More

    ಗೋಹತ್ಯೆ ನಿಷೇಧ ಪಾಸ್; ಗದ್ದಲದ ನಡುವೆಯೇ ಪರಿಷತ್​ನಲ್ಲಿ ವಿಧೇಯಕ ಅಂಗೀಕಾರ

    ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧದ ನಡುವೆಯೇ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಸೋಮವಾರ ವಿಧಾನಪರಿಷತ್​ನಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿತು. ಕಳೆದೆರಡು ಅಧಿವೇಶನದಲ್ಲಿ ಅನುಮೋದನೆಯಾಗದೆ ಉಳಿದಿದ್ದ ವಿಧೇಯಕವನ್ನು ಸಚಿವ ಪ್ರಭು ಚವ್ಹಾಣ್ ಮಂಡಿಸಿದರು. ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ವಿಧೇಯಕವನ್ನು ಮಂಡಿಸಿದ ಕೂಡಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗದ್ದಲವೆಬ್ಬಿಸಿದರು. ಅಲ್ಲದೆ, ಸಭಾಪತಿ ಪೀಠದ ಮುಂದಿನ ಜಾಗಕ್ಕೆ ಬಂದು ಪ್ರತಿಭಟಿಸಿದರು. ಕೊನೆಗೆ ಕಾರ್ಯಕಲಾಪ ಸಮಿತಿಯಲ್ಲಿ ವಿಧೇಯಕ ಮಂಡನೆಗೆ ಅನುಮತಿಸಲಾಗಿದೆ ಹಾಗೂ ಅಜೆಂಡಾದಲ್ಲೂ ಅದನ್ನು ಉಲ್ಲೇಖಿಸಲಾಗಿದೆ ಎಂದು ಸಭಾಪತಿ ತಿಳಿಹೇಳಿದ ನಂತರ ಸದಸ್ಯರು ಆಸನಗಳಿಗೆ ವಾಪಸ್ ಬಂದರು. ವಿಧೇಯಕ ಕುರಿತಂತೆ ವಿವರಣೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಶಿಸುತ್ತಿರುವ ದೇಸಿ ತಳಿಗಳು, ಪೂಜನೀಯವಾಗಿರುವ ಗೋವುಗಳ ಸಂರಕ್ಷಣೆಗಾಗಿ ಕಾಯ್ದೆ ತರಲಾಗಿದೆ. 1964ರಿಂದಲೂ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಆದರೆ, ಈಗ ಅದರಲ್ಲಿ ಕೆಲ ಬದಲಾವಣೆ ಮಾಡಿ ಹೊಸದಾಗಿ ಮಂಡಿಸಲಾಗುತ್ತಿದೆ. ಗೋವುಗಳ ಹತ್ಯೆ ಸಂಪೂರ್ಣ ನಿಷೇಧಿಸಲಾಗಿದ್ದು, ಎಮ್ಮೆ, ಕೋಣಗಳನ್ನು 13 ವರ್ಷದ ನಂತರ ವಧೆ ಮಾಡಬಹುದು. 14 ರಾಜ್ಯಗಳಲ್ಲಿ ಈ ಕಾನೂನು ಜಾರಿಯಲ್ಲಿದೆ ಎಂದರು.

    ಧರ್ಮದ ಬಣ್ಣ ಬಳಿಯಬೇಡಿ: ಕಾಂಗ್ರೆಸ್​ನ ಸಿ.ಎಂ.ಇಬ್ರಾಹಿಂ ಮಾತನಾಡಿ, ನಾಟಿ ತಳಿ ಹಸುಗಳ ಸಂರಕ್ಷಣೆ ಒಳ್ಳೆಯ ಉದ್ದೇಶವೇ. ಆದರೆ, ನೂತನ ವಿಧೇಯಕದಿಂದ ಮುಸ್ಲಿಂ ಸಮುದಾಯವನ್ನು ಹೆದರಿಸುತ್ತೇವೆ ಎಂಬುದನ್ನು ಒಪು್ಪವಂತಹದ್ದಲ್ಲ. ವಿಧೇಯಕಕ್ಕೆ ಧರ್ಮದ ಬಣ್ಣ ಬಳಿದು ಜಾರಿಗೆ ತರಲು ಹೋಗಬೇಡಿ. ಜಂಟಿ ಸದನ ಸಮಿತಿ ರಚಿಸಿ ಅಲ್ಲಿ ರ್ಚಚಿಸಿ ಎಂದು ಆಗ್ರಹಿಸಿದರು.

    ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಎನ್ನುತ್ತೀರಿ. ಆದರೆ, ನಿಮ್ಮದೇ ಸರ್ಕಾರವಿರುವ ಗೋವಾದಲ್ಲಿ ಗೋಮಾಂಸ ತಯಾರಿಕೆಗೆ ಉತ್ತೇಜನ ನೀಡುತ್ತೀರಿ. ಇಲ್ಲಿನ ಗೋವುಗಳು ನಿಮ್ಮ ಅಮ್ಮ ಎಂದಾದರೆ, ಗೋವಾದಲ್ಲಿರುವ ಗೋವುಗಳು ನಿಮಗೆ ಚಿಕ್ಕಮ್ಮ ಆಗುತ್ತವೆಯೇ? ಅವುಗಳ ರಕ್ಷಣೆಯನ್ನೂ ಮಾಡಿ. ಇದರಿಂದ ನಿಮಗೆ ಮತಗಳು ಬರುತ್ತವೆ ಎಂದು ತಿಳಿದರೆ, ಅದು ತಪು್ಪ. ಉಚಿತವಾಗಿ ಅಕ್ಕಿ ನೀಡಿದರೆ ಮತ ಬರುತ್ತದೆ ಎಂದುಕೊಂಡೆವು, ಆದರೆ ಅದಾಗಲಿಲ್ಲ. ಇದೂ ಕೂಡ ಹಾಗೆಯೇ ಆಗುತ್ತದೆ’ ಎಂದು ಹೇಳಿದರು.

    ಗೋಮಾಂಸ ರಫ್ತು ನಿಷೇಧಿಸಿ

    ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಗೋವುಗಳನ್ನು ಸಾಕುವುದಕ್ಕೆ 36 ಸಾವಿರ ಕೋಟಿ ರೂ. ಬೇಕಾಗುತ್ತದೆ. ಜಾಗತಿಕ ಚರ್ಮ ರಫ್ತಿನಲ್ಲಿ ಭಾರತದ ಪಾಲು ಶೇ. 13 ಇದೆ. 30 ಲಕ್ಷ ಉದ್ಯೋಗ ಅದರಿಂದ ಸೃಷ್ಟಿಯಾಗಿದೆ. ಇನ್ನು ಆ ಉದ್ಯೋಗ ನಷ್ಟವಾಗಲಿದೆ. ಗೋಹತ್ಯೆ, ಗೋ ಸಾಗಣೆಯ ಬಗೆಗಿನ ಗದ್ದಲಗಳಲ್ಲಿ ಹಿಂದುಪರ ಸಂಘಟನೆಗಳಿದ್ದು, ಅದಕ್ಕೆ ಬಿಜೆಪಿ ಬೆಂಬಲವಿದೆ ಎಂದು ಹರಿಪ್ರಸಾದ್ ಹೇಳಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿದರು. ಕೊನೆಗೆ ಸಭಾಪತಿ ಪ್ರಾಣೇಶ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

    ಉತ್ತಮ ಉದ್ದೇಶ ಎಂದ ಕಾಂಗ್ರೆಸ್ ಸದಸ್ಯ: ಕಾಂಗ್ರೆಸ್​ನ ಎಸ್.ರವಿ, ಗೋವುಗಳ ರಕ್ಷಣೆಗೆ ಜಾರಿಗೆ ತರುತ್ತಿರುವ ವಿಧೇಯಕ ಉತ್ತಮ ಉದ್ದೇಶದಿಂದ ಕೂಡಿದೆ. ಆದರೆ ಹೋರಿ ಕರು ಸಾಕುವುದಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ವಿಧೇಯಕವನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದರು.

    ಗದ್ದಲದ ನಡುವೆ ಅಂಗೀಕಾರ

    ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಗದ್ದಲವೆಬ್ಬಿಸಿದರು. ಅಲ್ಲದೆ, ವಿಧೇಯಕದ ಪ್ರತಿಯನ್ನು ಹರಿದು ಸಭಾಪತಿಗಳ ಪೀಠದ ಮುಂದೆ ಎಸೆದು, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು. ಈ ಗೊಂದಲದ ನಡುವೆಯೇ ಸಚಿವ ಪ್ರಭು ಚವ್ಹಾಣ್ ವಿಧೇಯಕ ಮಂಡಿಸಿದರೆ, ಸಭಾಪತಿ ಪ್ರಾಣೇಶ್ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು.

    ಹೊರನಡೆದ ಹೊರಟ್ಟಿ: ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆಗೆ ಸಭಾಪತಿ ಪ್ರಾಣೇಶ್ ಸೂಚಿಸುತ್ತಿದ್ದಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗದ್ದಲವೆಬ್ಬಿಸಿದರು. ಆದರೆ, ಜೆಡಿಎಸ್​ನ ಸಭಾಪತಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಸದನದಿಂದ ಹೊರನಡೆದು ಗದ್ದಲದಿಂದ ದೂರವುಳಿದರು.

    ದಲಿತರಿಗೆ ಅವಕಾಶ ನೀಡಿ: ವಿಧೇಯಕ ಕುರಿತಂತೆ ಚರ್ಚೆ ಸಾಕು ಎಂಬ ಬಗ್ಗೆ ಮಾತುಗಳು ಕೇಳಿಬಂದಾಗ, ಕಾಂಗ್ರೆಸ್​ನ ಆರ್.ಬಿ.ತಿಮ್ಮಾಪೂರ್, ವಿಧೇಯಕದಿಂದ ದಲಿತರಿಗೆ ಅನ್ಯಾಯವಾಗುತ್ತದೆ. ಆ ಸಮುದಾಯದಿಂದ ಬಂದಿರುವ ನನಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸಭಾಪತಿಯವರಲ್ಲಿ ಆಗ್ರಹಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಪ್ರಾಣೇಶ್, ‘ಸದನದಲ್ಲಿ ಜಾತಿ, ಧರ್ಮವನ್ನು ತರಬೇಡಿ ಎಂದು ಕಿವಿ ಮಾತು ಹೇಳಿದರು.

    ಬಜೆಟ್​ನಲ್ಲಿ ಅನುದಾನ

    ರಾಜ್ಯದಲ್ಲಿ 184 ಗೋಶಾಲೆಗಳಿದ್ದು, 50 ಸಾವಿರ ಜಾನುವಾರುಗಳನ್ನು ರಕ್ಷಿಸಲಾಗುತ್ತಿದೆ. ಪ್ರತಿ ಜಾನುವಾರಿಗೆ ನಿತ್ಯ 17.50 ರೂ. ವ್ಯಯಿಸಲಾಗುತ್ತಿದೆ. ಆ ಗೋಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ವಾರ್ಷಿಕ 2 ಲಕ್ಷ ಜಾನುವಾರುಗಳ ಸಂರಕ್ಷಣೆಗೆ ನಿರ್ಧರಿಸಲಾಗುವುದು. ಅದರ ಜತೆಗೆ ಹುಲ್ಲುಗಾವಲು ನಿರ್ಮಾಣ ಸೇರಿ ಇನ್ನಿತರ ಕಾರ್ಯಕ್ರಮ ರೂಪಿಸ ಲಾಗುವುದು. ಬಜೆಟ್​ನಲ್ಲಿ ಅದೆಲ್ಲದಕ್ಕೂ ಅನುದಾನ ಮೀಸಲಿಡಲಾಗುವುದು. ಕಾನೂನು ಉಲ್ಲಂಘಿಸಿದವರಿಗೆ ಮೂರರಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1ರಿಂದ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಂತಾರಾಜ್ಯ ಸಾಗಣೆ ನಿಷೇಧಿಸಲಾಗುತ್ತದೆ. ಪ್ರಕರಣ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಕೃಷಿ ಚಟುವಟಿಕೆ, 15 ಕಿ.ಮೀ. ವ್ಯಾಪ್ತಿಯ ಸಾಗಣೆ, ಎಪಿಎಂಸಿ ಇಲ್ಲವೆ ಬೇರೆಡೆ ಜರುಗುವ ಮೇಳಗಳಿಗೆ ಮಾರಾಟಕ್ಕೆ ಒಯ್ಯಲು ಪಶುವೈದ್ಯರಿಂದ ಪರವಾನಗಿ ಪಡೆಯಬೇಕು ಎಂಬ ನಿಬಂಧನೆ ವಿಧಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts