More

    ಪ್ರಾಣಿ, ಸಸ್ಯ ಭಾಗಗಳ ಅಕ್ರಮ ಮಾರಾಟ

    ಬೆಳಗಾವಿ: ಪ್ರಾಣಿ ಮತ್ತು ಸಮುದ್ರದಲ್ಲಿ ಬೆಳೆಯುವ ಸಸ್ಯದ ಭಾಗಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ನಾಲ್ವರನ್ನು ಬೆಳಗಾವಿ ವಿಭಾಗದ ಅರಣ್ಯ ಸಂಚಾರ ದಳದ ಅಧಿಕಾರಿಗಳು ಗುರುವಾರ ಬಂಧಿಸಿದ್ದು, ಒಂದು ಕಾರ್, ಎರಡು ಬೈಕ್ ಹಾಗೂ ಮಾರಾಟ ಮಾಡುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಈರಪ್ಪ ಜಿರಲಿ, ಪವನ ಜಿರಲಿ, ಬಸಪ್ಪ ಬೀಳಗಿ ಮತ್ತು ಜಮಖಂಡಿ ಪಟ್ಟಣದ ಸಣ್ಣೀರಪ್ಪ ವಿಭೂತಿ ಬಂಧಿತರು. ಬಾಗಲಕೋಟೆ, ಬೀಳಗಿ ಮತ್ತು ಜಮಖಂಡಿ ಪಟ್ಟಣಗಳಲ್ಲಿನ ಆಯುರ್ವೇದಿಕ್ ಮತ್ತು ವನಸ್ಪತಿ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರಾಣಿ ಮತ್ತು ಸಸ್ಯ ಭಾಗಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ‘ಹಾತ್‌ಜೋಡ್’ ಹೆಸರಿನಲ್ಲಿ ಬಂಧಿತರು ಅವುಗಳನ್ನು ಮಾರಾಟ ಮಾಡುತ್ತಿದ್ದರು. ಅರಣ್ಯದಲ್ಲಿ ಕಂಡು ಬರುವ ಉಡ (ಬೆಂಗಾಲ್ ಮಾನಿಟರ್ ಲಿಝಾರ್ಡ್)ದ 79 ತುಂಡುಗಳು ಮತ್ತು ಸಮುದ್ರದಲ್ಲಿ ಕಂಡುಬರುವ ಅಪರೂಪದ ಸಸ್ಯ ಎನಿಸಿರುವ ಇಂದ್ರಜಾಲ (ಸೀಫ್ಯಾನ್)ದ 503 ತುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಮಾರಾಟ ಜಾಲ: ಬಂಧಿತರಲ್ಲಿ ಈರಪ್ಪ ಜಿರಲಿ ಮತ್ತು ಪವನ ಜಿರಲಿ ತಮ್ಮ ಅಂಗಡಿಗಳಲ್ಲಿ ಜಪ್ತಿ ಮಾಡಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆ, ಬಸಪ್ಪ ಬೀಳಗಿ ಅಪರೂಪದ ಪ್ರಾಣಿ ಮತ್ತು ಸಸ್ಯ ಭಾಗಗಳನ್ನು ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಸಣ್ಣೀರಪ್ಪ ವಿಭೂತಿ ಜ್ಯೋತಿಷ್ಯದ ನೆಪದಲ್ಲಿ, ಜಪ್ತಿ ಮಾಡಿದ ಭಾಗಗಳ ಖರೀದಿಗೆ ಗ್ರಾಹಕರನ್ನು ಕಳುಹಿಸಿಕೊಡುತ್ತಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಬೆಳಗಾವಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೋಳಿಕರ ತಿಳಿಸಿದ್ದಾರೆ.

    ಅರಣ್ಯ ಇಲಾಖೆ ಜಾಗೃತ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಜಿ., ಬೆಳಗಾವಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ. ಪಾಟೀಲ, ಬೆಳಗಾವಿ ಮತ್ತು ಬಾಗಲಕೋಟೆ ಉಪಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೋಳಿಕರ ಮತ್ತು ದೇವರಾಜ ಅವರ ನಿರ್ದೇಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ. ಹುದ್ದಾರ, ಚಂದ್ರಶೇಖರ ಪಾಟೀಲ, ಬಿ.ವಿ. ಉಳವಣ್ಣವರ, ಎಸ್.ಎಂ.ನಾಯಿಕ್, ಗಿರೀಶ ಬಣ್ಣದ, ಮಹಾಂತೇಶ ಹಿಪ್ಪರಗಿ ಸೇರಿದಂತೆ ಇತರರು ದಾಳಿ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts