More

    ಕಾಂಗ್ರೆಸ್ಸಿಗೆ ಪರ್ಯಾಯ, ಅಭಿವೃದ್ಧಿಯ ಸಮಾನಾರ್ಥಕ ಬಿಜೆಪಿ: ಇಂದು ಬಿಜೆಪಿ ಸ್ಥಾಪನಾ ದಿನ

    ಕಾಂಗ್ರೆಸ್ಸಿಗೆ ಪರ್ಯಾಯ, ಅಭಿವೃದ್ಧಿಯ ಸಮಾನಾರ್ಥಕ ಬಿಜೆಪಿ: ಇಂದು ಬಿಜೆಪಿ ಸ್ಥಾಪನಾ ದಿನಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರ ಇಲ್ಲಿನ ರಾಜಕೀಯ ವ್ಯವಸ್ಥೆ ನಿಧಾನವಾಗಿ ರೂಪುಗೊಳ್ಳತೊಡಗಿತು. ಇಲ್ಲಿನ ಜನರ ಆಶೋತ್ತರಗಳಿಗೆ ಅನುಗುಣವಾಗಿ ರಾಜಕೀಯವೂ ವಿಕಸನಗೊಳ್ಳಬೇಕು, ಸ್ವಾತಂತ್ರ್ಯ ಆಂದೋಲನದ ಉದ್ದೇಶಕ್ಕೆ ರೂಪುಗೊಂಡ ಕಾಂಗ್ರೆಸ್, ಒಂದು ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವ ಬದಲಿಗೆ ವಿಸರ್ಜನೆ ಆಗಬೇಕು ಎಂಬುದು ಗಾಂಧೀಜಿ ಅಭಿಲಾಷೆಯಾಗಿತ್ತು. ಆದರೆ ಕೆಲವರ ಸ್ವಾರ್ಥಸಾಧನೆಯ ಕಾರಣಕ್ಕೆ ಕಾಂಗ್ರೆಸ್ ಮುಂದುವರಿಯಿತು.

    ಇಷ್ಟಾದರೂ ಅನೇಕ ಗೌರವಾನ್ವಿತ ವ್ಯಕ್ತಿಗಳು ಕಾಂಗ್ರೆಸ್​ನಲ್ಲಿ ಇರುವವರೆಗೂ ಆ ಪಕ್ಷ ದೇಶಹಿತಕ್ಕೆ ಅಷ್ಟಾದರೂ ಪೂರಕವಾಗಿ ಕೆಲಸ ಮಾಡುತ್ತಿತ್ತು. ಅದಾಗಲೇ ಸ್ಥಾಪನೆಯಾಗಿ ದೇಶದಾದ್ಯಂತ ಸಾಕಷ್ಟು ವಿಸ್ತಾರ ಕಂಡಿತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಸದಸ್ಯರು ಕಾಂಗ್ರೆಸ್ ಜತೆಗೆ ಕಾರ್ಯನಿರ್ವಹಿಸಬೇಕು ಎಂದು ಸರ್ದಾರ್ ಪಟೇಲರು, ರಾಜರ್ಷಿ ಪುರುಷೋತ್ತಮದಾಸ್ ಟಂಡನ್ ಅಂಥವರು ಬಯಸಿದರು. 1950ರಲ್ಲಿ ಪುರುಷೋತ್ತಮದಾಸ ಟಂಡನ್ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಆರೆಸ್ಸೆಸ್ ಸ್ವಯಂಸೇವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಇನ್ನೇನು ಅಂಗೀಕರಿಸಬೇಕು ಎನ್ನುವಷ್ಟರಲ್ಲಿ ಕಾಂಗ್ರೆಸ್ ಸದಸ್ಯರ ವಿರೋಧದ ಕಾರಣಕ್ಕೆ ಬಿದ್ದುಹೋಯಿತು. ಟಂಡನ್ ರಾಜೀನಾಮೆ ನೀಡಬೇಕಾಯಿತು, ಈ ವೇಳೆಗೆ ಸರ್ದಾರ್ ಪಟೇಲರೂ ನಿಧನರಾದರು.

    ರಾಜಕೀಯ ವ್ಯವಸ್ಥೆಯನ್ನು ರಾಷ್ಟ್ರೀಯತೆಗೆ ತಕ್ಕಂತೆ ಕೊಂಡೊಯ್ಯಬೇಕು ಎಂಬ ಉದ್ದೇಶದಲ್ಲಿ 1951ರಲ್ಲಿ ಡಾ.ಶಾಮಪ್ರಸಾದ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಜನಸಂಘವನ್ನು ಸ್ಥಾಪನೆ ಮಾಡಲಾಯಿತು. ದೇಶದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಲಯವನ್ನು ಪ್ರಭಾವಿಸುವ ಶಕ್ತಿಯಾಗಿ ಜನಸಂಘ ಬೆಳೆಯತೊಡಗಿತು. ಈ ನಡುವೆಯೇ 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ದೇಶದಾದ್ಯಂತ ತುರ್ತಪರಿಸ್ಥಿತಿ ಘೊಷಣೆ ಮಾಡಿದರು. ಇದರ ವಿರುದ್ಧ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಜನಸಂಘ ಹಾಗೂ ಆರೆಸ್ಸೆಸ್ ಸದಸ್ಯರು ಮುಂಚೂಣಿಯಲ್ಲಿದ್ದು ಹೋರಾಡಿದರು. ಕಾಂಗ್ರೆಸ್ (ಒ), ಭಾರತೀಯ ಲೋಕದಳ, ಸಮಾಜವಾದಿ ಪಕ್ಷ, ಸಿಎಫ್​ಡಿ ಹಾಗೂ ಜನಸಂಘಗಳನ್ನು ವಿಲೀನಗೊಳಿಸಿ ಜನತಾ ಪಕ್ಷ ರೂಪಿಸಲಾಯಿತು.

    ಹೋರಾಟದ ನಂತರ ನಡೆದ 1977ರ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಇಂದಿರಾ ಗಾಂಧಿ ನೆಲಕಚ್ಚಿದರು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಸರ್ಕಾರ ರಚನೆಯಾಯಿತು. ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಮರುಸ್ಥಾಪನೆ, ದರ ನಿಯಂತ್ರಣ, ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿತು. ಆದರೆ ಕೆಲ ನಾಯಕರ ಸ್ವಾರ್ಥ, ಮಹತ್ವಾಕಾಂಕ್ಷೆ ಹಾಗೂ ಅಧಿಕಾರಕ್ಕಾಗಿ ಮೇಲಾಟಗಳು, ಅಶಿಸ್ತಿನ ವರ್ತನೆಯಿಂದ ಸರ್ಕಾರದ ಮೇಲೆ ಜನರಿಗಿದ್ದ ನಂಬಿಕೆಗಳು ಹುಸಿಯಾದವು. ಈ ನಡುವೆ 1980ರಲ್ಲಿ ಇಂದಿರಾ ಗಾಂಧಿಯವರ ಪಕ್ಷ ಜಯಭೇರಿ ಬಾರಿಸಿತು. 1977ರಲ್ಲಿ 298 ಸ್ಥಾನ ಹೊಂದಿದ್ದ ಜನತಾ ಪಕ್ಷದ ಸಂಸದರ ಸಂಖ್ಯೆ 31ಕ್ಕೆ ಕುಸಿಯಿತು. ಕಾಂಗ್ರೆಸ್ 153ರಿಂದ ಭರ್ಜರಿ 351ಕ್ಕೆ ಏರಿಕೆಯಾಗಿ ಸರ್ಕಾರ ರಚಿಸಿತು. ಮುಂದುವರಿದು, ಜನತಾ ಪಕ್ಷದಲ್ಲಿ, ಜನಸಂಘದಿಂದ ಬಂದವರ ಕುರಿತು ಮಲತಾಯಿ ಧೋರಣೆಯನ್ನು ವಿರೋಧಿಸಲಾಯಿತು. ಅಂತಿಮವಾಗಿ ಜನಸಂಘದಿಂದ ಬಂದ ಸದಸ್ಯರನ್ನು ಉಚ್ಚಾಟಿಸಲಾಯಿತು.

    ಒಂದೆಡೆ ಕಾಂಗ್ರೆಸ್​ಗೆ ಪರ್ಯಾಯವಾಗಿ ಸ್ಥಾಪಿಸಿದ ಪಕ್ಷವನ್ನು, ರಾಷ್ಟ್ರೀಯ ಹಿತವನ್ನು ಪರಿಗಣಿಸಿ ಜನತಾ ಪಕ್ಷದಲ್ಲಿ ವಿಲೀನ ಮಾಡಿದರೂ ಉದ್ದೇಶ ಈಡೇರದಂತಾಯಿತು. ನಾಯಕರಲ್ಲಿ ಸ್ವಾರ್ಥಭಾವನೆ ಕಡಿಮೆ ಮಾಡಿ ರಾಷ್ಟ್ರೀಯ ಭಾವನೆ ಪುನರುಜ್ಜೀವನ ಗೊಳಿಸಲು ಈ ಮಧ್ಯಮ ತಂತ್ರಗಳು ಸಫಲವಾಗುವುದಿಲ್ಲ ಎಂಬುದು ಖಾತ್ರಿಯಾಯಿತು. ಅಂತಿಮವಾಗಿ, 1980ರ ಏಪ್ರಿಲ್ 6ರಂದು ನವದೆಹಲಿಯ ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, 3,500 ಜನರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸ್ಥಾಪಿಸುವ ನಿರ್ಧಾರ ಮಾಡಲಾಯಿತು. ಅಟಲ್ ಬಿಹಾರಿ ವಾಜಪೇಯಿ ಮೊದಲ ಅಧ್ಯಕ್ಷರಾದರು. ಇಲ್ಲಿಂದ ಭಾರತದ ಅಭಿವೃದ್ಧಿ ಪಥ ಬದಲಾಯಿತು. ನಿಧಾನವಾದರೂ ನಿರಂತರವಾಗಿ ಬಿಜೆಪಿ ವಿಸ್ತರಿಸುತ್ತ ಸಾಗಿತು. ಪ್ರಾರಂಭದಲ್ಲಿ ನಗರಪ್ರದೇಶದ ಪಕ್ಷ ಎಂಬಂತಿದ್ದರೂ ನಂತರದಲ್ಲಿ ಸಮಾಜದ ಎಲ್ಲ ಜಾತಿ, ಸಮುದಾಯ, ವರ್ಗಗಳಿಗೂ ವಿಸ್ತಾರವಾಯಿತು. ಅನೇಕ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಹಾಗೂ ಮೈತ್ರಿಕೂಟದಲ್ಲಿ ಸರ್ಕಾರ ರಚಿಸಿತು. ಕೇಂದ್ರದಲ್ಲಿ ಹಾಗೂ ಕೆಲವು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಬಿಜೆಪಿ ಒಳಗೊಂಡ ಸರ್ಕಾರಗಳು ಮಾಡಿದ ಪ್ರಮುಖ ಸಾಧನೆಗಳು ಇಂತಿವೆ.

    ಗುಜರಾತ್ ಮಾದರಿ: ಗುಜರಾತ್​ನಲ್ಲಿ 2000-01ರಲ್ಲಿ ಶೇಕಡ 20.03 ಇದ್ದ ಶಾಲೆ ತೊರೆಯುವ ಮಕ್ಕಳ ಸಂಖ್ಯೆ 2013-14ರ ವೇಳೆಗೆ ಶೇ.2ಕ್ಕೆ ಇಳಿಯಿತು. 2000ದಿಂದ 2010ರ ನಡುವೆ ಗುಜರಾತ್ ಜಿಡಿಪಿ ಶೇ.9.8ರಷ್ಟಾಯಿತು. ಇದೇ ವೇಳೆ ರಾಷ್ಟ್ರೀಯ ಜಿಡಿಪಿ ದರ ಶೇ.7.7 ಇತ್ತು. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗುಜರಾತ್ ತನ್ನ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿತು, ಆ ರಾಜ್ಯದ ಎಲ್ಲ ಗ್ರಾಮಗಳಿಗೂ ವಿದ್ಯುತ್ ತಲುಪಿಸಿತು. ಗುಜರಾತ್ ಮಾದರಿ ಅಭಿವೃದ್ಧಿ ಎಲ್ಲ ಕಡೆ ಚರ್ಚೆಯಾಯಿತು.

    ಮಧ್ಯಪ್ರದೇಶ: ಬಿಜೆಪಿ ಅಧಿಕಾರಾವಧಿಯಲ್ಲಿ, ನೀರಾವರಿ ಅನುಪಾತದಲ್ಲಿ ಶೇಕಡ 35 ಏರಿಕೆ ಕಂಡಿತು. ಸರ್ಕಾರದಿಂದ ಬೆಂಬಲ ಬೆಲೆ ನೀಡಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ರೂಪಿಸಿದ ‘ಭಾವಾಂತರ ಭುಗತಾನ್ ಯೋಜನೆ’ಯ ಫಲವಾಗಿ, ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಿದ್ದಾಗ ಸರ್ಕಾರದಿಂದ ಬೆಂಬಲ ಬೆಲೆ ನಿರಾತಂಕವಾಗಿ ಲಭಿಸುತ್ತಿದೆ.

    ಛತ್ತೀಸ್​ಗಢ: ಕೈಗಾರಿಕೋದ್ಯಮಿಗಳು ರಾಜ್ಯದತ್ತ ಆಕರ್ಷಿತರಾಗುತ್ತಿದ್ದಾರೆ. 2003ರಲ್ಲಿ -ಠಿ; 7 ಸಾವಿರ ಕೋಟಿ ರೂ. ಇದ್ದ ರಾಜ್ಯ ಬಜೆಟ್ ಗಾತ್ರ 2018ರಲ್ಲಿ -ಠಿ; 78 ಸಾವಿರ ಕೋಟಿಗೆ ಹೆಚ್ಚಿತು.

    ಕರ್ನಾಟಕ: ಬಿ.ಎಸ್. ಯಡಿಯೂರಪ್ಪ ಬಿಜೆಪಿಯಿಂದ ಮೊದಲ ಉಪಮುಖ್ಯ ಮಂತ್ರಿ, ಮುಖ್ಯಮಂತ್ರಿಯಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ‘ಭಾಗ್ಯಲಕ್ಷಿ್ಮ’ ಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗೆ ‘ಸಂಧ್ಯಾ ಸುರಕ್ಷಾ ಯೋಜನೆ’, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್​ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.

    ಉತ್ತರ ಪ್ರದೇಶ: ಪೊಲೀಸರಿಗೆ ಸ್ವಾತಂತ್ರ್ಯ ನೀಡಿರುವುದ ರಿಂದ, ಅಕ್ರಮ ಗಣಿಗಾರಿಕೆ, ಅಕ್ರಮ ಕಸಾಯಿ ಖಾನೆ, ಭೂಮಾಫಿಯಾಕ್ಕೆ ಕಡಿವಾಣ ಬಿದ್ದಿದೆ. 2017ರಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು. ಈಗ ಯೋಗಿ ಆದಿತ್ಯನಾಥರ ಆಡಳಿತದಲ್ಲಿ 7 ವಿಮಾನ ನಿಲ್ದಾಣಗಳು ಸೇರಿಕೊಂಡಿವೆ.

    370ನೇ ವಿಧಿ ರದ್ದು: ನಮ್ಮ ದೇಶದ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ಇತರ ಸೌಲಭ್ಯಗಳು ಜಮ್ಮು ಮತ್ತು ಕಾಶ್ಮೀರ ಜನತೆಗೆ ಅನ್ವಯವಾಗುತ್ತಿಲ್ಲ ಎಂಬುದನ್ನು ಡಾ. ಶಾಮಪ್ರಸಾದ್ ಮುಖರ್ಜಿ ಸಹಿಸುತ್ತಿರಲಿಲ್ಲ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆರವುಗೊಳಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಿನ್ನಡೆ ಆಗುತ್ತದೆ, ದೇಶದಲ್ಲಿ ಅಲ್ಪಸಂಖ್ಯಾತರು ಸಿಟ್ಟಾಗುತ್ತಾರೆ, ಕಾನೂನು ಸುವ್ಯವಸ್ಥೆ ಕೈಮೀರಿಹೋಗುತ್ತದೆ ಎಂಬ ಅನೇಕ ಆತಂಕಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ದೃಢನಿರ್ಧಾರದ ಕಾರಣದಿಂದಾಗಿ, 370ನೇ ವಿಧಿ ಎಂಬ ಕಳಂಕವನ್ನು ಆ ರಾಜ್ಯದಿಂದ ತೆರವುಗೊಳಿಸಲಾಯಿತು. ಸ್ವಾತಂತ್ರ್ಯ ಲಭಿಸಿ 7 ದಶಕದ ನಂತರ ನಿಜವಾಗಿ ದೇಶದ ಎಲ್ಲ ಭೂಭಾಗಗಳೂ ಒಂದಾದವು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ರಚನೆಯಾಗಿದ್ದ ಸರ್ಕಾರ ಹಳ್ಳಿಗಳ ರಸ್ತೆ ಅಭಿವದ್ಧಿ, ಸುವರ್ಣ ಚತುಷ್ಪಥ ಕಾರಿಡಾರ್ ಯೋಜನೆಗಳ ಮೂಲಕ ಆರ್ಥಿಕ ಚಟುವಟಿಕೆಗೆ ಒತ್ತು ನೀಡಿತು. ಸರ್ವ ಶಿಕ್ಷಣ ಅಭಿಯಾನ ಸೇರಿ ಅನೇಕ ದೂರಗಾಮಿ ಉಪಯೋಗಿ ಯೋಜನೆಗಳನ್ನು ಜಾರಿ ಮಾಡಿತು.

    ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ನಿಷೇಧ, ದೇಶದ ನೈರ್ಮಲ್ಯೀಕರಣದ ಅತಿ ದೊಡ್ಡ ಆಂದೋಲನವಾದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ, ಜನೌಷಧಿ ಮಳಿಗೆಗಳ ಸ್ಥಾಪನೆ ಮೂಲಕ ಶೇಕಡ 70ರಷ್ಟು ಕಡಿಮೆ ದರದಲ್ಲಿ ಜನರಿಗೆ ಔಷಧ ನೀಡಿಕೆ, ಕರೊನಾ ಮಹಾಮಾರಿ ಎದುರಿಸಲು ಎರಡು ಲಸಿಕೆಗಳ ಸಂಶೋಧನೆಗೆ ವಿಜ್ಞಾನಿಗಳಿಗೆ ನೆರವು, ಬೆಂಬಲ ನೀಡಿ ಗಮನ ಸೆಳೆಯಿತು.

    ಬಿಜೆಪಿ ಸರ್ಕಾರ ರಚನೆಯಾದರೆ ಸಮಾಜದ ಎಲ್ಲ ವರ್ಗಗಳಿಗೂ ಯೋಜನೆ ರೂಪಿಸುವುದರ ಜತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂಬುದು ದೇಶದ ಜನರಿಗೆ ಮನವರಿಕೆಯಾಗಿದೆ. ಚುನಾವಣಾ ಲೆಕ್ಕಾಚಾರದಲ್ಲಿ ಅಲ್ಲೊಂದು ಇಲ್ಲೊಂದು ಏರಿಳಿತಗಳು ಇದ್ದೇ ಇವೆ. ಸೋಲು-ಗೆಲುವು ರಾಜಕೀಯದ ಅವಿಭಾಜ್ಯ ಅಂಗಗಳು. ಆದರೆ ಬಿಜೆಪಿ ಕುರಿತ ಜನರ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ, ಅದನ್ನು ಈಡೇರಿಸಲು ಪಕ್ಷದ ಸರ್ಕಾರಗಳು ಪ್ರಯತ್ನವನ್ನಂತೂ ನಡೆಸಿವೆ ಎಂಬುದು ಈ ಮೇಲಿನ ಕೆಲವು ಉದಾಹರಣೆಗಳನ್ನು ಕಂಡರೆ ತಿಳಿಯುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ, ಜನಸಂಘದಿಂದ ಆರಂಭವಾದ ರಾಜಕೀಯ ಚಿಂತನೆ ಇದೀಗ ಅಭಿವೃದ್ಧಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ಬೆಳೆದಿದೆ.

    (ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts