More

    ಸರ್ವಜನಾಂಗದ ನಾಯಕ ಅಂಬೇಡ್ಕರ್

    ಶಿವಮೊಗ್ಗ: ಭಾರತ ಸ್ವಾತಂತ್ರ್ಯ ಪಡೆದ ನಂತರ ಶಾಂತಿಯುತ ಹಾಗೂ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ನಮಗೆಲ್ಲ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಸರಳವಾಗಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಾನ್ ಚಿಂತಕ, ಅಂಬೇಡ್ಕರ್ ಅವರು ಅಸ್ಪಶ್ಯತೆಯಿಂದ ಮುಕ್ತಿ ನೀಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಓರ್ವ ಅರ್ಥಿಕ ತಜ್ಞ, ರಾಜನೀತಿಜ್ಞ ಹಾಗೂ ಆರ್‌ಬಿಐ ಸ್ಥಾಪನೆಗೆ ಕಾರಣರಾದವರು. ಶೋಷಿತ ವರ್ಗ ಮಾತ್ರವಲ್ಲದೆ ಕಾರ್ಮಿಕರು, ಮಹಿಳೆಯರ ಹಕ್ಕು ಮತ್ತು ಕಾಯ್ದೆಗಳನ್ನು ತರುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
    ಅಂಬೇಡ್ಕರ್ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಸರ್ವಜನಾಂಗದ ನಾಯಕ. ಪ್ರತಿ ದಿನ ನಾವು ಕಚೇರಿ, ಇತರೆ ಕೆಲಸಗಳಿಗೆ ತೆರಳುವಾಗ ಸಂವಿಧಾನದ ಪ್ರಸ್ತಾವನೆ ಓದಿ ಅಥವಾ ನೆನಪಿಸಿಕೊಂಡರೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತಾವನೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ನಾವೆಲ್ಲ ಅಂಬೇಡ್ಕರ್ ಅವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಜ್ಞಾನದ ಸಂಪತ್ತು. ಅವರು ಓದಿರುವಷ್ಟು ನಾವು ಓದಲು 100 ಜನ್ಮ ಬೇಕಾಗುತ್ತದೆ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮೌಲ್ಯಗಳನ್ನು ನಾವು ಪಾಲಿಸಬೇಕಾಗಿದೆ. ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದ ನಾವು ಈ ಸ್ಥಾನಕ್ಕೆ ಬರಲು ಸಂವಿಧಾನ ಕಾರಣ. ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ಮೂಲಕ ನಾವು ಈ ಹುದ್ದೆಗೆ ಬರಲು ಕಾರಣವಾಗಿದ್ದು ಜೀವನ ಪೂರ್ತಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ. ಚರ್ಚೆ ಮತ್ತು ಚಿಂತನೆಗಳಲ್ಲಿ ನಂಬಿಕೆ ಇಟ್ಟಿದ್ದರು ಎಂದರು.
    ಜಿಲ್ಲಾ ಪಂಚಾಯತ್ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿ, ಅಂಬೇಡ್ಕರ್ ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿ ದೇಶದ ಎಲ್ಲ ವರ್ಗಗಳ ಏಳ್ಗೆಗಾಗಿ ದುಡಿದವರು ಎಂದರು.
    ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ ಮಾತನಾಡಿ, ಸಂವಿಧಾನವನ್ನು ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನವನ್ನು ಅಧ್ಯಯನ ಮಾಡಿ ಸದೃಢ ಸಂವಿಧಾನ ನಮಗೆ ನೀಡಿದ್ದಾರೆ ಎಂದರು.
    ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜಕಿ ಡಾ. ಶುಭಾ ಮರವಂತೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts