More

    ಗುಮ್ಮನ ಕರೆಯದಿರೇ ಅಮ್ಮಾ ನೀನು… ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳುತ್ತಿರುವುದು ಏಕೆ?

    ಗುಮ್ಮನ ಕರೆಯದಿರೇ ಅಮ್ಮಾ ನೀನು... ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳುತ್ತಿರುವುದು ಏಕೆ?

    ಹಿಂದಿನ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಗುಮ್ಮನ ಬಗ್ಗೆ ಹೆದರದವರಿಲ್ಲ! ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಕಷ್ಟಪಡುತ್ತಿದ್ದ ತಾಯಿ, ಅಜ್ಜಿ ಮತ್ತು ಹಿರಿಯರು ಸಮಯ ಬಂದಾಗ ಈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಿದ್ದರು. ‘ಹೇಳಿದ ಹಾಗೆ ಕೇಳು, ಇಲ್ಲದಿದ್ದರೆ ಗುಮ್ಮನ ಕರೆಯುತ್ತೇನೆ’ ಅಥವಾ ‘ನೋಡು ಗುಮ್ಮ ಬರುತ್ತಾನೆ’ ಎನ್ನುತ್ತಿದ್ದರು. ಕಣ್ಣಿಗೆ ಕಾಣದ ಗುಮ್ಮನ ಬಗ್ಗೆ ಭಯಪಟ್ಟು, ಬಾಲ ಮುದುಡಿ ಕುಳಿತ ಪ್ರಾಣಿಗಳ ಹಾಗೆ ಮಕ್ಕಳು ಸುಮ್ಮನಾಗುತ್ತಿದ್ದರು. ನಿಮ್ಮ ನಿಮ್ಮ ಊರುಗಳಲ್ಲೂ ಇಂತಹದ್ದೇ ಗುಮ್ಮನ ಕಥೆಯಿರಲೇ ಬೇಕಲ್ಲವೆ!

    ಹಳ್ಳಿಗಳಲ್ಲಿ ಧಡೂತಿ ದೇಹದವರು, ಕರ್ಕಶ ಸ್ವರ ಉಳ್ಳವರು, ದೊಡ್ಡ ಹೊಟ್ಟೆಯವರು ಹೀಗೆ ಗುಮ್ಮನ ಪ್ರತ್ಯಕ್ಷ ಮಾದರಿಯೋ, ಉದಾಹರಣೆಯೋ ಆಗಿ ಕಲ್ಪನೆಗೆ ಸಾಕಾರ ಮೂರ್ತಿಗಳಾಗುತ್ತಿದ್ದರು. ಎಂತಹ ಹಠಮಾರಿ ಮಕ್ಕಳೂ ಈ ರೂಪಗಳಿರುವವರನ್ನು ಹೆಸರಿಸಿದರೆ ಸಾಕು ತಣ್ಣಗಾಗುತ್ತಿದ್ದರು. ಹೇಳಿದ ಹಾಗೆ ಕೇಳುತ್ತಿದ್ದರು. ಹಳ್ಳಿಗಳಲ್ಲಿ ಹಿಂದೆ ವಿದ್ಯುಚ್ಛಕ್ತಿಯ ಬೆಳಕು ಇರಲಿಲ್ಲ. ಕೇವಲ ಸೀಮೆಎಣ್ಣೆಯ ದೀಪವನ್ನು ಬಳಸುತ್ತಿದ್ದರು. ಅದು ವಿದ್ಯುತ್ತಿನ ಬಲ್ಬಿನ ಹಾಗೆ ದೊಡ್ಡ ಜಾಗಕ್ಕೆ ಬೆಳಕನ್ನು ನೀಡುತ್ತಿರಲಿಲ್ಲ. ಸೂರ್ಯಾಸ್ತದ ನಂತರ ಎಲ್ಲೆಡೆ ಕತ್ತಲೆಯೆ. ಈ ಕತ್ತಲು ಗುಮ್ಮನಿಗೆ ಒಳ್ಳೆ ರಕ್ಷಣೆ ಕೊಡುತ್ತಿತ್ತು. ಮಕ್ಕಳೇನಾದರೂ ಗುಮ್ಮನೆಲ್ಲಿದ್ದಾನೆಂದು ಪ್ರಶ್ನಿಸಿದರೆ ಕತ್ತಲೆಯನ್ನು ತೋರಿಸುತ್ತಿದ್ದರು. ಗುಮ್ಮ ಕಪ್ಪಗಿದ್ದಾನೆಂದೋ, ಕತ್ತಲೆಯಲ್ಲಿ ಅಡಗಿಕೊಂಡಿದ್ದಾನೆಂದೋ, ತಾವು ಗಲಾಟೆ ಮಾಡಿದರೆ ಬಂದು ಎಳೆದುಕೊಂಡು ಹೋಗುತ್ತಾನೆ ಎಂದೋ ಮಕ್ಕಳು ಪೂರ್ಣ ವಿಶ್ವಾಸವನ್ನು ಹೊಂದಿ, ಅಮ್ಮ, ಅಜ್ಜಿಯರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

    ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಕೇರಳ ಮತ್ತು ತುಳುನಾಡಿನಲ್ಲಿ ಭೂತಾರಾಧನೆ ಒಂದು ವಿಶಿಷ್ಟ ಸಂಪ್ರದಾಯ. ಭೂತದ ಆರಾಧನೆಯ ಮುಖ್ಯ ಅಂಗವಾದ ಕೋಲದಲ್ಲಿ ಕಂಡ ಭೂತಗಳ ಭೀಕರ ಸ್ವರೂಪ, ಆವೇಶ, ಎತ್ತರಿಸಿದ ಆರ್ಭಟಗಳು ಗುಮ್ಮನ ಕಲ್ಪನೆಗೆ ಉತ್ತಮ ಮಾದರಿಗಳಾಗುತ್ತಿದ್ದವು. ಸಾಲದೆಂಬಂತೆ ಗ್ರಾಮದ ಮತ್ತು ಕುಟುಂಬದ ಹಿರಿಯರು ಆ ಕೋಲದ ಸಂದರ್ಭಗಳಲ್ಲಿ ಭೂತಗಳಿಗೆ ನಮಿಸುವುದು, ಹೇಳಿದಂತೆ ನಡೆದುಕೊಳ್ಳುವುದು ಮತ್ತು ಭೂತಗಳ ಬಗ್ಗೆ ಅಪಾರ ಗೌರವವನ್ನು ತೋರಿಸುತ್ತಿದ್ದರು. ಆ ಭೂತವು ‘ಹೇಳಿದಂತೆ ಕೇಳು. ಅಭಯ ನೀಡುತ್ತೇನೆ. ನಂಬಿದರೆ ನಡೆಸಿಕೊಳ್ಳುತ್ತೇನೆ. ಅಥವಾ ತಪ್ಪಿದರೆ ಯಥಾಯೋಗ್ಯ ಶಿಕ್ಷೆ ಅನುಭವಿಸು’ ಎಂದು ಆದೇಶಿಸುತ್ತಿತ್ತು. ತಮ್ಮನ್ನು ಹದ್ದುಬಸ್ತಿನಲ್ಲಿಡಲು ಪ್ರಯೋಗಿಸುವ ನಿರಾಕಾರ ಗುಮ್ಮನಿಗೆ ಭೂತದ ರೂಪವನ್ನು ಮಕ್ಕಳು ಕಲ್ಪಿಸುತ್ತಾರೆ. ಭೂತದ ಹಾಗೆ ಗುಮ್ಮನೂ ಭಯ ಮತ್ತು ಭಕ್ತಿಯನ್ನು ಕಾಪಾಡುವ ಭಯಂಕರ ರೂಪವಾಗಿಬಿಡುತ್ತಿತ್ತು.

    ಹಿಂದಿನ ಕಾಲದಲ್ಲಿ ಮನೆಯಲ್ಲಿ ಮಕ್ಕಳೂ ಹೆಚ್ಚು. ತಾಯಿ, ಅಜ್ಜಿಯಂದಿರು ಮನೆವಾರ್ತೆ ನೋಡಿಕೊಳ್ಳುತ್ತಿದ್ದರು. ಗಂಡಸರು ನಿಶ್ಚಿಂತೆಯಿಂದ ಕೃಷಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹಸಿವೆಯಿಂದ ಮತ್ತು ಸ್ವಭಾವದಿಂದಲೇ ಚಂಡಿ ಹಿಡಿಯುವ ಮಕ್ಕಳಿಗೆ ಒಂದೇ ಅಸ್ತ್ರ, ‘ಗುಮ್ಮನ ಕರೆಯುತ್ತೇನೆ’ ‘ನಿನ್ನನ್ನು ಅವನಿಗೆ ಕೊಡುತ್ತೇನೆ’ ‘ಕರೆದುಕೊಂಡು ಹೋದರೆ ಮಾರಿಯೊಂದು ಹೋದಂತಾಯಿತು’ ಎಂದಾಗ ಆನೆಯನ್ನು ಸಣ್ಣ ಅಂಕುಶದ ಮೊನೆಯಿಂದ ನಿಯಂತ್ರಿಸಿದಂತೆ ಮಕ್ಕಳ ಹತೋಟಿ ಆಗುತ್ತಿತ್ತು.

    ಪುರಂದರದಾಸರು ಪ್ರಚಲಿತವಿರಬಹುದಾದ ಈ ರೂಢಿಯನ್ನು ಅಸಾಧ್ಯ ತುಂಟ ಕೃಷ್ಣನನ್ನು ರಮಿಸಲು ಅಥವಾ ಹತೋಟಿಯಲ್ಲಿಡಲು ಬೆದರಿಸುವಂತೆ ಹಾಡು ಬರೆದರು. ಯಶೋದೆ ತುಂಟ ಕೃಷ್ಣನನ್ನು ರಮಿಸಿ, ಮುದ್ದಾಡಿ ಹತೋಟಿ ಮಾಡಲು ಆಗದೆ ‘ನೋಡು ಗುಮ್ಮನ ಕರೆಯುತ್ತೇನೆ’ ಅನ್ನುತ್ತಾಳೆ. ಆಗ ಮಗು ಕೃಷ್ಣ ‘ಬೇಡಮ್ಮ ಗುಮ್ಮನ ಕರೆಯದಿರು, ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲ, ಚಿಣ್ಣರ ಬಡಿಯೆನು, ಅಣ್ಣನ ಬೈಯೆನು, ಬೆಣ್ಣೆಯ ಬೇಡೆನು, ಮಣ್ಣು ತಿನ್ನುವುದಿಲ್ಲ’ ಎಂದು ಗೋಗರೆಯುತ್ತಾನೆ.

    ಈ ಗುಮ್ಮನ ಕರೆಯಲ್ಲಿ ಪ್ರೀತಿಯೂ ಇದೆ. ತಾಯಿಯ ಮಮತೆಯ ಬುದ್ಧಿವಂತಿಕೆಯೂ ಇದೆ. ತುಂಟ ಮಕ್ಕಳನ್ನು ಲಲ್ಲೆಗರೆಯುತ್ತಾ ಅವರನ್ನೆ ಕೃಷ್ಣನೆಂದು ಭಾವಿಸುತ್ತಾ ಈ ಹಾಡನ್ನು ಹೇಳುತ್ತಿದ್ದರೆ ಎಂತಹ ಸುಖ ಸಂತೋಷ ಆನಂದವಿರಬಹುದೆಂದು ನಾವು ಅರಿಯಬಹುದು. ಗುಮ್ಮನ ಕಾರಣದಿಂದಾಗಿ ಮಗುವು ಅನಾಯಾಸವಾಗಿ ಊಟಮಾಡುತ್ತದೆ. ತಾಯಿಯನ್ನೋ ಅಜ್ಜಿಯನ್ನೋ ಅಪ್ಪಿಕೊಂಡು ರಮಿಸುವಂತೆ ಮಾಡುತ್ತದೆ. ಮನೆಯಿಂದ ಎಲ್ಲೆಲ್ಲೋ ಓಡಿ ಹೋಗುವುದಿಲ್ಲ.

    ಈ ವಿಚಾರಗಳು ನೆನಪಾದುದು ಸದ್ಯದ ಕರೊನಾ ವೈರಸ್ಸಿನಿಂದ ಎಲ್ಲರೂ ಮನೆಯೊಳಗೇ ಕಾಲ ಕಳೆಯುವಂತೆ ಆದಾಗ. ಟಿವಿ, ಪತ್ರಿಕೆಗಳು, ಮೊಬೈಲ್ ಮೂಲಕ ಈ ವೈರಸ್​ನ ಶಕ್ತಿ, ಮಹಿಮೆ, ವಿಶ್ವವ್ಯಾಪಕತೆ, ಮತ್ತು ಕಣ್ಣಿಗೆ ಬೀಳದೆ ಸೋಂಕು ತಗುಲುವ ಮಾಹಿತಿ ಪಡೆದುಕೊಂಡವರು ಮನೆಯೊಳಗೇ ಬಚ್ಚಿಟ್ಟುಕೊಂಡರು. ಮಕ್ಕಳಿಗೆ ರಜೆ, ಗಂಡಸರು ಮನೆಯಿಂದ ಹೊರಹೋಗಿ ದುಡಿಯುವುದಕ್ಕೆ ರಜೆ. ಮನೆಯ ಗೃಹಿಣಿಯರಿಗೆ ಮಾತ್ರ ಅಸಾಧ್ಯ ಒತ್ತಡ, ಎಲ್ಲರನ್ನೂ ಸಂಭಾಳಿಸಬೇಕು.

    ಕಣ್ಣಿಗೆ ಕಾಣದ ಸೋಂಕು (ವೈರಸ್) ಬಗ್ಗೆ ಹೇಗೆ ವಿವರಿಸುವುದು? ಅದು ಗುಮ್ಮನಂತೆ, ಅಗೋಚರವಾದುದು. ಆದರೆ ಹೇಗಾದರೂ ಮಾಡಿ ಮನೆಯನ್ನೋ ದೇಹವನ್ನೋ ಪ್ರವೇಶಿಸಿದರೆ ಅನೇಕ ಹಿಂಸೆಗಳನ್ನು ನೀಡುತ್ತದೆ. ಪ್ರಾಣಕ್ಕೂ ಸಂಚಕಾರ ತರುತ್ತದೆ. ಆ ಗುಮ್ಮ ಮಕ್ಕಳನ್ನು ಮಾತ್ರ ಹೆದರಿಸುತ್ತಿದ್ದ. ಈ ಗುಮ್ಮ ಸಮಸ್ತ ವಿಶ್ವವನ್ನೇ ಹೆದರಿಸುತ್ತಿದೆ. ಇಂದು ಆ ತಾಯಿ ಹೀಗೆ ಹೇಳಬೇಕಷ್ಟೆ- ‘ಮನೆಯೊಳಗಾಡೊ ಗೋವಿಂದ’. ಮನೆಯ ಹೊರಗೆ ಹೋಗಬಾರದು. ಅಲ್ಲಿ ಗುಮ್ಮನಿದ್ದಾನೆ. ಆ ಗುಮ್ಮನೇ ಕರೊನಾ. ಆ ಗುಮ್ಮನಿಂದ ದೂರವಿರುವುದೇ ಇಂದಿನ ತುರ್ತು ಅವಶ್ಯಕತೆಯಾಗಿದೆ. ಮಕ್ಕಳು ಆಟವಾಡಲು ಹೊರಗೆ ಮತ್ತು ನೆರೆಮನೆಗಳಿಗೆ ಹೋಗಲು ಬಯಸುತ್ತಾರೆ. ಎಲ್ಲೆಡೆಯೂ ಎಲ್ಲರೂ ಕರೊನಾದ ನಿಯಂತ್ರಣದಲ್ಲಿರುವಾಗ ನೆರೆಮನೆಯ ಮಕ್ಕಳೂ ಬರುವುದು ಬೇಡ, ನಾವೂ ಹೋಗುವುದು ಬೇಡ. ಈಗ ನೆನಪುಮಾಡಿಕೊಳ್ಳಬೇಕಾದ್ದು ಪುರಂದರದಾಸರ ಮತ್ತೊಂದು ಹಾಡು- ‘ಮನೆಯೊಳಗಾಡೊ ಗೋವಿಂದ/ನೆರೆಮನೆಗಳಿಗೇಕೆ ಪೋಗುವೆಯೋ ಮುಕುಂದ/ನೊಸಲಿಗೆ ತಿಲಕವನಿಡುವೆ/ಅಚ್ಚ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯವ ಕೊಡುವೆ/ಹೊಸ ಆಭರಣಗಳನೀಡುವೆ/ ಮುದ್ದು ಹಸುಳೆ ನಿನ್ನನು ನೋಡಿ ಸಂತೋಷವ ಪಡುವೆ/ಅಣ್ಣಯ್ಯ ಬಲರಾಮ ಸಹಿತ ನೀನು ಅಲ್ಲಲ್ಲಿ ತಿರುಗಾಡುವುದೇನೋ ವಿಹಿತ?/ಎನ್ನ ಬಿನ್ನಹವನು ಪರಿಪಾಲಿಸೋ’ (ಸಂಕ್ಷಿಪ್ತವಾಗಿ).

    ತಿಳಿವಳಿಕೆಯಿರುವವರಿಗೆ, ವಯಸ್ಸಿಗೆ ಬಂದವರಿಗೆ ‘ಹುಷಾರು! ಕರೊನಾ ಬರಬಹುದು’ ಎಂದು ಎಚ್ಚರಿಸಬಹುದು. ಸರಕಾರದ ಆದೇಶ ಪಾಲಿಸಿರಿ ಎನ್ನಬಹುದು. ಆದರೆ ಮಕ್ಕಳಿಗೆ ಅಂದರೆ ಸುಮಾರು 7-8 ವರ್ಷದ ಒಳಗಿನವರಿಗೆ ವಿವರಿಸುವುದು ಹೇಗೆ? ಕಣ್ಣಿಗೆ ನಿಲುಕದ, ಅಳೆಯಲಾಗದ ಶಕ್ತಿಯ ರಾಕ್ಷಸ. ನಮ್ಮ ಮನೆಯಲ್ಲಿ ಯಾ ನೆರೆಕೆರೆಯಲ್ಲಿ ಅಗೋಚರವಾಗಿ ಇದ್ದು ಸಾಧಿಸಬಹುದಾದ ದುಷ್ಟ. ಚೀನಾದಿಂದ ಹೊರಟವನಂತೆ. ವಿಶ್ವವ್ಯಾಪಿಯಾಗುತ್ತಿದ್ದಾನಂತೆ. ಇಂಗ್ಲೆಂಡಿನ ಪ್ರಧಾನಿಯನ್ನೂ ಬಿಟ್ಟಿಲ್ಲವಂತೆ, ಅಮೆರಿಕಾದಂಥ ಬುದ್ಧಿವಂತ ಮತ್ತು ಶಕ್ತಿವಂತ ರಾಷ್ಟ್ರದಲ್ಲಿಯೂ ಅಲೆದಾಡುತ್ತಿದ್ದಾನಂತೆ. ನಮ್ಮ ದೇಶದಲ್ಲೂ ಇದ್ದಾನಂತೆ. ರಾಷ್ಟ್ರದ ಪ್ರಧಾನಿಯವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳೂ ಎಚ್ಚರಿಸುತ್ತಿದ್ದಾರೆ. ಕಾಣದ ದೈವಕ್ಕೆ, ಭೂತಕ್ಕೆ(ಕರೊನಾಕ್ಕಾಗಿ) ಹರಕೆ(ಔಷಧಿ) ಸದ್ಯಕ್ಕೆ ಇಲ್ಲವಂತೆ. ಇವುಗಳನ್ನೆಲ್ಲಾ ತಿಳಿದು ಮಕ್ಕಳಿಗೆ ವಿವರಿಸಿ, ಸಮಜಾಯಿಷಿ ನೀಡಿ ‘ಮನೆಯೊಳಗಾಡೋ ಗೋವಿಂದಾ’ ಎಂದು ಹತೋಟಿಯಲ್ಲಿಡಲು ಸಾಧ್ಯವೇ?

    ಪಾಪ ಈ ಮಹಿಳೆಯರ ಪಾಡು ಚಿಂತಾಜನಕ. ಮನೆಯೊಳಗೆ ಇರುವ ಗಂಡಸರು ಆಟವಾಡಿಸಿ ಲಲ್ಲೆಗರೆದು ಮಕ್ಕಳನ್ನು ಸುಧಾರಿಸಬಲ್ಲರೇ? (ಞಚ್ಞಚಜಛಿ). ಕರೊನಾ ಬಗ್ಗೆ ಎಚ್ಚರಿಕೆ ಮೂಡಿಸಲು, ಆ ರಾಕ್ಷಸನ ಪ್ರವೇಶವನ್ನು ಮನೆಯೊಳಗೆ ಮತ್ತು ಊರೊಳಗೆ ತಡೆಯಬೇಕಾದರೆ ಸಂಯಮ, ತಾಳ್ಮೆ, ಸಹನೆ, ಸಂಘಟನೆ-ಇನ್ನೂ ಏನೇನೋ ಬೇಕು. ಒಂದು ಸಂಭಾಷಣೆ ಕೇಳಿದ್ದು (ಮೊಬೈಲ್​ನಲ್ಲಿ). ಮನೆಯಲ್ಲಿ ತಾಯಿ ಮಗಳು ಕುಳಿತಿದ್ದಾರೆ. ತಾಯಿ ಕೇಳುತ್ತಾಳೆ. ‘ಸುಮ್ಮನೆ ಕುಳಿತಿದ್ದಿಯಲ್ಲ. ಹೊರಗೆ ಆಟಕ್ಕೆ ಹೋಗುವುದಿಲ್ಲವೇ?’ ಮಗು ಹೇಳುತ್ತದೆ. ‘ಇಲ್ಲ. ಯಾಕೆಂದರೆ ಮನೆಯಿಂದ ಹೊರಗೆ ಹೋದರೆ ಕರೊನಾ ಬರುತ್ತೆ’. ‘ಹಾಗೆಂದರೆ ಏನು?’ ‘ಅದೇ ನೆಗಡಿ, ಕೆಮ್ಮು, ಜ್ವರ ಬರಬಹುದು. ಆಮೇಲೆ ಇಂಜೆಕ್ಷನ್ ಇತ್ಯಾದಿ ನೋವು ಅನುಭವಿಸಬೇಕಾದೀತು’ ಅರೇ ಈ ಮಗುವಿಗೆ ಈ ಎಚ್ಚರಿಕೆ ಹೇಗೆ ಉಂಟಾಯಿತೆಂದು ಆಲೋಚಿಸುತ್ತಾ ಅಮ್ಮ ಕೇಳುತ್ತಾಳೆ. ‘ನಿನಗೆ ಹೇಗೆ ಇವೆಲ್ಲಾ ಗೊತ್ತಾಯಿತು?’. ಆಗ ಮಗು ಹೇಳುತ್ತದೆ- ‘ಮೊನ್ನೆ ಅಜ್ಜ ಹೇಳಿದ್ದಾರಲ್ಲ’ ‘ಯಾರು ಅಜ್ಜ?’ ‘ಅವರೇ ನನ್ನ ಮೋದಿ ಅಜ್ಜ’ ಎನ್ನಬೇಕೆ ಮಗು!

    ಈ ಮಗುವಿಗೆ ಬಂದ ತಿಳಿವಳಿಕೆ ಆ ಕುಟುಂಬಕ್ಕೆ ಸಹಕಾರಿಯಾಯಿತು. ಬೆದರಿಕೆಗಿಂತ ಪ್ರಜ್ಞಾವಂತಿಕೆ ಗೆದ್ದಿತು.

    ಇಂದು ಕರೊನಾ ಮಹಾಮಾರಿ ಇಡೀ ವಿಶ್ವವನ್ನು ತನ್ನ ಕಬಂಧ ಬಾಹುವಿನಿಂದ ಬಾಚಿಕೊಳ್ಳುತ್ತಿದೆ. ಲಕ್ಷೋಪಲಕ್ಷ ಜನರ ಪ್ರಾಣವನ್ನೇ ಹಿಂಡಿದೆ. ಇಲ್ಲಿಯವರೆಗೆ ಈ ಸೋಂಕಿಗೆ ಔಷಧ ಸಿಕ್ಕಿಲ್ಲ. ಹಾಗಾಗಿ ಸಂಯಮ ಮತ್ತು ಸಂಕಲ್ಪಶಕ್ತಿಯಿಂದಲೇ ಇದನ್ನು ದೂರಮಾಡಿಕೊಳ್ಳಬೇಕಾಗಿದೆ. ಒಂದು ಸಣ್ಣ ಅಜಾಗರೂಕತೆ, ಅಜ್ಞಾನ, ಅಥವಾ ವಿಪರೀತ ಜ್ಞಾನ ನಮ್ಮ ಮನುಕುಲಕ್ಕೇ ಅಪಾಯವನ್ನು ತಂದು ಬಿಡಬಹುದು. ‘ಶರೀರಮ್ ಆದ್ಯಂ ಖಲು ಧರ್ಮಸಾಧನಮ್ ಎಂಬ ಉಕ್ತಿಯಂತೆ ಈ ದೇಹ ಆರೋಗ್ಯಪೂರ್ಣವಾಗಿದ್ದರೆ ತಾನೆ ಜೀವನದ ಗುರಿಯನ್ನು ತಲುಪಬಹುದು. ಅದರಲ್ಲೂ ಇಂತಹ ಸಾಂಕ್ರಾಮಿಕ ಕಾಯಿಲೆಯಲ್ಲಿ ವಿಶೇಷವಾದ ಮುತುವರ್ಜಿ ಹೊಂದಿರಬೇಕು. ಬೇರೆಯವರಿಂದ ನಮಗೆ ರೋಗ ಬರದಂತೆ ಹಾಗೆಯೇ ನಮ್ಮಿಂದ ಉಳಿದವರಿಗೆ ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತಾಳಬೇಕು.

    ನಮಗೆ ಈ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ಹೇಗೆ? ನಾವು ನಮ್ಮ ಮನೆಯಲ್ಲಿಯೇ ಇರಬೇಕು. ಮನೆಯಲ್ಲೇ ತಯಾರಿಸಿದ ಶುದ್ಧ ಸಾತ್ವಿಕ ಆಹಾರವನ್ನು ಸೇವಿಸಬೇಕು. ಕಾಲಕಾಲಕ್ಕೆ ಸೋಪಿನಿಂದ ಕೈ ತೊಳೆಯುತ್ತಿರಬೇಕು. ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಹೋಗುವಾಗ ಮುಖಕವಚ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಗೆ ಮರಳಿದ ನಂತರ ನೇರವಾಗಿ ಸ್ನಾನದ ಕೋಣೆಗೆ ಹೋಗಿ ಧರಿಸಿದ ವಸ್ತ್ರವನ್ನು ತೊಳೆದು ಸ್ನಾನಮಾಡಬೇಕು. ಹಿಂದಿನ ಕಾಲದಲ್ಲಿ ಪೇಟೆಗೆ ಹೋದವರು, ಶಾಲಾಮಕ್ಕಳು ಮನೆಗೆ ಹಿಂತಿರುಗಿದ ನಂತರ ಹೀಗೇ ಮಾಡುತ್ತಿದ್ದರು.

    ಇಂದು ನಮ್ಮ ದೇಶದಲ್ಲಿ ಕರೊನಾ ಸಂಖ್ಯೆ ಹೆಚ್ಚಾಗಿರುವುದು ಸೋಂಕಿತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದರಿಂದಲೇ ಆದದ್ದು. ಈ ಸೋಂಕನ್ನು ಇನ್ನೊಬ್ಬರಿಗೆ ಹರಡುವುದು ಮಹಾಪಾಪದ ಕೆಲಸ. ಹಾಗಾಗಿ ಕರೊನಾ ಬರಬಹುದೆಂಬ ಸಂಶಯವುಳ್ಳವರೆಲ್ಲರೂ ಸ್ವಯಂಪರೀಕ್ಷೆಗೆ ಒಳಗಾಗಬೇಕು. ಜನಸಂಪರ್ಕದಿಂದ ದೂರವೇ ಇರಬೇಕು. ಆತ್ಮನಿಯಂತ್ರಣ ಸಾಧ್ಯವಿಲ್ಲದವನು ಪತಿತನಾಗುತ್ತಾನೆ.

    ದಿನವಿಡೀ ಹೊರಗಡೆಯ ಉದ್ಯೋಗಗಳಲ್ಲಿ ವ್ಯಸ್ತರಾಗಿದ್ದವರಿಗೆ ಒಮ್ಮೆಲೇ ಮನೆಯಲ್ಲಿ ಕೂರುವುದು ಕಷ್ಟವೆನಿಸಬಹುದು. ಈ ಸಂದರ್ಭವನ್ನು ಸಕಾರಾತ್ಮಕ ದೃಷ್ಟಿಯಿಂದ ಆಲೋಚಿಸಿ, ಮನಸ್ಸಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು.

    ಗತಂ ನ ಚಿಂತಯೇತ್ ಪ್ರಾಜ್ಞಃ ಭವಿಷ್ಯಂ ನ ಚ ಚಿಂತಯೇತ್ |

    ವರ್ತಮಾನೇನ ಕಾಲೇನ ವರ್ತಂತೇ ಹಿ ವಿಚಕ್ಷಣಾಃ ||

    ಬುದ್ಧಿವಂತರಾದವರು ಘಟಿಸಿಹೋದದ್ದರ ಬಗ್ಗೆ ಪರಿತಪಿಸುವುದಿಲ್ಲ. ಇನ್ನು ಮುಂದೆ ಘಟಿಸುವುದರ ಬಗ್ಗೆಯೂ ವ್ಯಥೆಯನ್ನು ಹೊಂದುವುದಿಲ್ಲ. ಅವರ ಮನಸ್ಸು ಸದಾ ವರ್ತಮಾನದಲ್ಲೇ ಇರುತ್ತದೆೆ. ಈಗ ನಮಗೆ ಒದಗಿದ ಪರಿಸ್ಥಿತಿಯನ್ನು ಒಳಿತಾಗಿ, ಒಳಿತಿಗಾಗಿ ಪರಿವರ್ತಿಸಿಕೊಳ್ಳಬೇಕು. ಕುಟುಂಬದೊಂದಿಗೆ ಕಾಲಕಳೆಯುವ ಸದವಕಾಶ ಸಿಕ್ಕಿದೆ. ರಾಮಾಯಣ, ಮಹಾಭಾರತದಂತಹ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡಿ ನಮ್ಮ ಪರಂಪರೆಯನ್ನು ಅರಿತುಕೊಳ್ಳಬಹುದು. ಸಾಹಿತ್ಯ ಸಂಗೀತ ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಬಹುದು. ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂಬ ಹಾರೈಕೆಯಿಂದ ಮನೆಯಲ್ಲಿರುವವರೆಲ್ಲ (ಮಕ್ಕಳನ್ನೂ ಸೇರಿಸಿಕೊಂಡು) ಒಂದು ನಿರ್ದಿಷ್ಟ ಸಮಯದಲ್ಲಿ ಭಜನೆ, ಸ್ತೋತ್ರ ಪಠಣ ಮಾಡುವುದು ಮನಸ್ಸಿಗೆ ವಿಶೇಷವಾದ ಆನಂದವನ್ನು ನೀಡುತ್ತದೆ. ಯೋಗ, ಧ್ಯಾನ ವಿಶೇಷವಾದ ಉಲ್ಲಾಸವನ್ನು ನೀಡುತ್ತದೆ. ಭಾರತೀಯರೆಲ್ಲರೂ ಏಕಮನಸ್ಸಿನಿಂದ ದೇಶದ ಕ್ಷೇಮದ ಬಗ್ಗೆ ನಮ್ಮ ನಮ್ಮ ಮನೆಯಲ್ಲೇ ಪ್ರಾರ್ಥಿಸಿದರೆ, ಆ ಸಂಕಲ್ಪವೇ ನಮ್ಮ ದೇಶವನ್ನು ಈಗಿನ ಗಂಡಾಂತರದಿಂದ ಪಾರುಮಾಡುತ್ತದೆ.

    ಗುಮ್ಮನನ್ನು ಮತ್ತೊಮ್ಮೆ ಕರೆಯುವುದು ಬೇಡ. ಈ ಹಿಂದೆ ಬಾಲ್ಯದಲ್ಲಿ ಬಿತ್ತಿದ ಗುಮ್ಮನ ಹೆದರಿಕೆ ಬದುಕಿನುದ್ದಕ್ಕೂ ಬೆಂಬಿಡದೆ ಕಾಡುತ್ತಿತ್ತು. ಇಂದಿನ ಜನಾಂಗಕ್ಕೆ (ವಿದೇಶೀಯ ಮಕ್ಕಳಂತೆ) ಗುಮ್ಮನ ಹೆದರಿಕೆ ಇಲ್ಲ! ಈಗ ಸ್ಪೈಡರ್ ಮ್ಯಾನ್, ವಿಡಿಯೋ ಆಟಗಳನ್ನು ನೋಡಿದ ಮಕ್ಕಳಿಗೆ ಭೀತಿಯನ್ನುಂಟುಮಾಡುವುದು ಬೇಡ. ಆದರೆ ಸ್ವಯಂ ನಿಯಂತ್ರಣಕ್ಕೆ ಕರೊನಾ ಗುಮ್ಮನ ಕಲ್ಪನೆ ಕೊಟ್ಟ ಮಾಧ್ಯಮಗಳಿಗೆ ಜಯಕಾರವಿರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts