More

    ಅಂತರಂಗ: ಕವಿಯ ಜಗದಲಿ ದಿಟವ ಕಾಣದಾತನೆ ಕುರುಡ

    ಅಂತರಂಗ: ಕವಿಯ ಜಗದಲಿ ದಿಟವ ಕಾಣದಾತನೆ ಕುರುಡಡಿ.ವಿ.ಜಿ.ಯವರು ಈ ಸಾಲಿನಲ್ಲಿ ಯಾರು ಕುರುಡನೆಂದು ಹೇಳುತ್ತಿದ್ದಾರೆ. ಕವಿಯ ಜಗದಲಿ ಅಂದರೆ, ಜ್ಞಾನಿಗಳ ಜಗತ್ತಿನಲ್ಲಿ ಎಂದರ್ಥ. ಸಂಸ್ಕೃತದಲ್ಲಿ ಕವಿ ಎಂದರೆ ಆತ್ಮಜ್ಞಾನಿಯೆಂದರ್ಥ. ಕಾಲಾಂತರದಲ್ಲಿ ಸಾಹಿತ್ಯವನ್ನು ರಚಿಸುವವನನ್ನು ಕವಿಯೆನ್ನಲಾ ಯಿತು. ಸಾಹಿತಿ ಕೂಡ ಕವಿ, ಸಾಮಾನ್ಯ ಜನರು ಕಾಣದ್ದನ್ನು ತನ್ನ ಜ್ಞಾನಚಕ್ಷುವಿನಿಂದ ಕಾಣುತ್ತಾನೆ. ಹೀಗಾಗಿ ಆತ್ಮಜ್ಞಾನಿಗಳ ಹಾಗೂ ಸಾಹಿತಿಗಳ ಜಗತ್ತಿನಲ್ಲಿ ನಿಜವನ್ನು ಯಾರು ಕಾಣುವುದಿಲ್ಲವೊ ಆತನನ್ನು ಕುರುಡನೆಂದು ತಿಳಿಯಬೇಕು. ಕಣ್ಣಿದ್ದ ಮಾತ್ರಕ್ಕೆ ಎಲ್ಲವನ್ನೂ ಅರಿಯುತ್ತೇವೆ ಎಂಬುದು ಭ್ರಮೆ. ಸಾಮಾನ್ಯವಾಗಿ ನಾವು ಕಾಣುವುದು ತೋರಿಕೆಯನ್ನು.

    ಅಂದರೆ ಮೇಲ್ಮೆಯನ್ನು ಮಾತ್ರ. ವಾಸ್ತವವನ್ನು ಕಾಣದಿರುವುದರಿಂದ ನಾವೆಲ್ಲರೂ ಕಣ್ಣಿದ್ದರೂ ಕುರುಡರೇ. ನಾವು ಕಾಣದ್ದನ್ನು ಅವರು ಕಾಣುತ್ತಾರೆ. ಆತ್ಮಜ್ಞಾನಿಗಳು ಬದುಕುವ ರೀತಿ ನಮಗೆ ದಾರಿದೀಪವಾಗಬೇಕು. ಎಲ್ಲ ಸೌಕರ್ಯಗಳಿದ್ದರೂ ಸರಳವಾದ ಜೀವನಶೈಲಿ ಮಾದರಿಯಾಗಬೇಕು. ಉಪನಿಷತ್ತುಗಳಲ್ಲಿ ಆತ್ಮಜ್ಞಾನಿಗಳನ್ನು ಕವಿಯೆಂದು ಸಂಬೋಧಿಸಲಾಗಿದೆ. ಅವರು ಕ್ರಾಂತದಶಿರ್ಗಳು. ಅಂದರೆ ಅಗೋಚರವಾದುದನ್ನು ಕಾಣುವವರು ಎಂದರ್ಥ. ಹೀಗಾಗಿ ಆತ್ಮಜ್ಞಾನಿಗಳು ಅಥವಾ ಕವಿಗಳು ಹೇಳುವ ವಾಸ್ತವದ ಸತ್ಯಗಳು ನಮಗೆ ಹಲವಾರು ಬಾರಿ ನಂಬಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿರುವ ಅಜ್ಞಾನ. ಆದರೆ ನಾವು ಅದನ್ನು ಒಪ್ಪಲು ತಯಾರಿಲ್ಲ.

    ಹೀಗಾಗಿ ಡಿ.ವಿ.ಜಿ.ಯವರು ನಮ್ಮಂತಹ ಜನರನ್ನು ಕುರುಡರು ಎಂದಿದ್ದಾರೆ. ಈ ಪ್ರಪಂಚದಲ್ಲಿ ಸಾಮಾನ್ಯ ಜನ ಆತ್ಮಜ್ಞಾನಿಗಳನ್ನು ಹಾಗೂ ಕವಿಗಳನ್ನು ಹುಚ್ಚರು ಎಂಬ ಪಟ್ಟವನ್ನು ಕೊಟ್ಟು ತಮ್ಮ ಅಜ್ಞಾನವನ್ನು ತಾವಾಗಿಯೇ ಪ್ರದಶಿರ್ಸುತ್ತಾರೆ. ಚೆನ್ನಾಗಿ ಕಾಣುವ ಕಣ್ಣುಗಳಿದ್ದರೂ ನಿಜವನ್ನು ಅರಿಯದವರಾಗಿರುವುದರಿಂದ ನಾವೆಲ್ಲರೂ ಕುರುಡರಾಗಿದ್ದೇವೆ. ಸಾಹಿತ್ಯದ ಅಧ್ಯಯನದಿಂದ, ಆತ್ಮಜ್ಞಾನಿಗಳ ಸಹವಾಸದಿಂದ ಮತ್ತೆ ನಾವು ಕಾಣುವವರಾಗಬಹುದು. ಈ ನಿಟ್ಟಿನಲ್ಲಿ ಯಾವ ವ್ಯಕ್ತಿ ಬದುಕನ್ನು ಮುಂದೆ ಸಾಗಿಸುತ್ತಾನೊ ಆತ ಜೀವನದಲ್ಲಿ ಅನಂತ ಶಾಂತಿಯನ್ನು ಪಡೆದು ಆನಂದಿಸುತ್ತಾನೆ. ಉಳಿದವರು ಕಣ್ಣಿದ್ದರೂ ಸಾಯುವವರೆಗೆ ಕುರುಡರಾಗಿಯೇ ಜೀವಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts