More

    ಭಾರತದ ಮೊದಲ ಸಿಕ್ಸರ್ ಸಿಡಿಸಿದ್ದು ಯಾರು ಗೊತ್ತೇ?

    ಬೆಂಗಳೂರು: ಟಿ20 ಕ್ರಿಕೆಟ್ ಶುರುವಾದ ಬಳಿಕ ಸಿಕ್ಸರ್‌ಗಳಿಗೆ ಕೊರತೆ ಇಲ್ಲದಂತಾಗಿದೆ. ಪ್ರತಿ ಐಪಿಎಲ್‌ನಲ್ಲೂ 500ಕ್ಕಿಂತ ಅಧಿಕ ಸಿಕ್ಸರ್‌ಗಳು ಸಿಡಿಯುತ್ತವೆ. ಭಾರತ ತಂಡದಲ್ಲೂ ಸಿಕ್ಸರ್ ಕಿಂಗ್‌ಗಳಿಗೆ ಕೊರತೆ ಇಲ್ಲ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಈಗ ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮರು. ಹಿಂದೆಯೂ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮದ್ ಅಜರುದ್ದೀನ್, ಸೌರವ್ ಗಂಗೂಲಿ, ನವಜೋತ್ ಸಿಂಗ್ ಸಿಧು, ಕಪಿಲ್ ದೇವ್, ಸಂದೀಪ್ ಪಾಟೀಲ್, ರವಿಶಾಸ್ತ್ರಿ ಸಿಕ್ಸರ್ ಸಿಡಿಸುವುದರಲ್ಲಿ ಜನಪ್ರಿಯತೆ ಪಡೆದಿದ್ದರು. ಆದರೆ ಭಾರತ ತಂಡದ ಪರ ಮೊದಲ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಯಾರು ಗೊತ್ತೇ?

    ಇದನ್ನೂ ಓದಿ: ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

    ಭಾರತ ತಂಡ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದು 1932ರಲ್ಲಿ. ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಆ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭಾರತದ ಮೊದಲ ಸಿಕ್ಸರ್ ಕೂಡ ಸಿಡಿದಿರಬಹುದು ಎಂದು ನೀವು ಊಹಿಸಿದ್ದರೆ ಅದು ಸರಿಯಾಗಿಯೇ ಇದೆ. ಆ ಪಂದ್ಯದಲ್ಲಿ ಅಮರ್ ಸಿಂಗ್ ಭಾರತದ ಮೊಟ್ಟಮೊದಲ ಟೆಸ್ಟ್ ಅರ್ಧಶತಕವನ್ನು ಬಾರಿಸಿದ್ದರು. ಆ ಇನಿಂಗ್ಸ್‌ನ ವೇಳೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದ ಮೊಟ್ಟಮೊದಲ ಸಿಕ್ಸರ್ ಸಿಡಿಸಿದ ಸಾಧನೆಯನ್ನೂ ಮಾಡಿದ್ದರು. ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ವಾಲ್ಟರ್ ರಾಬಿನ್ಸ್ ಎಸೆತದಲ್ಲಿ ಅವರು ಈ ಸಿಕ್ಸರ್ ಸಿಡಿಸಿದ್ದರು. ಆ ಓವರ್‌ನಲ್ಲಿ ರಾಬಿನ್ಸ್ 19 ರನ್ ಬಿಟ್ಟುಕೊಟ್ಟಿದ್ದರು. 1932ರ ಜೂನ್ 28ರಂದು ಪಂದ್ಯದ 3ನೇ ದಿನದಾಟದಲ್ಲಿ ಸಿಡಿದಿದ್ದ ಈ ಚೊಚ್ಚಲ ಸಿಕ್ಸರ್‌ಗೆ ಈಗ 88 ವರ್ಷವೂ ಪೂರ್ಣಗೊಂಡಿದೆ.

    ಇದನ್ನೂ ಓದಿ: 2007ರ ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಧೋನಿ ಮಾಡಿದ್ದ ಟೀಮ್ ಮೀಟಿಂಗ್ ಎಷ್ಟು ನಿಮಿಷ ಗೊತ್ತ..?

    ಇನ್ನು ಭಾರತದ ಮೊದಲ ಬೌಂಡರಿಯನ್ನೂ ಅಮರ್ ಸಿಂಗ್ ಅವರೇ ಸಿಡಿಸಿರಬಹುದು ಎಂದು ನೀವು ಊಹಿಸಿದ್ದರೆ ಅದು ತಪ್ಪು. ಭಾರತ ತಂಡದ ಆರಂಭಿಕ ಜನಾರ್ದನ್ ನಾವ್ಲೆ ಆ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಸಾಧನೆ ಮಾಡಿದ್ದರು. ಇಂಗ್ಲೆಂಡ್ ವೇಗಿ ಫ್ರೆಡ್ಡಿ ಬ್ರೌನ್ ಎಸೆತದಲ್ಲಿ ನಾವ್ಲೆ ಭಾರತದ ಮೊಟ್ಟಮೊದಲ ಬೌಂಡರಿ ಬಾರಿಸಿದ್ದರು. ಇದರಿಂದ ಭಾರತದ ಸ್ಕೋರ್ ವಿಕೆಟ್ ನಷ್ಟವಿಲ್ಲದೆ 12 ರನ್‌ಗಳಿಂದ ವಿಕೆಟ್ ನಷ್ಟವಿಲ್ಲದೆ 16 ರನ್‌ಗೆ ಏರಿಕೆ ಕಂಡಿತ್ತು. 1932ರ ಜೂನ್ 25ರಂದು ಪಂದ್ಯದ ಮೊದಲ ದಿನದಾಟದ ಅಂತಿಮ ಅವಧಿಯಲ್ಲಿ ಈ ಬೌಂಡರಿ ಸಿಡಿದಿತ್ತು. ಸಿಕೆ ನಾಯ್ಡು ಭಾರತ ತಂಡದ ಮೊದಲ ನಾಯಕರಾಗಿದ್ದರು. ವೇಗಿ ಮೊಹಮದ್ ನಿಸಾರ್ ಭಾರತ ಪರ ಮೊದಲ ಎಸೆತ ಎಸೆದಿದ್ದರೆ, ವಿಕೆಟ್ ಕೀಪರ್-ಆರಂಭಿಕ ಜನಾರ್ದನ್ ನಾವ್ಲೆ ಮೊದಲ ಎಸೆತ ಎದುರಿಸಿದ್ದರು.

    ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts