More

    ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ತರುವ ಯತ್ನ

    ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭ ಶೃಂಗೇರಿ ಜಗದ್ಗುರುಗಳು ಹಾಗೂ ಶ್ರೀ ಶಂಕರಾಚಾರ್ಯರ ಹೆಸರನ್ನು ಮುನ್ನೆಲೆಗೆ ತಂದು ದೇಶದ ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ತರುವ ಹೀನ ಕಾರ್ಯ ಆರಂಭವಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಂಚಾಲಕ ನಾಗೇಶ್ ಆಂಗೀರಸ ಬೇಸರ ವ್ಯಕ್ತಪಡಿಸಿದರು.

    ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರದ ರಾಷ್ಟ್ರ ಮಟ್ಟದ ಮುಂದುವರಿದ ಭಾಗವೇ ಈ ಷಡ್ಯಂತ್ರ. ವಿನಾಕಾರಣ ಶಂಕರಾಚಾರ್ಯರ ಪರಂಪರೆಯನ್ನು ರಾಮಮಂದಿರದೊಂದಿಗೆ ಎಳೆದು ತಂದಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
    ಹಳ್ಳಿಗಳಲ್ಲಿ ಕಾಂಗ್ರೆಸ್‌ನ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಅಯೋಧ್ಯೆಯ ಚಾರಿತ್ರಿಕ ಸಂದರ್ಭವನ್ನು ಸ್ವಾಗತಿಸಿತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಸಲು ನಿರ್ದೇಶಿಸಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ತನಗೆ ನೀಡಿದ ಆಹ್ವಾನವನ್ನು ತಿರಸ್ಕರಿಸುವ ಮೂಲಕ 1951ರ ಸೋಮನಾಥ ಮಂದಿರ ಮತ್ತು 2024ರ ಅಯೋಧ್ಯೆ ರಾಮಮಂದಿರದ ವಿರುದ್ಧ ತಾನು ನಿಂತಿರುವುದಾಗಿ ಪರೋಕ್ಷವಾಗಿ ಘೋಷಿಸಿಕೊಂಡು ದೇಶದ ಅಖಂಡ ಧಾರ್ಮಿಕ ವ್ಯವಸ್ಥೆಗೆ ಅವಮಾನ ಮಾಡಿದೆ ಎಂದು ದೂರಿದರು.
    ಶೃಂಗೇರಿ ಪೀಠವು ಅಯೋಧ್ಯೆ ಪರಿಕ್ರಮದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದೆ. ವಿದ್ಯಾರಣ್ಯಪುರದಲ್ಲಿ 1386ರಲ್ಲಿ ವಿಜಯನಗರ ಸಾಮ್ರಾಜ್ಯದ 2ನೇ ದೊರೆ ಹರಿಹರನು ಜಗದ್ಗುರು ವಿದ್ಯಾರಣ್ಯರು ಮುಕ್ತರಾದ ನಂತರ ಅವರ ಹೆಸರಿನಲ್ಲಿ ನಿರ್ಮಿಸಿದ ಅಗ್ರಹಾರದಲ್ಲಿ ಶ್ರೀರಾಮನ ದೇವಾಲಯನ್ನು, 33ನೇ ಜಗದ್ಗುರು ಶ್ರೀ ಅಭಿನವ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಶ್ರೀರಾಮನ ದೇವಾಲಯ ನಿರ್ಮಿಸಿದ್ದಾರೆ. 1989ರಲ್ಲಿ ಜಗದ್ಗುರು ಭಾರತೀ ತೀರ್ಥರು ಆ ದೇವಾಲಯವನ್ನು ಮರು ನಿರ್ಮಾಣ ಮಾಡಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ದಿನದಂದೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಶ್ರೀರಾಮನ ದೇವಾಲಯದ ಮರುಪ್ರತಿಷ್ಠೆ ಮತ್ತು ಕುಂಬಾಭಿಷೇಕ ನೆರವೇರಿಸುವ ಮೂಲಕ ಸನಾತನ ಧರ್ಮದ ಶ್ರೇಯಸ್ಸಿಗೆ, ಭಾರತದ ಐಕ್ಯತೆ, ಧರ್ಮ ಸಹಿಷ್ಣುತೆಗೆ ವಿಶೇಷವಾಗಿ ಅನುಗ್ರಹಿಸಲಿದ್ದಾರೆ ಎಂದರು.
    ಇಂತಹ ಜಗದ್ಗುರುಗಳ ಭಾವಚಿತ್ರ ಪ್ರದರ್ಶಿಸಿ ಉತ್ತರದ ಸ್ವಾಮೀಜಿಯೊಬ್ಬರು ರಾಮಮಂದಿರದ ಕುರಿತು ನೀಡಿದ ವಿವೇಚನಾ ರಹಿತ ಹೇಳಿಕೆಗೆ ತಳುಕು ಹಾಕಿ ಧರ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಕಲಿಗಾಲದ ಎಲ್ಲ ಸವಾಲುಗಳನ್ನು ಹಿಮ್ಮೆಟ್ಟಿಸಿ ಕಪ್ಪುಚುಕ್ಕೆ ಇಲ್ಲದಂತೆ ಚಾರಿತ್ರ್ಯ ನಿರ್ಮಿಸಿಕೊಂಡು ಬಂದ ದೇಶದ ಏಕೈಕ ಧರ್ಮಪೀಠ ಶೃಂಗೇರಿಯದು. ಇಂತಹ ಪೀಠದ ಪಾವಿತ್ರ್ಯತೆ ಕಾಪಾಡುವುದು, ಯಾವುದೇ ವಿವಾದ ಇಲ್ಲದಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts