ಬಿ ಕೂಲ್​... ತಾಳ್ಮೆ ಎಂಬ ಕೀಲಿಕೈ: ಧನಾತ್ಮಕ ಸಾಧನೆಯ ಸೂತ್ರ

Be Cool
Published on

| ಭಾರತಿ ಎ. ಕೊಪ್ಪ

ದೀಪ್ತಿಗೆ ಪ್ರತಿದಿನ ಮಗನನ್ನು ಸದ್ಧತೆ ಮಾಡಿ ಶಾಲೆಗೆ ಕಳಿಸುವಾಗಲೂ ಒಂದಿಷ್ಟು ಗಡಿಬಿಡಿ. ಸದಾ ಬಿಡುವಿಲ್ಲದ ಕೆಲಸ, ಅದರ ನಡುವೆ ಮಗನದು ಬೆಳಗಿನ ತಿಂಡಿಗೆ ಭಾರೀ ಹಠ. ತಿಂಡಿಯ ವಿಚಾರದಲ್ಲಿ ದಿನವೂ ರಂಪ. ದೀಪ್ತಿಯ ತಾಳ್ಮೆಯು ಕೈಮೀರಿ ಮಗನಿಗೆ ಗದರಿಸಿ ಅಂತೂ ಇಂತೂ ಶಾಲಾ ಬಸ್ ಹತ್ತಿಸಿ ಬಂದು ಇನಿತು ಸಮಾಧಾನವಾಗಿ ಕುಳಿತುಕೊಳ್ಳುತ್ತಾಳೆ. ಡೈನಿಂಗ್ ಟೇಬಲ್ ನತ್ತ ಕಣ್ಣು ಹೊರಳಿದಾಗ ಮಗನ ಲಂಚ್ ಬ್ಯಾಗ್ ಅಲ್ಲೇ ಉಳಿದಿತ್ತು! ಇದರಿಂದಾಗಿ ಮಧ್ಯಾಹ್ನ ಶಾಲೆಗೆ ಊಟ ತಲುಪಿಸುವ ಮತ್ತೊಂದು ಕೆಲಸ ಹೆಚ್ಚುವರಿಯಾಯಿತು! ಸಹನೆಯ ಕಟ್ಟೆಯೊಡೆದು ಅನಾವಶ್ಯಕ ಗೊಂದಲ ಮಾಡಿಕೊಂಡಾಗ ಈ ರೀತಿಯ ಅನುಭವಗಳು ಎಲ್ಲರಿಗೂ ಆಗುವಂತದೇ ಆಗಿದೆ.

ತಾಳ್ಮೆ ಎಂಬ ಕೀಲಿಕೈ: ಯಾವುದೇ ಕೆಲಸದಲ್ಲಿ ವಿಳಂಬ ಅಥವಾ ತೊಂದರೆ ಆದಾಗ ಮತ್ತು ಕಷ್ಟಕರ ಸನ್ನಿವೇಶವನ್ನೂ ಸಮರ್ಪಕವಾಗಿ ನಿಭಾಯಿಸುವಲ್ಲಿ ತಾಳ್ಮೆ ಪ್ರಮುಖ ಪಾತ್ರ ವಹಿಸುತ್ತದೆ. ಅತಿಯಾದ ಒತ್ತಡದಲ್ಲಿದ್ದಾಗಲೂ ಕೋಪಗೊಳ್ಳದೇ, ಋಣಾತ್ಮಕವಾಗಿ ಪ್ರತಿಕ್ರಿಯಿಸದೇ ಇರಲು ತಾಳ್ಮೆಯ ಮನಸ್ಥಿತಿ ಅತ್ಯಗತ್ಯ. ಕೌಟುಂಬಿಕ ಜೀವನ, ಔದ್ಯೋಗಿಕ ಕ್ಷೇತ್ರ ಹಾಗೂ ಯಾವುದೇ ರಂಗದಲ್ಲಿ ಯಶಸ್ಸು ಪಡೆಯಲು ತಾಳ್ಮೆ ಕೀಲಿಕೈಯಾಗಿದೆ.

ಪೌರಾಣಿಕ ಕಥೆಗಳಲ್ಲೂ ಗೆಲುವು

ಒಳಿತಿಗಾಗಿ ಕಾಯುವ ತಾಳ್ಮೆ ಗೆಲುವನ್ನು ತಂದುಕೊಡುತ್ತದೆ ಎಂಬುದು ಪುರಾಣದ ಕಥೆಗಳಲ್ಲೂ ಉಲ್ಲೇಖವಾಗಿದೆ. ರಾವಣನಿಂದ ಅಪಹರಣ ಕ್ಕೊಳಗಾಗಿ ಅಶೋಕವನದಲ್ಲಿದ್ದ ಸೀತಾಮಾತೆ ತಾಳ್ಮೆಯ ಪ್ರತೀಕದಂತಿದ್ದಳು. ಅವಳ ತಾಳ್ಮೆ ಮತ್ತು ಧೈರ್ಯದಿಂದ ಕಾಯುವಿಕೆಯ ಫಲವಾಗಿ ರಾವಣನ ಸೆರೆಯಿಂದ ಮರಳಿ ಶ್ರೀರಾಮನನ್ನು ಸೇರಿದಳು. ಕುಂತಿ ಮತ್ತು ಗಾಂಧಾರಿಯ ಕಥೆಯೂ ತಾಳ್ಮೆಯ ಮಹತ್ವವನ್ನು ಸಾರುತ್ತದೆ. ಕುಂತಿಗಿಂತ ಮೊದಲು ತಾನು ಮಕ್ಕಳನ್ನು ಪಡೆಯಬೇಕು ಎಂಬ ಆತುರದಲ್ಲಿ ಹೊಟ್ಟೆಯನ್ನು ಗಾಂಧಾರಿಯು ಬಲವಾಗಿ ಅದುಮಿದ ಫಲವಾಗಿ ಭ್ರೂಣವು ನೂರು ತುಂಡು ಗಳಾಗಿ, ಅವುಗಳನ್ನು ನೂರು ಮಡಕೆಯಲ್ಲಿಟ್ಟದ್ದು, ನಂತರ ಆ ಮಕ್ಕಳು ದುಷ್ಟರಾಗಿ ಬೆಳೆದದ್ದು... ಹೀಗೆ ಕಥೆ ಸಾಗುತ್ತದೆ. ಕುಂತಿಯ ತಾಳ್ಮೆಯ ಫಲವಾಗಿ ಸಹಜವಾಗಿ ಜನಿಸಿದ ಪಾಂಡವರು ಲೋಕ ಮನ್ನಣೆ ಪಡೆದದ್ದು ಈ ಎಲ್ಲಾ ಕಥೆಗಳು ತಾಳ್ಮೆಯ ಔಚಿತ್ಯವನ್ನು ಎತ್ತಿ ಹಿಡಿಯುತ್ತವೆ.

ತಾಯ್ತನದಲ್ಲಿ ಮುಖ್ಯ

ಗರ್ಭಾವಸ್ಥೆಯಿಂದ ಮಗುವಿನ ಜನನದವರೆಗೆ ಎಷ್ಟು ತಾಳ್ಮೆಯಿಂದ ಕಾಯುತ್ತೇವೆಯೋ ಅಂತೆಯೇ ಮಕ್ಕಳನ್ನು ಸಾಕಿ ಸಲುಹುವುದರಲ್ಲಿ ತಾಳ್ಮೆ ಬಹು ಮುಖ್ಯವಾದುದು. ಮಗುವಿನ ಆಗಮನದೊಂದಿಗೆ ತಾಯಿಗೆ ರಾತ್ರಿಯ ನಿದ್ರೆಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ. ಮಗುವಿನ ಅಳು-ನಗು ಹೀಗೆ ಮಗುವಿನ ಪ್ರತಿಯೊಂದು ಭಾವನೆಗಳಿಗೂ ಸ್ಪಂದಿಸುತ್ತಾ ಹೆಚ್ಚು ಸಮಯ ಮಗುವಿಗಾಗಿ ಮೀಸಲಿಡಬೇಕಾಗುತ್ತದೆ. ಈ ಎಲ್ಲಾ ಹಂತಗಳಲ್ಲಿಯೂ ತಾಳ್ಮೆ ಅತ್ಯಗತ್ಯ. ಮಗು ಕೇಳುವ ಕುತೂಹಲದ ಅನೇಕ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಮೂಲಕ ಮಗುವಿನ ಕಲ್ಪನಾ ಹಂದರವನ್ನು ವಿಸ್ತರಿಸಲು ಸಹಕರಿಸಬೇಕಾಗುತ್ತದೆ. ಮಕ್ಕಳು ಶಾಲಾ ಹಂತಕ್ಕೆ ಬಂದಾಗ ತಾಯಿಯಂದಿರು ಪ್ರತಿಯೊಂದು ಜವಾಬ್ದಾರಿ ನಿರ್ವಹಿಸುವಾಗಲೂ ಒತ್ತಡ, ಕೋಪಗಳಿಗೆ ಒಳಗಾಗದೆ ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡುತ್ತಾ ಸಾಗಬೇಕಾಗುತ್ತದೆ.

ಕ್ಯಾಪ್ಟನ್ ಕೂಲ್

ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಒಬ್ಬ ನಾಯಕಿಯಾಗಿ ಔದ್ಯೋಗಿಕ, ಸಾಮಾಜಿಕ ಮುಂತಾದ ಎಲ್ಲಾ ರಂಗಗಳಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ತಮ್ಮ ಮುಂದಾಳತ್ವದಲ್ಲಿ ಇತರರ ಮೂಲಕ ಯಾವುದೇ ಕೆಲಸ ತೆಗೆದು ಕೊಳ್ಳುವಾಗಲೂ ಕ್ಯಾಪ್ಟನ್ ಕೂಲ್ ಎಂಬಂತೆ ಕಾರ್ಯನಿರ್ವಹಿಸಿದರೆ ಹೆಚ್ಚು ಫಲಪ್ರದವಾಗುತ್ತದೆ. ಒಬ್ಬ ಫ್ಯಾಷನ್ ಡಿಸೈನರ್ ಆಗಿ ಭಾರತದ ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾದ ರಿತು ಕುಮಾರ್ ರವರನ್ನು ಪದ್ಮಶ್ರೀ ಪುರಸ್ಕಾರದಂತಹ ಮಹೋನ್ನತ ಗೌರವದತ್ತ ಕರೆದೊಯ್ಯುವಲ್ಲಿ ಅವರ ತಾಳ್ಮೆಯ ಕಾಯುವಿಕೆ ಪ್ರಮುಖ ಪಾತ್ರವಹಿಸಿತು. ಮೊದಲಿಗೆ ಕೇವಲ ವಧುವಿನ ಔಪಚಾರಿಕ ಉಡುಪುಗಳಲ್ಲಿ ಪರಿಣತಿ ಹೊಂದಿದ್ದು, ದಶಕಗಳ ಕಾಯುವಿಕೆಯ ನಂತರ ಅವರು ಅಂತಿಮವಾಗಿ ಜಾಗತಿಕ ಮಾರುಕಟ್ಟೆಗೆ ಬಂದು ಯಶಸ್ವಿ ಉದ್ಯಮಿ ಎನಿಸಿದರು.

ಬಲಹೀನತೆಯಲ್ಲ

ಹೆಣ್ಣು ತಾಳ್ಮೆಯ ಮನಸ್ಥಿತಿ ಹೊಂದಿದ್ದಾಳೆಂದರೆ ಅದನ್ನ ಬಲಹೀನತೆ, ದೌರ್ಬಲ್ಯ ಎಂದು ಪರಿಗಣಿಸಲಾಗದು. ತನಗೆ ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯ ಉಂಟಾದರೆ ಅದನ್ನು ನ್ಯಾಯಯುತವಾಗಿ ಪ್ರಶ್ನಿಸುವ, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂಬುದನ್ನು ಮರೆಯುವಂತಿಲ್ಲ. ತಾಳ್ಮೆ ಎಂಬುದು ಧನಾತ್ಮಕ ಸಾಧನೆಗೆ ಸೂತ್ರವಾಗಬೇಕೇ ಹೊರತು, ಶೋಷಣೆಗೆ ಒಳಗಾಗುವ, ಕತ್ತಲೆಯ ಬಾಳಿಗೆ ಒಡ್ಡಿಕೊಳ್ಳುವ ಸೇತುವಾಗಬಾರದು.ತಾಳ್ಮೆಯು ಯಶಸ್ಸಿನ ಅತ್ಯುತ್ತಮ ಸಾಧನವಾಗಿದೆ ಎಂದು బిన్నాగి తిళియెరి ఎంబ ವಿವೇಕವಾಣಿಯಂತೆ ಯಶಸ್ಸಿನ ಉತ್ತುಂಗಕ್ಕೆ ಏರಲು ತಾಳ್ಮೆಯನ್ನು ನಮ್ಮದಾಗಿಸಿಕೊಳ್ಳೋಣ.

ಸಹೋದ್ಯೋಗಿಗಳ ಜತೆ ಬಾಂಧವ್ಯ

ನಾವು ಕೆಲಸ ಮಾಡುವ ಸ್ಥಳದಲ್ಲಿ ಅತಿ ಒತ್ತಡದ ಕೆಲಸ ಇದ್ದಾಗ ನಮ್ಮ ತಾಳ್ಮೆ ಕೈತಪ್ಪಿ ಹೋಗುತ್ತದೆ. ಆಗ ಅನವಶ್ಯಕ ಸಿಡುಕುತನ, ಒರಟು ಮಾತು ಇವೆಲ್ಲವೂ ನಮಗರಿವಿಲ್ಲದಂತೆ ನಮ್ಮಿಂದ ವ್ಯಕ್ತವಾಗುತ್ತದೆ. ಈ ರೀತಿಯ ವರ್ತನೆಯಿಂದ ಅಹಿತಕರ ವಾತಾವರಣ ಉಂಟಾಗುತ್ತದೆ. ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯ ದೂರವಾಗಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ. ಒತ್ತಡದ ಸನ್ನಿವೇಶದಲ್ಲಿ ತಾಳ್ಮೆಯಿಂದ ನಮ್ಮ ಕೆಲಸಗಳನ್ನು ನಿರ್ವಹಿಸಿದರೆ ಆ ಕೆಲಸದಲ್ಲಿ ಗುಣಾತ್ಮಕ ಪರಿಣಾಮ ಕಾಣಬಹುದು. ಅದಲ್ಲದೆ ಔದ್ಯೋಗಿಕ ನೆಲೆಯಲ್ಲಿ ಸಹೋದ್ಯೋಗಿಗಳೊಂದಿಗಿನ ಉತ್ತಮ ಬಾಂಧವ್ಯವು ತಂಡ ಸ್ಪೂರ್ತಿಯನ್ನು ಹೆಚ್ಚಿಸಿ,ಪ್ರತಿ ಹಂತದಲ್ಲಿಯೂ ಯಶಸ್ಸನ್ನು ತಂದುಕೊಡುತ್ತದೆ.

ಕ್ರೀಡಾ ಸಾಧನೆಗೂ ಮೆಟ್ಟಿಲು

ಮಹಿಳೆಯರು ಕ್ರೀಡಾ ರಂಗದಲ್ಲಿ ಮಹತ್ತರ ಛಾಪು ಮೂಡಿಸುವುದು ಪ್ರಸ್ತುತ ಕಾಲಘಟ್ಟಕ್ಕೆ ಅತ್ಯವಶ್ಯಕವಾಗಿದೆ. ಕ್ರೀಡೆಗಳು ದೈಹಿಕ ಕ್ಷಮತೆಯನ್ನು ಮಾತ್ರ ಬಯಸದೆ, ಮಾನಸಿಕ ದೃಢತೆಯನ್ನೂ ಬಯಸುತ್ತವೆ. ಮಾನಸಿಕ ದೃಢತೆಗೆ ತಾಳ್ಮೆ ಎಂಬುದು ಮೆಟ್ಟಿಲು ಇದ್ದಂತೆ. ಬಾಕ್ಸಿಂಗ್‌ನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಹೋರಾಡಿ ಗೆದ್ದವರು. ತಾಳ್ಮೆ ಮತ್ತು ಪರಿಶ್ರಮವೇ ಅವರ ಯಶಸ್ಸಿನ ಕೀಲಿಕೈ. ಅವರು ಬಡತನದೊಂದಿಗೆ ಹೋರಾಡುವುದರಿಂದ ಹಿಡಿದು ತಾಯಿ, ಮಗಳು... ಹೀಗೆ ಬಹುಪಾತ್ರಗಳನ್ನು ತಾಳ್ಮೆಯಿಂದ ನಿರ್ವಹಿಸುತ್ತಾ ಯಶಸ್ಸಿನ ದಡ ಸೇರಿದವರು. ಅಂತೆಯೇ ಪಿ.ಟಿ.ಉಷಾರವರು ಕೂಡ ನನ್ನ ಖ್ಯಾತಿ ಮತ್ತು ಗೌರವದ ಹಿಂದೆ ಪರಿಶ್ರಮ, ತಾಳ್ಮೆ ಮತ್ತು ಸಮರ್ಪಣೆಯ ಪಾತ್ರ ಮಹತ್ತರವಾದುದು ಎನ್ನುತ್ತಾರೆ. ಕ್ರೀಡಾ ಸ್ಫೂರ್ತಿಗೆ ಸೋಲನ್ನು ಗೆಲುವಾಗಿ ಪರಿವರ್ತಿಸುವ ಛಲದ ಜೊತೆಗೆ ಗೆಲುವಿಗಾಗಿ ಕಾಯುವ ತಾಳ್ಮೆಯೂ ಬೇಕು. ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕ್ರೀಡಾ ಸಾಧನೆಗೆ ತಾಳ್ಮೆ ಅತ್ಯಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net