹಾಕಬೇಕಿದೆ. ಸದ್ಯ ಬಿಡಿಎ ಮುಖ್ಯಸ್ಥರ ಕುರ್ಚಿಯಲ್ಲಿ ಇವರು ಕೂತಿದ್ದಾರೆಂದು ರಾಕೇಶ್ ಸಿಂಗ್ ಕಡೆ ಡಿಸಿಎಂ ಬೆಟ್ಟುಮಾಡಿ ತೋರಿಸಿದರು.

    ಶಿವರಾಮ ಕಾರಂತ ಲೇಔಟ್‌ನಲ್ಲಿ ಸಾರ್ವಜನಿಕರಿಗೆ ಪಾರದರ್ಶಕ ವ್ಯವಸ್ಥೆಯಡಿ ಸೈಟ್‌ಗಳನ್ನು ವಿತರಿಸಲಾಗುವುದು. ಈ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ. ಹಿಂದೆ ನಡೆದಿರುವ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಕೆಂಪೇಗೌಡ ಲೇಔಟ್‌ಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿರುವ ಪ್ರಕರಣಗಳಲ್ಲಿ ಸರ್ಕಾರದ ಪರ ಕೆಲಸ ಮಾಡದ ವಕೀಲರನ್ನು ತೆಗೆದು ಹೊಸಬರನ್ನು ನೇಮಿಸಲಾಗುವುದು.
    – ಡಿ.ಕೆ. ಶಿವಕುಮಾರ್, ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts