More

    ಭಕ್ತರನ್ನು ಜೀಪ್‌ನಲ್ಲಿ ಕರೆದೊಯ್ಯಲು ಅನುಮತಿ ಕೊಡಿ

    ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಭಕ್ತರನ್ನು ಜೀಪ್‌ನಲ್ಲಿ ಕರೆದೊಯ್ಯಲು ಅನುಮತಿ ಕೊಡಿಸುವಂತೆ ಜೀಪ್ ಮಾಲೀಕರು ಮತ್ತು ಚಾಲಕರು ಮಾಜಿ ಶಾಸಕ ಆರ್. ನರೇಂದ್ರ ಅವರಿಗೆ ಮನವಿ ಮಾಡಿದರು.


    ಕೊಳ್ಳೇಗಾಲದಲ್ಲಿರುವ ನಿವಾಸದಲ್ಲಿ ಮಂಗಳವಾರ ಜೀಪ್ ಮಾಲೀಕರು ಮತ್ತು ಚಾಲಕರು ಮಾಜಿ ಶಾಸಕ ಆರ್. ನರೇಂದ್ರ ಅವರನ್ನು ಭೇಟಿ ಮಾಡಿ ಮಾತನಾಡಿ, ನಾವು ಕಳೆದ ಹಲವಾರು ವರ್ಷಗಳಿಂದಲೂ ನಾಗಮಲೆಗೆ ತೆರಳುವ ಭಕ್ತರನ್ನು ಇಂಡಿಗನತ್ತದವರೆಗೆ ಜೀಪ್ ಮೂಲಕ ಕರೆದೊಯ್ಯುತ್ತಿದ್ದವು.

    ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಬೇರೆ ವೃತ್ತಿ ನಮಗೆ ಗೊತ್ತಿಲ್ಲ. ಆದರೆ, ಸರ್ಕಾರ ಚಾರಣಿಗರ ಪ್ರವೇಶವನ್ನು ಕಡಿಮೆಗೊಳಿಸಲು ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರುವ ಸಲುವಾಗಿ ಕಳೆದ 15 ದಿನಗಳಿಂದ ಜೀಪ್‌ಗಳ ಸಂಚಾರ ನಿಷೇಧಿಸಿದೆ. ಇದರಿಂದ ಜೀಪ್ ಮಾಲೀಕರು, ಚಾಲಕರ ವೃತ್ತಿ ಕಸಿದುಕೊಂಡಂತಾಗಿದೆ. ಸಾಲ ಮಾಡಿ ಜೀಪ್ ಖರೀದಿಸಿರುವ ನಮಗೆ ತುಂಬಾ ತೊಂದರೆಯಾಗಿದೆ.

    ಇತ್ತ ಇನ್ನೆರಡು ತಿಂಗಳಲ್ಲಿ ಶಾಲೆಗಳು ಆರಂಭವಾಗಲಿದ್ದು, ಮಕ್ಕಳ ಶಾಲಾ ಪ್ರವೇಶ ಶುಲ್ಕವನ್ನು ಪಾವತಿಸಲು ಸಹ ಸಾಧ್ಯವಾಗುತ್ತಿಲ್ಲ. ಇನ್ನು ಜೀವನ ನಿರ್ವಹಣೆ ಮಾಡಲು ಬಲು ಕಷ್ಟವಾಗಿದೆ. ಆದ್ದರಿಂದ ನಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಎಂದಿನಂತೆ ಜೀಪ್‌ಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.


    ಆರ್. ನರೇಂದ್ರ ಪ್ರತಿಕ್ರಿಯಿಸಿ, ನಾಗಮಲೆಗೆ ಭಕ್ತರು ಹೋಗುವುದನ್ನು ಹೊರತುಪಡಿಸಿದರೆ, ಜಾಲಿ ಮಾಡಲು ಟ್ರಕ್ಕಿಂಗ್ ಮಾಡುವವರ ಸಂಖ್ಯೆ ಕಡಿಮೆ ಇದೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ವಾಸ್ತವ ಸ್ಥಿತಿ ತಿಳಿದಿಲ್ಲ. ಹಾಗಾಗಿ, ಚಾರಣಿಗರು ಹಾಗೂ ಜೀಪ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು. ಅಲ್ಲದೇ, ಡಿಸಿಎಫ್ ಡಾ. ಸಂತೋಷ್‌ಕುಮಾರ್ ಅವರಿಗೆ ಕರೆ ಮಾಡಿ ಈ ಬಗ್ಗೆ ಅಗತ್ಯ ಕ್ರಮವಹಿಸಿ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಮುಖಂಡರಾದ ಮುರುಗೇಶ್, ಈಶ್ವರ್, ರಾಜೇಂದ್ರ, ಗಣೇಶ್ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts