More

    ಆಂಧ್ರದಿಂದ ಯಾರೂ ನುಸುಳದಂತೆ ಎಚ್ಚರ ವಹಿಸಿ, ಅಧಿಕಾರಿಗಳಿಗೆ ಸಚಿವ ಆನಂದ ಸಿಂಗ್ ಸೂಚನೆ

    ಬಳ್ಳಾರಿ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ಜಿಲ್ಲೆಗಳ ಜನರು ಅಡ್ಡದಾರಿಗಳನ್ನು ಬಳಸಿ ಬಳ್ಳಾರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಕಟ್ಟುನಿಟ್ಟಿನ ಕ್ರಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಬಳ್ಳಾರಿ ಸುರಕ್ಷಿತ ಎಂಬ ಕಾರಣಕ್ಕೆ ಆಂಧ್ರಪ್ರದೇಶದ ಆಲೂರು, ಗುಂತಕಲ್ಲು, ರಾಯದುರ್ಗ ತಾಲೂಕಿನ ಜನರು ಕಾಲುವೆ ಸೇರಿ ಇತರ ಅಡ್ಡದಾರಿ ಮೂಲಕ ಬರುತ್ತಿದ್ದಾರೆ. ಚೆಕ್‌ಪೋಸ್ಟ್ ಜತೆಗೆ ಅಡ್ಡದಾರಿಗಳ ಮೇಲೆಯೂ ಹದ್ದಿನ ಕಣ್ಣಿಡಬೇಕೆಂದು ಹೇಳಿದರು.

    ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಉತ್ತಮ ಕೆಲಸ ಮಾಡುತ್ತಿದೆ. ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜನಪ್ರತಿನಿಧಿಗಳಿಗೆ ಸ್ಥಳೀಯ ಸ್ಥಿತಿಗತಿ ಬಗ್ಗೆ ಅರಿವು ಇರುತ್ತದೆ. ಈ ವಿಚಾರದಲ್ಲಿ ಪ್ರತಿಷ್ಠೆ ಬೇಡ. ಗುಳೆ ಹೋಗಿ ವಾಪಸಾಗಿರುವ ಜನರ ಮೇಲೆ ವಿಶೇಷ ಗಮನಹರಿಸಬೇಕು. ಕಳೆದ ವಾರ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಕುರಿತು ಪರಿಹಾರ ಒದಗಿಸಲು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದರು.

    ಲಾಕ್‌ಡೌನ್‌ದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಬಳಿಕ ಉಳಿಯುವ ಪಡಿತರವನ್ನು ರೇಷನ್ ಕಾರ್ಡ್ ಇಲ್ಲದ ನಿರಾಶ್ರಿತರು ಹಾಗೂ ಅಸಹಾಯಕರಿಗೆ ನೀಡಬೇಕು. ಬಡವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಜಿಲ್ಲಾ ಖನಿಜ ನಿಧಿಯಲ್ಲಿ ಲಭ್ಯ ಇರುವ ಅನುದಾನಕ್ಕೆ ವಿಶೇಷ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶಾಸಕರೊಂದಿಗೆ ಚರ್ಚೆ ಬಳಿಕ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಸಚಿವ ಆನಂದ ಸಿಂಗ್ ತಿಳಿಸಿದರು.

    ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಜಿಲ್ಲೆಯಿಂದ ಗುಳೆ ಹೋಗಿರುವ ಇನ್ನೂ ಅನೇಕರು ವಿವಿಧ ಜಿಲ್ಲೆಗಳಲ್ಲಿ ಉಳಿದಿದ್ದಾರೆ. ಅವರನ್ನು ಕರೆತರಲು ವಿಶೇಷ ವ್ಯವಸ್ಥೆ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಬೇಕೆಂದು ಆಗ್ರಹಿಸಿದರು. ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಇ.ತುಕಾರಾಮ್, ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್ ಇತರರು ಹಾಜರಿದ್ದರು.

    ಸರ್ಕಾರಕ್ಕೂ ಆರ್ಥಿಕ ಸಂಕಷ್ಟ
    ಕರೊನಾ ಲಾಕ್‌ಡೌನ್‌ದಿಂದ ಜನರ ಜತೆಗೆ ಸರ್ಕಾರವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲರೂ ಸೇರಿ ಈ ಸಮಸ್ಯೆ ವಿರುದ್ಧ ಹೋರಾಡಬೇಕಿದೆ ಎಂದು ಅರಣ್ಯ ಸಚಿವ ಆನಂದಸಿಂಗ್ ತಿಳಿಸಿದರು.

    ಜನತಾ ಕರ್ಫ್ಯೂ ಹಾಗೂ ಆ ಬಳಿಕ ಜಾರಿಯಾದ ಲಾಕ್‌ಡೌನ್‌ದಿಂದ ಜನರಿಗೆ ತುಂಬಾ ಸಮಸ್ಯೆಯಾಗಿದೆ. ಅಧಿಕಾರಿಗಳು ಒತ್ತಡದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ವಿಮ್ಸ್ ಸಂಸ್ಥೆಯ ಕರೊನಾ ಪ್ರಯೋಗಾಲಯದಲ್ಲಿ ಸಿಬ್ಬಂದಿ ಕೊರತೆಯಿಂದ ಎರಡು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ದೆಹಲಿಯ ತಬ್ಲಿಘಿ ಜಮಾತ್‌ಗೆ ಜಿಲ್ಲೆಯಿಂದ 112 ಜನರು ಹೋಗಿದ್ದರು. ಈ ಪೈಕಿ 79 ಜನರಿಗೆ ಕರೊನಾ ನೆಗೆಟಿವ್ ಹಾಗೂ ಒಬ್ಬರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇನ್ನುಳಿದವರು ಬೇರೆ ರಾಜ್ಯಗಳಲ್ಲಿದ್ದಾರೆ. ನೆಗೆಟಿವ್ ಬಂದಿರುವ 79 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಎರಡನೇ ಹಂತದ ಪರೀಕ್ಷೆ ಬಳಿಕ ಕ್ವಾರಂಟೈನ್‌ದಿಂದ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಆನಂದಸಿಂಗ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts