More

    ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆ ಸುಧಾರಣೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ

    ರಟ್ಟಿಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕೊರತೆ ಇದೆ. ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯಿಂದ ಸ್ಥಳೀಯ ತಾಲೂಕು ಆಡಳಿತದ ಆವರಣದಲ್ಲಿ ಸೋಮವಾರ ಅಹೋರಾತ್ರಿ ಧರಣಿ ಪ್ರಾರಂಭವಾಗಿದೆ.

    ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಠೆ ಮಾತನಾಡಿ, ರಟ್ಟಿಹಳ್ಳಿ ತಾಲೂಕು ಕೇಂದ್ರವಾಗಿ ಐದಾರು ವರ್ಷಗಳು ಗತಿಸಿವೆ. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸುತ್ತಲಿನ ಗ್ರಾಮಗಳ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಆಸ್ಪತ್ರೆಗೆ ಬರುವ ಗರ್ಭಿಣಿ, ಬಾಣಂತಿಯರು ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಇತರೆ ತಾಲೂಕುಗಳ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಆಸ್ಪತ್ರೆಗೆ ಶೇ. 70ರಷ್ಟು ಸಿಬ್ಬಂದಿಯೂ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಮುಂದುವರಿಸಲಾಗುವುದು ಎಂದರು.

    ಶಾಸಕ, ಟಿಎಚ್​ಒ ಭೇಟಿ:

    ಸೋಮವಾರ ಸಂಜೆ ಶಾಸಕ ಯು.ಬಿ. ಬಣಕಾರ ಹಾಗೂ ತಾಲೂಕು ವೈದ್ಯಾಧಿಕಾರಿ ಜಡ್.ಆರ್. ಮಕನದಾರ ಮತ್ತು ಪ್ರಭಾರಿ ವೈದ್ಯಾಧಿಕಾರಿ ಡಾ. ಲೋಕೇಶ ಕುಮಾರ ಭೇಟಿ ನೀಡಿ ಪ್ರತಿಭಟನಕಾರರ ಸಮಸ್ಯೆ ಆಲಿಸಿದರು.

    ಶಾಸಕ ಬಣಕಾರ ಮಾತನಾಡಿ, ರಾಜ್ಯಾದ್ಯಂತ ವೈದ್ಯರ ಕೊರತೆ ಇದೆ. ಸರ್ಕಾರ ಈಗಾಗಲೇ ಜಿಲ್ಲಾಧಿಕಾರಿಗೆ ನೇರವಾಗಿ ವೈದ್ಯರನ್ನು ನೇಮಿಸುವಂತೆ ಆದೇಶ ನೀಡಿದೆ. ಜಿಲ್ಲಾ ವೈದ್ಯಾಧಿಕಾರಿ ಮತ್ತು ಎಲ್ಲರೂ ಸಭೆ ಸೇರಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡೋಣ, ಈಗಾಗಲೇ ಜಿಲ್ಲಾ ವೈದ್ಯಾಧಿಕಾರಿ ತಾತ್ಕಾಲಿಕವಾಗಿ ಮಾಸೂರು ಮತ್ತು ಬ್ಯಾಡಗಿ ವೈದ್ಯರನ್ನು ನಿಯೋಜನೆ ಮಾಡಿದ್ದಾರೆ. ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು. ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

    ಆದರೆ, ಡಿಎಚ್​ಒ ಬಂದು ಭರವಸೆ ನೀಡುವವರೆಗೂ ಧರಣಿ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

    ಸಂಘಟನೆಯ ರಾಮಚಂದ್ರಪ್ಪ ಹಿಂಡಸಗಟ್ಟಿ, ಯೂಸೂಫ್ ಸೈಕಲ್ಗಾರ, ಮಾಲತೇಶ ಜಿ.ಕೆ., ಕುಮಾರ ಸುಳ್ಳನವರ, ಪ್ರಕಾಶ ಪರಪ್ಪಗೌಡ್ರ, ಈರಣ್ಣ ಅಂಗಡಿ, ಖಲಂದರ ಎಲೇದಳ್ಳಿ, ಚಂದ್ರಪ್ಪ ತಿಪ್ಪಕ್ಕನವರ, ಪ್ರಕಾಶ ಡೊಂಬರ, ಜಬೀವುಲ್ಲಾ ಶೇಖಸಂದಿ, ತೌಸೀಫ್ ಸೈಕಲ್ಗಾರ, ಗಿರೀಶ ತಿಮ್ಮಿನಕಟ್ಟಿ ಇದ್ದರು.

    ಬೆಳಕು ಚೆಲ್ಲಿದ ‘ವಿಜಯವಾಣಿ’

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಕೊರತೆ, ವಸತಿ ಗೃಹ ಸಮಸ್ಯೆ ಕುರಿತು ಸೋಮವಾರ ‘8 ತಿಂಗಳಲ್ಲಿ ಕೇವಲ 60 ಹೆರಿಗೆ’ ಶೀರ್ಷಿಕೆಯಡಿ ವಿಸ್ತ್ರತವಾಗಿ ವರದಿ ಪ್ರಕಟಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts