More

    ಹನುಮಮಾಲೆ ವಿಸರ್ಜನೆ ಸಿದ್ಧತೆ ವಿಳಂಬ, ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ

    ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಡಿ.24ರಂದು ನಡೆಯಲಿರುವ ಹನುಮಮಾಲೆ ವಿಸರ್ಜನಾ ಕಾರ್ಯಕ್ರಮದ ವ್ಯವಸ್ಥೆ ನಿಧಾನಗತಿಯಲ್ಲಿದ್ದು, ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ವಿಳಂಬವಾಗುತ್ತಿದೆ.

    ಕೇರಳದ ಅಯ್ಯಪ್ಪಮಾಲೆಯಂತೆ ಹನುಮಮಾಲೆ ಕಾರ್ಯಕ್ರಮ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದು, 24 ಗಂಟೆಯಿಂದ 40ದಿನಗಳವರೆಗೆ ಕಠಿಣ ವ್ರತ ಕೈಗೊಳ್ಳುವ ಹನುಮಮಾಲೆ ಭಕ್ತರಿಗಾಗಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಸೇರಿ ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡಿನಿಂದ ಕನಿಷ್ಠ 60 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಭಜರಂಗದಳ, ವಿಶ್ವಹಿಂದು ಪರಿಷತ್, ಹಿಂದುಪರ ಸಂಘಟನೆ ನೇತೃತ್ವದಲ್ಲಿ ಬೆಟ್ಟದ ಮೇಲೆ ವಿಸರ್ಜನೆ ಧಾರ್ಮಿಕ ಸಭೆ ಜರುಗಲಿದ್ದು, ಭಕ್ತರಿಗಾಗಿ ಮೂಲ ಸೌರ್ಕರ್ಯ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಡಿ.22 ಮೂರು ದಿನ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಗಂಗಾವತಿಯಲ್ಲಿ ಡಿ.22ರಂದು ಸಂಕೀರ್ತನೆ ಯಾತ್ರೆ ಭಜರಂಗದಳದಿಂದ ಹಮ್ಮಿಕೊಳ್ಳಲಾಗಿದೆ.

    ಮೂಲ ಸೌಕರ್ಯವಿಲ್ಲ: ಬೆಟ್ಟದ ಮೇಲೆ ಕುಡಿವ ನೀರಿನ ಸಮಸ್ಯೆಯಿದ್ದು, ತಾಂತ್ರಿಕ ಕಾರಣಗಳಿಂದ ನೀರು ಸಿಗಲ್ಲ. ಬೆಟ್ಟದ ಕೆಳಗೆ ಶೌಚಗೃಹ ವ್ಯವಸ್ಥೆಯಿದ್ದರೂ, ಬೃಹತ್ ಸಂಖ್ಯೆಯ ಭಕ್ತರಿಗೆ ಸಾಕಾಗಲ್ಲ. ಸ್ನಾನಘಟ್ಟ ಇನ್ನೂ ನಿರ್ಮಿಸಿಲ್ಲ. ನದಿಯಲ್ಲಿ ನೀರಿನ ಕೊರತೆಯಿದೆ. ವಾಹನ ಪಾರ್ಕಿಂಗ್ ಸಮಸ್ಯೆಯಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಬೆಟ್ಟದ ಎರಡೂ ದಿಕ್ಕಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿದೆ. ಹನುಮನಹಳ್ಳಿ ಮತ್ತು ಆನೆಗೊಂದಿ ಬಳಿ ಖಾಸಗಿ ಒಡೆತನದ ಭೂಮಿ ಪಡೆಯಬೇಕಿದೆ. ಸಂಬಂಧಪಟ್ಟ ಮಾಲೀಕರೊಂದಿಗೆ ತಾಲೂಕಾಡಳಿತ ಸಕಾಲಕ್ಕೆ ಚರ್ಚಿಸದಿದ್ದರೆ ಸ್ಪಂದಿಸದಿದ್ದರೆ ಎರಡನೇ ಬೆಳೆಗಾಗಿ ಪಾರ್ಕಿಂಗ್ ಉದ್ದೇಶಿತ ಭೂಮಿಯಲ್ಲಿ ನೀರು ಹರಿಸುವ ಸಾಧ್ಯತೆಗಳಿವೆ. ಏಕಮುಖ ಸಂಚಾರಕ್ಕೆ ಅವಕಾಶವಿದ್ದು, ಹನುಮನಹಳ್ಳಿ ಮತ್ತು ನಂದಯ್ಯನಕ್ರಾಸ್ ಬಳಿ ಒಳ ರಸ್ತೆಯಿಂದ ವಾಹನ ಸಂಚರಿಸಲು ಅವಕಾಶ ಕಲ್ಪಿಸಬೇಕಿದೆ.

    ಬಿಗಿಬಂದೋಬಸ್ತ್: 6 ವರ್ಷಗಳ ಹಿಂದೆ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಗಂಗಾವತಿಯಲ್ಲಿ ಎರಡು ಕೋಮಿನ ನಡುವೆ ಸಂಘರ್ಷ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಬಂದೋಬಸ್ತ್ ಕೈಗೊಳ್ಳಬೇಕಿದೆ. ಸೂಕ್ಷ್ಮ ಪ್ರದೇಶ ಎಂದು ಪೊಲೀಸ್ ಇಲಾಖೆ ಗುರುತಿಸಿರುವ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ತಾತ್ಕಾಲಿಕ ಚೆಕ್‌ಪೋಸ್ಟ್ ಹಾಕಬೇಕಿದೆ. ವಾಹನ ಪಾರ್ಕಿಂಗ್ ಸ್ಥಳದಲ್ಲಿ ಸ್ನಾನಘಟ್ಟ, ಕುಡಿವ ನೀರಿನ ವ್ಯವಸ್ಥೆಯಾಗಬೇಕಿದ್ದು, ರಕ್ಷಣೆಗೆ ಪೊಲೀಸರನ್ನು ನಿಯೋಜಿಸಬೇಕಿದೆ. ಪ್ರಮುಖ ರಸ್ತೆ, ವೃತ್ತ ಮತ್ತು ಬೆಟ್ಟ ಹತ್ತುವ ಮತ್ತು ಇಳಿಯುವ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಬೇಕಿದ್ದು, ಕನಿಷ್ಠ 30 ಕ್ಯಾಮರಾಗಳು ಬೇಕಿವೆ. ಚಿಕ್ಕರಾಂಪುರ ಬಳಿ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಕನಿಷ್ಠ 20 ಕೌಂಟರ್ ತೆರೆಯಬೇಕಿದೆ. ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಗೆ ಸ್ವಯಂ ಸೇವಕರ ನೇಮಿಸಬೇಕಿದೆ.

    ನಿರ್ಧಾರ ಪ್ರಕಟಿಸದ ತಾಲೂಕಾಡಳಿತ

    ವಾರ್ಷಿಕ 2 ಕೋಟಿ ರೂ. ಆದಾಯ ಅಂಜನಾದ್ರಿ ಬೆಟ್ಟಕ್ಕೆ ಇದೆ. ಹನುಮಮಾಲೆ ವಿಸರ್ಜನೆ ಪ್ರಮುಖ ಕಾಯಕ್ರಮವಾಗಿದೆ. ಪ್ರತಿವರ್ಷ ಭಕ್ತರಿಗಾಗಿ ಒಂದು ಲಕ್ಷ ಲಡ್ಡು (ಪ್ರಸಾದ) ತಯಾರಿಕೆ ಯೋಜನೆಯಿದ್ದು, 80ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಸೇವೆ, ತೀರ್ಥದ ಬಾಟಲ್ ಮತ್ತು ಪ್ರಸಾದ ಮಾರಾಟ ವ್ಯವಸ್ಥೆಯಿಂದ 25ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಇದುವರೆಗೂ ಯಾವುದೇ ನಿರ್ಧಾರಕ್ಕೆ ಬಾರದಿರುವುದು, ಭಕ್ತರಲ್ಲಿ ಆತಂಕ ಶುರುವಾಗಿದೆ. ಹನುಮಮಾಲೆಗಾಗಿ ಒಮ್ಮೆಯೂ ವಿಎಚ್‌ಪಿ ಮತ್ತು ಭಜರಂಗದಳದ ಸದಸ್ಯರೊಂದಿಗೆ ತಾಲೂಕಾಡಳಿತ ಸಭೆ ಆಯೋಜಿಸಿಲ್ಲ. ಸಹಕಾರ ಕೋರಿಲ್ಲ. ಜಿಲ್ಲೆಯಲ್ಲಿ ಎರಡು ಸಭೆ ನಡೆಸಿದ ಜಿಲ್ಲಾಮಟ್ಟದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿಲ್ಲ. ಸ್ಥಳೀಯ ಶಾಸಕ 20 ದಿನಗಳಿಂದ ಕ್ಷೇತ್ರದಿಂದ ಹೊರಗಿದ್ದು, ಬೆಂಬಲಿಗರೇ ವ್ಯವಸ್ಥೆಗಾಗಿ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದಾರೆ.

    ವಿಸರ್ಜನೆ ಕಾರ್ಯಕ್ರಮ ಸಮೀಪಿಸುತ್ತಿದ್ದರೂ ಜಿಲ್ಲಾಡಳಿತ ಹಿಂದುಪರ ಸಂಘಟನೆಗಳೊಂದಿಗೆ ಸಭೆ ನಡೆಸಿಲ್ಲ. ಅಭಿಪ್ರಾಯ ಸಂಗ್ರಹಿಸಿಲ್ಲ. ಯಾವುದೇ ವ್ಯವಸ್ಥೆಯೂ ಕಂಡು ಬರುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಭಕ್ತರು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
    ವಿನಯ್ ಪಾಟೀಲ್ ವಿಎಚ್‌ಪಿ, ಜಿಲ್ಲಾ ಸಂಚಾಲಕ

    ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಪಾರ್ಕಿಂಗ್ ಸ್ಥಳ ಪರಿಶೀಲಿಸಲಾಗಿದೆ. ಚಿಕ್ಕರಾಂಪುರ ಬಳಿಯ ವೇದಪಾಠ ಶಾಲೆಯಲ್ಲಿ ಊಟದ ವ್ಯವಸ್ಥೆ ಕೈಗೊಳ್ಳಲಾಗುವುದು.
    ವಿಶ್ವನಾಥ ಮುರಡಿ ಪ್ರಭಾರ ತಹಸೀಲ್ದಾರ್, ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts