More

    ಮಕ್ಕಳಿಗಿಲ್ಲ ಅಂಗನವಾಡಿ ಪ್ರವೇಶ ಭಾಗ್ಯ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಕಾರ್ಯ ನಾಲ್ಕು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ, ಮಕ್ಕಳು ಬಾಡಿಗೆ ಕಟ್ಟಡದಲ್ಲಿಯೇ ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಗ್ರಾಮದ 2 ನೇ ವಾರ್ಡ್​ನಲ್ಲಿ 2016-17 ಗ್ರಾಪಂ (ನರೇಗಾ) ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಪಂಚಾಯತ್​ರಾಜ್ ಇಂಜಿನಿಯರಿಂಗ್ ಇಲಾಖೆ ನಿರ್ವಣದ ಜವಾಬ್ದಾರಿ ಹೊಂದಿದೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ವಣಗೊಂಡು ವರ್ಷಗಳೇ ಕಳೆದರೂ, ಒಂದಿಷ್ಟು ಕಾಮಗಾರಿ ಬಾಕಿ ಇರುವುದರಿಂದ ಹಾಕಿದ ಬೀಗ ತೆಗೆದಿಲ್ಲ. ಅನುದಾನ ಕೊರತೆ, ತಾಂತ್ರಿಕ ಸಮಸ್ಯೆ, ಇಲೆಕ್ಟ್ರಿಕಲ್, ಪ್ಲಂಬಿಂಗ್ ಸೇರಿ ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದ್ದರಿಂದ ಹಸ್ತಾಂತರಗೊಳಿಸಲಾಗಿಲ್ಲ ಎನ್ನುತ್ತಾರೆ ಗುತ್ತಿಗೆದಾರರು. ಇದರಿಂದಾಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 186ರಲ್ಲಿ ಓದುತ್ತಿರುವ 56 ಮಕ್ಕಳಿಗೆ ಸೌಲಭ್ಯ ವಂಚಿತ ಬಾಡಿಗೆ ಕಟ್ಟಡದಿಂದ ಮುಕ್ತಿ ದೊರಕದಂತಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಅನಕೂಲ ಕಲ್ಪಿಸಬೇಕಾದ ಗ್ರಾಪಂ, ತಾಪಂ, ಜಿಪಂ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಮಕ್ಕಳಿಗೆ ಹೊಸ ಕಟ್ಟಡ ಭಾಗ್ಯ ಮರೀಚಿಕೆಯಾಗಿದೆ.

    ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ವಣಗೊಂಡಿದ್ದರೂ ಪ್ರತಿ ತಿಂಗಳು ಬಾಡಿಗೆ ನೀಡಿ ಯಾವುದೇ ಸೌಲಭ್ಯವಿಲ್ಲದ ಸಣ್ಣ ಕೊಠಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ವಿಪರ್ಯಾಸ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹಾನಿಯಾಗುತ್ತಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

    ಇದು ಕೇವಲ ಆದ್ರಳ್ಳಿ ಗ್ರಾಮದ ಸಮಸ್ಯೆಯಲ್ಲ, ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲದಂತಾಗಿದೆ. ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 231 ಅಂಗನವಾಡಿ ಕೇಂದ್ರಗಳಲ್ಲಿ 187 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 44 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ, ದೇವಸ್ಥಾನ, ಸಭಾಭವನ, ಹಳೆಯ ಶಾಲಾ ಕಟ್ಟಡಗಳಲ್ಲಿ ನಡೆಯುತ್ತಿವೆ. ಆದರೆ, ಸರ್ಕಾರ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಿ ಹೊಸ ಕಟ್ಟಡ ನಿರ್ವಣಗೊಳಿಸಿದ್ದರೂ ಮಕ್ಕಳಿಗೆ ಅಲ್ಲಿ ಕಲಿಯುವ ಭಾಗ್ಯ ಕಲ್ಪಿಸದಿರುವುದು ದುರ್ದೈವ ಸಂಗತಿ.

    ಗ್ರಾಮದಲ್ಲಿ 4 ಅಂಗನವಾಡಿ ಕೇಂದ್ರಗಳಲ್ಲಿ ಒಂದಕ್ಕೆ ಮಾತ್ರ ಸ್ವಂತ ಕಟ್ಟಡವಿದೆ. ಅಂಗನವಾಡಿ ಕೇಂದ್ರ ಸಂಖ್ಯೆ 186ರ ಕಟ್ಟಡ ಕಾಮಗಾರಿ ನಾಲ್ಕು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಮಕ್ಕಳಿಗೆ ಸ್ವಂತ ಕಟ್ಟಡ, ಮೂಲಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಆದ್ದರಿಂದ, ಸಂಬಂಧಪಟ್ಟ ಗ್ರಾಪಂ, ತಾಪಂ, ಜಿಪಂ, ಸಿಡಿಪಿಒ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಅಂಗನವಾಡಿ ಕಟ್ಟಡ ಉದ್ಘಾಟನೆಯತ್ತ ಚಿತ್ತ ಹರಿಸಿ ಮಕ್ಕಳ ಶಿಕ್ಷಣಕ್ಕೆ ಸಹಕರಿಸಬೇಕು.

    | ಕಿರಣ ಲಮಾಣಿ ಗ್ರಾಮಸ್ಥ

    ಆದ್ರಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 186 ಬಾಕಿ ಉಳಿದ ಸಣ್ಣಪುಟ್ಟ ಕಾಮಗಾರಿ 1 ವಾರದೊಳಗೆ ಪೂರ್ಣಗೊಳಿಸಿ ಕೊಡುವಂತೆ ಗ್ರಾಪಂ ಮತ್ತು ಗುತ್ತಿಗೆದಾರರಿಗೆ ತಿಳಿಸಲಾಗುವುದು. ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗುವುದು.

    | ಸಿಡಿಪಿಒ ಮೃತ್ಯುಂಜಯ ಗುಡ್ಡದನ್ವೇರಿ, ಶ್ರೀಧರ ತಳವಾರ ಪಿಆರ್​ಇಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts