More

    ಆ್ಯಂಟಿವೈರಲ್ ಇಂಜೆಕ್ಷನ್ಸ್ ಕೊರತೆ

    ಅವಿನ್ ಶೆಟ್ಟಿ, ಉಡುಪಿ

    ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ್ಯಂಟಿವೈರಲ್ ಇಂಜಕ್ಷನ್ ಕೊರತೆ ಎದುರಾಗಿದೆ ಎಂದು ಮೆಡಿಕಲ್ ಶಾಪ್ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
    ಈ ಇಂಜೆಕ್ಷನ್‌ಗಳು ಹೆಚ್ಚಾಗಿ ಮೆಡಿಕಲ್ ರಿಟೇಲರ್‌ಗಳಿಂದ ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತದೆ. ಕೋವಿಡ್-19 ಎರಡನೇ ಅಲೆಯಲ್ಲಿ ಆ್ಯಂಟಿವೈರಲ್ ಇಂಜೆಕ್ಷನ್ ಬೇಡಿಕೆ ಹೆಚ್ಚಾಗಿದ್ದರೂ, ಪೂರೈಕೆಯಾಗುತ್ತಿಲ್ಲ. ಮೆಡಿಕಲ್ ಶಾಪ್‌ಗಳಲ್ಲಿ ಸಂಗ್ರಹವಿದ್ದ ಇಂಜೆಕ್ಷನ್‌ಗಳು ಮಾರಾಟವಾಗಿವೆ. ಬೆಂಗಳೂರಿನಿಂದ ಇಂಜೆಕ್ಷನ್‌ಗಳ ಪೂರೈಕೆ ಆಗುತ್ತಿಲ್ಲ. ಬೇಡಿಕೆ ಇದ್ದರೂ ಇಂಜೆಕ್ಷನ್ ಸಿಗುತ್ತಿಲ್ಲ ಎಂದು ಮೆಡಿಕಲ್ ಶಾಪ್ ಮಾಲೀಕರು ತಿಳಿಸಿದ್ದಾರೆ.

    ಕೋವಿಡ್ ಒಂದನೇ ಅಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್‌ಗೆ ಹೆಚ್ಚು ಬೇಡಿಕೆ ಇತ್ತು. ಈ ಬಾರಿ ದೇಹದ ಆಕ್ಸಿಜನ್ ಮಟ್ಟ ಪರೀಕ್ಷಿಸುವ ಆಕ್ಸಿಮೀಟರ್‌ಗೆ ಬೇಡಿಕೆ ಬಂದಿದೆ. ಮಹಾನಗರಗಳಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಡುವರ ಸಂಖ್ಯೆ ಹೆಚ್ಚುತ್ತಿದೆ. ಆಕ್ಸಿಜನ್ ಮಟ್ಟದ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಉಂಟಾಗಿದೆ. ಈ ಹಿನ್ನೆಲೆ ಆಕ್ಸಿಜನ್ ಲೆವೆಲ್ ಪರೀಕ್ಷಿಸುವ ಆಕ್ಸಿಮೀಟರ್‌ಗೆ ಬೇಡಿಕೆ ಕಂಡುಬಂದಿದೆ. 500ರಿಂದ 2 ಸಾವಿರ ರೂ.ಗೆ ಆಕ್ಸಿಮೀಟರ್ ಸಿಗುತ್ತದೆ. ಗುಣಮಟ್ಟದ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ನಗರದ ಮೆಡಿಕಲ್ ಶಾಪ್ ಸಿಬ್ಬಂದಿ. ಆಕ್ಸಿಮೀಟರ್ ಕೂಡ ಹೆಚ್ಚಿನ ಮೆಡಿಕಲ್‌ಗಳಲ್ಲಿ ಸಿಗುತ್ತಿಲ್ಲ.

    ಮೆಡಿಕಲ್ ಶಾಪ್‌ಗಳಲ್ಲಿ ಗರಿಷ್ಠ ಖರೀದಿ
    14 ದಿನಗಳ ಜನತಾ ಕರ್ಫ್ಯೂ ಹಿನ್ನೆಲೆ ಮೆಡಿಕಲ್ ಶಾಪ್‌ಗಳಲ್ಲಿ ಸೋಮವಾರ, ಮಂಗಳವಾರ ಹೆಚ್ಚಿನ ಪ್ರಮಾಣದಲ್ಲಿ ಔಷಧ ಖರೀದಿ ವಹಿವಾಟು ನಡೆದಿದೆ. ಉಡುಪಿ, ಮಂಗಳೂರು ಸೇರಿದಂತೆ ಮೆಡಿಕಲ್ ಶಾಪ್‌ಗಳಲ್ಲಿ ಕಳೆದ ಐದಾರು ದಿನಗಳಿಂದ ಅಗತ್ಯ ಔಷಧಗಳನ್ನು ಜನರು ಖರೀದಿಸಿದ್ದಾರೆ.

    ಆ್ಯಂಟಿವೈರಲ್ ಇಂಜೆಕ್ಷನ್ ಕೊರತೆಯಿದೆ. ನಾಲ್ಕೈದು ದಿನಗಳಿಂದ ಉಡುಪಿ, ಮಂಗಳೂರಿನ ಮೆಡಿಕಲ್ ಶಾಪ್‌ಗಳಲ್ಲಿ ಅಗತ್ಯ ಔಷಧ, ವಸ್ತುಗಳ ಖರೀದಿ ಪ್ರಮಾಣವೂ ಹೆಚ್ಚಾಗಿದೆ. ಎಲ್ಲ ಮೆಡಿಕಲ್ ಶಾಪ್‌ಗಳಲ್ಲಿ ದೈಹಿಕ ಅಂತರ ಸೇರಿದಂತೆ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.
    – ಸಾಯಿರಾಧ ಮನೋಹರ್ ಶೆಟ್ಟಿ
    ಉಪಾಧ್ಯಕ್ಷ, ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್

    ಬೆಡ್ ಕೊರತೆ ಆತಂಕ
    ಜಿಲ್ಲೆಯಲ್ಲಿ ಕೋವಿಡ್ ಪ್ರಕರಣವಷ್ಟೇ ಅಲ್ಲ, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉಡುಪಿಯಲ್ಲಿಯೂ ಬೆಂಗಳೂರಿನ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
    ಈ ನಡುವೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇಲ್ಲ ಎಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪರಿಸ್ಥಿತಿ ಕೈ ಮೀರಿದರೆ ಎಷ್ಟರಮಟ್ಟಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಮಣಿಪಾಲ ಕೆಎಂಸಿ, ಆದರ್ಶ ಆಸ್ಪತ್ರೆಗಳಲ್ಲಿ ಸರ್ಕಾರಕ್ಕೆ ಮೀಸಲಿಟ್ಟ ಶೇ.50 ಬೆಡ್‌ಗಳು ಹೊರತುಪಡಿಸಿ ಉಳಿದೆಲ್ಲವೂ ಭರ್ತಿಯಾಗುತ್ತಿವೆ. ಈ ಆಸ್ಪತ್ರೆಗಳು ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.
    ಮಣಿಪಾಲ, ಆದರ್ಶ ಮತ್ತಿತರ ಆಸ್ಪತ್ರೆಗಳಲ್ಲಿ ಖಾಸಗಿಯಾಗಿಯೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಕೋವಿಡ್ ರೋಗಿಗಳೇ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಣಿಪಾಲ ಕೆಎಂಸಿ- ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ 106 ಕೋವಿಡ್ ರೋಗಿಗಳಿದ್ದು ಇವರ ಪೈಕಿ 20 ಮಂದಿ ಐಸಿಯುನಲ್ಲಿದ್ದಾರೆ. ಆದರ್ಶ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಸಂಬಂಧಿಸಿ ಎರಡು ಗಂಭೀರ ಪ್ರಕರಣಗಳ ಚಿಕಿತ್ಸೆ ನಡೆಯುತ್ತಿದೆ.

    ಜಿಲ್ಲಾಸ್ಪತ್ರೆ ಪರಿಸ್ಥಿತಿ ಹೇಗಿದೆ?
    ಜಿಲ್ಲಾಸ್ಪತ್ರೆಯಲ್ಲಿರುವ ಬೆಡ್ ಸಂಖ್ಯೆ 60. ಇದರಲ್ಲಿ 35 ಆಕ್ಸಿಜನ್, 10 ಐಸಿಯು ಬೆಡ್. ಇಬ್ಬರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 8ರಿಂದ 10 ರೋಗಿಗಳು ಆಕ್ಸಿಜನ್ ಬೆಡ್‌ನಲ್ಲಿದ್ದಾರೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಮದುಸೂಧನ್ ನಾಯಕ್ ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಒಂದು ವಾರದಿಂದ ಐಸಿಯು ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಜನರಲ್, ಐಸಿಯು, ವೆಂಟಿಲೇಟರ್ ಬೆಡ್‌ಗಳ ಕೊರತೆಯಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.50 ಬೆಡ್‌ಗಳನ್ನು ಮೀಸಲಿಡಲು ಸೂಚಿಸಲಾಗಿದೆ. ಜಿಲ್ಲೆಯ ಆಸ್ಪತ್ರೆಗಳು ಇದನ್ನು ಪಾಲಿಸುತ್ತಿವೆ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಎರಡು-ಮೂರು ದಿನಗಳ ಹಿಂದೆ ಬೆಡ್ ಕೊರತೆ ಎದುರಾಗಿತ್ತು. ಆದರೆ, ಈಗ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಐಸಿಯು, ವೆಂಟಿಲೇಟರ್, ಜನರಲ್ ಬೆಡ್‌ಗಳ ಕೊರತೆ ಇಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.50 ಬೆಡ್‌ಗಳನ್ನು ಮೀಸಲಿಟ್ಟಿದ್ದೇವೆ.
    – ಡಾ.ಅವಿನಾಶ್ ಶೆಟ್ಟಿ
    ಅಧೀಕ್ಷಕ, ಮಣಿಪಾಲ ಕೆಎಂಸಿ ಆಸ್ಪತ್ರೆ

    ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನಂತೆ ಉಡುಪಿಯಲ್ಲಿ ಬೆಡ್‌ಗಳಿಗೆ ಸಮಸ್ಯೆ ಉಂಟಾಗಬಹುದು. ನಮ್ಮಲ್ಲಿ ವೆಂಟಿಲೇಟರ್, ಐಸಿಯು ಭರ್ತಿಯಾಗಿದೆ. ಸರ್ಕಾರ ಸೂಚಿಸಿದಂತೆ ಶೇ.50 ಬೆಡ್ ಮೀಸಲಿದೆ. ಜನರು ಕೋವಿಡ್ ಬಗ್ಗೆ ಭಯ ಪಡದೆ, ಎಚ್ಚರ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳಬೇಕು.
    ಡಾ.ಜಿ.ಎಸ್ ಚಂದ್ರಶೇಖರ್
    ವೈದ್ಯಕೀಯ ನಿರ್ದೇಶಕ, ಆದರ್ಶ ಆಸ್ಪತ್ರೆ


     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts