More

    ಮುಚಖಂಡಿ ಕೆರೆ ತುಂಬಿಸಲು ಮತ್ತೊಂದು ಯೋಜನೆ

    ಬಾಗಲಕೋಟೆ: ಮುಚಖಂಡಿಯಲ್ಲಿ 141 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ದೊಡ್ಡ ಕೆರೆ. ಈಗಲೂ ಕೆರೆ ತಡೆಗೋಡೆಯಲ್ಲಿ ಒಂದೇ ಒಂದು ಸಣ್ಣ ಬಿರುಕು ಸಹ ಕಾಣಿಸಿಲ್ಲ. ಒಂದು ಕಲ್ಲು ಸಹ ಸಡಿಲಗೊಂಡಿಲ್ಲ! ಆದರೆ, ನಮ್ಮ ಇಂದಿನ ಇಂಜಿನಿಯರ್‌ಗಳು ರೂಪಿಸಿದ ಯೋಜನೆ ಅನುಷ್ಠಾನಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಕೆರೆ ತುಂಬಲು ಸಾಧ್ಯವಾಗಿಲ್ಲ. ಹಿಂದಿನ ಅಧಿಕಾರಿಗಳು ಮಾಡಿರುವ ಎಡವಟ್ಟು ಪಕ್ಕಕ್ಕಿಟ್ಟು ಮತ್ತೆ ಕೆರೆ ತುಂಬಿಸಲು 45 ಕೋಟಿ ರೂ. ವೆಚ್ಚದ ಹೊಸ ಯೋಜನೆ ಆರಂಭವಾಗಿದೆ.

    750 ಎಕರೆ ವಿಸ್ತಾರವಾದ ದೊಡ್ಡ ಕೆರೆಯನ್ನು 1882ರಲ್ಲಿ ನಿರ್ಮಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೃಹತ್ ಕೆರೆ ತುಂಬಿದ್ದನ್ನು ಇಲ್ಲಿನ ಜನರು ಕಂಡಿಲ್ಲ. ಎರಡು ಗುಡ್ಡಗಳ ನಡುವೆ ಇರುವ ಈ ಕೆರೆ ತುಂಬಿದರೆ ಬಾಗಲಕೋಟೆ ತಾಲೂಕಿನ 40-50 ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಬತ್ತಿರುವ ಕೊಳವೆ ಬಾವಿಗಳು ರೀಚಾರ್ಜ್ ಆಗುತ್ತವೆ. ಈ ಕೆರೆಯನ್ನು ತುಂಬಿಸಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳದ್ದಾಗಿದೆ.

    ಬಾಗಲಕೋಟೆ ಕಣ್ಣಳತೆಯಲ್ಲಿರುವ ಘಟಪ್ರಭ ಹಿನ್ನೀರು ಎತ್ತಿ ಕೆರೆ ತುಂಬಿಸಲೆಂದು ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕರು ಹಾಗೂ ಹಾಲಿ ಶಾಸಕ ಎಚ್.ವೈ.ಮೇಟಿ ಯೋಜನೆ ರೂಪಿಸಿದರು. ಬಿಟಿಡಿಎಯಿಂದ 12 ಕೋಟಿ ರೂ. ಸಹ ಖರ್ಚು ಮಾಡಿದರು. ಆದರೆ, ನಮ್ಮ ತಜ್ಞ ಇಂಜನಿಯರ್‌ಗಳು ಅದು ಹೇಗೆ ಪ್ಲಾೃನ್ ಮಾಡಿದರೋ ಗೊತ್ತಿಲ್ಲ. 12 ಕೋಟಿ ರೂ. ಖರ್ಚು ಆಗಿದ್ದೆ ಬಂತು, ಒಂದೇ ಒಂದು ಸಲ ಕೆರೆ ತುಂಬಲಿಲ್ಲ, ತೆರಿಗೆಯ 12 ಕೋಟಿ ರೂ. ಹರೋಹರ ಮಾಡಿಬಿಟ್ಟರು.

    ಹಿಂದಿನ ಸರ್ಕಾರದಲ್ಲಿ ಹೊಸ ಯೋಜನೆ !

    ಐತಿಹಾಸಿಕ ಮುಚಖಂಡಿ ಕೆರೆ ತುಂಬಿಸುವ 12 ಕೋಟಿ ರೂ. ಯೋಜನೆ ಹರೋಹರ ಆಗಿದ್ದರಿಂದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕ ಆಗಿದ್ದ ವೀರಣ್ಣ ಚರಂತಿಮಠ ಮತ್ತೊಂದು ಪ್ಲಾೃನ್ ಮಾಡಿಸಿದರು. ಹಿಂದೆ ಆಗಿದ್ದ ಎಡವಟ್ಟು ಮರುಕಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಣ್ಣ ನೀರಾವರಿ ಇಲಾಖೆಯಿಂದ 49 ಕೋಟಿ ರೂ. ಪ್ಲಾೃನ್‌ಗೆ ಸರ್ಕಾರ ಒಪ್ಪಿಗೆ ಕೊಟ್ಟಿತ್ತು. ಟೆಂಡರ್ ಸಹ ಆಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ಆಗಿರಲಿಲ್ಲ. ಇದೀಗ ಇಂಜಿನಿಯರ್‌ಗಳು ಕೆಲಸ ಆರಂಭ ಮಾಡುತ್ತಿದ್ದಾರೆ.

    ಘಟಪ್ರಭಾ ಹಿನ್ನೀರಿನಲ್ಲಿ ಈ ಹಿಂದೆ ನಿರ್ಮಿಸಿದ್ದ ಜಾಕ್‌ವೆಲ್ ಬಳಿ ಮತ್ತೊಂದು ಜಾಕ್‌ವೆಲ್ ನಿರ್ಮಾಣ ಮಾಡಿ ಅಲ್ಲಿಂದ 7 ಕಿ.ಮೀ. ದೂರದಲ್ಲಿರುವ ಮುಚಖಂಡಿ ಕೆರೆಗೆ 950 ಎಂಎಂ ವ್ಯಾಸದ ಪೈಪ್‌ಗಳನ್ನು ಹಾಕಿ ನೀರು ಎತ್ತಿ ಕೆರೆ ತುಂಬಿಸುವ ಯೋಜನೆ ಇದಾಗಿದೆ. 90 ರಿಂದ 120 ದಿನ ನಿರಂತರ ನೀರು ತುಂಬಿಸಿದರೆ ಕೆರೆಯಲ್ಲಿ 0.276 ಟಿಎಂಸಿ ನೀರು ಸಂಗ್ರಹವಾಗಲಿದೆ. ನೀರು ಎತ್ತಲು 550 ಎಚ್‌ಪಿ ಸಾಮರ್ಥ್ಯದ ಮೋಟರ್‌ಗಳನ್ನು ಅಳವಡಿಸಲಾಗುತ್ತಿದೆ. ಈಗ ಕಾಮಗಾರಿ ಆರಂಭಿಸಿದರೆ ಮುಂದಿನ 18 ತಿಂಗಳು ಅವಧಿಯಲ್ಲಿ ಮುಕ್ತಾಯಗೊಳ್ಳಲಿದೆ. ಮಳೆಗಾಲದಲ್ಲಿ ಆಲಮಟ್ಟಿ ಹಿನ್ನೀರು ಬಾಗಲಕೋಟೆಯಲ್ಲಿ ಲಭ್ಯವಾಗುವ ಅವಧಿಯಲ್ಲಿ ಕೆರೆ ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಅಧಿಕಾರಿಗಳು ಹೇಳುತ್ತಾರೆ.

    20 ಎಕರೆ ನೀರು ತುಂಬಲಿಲ್ಲ

    ಹಳೇ ಯೋಜನೆ ಬಳಸಿ ಪ್ರಸಕ್ತ ವರ್ಷ ಮುಚಖಂಡಿ ಕೆರೆ ತುಂಬಿಸಲು ಚಾಲನೆ ನೀಡಲಾಗಿತ್ತು. ತಿಂಗಳುಗಟ್ಟಲೆ ನೀರು ಬಿಟ್ಟರೂ 20 ಎಕರೆ ಮಾತ್ರ ತುಂಬಿತು. ಆದರೆ, ಅಪಾರ ಹೂಳು ತುಂಬಿದ್ದರಿಂದ ಹಾಗೂ ಹೆಚ್ಚಿನ ನೀರು ಸಂಗ್ರಹ ಆಗದ್ದರಿಂದ ಸದ್ಯ ಕೆರೆ ಸಂಪೂರ್ಣ ಖಾಲಿಯಾಗಿದೆ. ಇದು ಏಳೆಂಟು ವರ್ಷಗಳಿಂದ ಮರುಕಳಿಸುತ್ತಿದೆ. ಮೊದಲ ಹಂತದ ಯೋಜನೆ ಅಡಿ ಒಂದೇ ಒಂದು ಸಲ ಕೆರೆ ಭರ್ತಿ ಆಗಿಲ್ಲ ಎನ್ನುವುದು ಯೋಜನೆ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈಗ 2ನೇ ಹಂತದಲ್ಲಿ 45 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈಗಲಾದರೂ ಯೋಜನೆ ಯಶಸ್ವಿ ಆಗಿ ಕೆರೆ ಭರ್ತಿ ಆಗಬೇಕು. ಮೊದಲ ಹಂತದಲ್ಲಿ ಅವೈಜ್ಞಾನಿಕವಾಗಿ ಯೋಜನೆ ಬಗ್ಗೆ ತನಿಖೆ ನಡೆಸಬೇಕು. ಯೋಜನೆ ವಿಫಲವಾಗಿದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ನಷ್ಟವನ್ನು ತುಂಬಿಸಿಕೊಳ್ಳಬೇಕು ಎಂದು ಕರವೇ ಮುಖಂಡ ಬಸವರಾಜ ಧರ್ಮಂತಿ ಆಗ್ರಹಿಸುತ್ತಾರೆ.

    ಪಿಕ್ನಿಕ್ಸ್ಥಳವಾಗಿ ಮಾರ್ಪಾಡು

    ಮತ್ತೊಂದೆಡೆ ಐತಿಹಾಸಿಕ ಕೆರೆ ತುಂಬಿಸುವ ಜತೆಗೆ ತಡೆಗೋಡೆ ಮುಂಭಾಗದ ಪ್ರದೇಶವನ್ನು ಪಿಕ್ನಿಕ್ ಸ್ಥಳವಾಗಿ ಮಾರ್ಪಡಿಸುವ ಕಾರ್ಯ ಸಹ ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಗೊಂಡಿದೆ. ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಐದು ಕೋಟಿ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಗಾರ್ಡನ್, ಕಾರಂಜಿ, ಮಕ್ಕಳಿಗೆ ಮನರಂಜನೆ ನೀಡುವ ವಿವಿಧ ಉಪಕರಣಗಳ ಅಳವಡಿಕೆ, ಮಿನಿ ಥೇಟರ್, ಪಾಥ್ ವೇ ಕಾಮಗಾರಿ ನಡೆದಿದೆ. ಮುಂದಿನ 2 ತಿಂಗಳಲ್ಲಿ ಕಾಮಗಾರಿಗಳೆಲ್ಲ ಮುಕ್ತಾಯಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಉದ್ಯಾನ ನಿರ್ಮಾಣ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನಗರಸಭೆ ಜೆಇ ನವೀದ್ ಖಾಜಿ ತಿಳಿಸಿದ್ದಾರೆ.

    ಮುಚಖಂಡಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಕೋಟಿ ಕೋಟಿ ರೂ. ನೀರಿನಂತೆ ಖರ್ಚು ಮಾಡಿದರೂ ಕೆರೆಯಲ್ಲಿ ನೀರು ಮಾತ್ರ ತುಂಬಿಸಲು ಆಗಿಲ್ಲ. 12 ಕೋಟಿ ರೂ. ಖರ್ಚು ಮಾಡಿದ್ದರೂ ಕೆರೆ ಏಕೆ ತುಂಬಲು ಆಗಿಲ್ಲ? ಯೋಜನೆ ರೂಪಿಸಿದ ಅಧಿಕಾರಿಗಳು ಅದು ಹೇಗೆ ನೀಲನಕ್ಷೆ ಸಿದ್ಧಪಡಿಸಿದ್ದರು? ಜನರ ದುಡ್ಡು ಹೋಮ ಮಾಡಿದ್ದಕ್ಕೆ ಯಾರು ಹೊಣೆ? ಈಗ ಮತ್ತೆ ಹೊಸ ಯೋಜನೆ? ಹಿಂದಿನ ವೈಫಲ್ಯಕ್ಕೆ ಯಾರು ಹೊಣೆ? ಈ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
    ರಮೇಶ ಬದ್ನೂರ, ವಕೀಲರು, ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts