More

    ಎನ್‌ಎಂಎಂಎಸ್ ಆ್ಯಪ್‌ನಲ್ಲಿನ ಸಮಸ್ಯೆಯಿಂದ ಕೂಲಿಕಾರರಿಗೆ ತೊಂದರೆ

    ಯಲಬುರ್ಗಾ: ಉದ್ಯೋಗ ಖಾತ್ರಿ ಕೂಲಿಕಾರರಿಗೆ ಕೆಲಸದ ಸ್ಥಳದಲ್ಲಿ ಆಗುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತರೈತ ಸಂಘದ ತಾಲೂಕು ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪಗೆ ಮನವಿ ಸಲ್ಲಿಸಲಾಯಿತು.

    ಸಂಘದ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ ಮಾತನಾಡಿ, ನರೇಗಾ ಕೆಲಸದ ಸ್ಥಳದಲ್ಲಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಕೂಲಿಕಾರರ ಹಾಜರಾತಿ ತೆಗೆದುಕೊಳ್ಳುತ್ತಿದ್ದು, ಅದು ಸರಿಯಾಗಿ ನಮೂದಾಗುತ್ತಿಲ್ಲ. ಇದರಿಂದ ಕೂಲಿಕಾರರಿಗೆ ವಾರದಲ್ಲಿ ಒಂದೆರಡು ದಿನದ ಕೂಲಿ ಪಾವತಿ ಆಗುತ್ತಿಲ್ಲ. ಇದರಿಂದ ಕಾಯಕ ಬಂಧು ಮತ್ತು ಜನಗಳ ಮಧ್ಯೆ ಗಲಾಟೆಯಾಗುತ್ತಿವೆ. ಆ್ಯಪ್ ರದ್ದುಪಡಿಸಬೇಕು ಇಲ್ಲವೇ ಆ್ಯಪ್‌ನ ತೊಂದರೆ ಸರಿಪಡಿಸಲು ಗ್ರಾಪಂಗೆ ಅಧಿಕಾರ ನೀಡಬೇಕೆಂದು ಆಗ್ರಹಿಸಿದರು.

    ಸಮಿತಿ ತಾಲೂಕು ಅಧ್ಯಕ್ಷ ಅಬ್ದುಲ್ ರಜಾಕ್ ಇಲಕಲ್ ಮಾತನಾಡಿ, ಫಾರಂ ನಂ.6 ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ಕೊಡಬೇಕು. ಗ್ರಾಪಂ ವ್ಯಾಪ್ತಿಯ 5 ಕಿಮೀ ಅಂತರದಲ್ಲಿ ಕೆಲಸ ನೀಡಬೇಕು. ಕೆಲಸದ ಸ್ಥಳದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಬೇಕು.

    ಕೂಲಿಕಾರರಿಗೆ ಅಳತೆ ಪ್ರಮಾಣ ನೆಪಮಾಡಿ ಕಡಿಮೆ ಕೂಲಿ ಪಾವತಿಸಲಾಗುತ್ತಿದ್ದು, ಇದನ್ನು ಸರಿಪಡಿಸಬೇಕು. ಗ್ರಾಪಂ ವ್ಯಾಪ್ತಿಯ ಕೂಲಿಕಾರರ ಸಂಖ್ಯೆಗೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ಎಲ್ಲ ಕುಟುಂಬದವರಿಗೂ 150 ದಿನ ಕೆಲಸ ನೀಡಬೇಕು. ಹಾಜರಾತಿ ಸಂಬಂಧ ಬಯೋಮೆಟ್ರಿಕ್ ಪದ್ಧತಿ ಜಾರಿಗೆ ಕೈಬಿಡಬೇಕೆಂದು ಒತ್ತಾಯಿಸಿದರು.

    ಪದಾಧಿಕಾರಿಗಳಾದ ಎಂ.ಸಿದ್ದಪ್ಪ, ಮಹಾದೇವಿ, ತಿರಗುಣ್ಣೆಪ್ಪ, ಶಿವರುದ್ರಪ್ಪ, ಹಾಲಪ್ಪ, ಜಗದೀಶ, ನೇತ್ರಾ, ಖಾದರ್‌ಬಿ, ಹೇಮಣ್ಣ, ಗವಿಸಿದ್ದಪ್ಪ, ಮಂಜುನಾಥ, ಬಸವರಾಜ, ವೀರೇಶ, ಸಂತೋಷ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts