More

    ರೋಗಭೀತಿಯಿದ್ದರೂ ರಾಣೆಬೆನ್ನೂರ ಜಾನುವಾರು ಸಂತೆಗಿಲ್ಲ ತಡೆ

    ರಾಣೆಬೆನ್ನೂರ: ಜಿಲ್ಲೆಯಲ್ಲಿ ವೇಗವಾಗಿ ಹರಡುತ್ತಿರುವ ಚರ್ಮಗಂಟು ರೋಗ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಾನುವಾರು ಸಂತೆ ನಡೆಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದರೆ, ಜಿಲ್ಲಾಧಿಕಾರಿ ಆದೇಶಕ್ಕೆ ಕ್ಯಾರೇ ಅನ್ನದ ವ್ಯಾಪಾರಸ್ಥರು ರಾಣೆಬೆನ್ನೂರ ಎಪಿಎಂಸಿ ಮುಂಭಾಗದಲ್ಲಿ ಭಾನುವಾರ ಭರ್ಜರಿಯಾಗಿಯೇ ಸಂತೆ ನಡೆಸಿದರು.
    ನಗರದ ಹೊರವಲಯದಲ್ಲಿರುವ ಜಾನುವಾರು ಮಾರುಕಟ್ಟೆ ಮುಂಭಾಗದ ಜಮೀನೊಂದರಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ನೂರಾರು ವ್ಯಾಪಾರಸ್ಥರು ಸಾವಿರಾರು ಜಾನುವಾರುಗಳನ್ನು ತಂದು ವ್ಯಾಪಾರ ನಡೆಸಿದರು.
    ಚರ್ಮಗಂಟು ರೋಗ ಪರಸ್ಪರ ಹರಡುವುದರಿಂದ ಸ್ಥಳೀಯ ಎಪಿಎಂಸಿ ಕಳೆದ 15 ದಿನದ ಹಿಂದೆಯೆ ಜಾನುವಾರು ಸಂತೆಯನ್ನು ನಿಷೇಧಿಸಿ ಆದೇಶ ಹೊರಡಿದೆ. ಮಾರುಕಟ್ಟೆಯ ಗೇಟ್‌ಗೂ ಬೀಗ ಹಾಕಲಾಗಿದೆ. ಆದರೆ, ವ್ಯಾಪಾರಸ್ಥರು ಗೇಟ್ ಮುಂಭಾಗದ ರಸ್ತೆಯ ಮತ್ತೊಂದು ಬದಿಯಲ್ಲಿ ಪಾಳು ಬಿದ್ದಿರುವ ಜಮೀನುವೊಂದರಲ್ಲಿ ರಾಜಾರೋಷವಾಗಿ ವ್ಯಾಪಾರ ನಡೆಸಿದರು. ಸಾರ್ವಜನಿಕರು, ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ಇದನ್ನು ತಡೆಯಬೇಕಾದ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಡಳಿತದ ಆದೇಶ ಪಾಲಿಸಬೇಕಾದ ತಹಸೀಲ್ದಾರರು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸಿದೆ.
    ವ್ಯಾಪಾರಸ್ಥರ ಕಾರುಬಾರು…
    ಜಿಲ್ಲೆಯಲ್ಲಿ ಈಗಾಗಲೇ ಸಾವಿರಾರು ಎತ್ತು, ಆಕಳುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. 580ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತು, ರಾಸುಗಳನ್ನು ಕಳೆದುಕೊಂಡ ರೈತರು ಮಮ್ಮಲ ಮರುಗುತ್ತಿದ್ದಾರೆ. ರೋಗ ಕಂಡು ಬಂದ ಜಾನುವಾರುಗಳನ್ನು ಗುಣಪಡಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಒಂದೇ ಕಡೆ ಸಾವಿರಾರು ಜಾನುವಾರುಗಳನ್ನು ಸೇರಿಸಿ ಸಂತೆ ಮಾಡಿರುವುದು ಇನ್ನಷ್ಟು ಅಪಾಯಕ್ಕೆ ಕಾರಣವಾಗಬಹುದು. ಆದರೆ, ಜಾನುವಾರು ಮಾರಾಟವನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಸ್ಥರು ಎತ್ತು, ಆಕಳುಗಳನ್ನು ಮಾರುಕಟ್ಟೆ ಬಳಿಯಿರುವ ಖಾಲಿ ಜಮೀನುಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಚರ್ಮಗಂಟು ರೋಗದ ಕುರಿತು ಅರಿವಿಲ್ಲದ ಮೈಸೂರು, ಮಂಡ್ಯ ಸೇರಿ ಬೇರೆ ಬೇರೆ ಜಿಲ್ಲೆಯ ವ್ಯಾಪಾರಸ್ಥರನ್ನು ಕರೆಯಿಸಿ ವ್ಯಾಪಾರ ಮಾಡುತ್ತಿದ್ದಾರೆ.
    ವ್ಯಾಪಾರಸ್ಥರ ದಂಧೆ ರಾಣೆಬೆನ್ನೂರ ಮಾತ್ರವಲ್ಲದೆ ಹಾವೇರಿ, ಅಕ್ಕಿಆಲೂರ ಬಳಿಯ ಎಪಿಎಂಸಿ ಮಾರುಕಟ್ಟೆ ಹತ್ತಿರವೂ ನಡೆಯುತ್ತಿದೆ. ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಡುತ್ತಿದೆ. ಇದು ಇದೀಗ ರಾಜ್ಯಾದ್ಯಂತ ವಿಸ್ತರಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts