More

    ಅಂಗನವಾಡಿ ಕಾರ‌್ಯಕರ್ತೆಯರಿನ್ನು ಅಪ್ಡೇಟ್: ಹೊಸತನಕ್ಕೆ ತೆರೆದುಕೊಳ್ಳಲು ನಿರಂತರ ತರಬೇತಿ

    ರಾಮನಗರ: ಗ್ರಾಮೀಣ ಭಾಗದಲ್ಲಿ ಮತ್ತು ಬಡವರ ಪಾಲಿಗೆ ಅಂಗನವಾಡಿಗಳೇ ಮನೆ ಹೊರತಾದ ಮಕ್ಕಳ ಮೊದಲ ಪಾಠ ಶಾಲೆ. ಅಂಗನವಾಡಿ ಕಾರ್ಯಕರ್ತೆಯರೇ ಮಕ್ಕಳಿಗೆ ಎರಡನೇ ಗುರುಗಳು.

    ಆದರೆ, ಕಾರ್ಯಕರ್ತೆಯರು ಕಾಲಕಾಲಕ್ಕೆ ಅಪ್ಡೇಟ್ ಆಗುವುದಿಲ್ಲ. ಪರಿಣಾಮ ಕಾನ್ವೆಂಟ್‌ಗಳು ತುಂಬಿದರೆ, ಅಂಗನವಾಡಿಗಳು ಖಾಲಿ ಇರುತ್ತವೆ. ಇದಕ್ಕೆ ಯಾರನ್ನೋ ದೂಷಿಸುವ ಬದಲು ಜಿಲ್ಲೆಯಲ್ಲಿ ಇದೀಗ ಹೊಸ ಪ್ರಯತ್ನವೊಂದು ಸದ್ದಿಲ್ಲದೆ ಸಾಗಿದೆ. ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ನಿರಂತರ ತರಬೇತಿ ನೀಡುತ್ತಾ ಅವರನ್ನು ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡುವ ಜತೆಗೆ, ಮಕ್ಕಳಿಗೆ ಆರಂಭದಿಂದಲೇ ಉತ್ತಮ ಶಿಕ್ಷಣ ನೀಡುವ ಕೆಲಸಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಸಿದ್ಧಗೊಳ್ಳುತ್ತಿದೆ ತರಬೇತಿ ಕೇಂದ್ರ: ಪ್ರಸ್ತುತ ರಾಜ್ಯದ 6 ಸಾವಿರ ಅಂಗನವಾಡಿ ಮೇಲ್ವಿಚಾರಕಿಯರಿಗೆ ತರಬೇತಿ ನೀಡಲು ಧರ್ಮಸ್ಥಳದ ಉಜಿರೆಯಲ್ಲಿ ಕೇಂದ್ರವೊಂದಿದೆ. ಇದರ ಜತೆಗೆ 65 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವುದು 21 ತರಬೇತಿ ಕೇಂದ್ರಗಳು. ಒಮ್ಮೆ ಇವರಿಗೆ ಇಲ್ಲಿ ತರಬೇತಿ ನಡೆದರೆ ನಿವೃತ್ತಿ ಆಗುವವರೆಗೂ ತರಬೇತಿ ಎನ್ನುವುದು ಇಲ್ಲ. ಇದರಿಂದಾಗಿ ಅಂಗನವಾಡಿ ಮಟ್ಟದಲ್ಲಿ ಮಕ್ಕಳಿಗೆ ಉತ್ತಮ ಕಲಿತಾ ವಾತಾವರಣ ನಿರ್ಮಾಣವಾಗುತ್ತಿಲ್ಲ. ಇದನ್ನು ಮನಗಂಡು ಬಾಷ್ ಫೌಂಡೇಷನ್ ತನ್ನ ಸಿಎಸ್‌ಆರ್ ನಿಧಿಯಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಬಿಡದಿಯ ತಮ್ಮಣ್ಣನದೊಡ್ಡಿಯಲ್ಲಿ ತರಬೇತಿ ಕೇಂದ್ರ ನಿರ್ಮಾಣ ಮಾಡುತ್ತಿದೆ.

    ಯಶಸ್ವಿಯಾಗಿದೆ ಯೋಜನೆ: ಉತ್ತರ ಕರ್ನಾಟಕ ಎಂದರೆ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ, ಅದರಲ್ಲೂ ಹೈದ್ರಾಬಾದ್-ಕರ್ನಾಟಕ ಪ್ರದೇಶ ಎಂದರೆ ಅಲ್ಲಿನ ಜೀವನ ಮಟ್ಟವೇ ಕುಸಿದಿದೆ ಎನ್ನುವ ಭಾವನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ಮನಗಂಡು ಕಮ್ಯುನಿಟಿ ಡೆವಲಪ್‌ಮೆಂಟ್ ಫೌಂಡೇಷನ್ ಎನ್ನುವ ಸಂಸ್ಥೆಯ ನಿರ್ದೇಶಕ ಅರುಣ್ ಸೆರವೋ ಅವರ ಜತೆಗೂಡಿ, ಸರ್ಕಾರದ ತರಬೇತಿಗಳನ್ನು ಹೊರತುಪಡಿಸಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ತರಬೇತಿ ನೀಡುತ್ತಾ ಬಂತು. ಸತತ 6 ವರ್ಷಗಳ ಪರಿಶ್ರಮದಿಂದ ಹೈದ್ರಾಬಾದ್-ಕರ್ನಾಟಕ ಭಾಗದ ಅಂಗನವಾಡಿಗಳಲ್ಲಿ ಗಮನಾರ್ಹ ಬದಲಾವಣೆಗಳು ಆದವು.

    ಅಂಗವನಾಡಿಗಳಲ್ಲಿ ಮಕ್ಕಳ ಹಾಜರಾತಿ ಜತೆಗೆ ಕಲಿತಾ ಮಟ್ಟವೂ ಏರಿತು, ಅಪೌಷ್ಟಿಕ ಮಕ್ಕಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಯಿತು. ಇವೆಲ್ಲದರ ಪರಿಣಾಮ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅನಿಷ್ಠ ಪದ್ಧತಿಗಳಲ್ಲೂ ಗಣನೀಯವಾಗಿ ಇಳಿಕೆ ದಾಖಲಾಯಿತು. ಇದನ್ನು ಗಮನಿಸಿದ್ದ ಅಂದಿನ ಹೈದ್ರಾಬಾದ್-ಕರ್ನಾಟಕ ಭಾಗದ (ಈಗಿನ ಕಲ್ಯಾಣ ಕರ್ನಾಟಕ) ಪ್ರಾದೇಶಿಕ ಆಯುಕ್ತರಾಗಿದ್ದ ಹರ್ಷಗುಪ್ತಾ ಅವರು ಯೋಜನೆ ಮುಂದುವರಿಸಲು 22.80 ಕೋಟಿ ರೂ.ಗಳನ್ನು ಮಂಜೂರು ಮಾಡಿಕೊಟ್ಟಿದ್ದರು.

    ರಾಮನಗರದಲ್ಲಿ ಏಪ್ರಿಲ್‌ನಿಂದ: ಅಂದು ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸಿಡಿಪಿಒ ಸಿ.ವಿ.ರಾಮನ್, ಇದೀಗ ರಾಮನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ಅವರೊಡಗೂಡಿ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದಾಗ, ಬಾಷ್ ಕಂಪನಿ ಈ ಯೋಜನೆ ಕೈಗೆತ್ತಿಗೊಳ್ಳಲು ನೆರವು ನೀಡಿದೆ. ಉತ್ತರ ಕರ್ನಾಟಕದಲ್ಲಿ ಬದಲಾವಣೆ ತಂದ ಸಿಡಿಎಫ್ ಸಂಸ್ಥೆಯೇ ಬಿಡದಿಯಲ್ಲಿ ತರಬೇತಿ ನೀಡಲು ಮುಂದೆ ಬಂದಿದೆ. ತರಬೇತಿಗಾಗಿ ಬಾಷ್ ಕಂಪನಿಗೆ 66 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಏಪ್ರಿಲ್‌ನಿಂದ ಮೇಲ್ವಿಚಾರಕಿಯರಿಗೆ ಪ್ರತಿ 4 ತಿಂಗಳಿಗೊಮ್ಮೆ ನಾಲ್ಕು ದಿನಗಳ ತರಬೇತಿ ದೊರೆಯಲಿದೆ. ತರಬೇತಿ ಪಡೆದ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಂತರವಾಗಿ ತರಬೇತಿ ನೀಡಲಿದ್ದಾರೆ. ಈ ಮೂಲಕ ಜಿಲ್ಲೆಯ ಅಂಗನವಾಡಿಗಳೂ ಹೊಸ ಬದಲಾವಣೆಗೆ ತೆರೆದುಕೊಳ್ಳಲಿವೆ.

    ಅಂಗನವಾಡಿ ಕಾರ್ಯಕರ್ತೆಯರ ಜ್ಞಾನವೂ ಕಾಲ ಕಾಲಕ್ಕೆ ಹೆಚ್ಚುತ್ತಾ ಹೋದಾಗ, ಮಕ್ಕಳ ಕಲಿಕಾ ಗುಣಮಟ್ಟವೂ ಹೆಚ್ಚುತ್ತದೆ. ಇದನ್ನು ಮನಗಂಡು ಖಾಸಗಿ ಕಂಪನಿಗಳ ಸಹಕಾರದೊಂದಿಗೆ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಇದು ಮುಂದಿನ ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಲಿದೆ.
    ಗಾಣಕಲ್ ನಟರಾಜ್, ತಾಪಂ ಅಧ್ಯಕ್ಷ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts