More

    ಮೈಸೂರು ವಿವಿ ಖೋ-ಖೋ ತಂಡ ಚಾಂಪಿಯನ್

    ಮೈಸೂರು: ಕೆ.ಆರ್.ತೇಜಸ್ವಿನಿ, ಎಲ್.ಮೋನಿಕಾ ಹಾಗೂ ಬಿ.ಚೈತ್ರಾ ಅವರು ಪಂದ್ಯಾವಳಿಯುದ್ದಕ್ಕೂ ನೀಡಿದ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಖೋ-ಖೋ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದೆ.


    ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಐದು ಬಾರಿ ಕಂಚಿನ ಪದಕ ಪಡೆದಿರುವ ಮೈಸೂರು ವಿವಿ ಮಹಿಳಾ ಖೋ-ಖೋ ತಂಡದ ಆಟಗಾರ್ತಿಯರು ಇದೇ ಮೊದಲ ಬಾರಿಗೆ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು. ಅಂತೆಯೇ, ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿವಿ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಡಾ.ಎಎಂಯು ಔರಂಗಬಾದ್ ಮತ್ತು ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ತಂಡಗಳು ಮೂರನೇ ಸ್ಥಾನ ಪಡೆದವು.


    ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಮೈಸೂರು ವಿವಿಯ ಭರವಸೆ ಆಟಗಾರ್ತಿ ಕೆ.ಆರ್.ತೇಜಸ್ವಿನಿ ಆಲ್‌ರೌಂಡರ್ ಪ್ರಶಸ್ತಿ ಪಡೆದರು. ಲವ್ಲಿ ಪ್ರೊಫೆಷನಲ್ ವಿವಿಯ ನೀತಾ ದೇವಿ ಬೆಸ್ಟ್ ಡಿಫೆಂಡರ್ ಹಾಗೂ ಮೈಸೂರು ವಿವಿಯ ಎಲ್.ಮೋನಿಕಾ ಬೆಸ್ಟ್ ಚೇಸರ್ ಪ್ರಶಸ್ತಿಗೆ ಭಾಜನರಾದರು.


    ಭರ್ಜರಿ ಜಯ: ಅಂತಿಮ ಪಂದ್ಯದಲ್ಲೂ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಮೈಸೂರು ವಿವಿ ತಂಡ ಬಲಿಷ್ಠ ಲವ್ಲಿ ಪ್ರೊಫೆಷನಲ್ ವಿವಿ ತಂಡವನ್ನು 3 ಅಂಕಗಳಿಂದ ಬಗ್ಗು ಬಡಿಯಿತು.
    ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಒಳಾಂಗಣದ ಮ್ಯಾಟ್ ಮೈದಾನದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 6-3 ಅಂಕಗಳ ಅಂತರದ ಮುನ್ನಡೆ ಕಾಯ್ದುಕೊಂಡ ಮೈಸೂರು ವಿವಿ ತಂಡ ಎರಡನೇ ಇನಿಂಗ್ಸ್‌ನಲ್ಲೂ ಅದೇ ಲಯದ ಆಟ ಮುಂದುವರಿಸಿ 10-7 ಅಂಕಗಳೊಂದಿಗೆ ಗೆಲುವಿನ ನಗೆ ಬೀರಿತು.


    ಟಾಸ್ ಸೋತರೂ ಮೊದಲು ಡಿಫೆನ್ಸ್ ಮಾಡಿದ ಮೈಸೂರು ವಿವಿ ತಂಡದ ಪರ ಭರವಸೆ ಆಟಗಾರ್ತಿ ಕೆ.ಆರ್.ತೇಜಸ್ವಿನಿ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 8 ನಿಮಿಷ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 2.30 ನಿಮಿಷ ಆಡಿಸುವ ಮೂಲಕ ಎದುರಾಳಿ ತಂಡದ ಆಟಗಾರ್ತಿಯರಿಗೆ ಬೆವರಿಳಿಸಿದರು. ಮೈಸೂರು ತಂಡದ ಪರ ಚೇಸಿಂಗ್‌ನಲ್ಲಿ ಮಿಂಚಿದ ಎಲ್.ಮೋನಿಕಾ ಮೊದಲ ಇನಿಂಗ್ಸ್‌ನಲ್ಲಿ 3 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ಅಂಕ ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.


    ಮೊದಲ ಇನಿಂಗ್ಸ್‌ನ ಚೇಸಿಂಗ್‌ನಲ್ಲಿ ಒಂದು ಅಂಕ ಪಡೆದ ಬಿ.ಚೈತ್ರಾ, ಎರಡನೇ ಇನಿಂಗ್ಸ್‌ನ ಡಿಫೆನ್ಸ್‌ನಲ್ಲಿ 4.30 ನಿಮಿಷ ಆಡಿಸುವಲ್ಲಿ ಯಶಸ್ವಿಯಾದರು. ಅಂತೆಯೇ ಎಸ್.ವಿನುತಾ ಕೂಡ ಉತ್ತಮ ಪ್ರದರ್ಶನ ನೀಡಿದರು. ಲವ್ಲಿ ಪ್ರೊಫೆಷನಲ್ ವಿವಿ ಪರ ನೀತಾದೇವಿ, ಸವೀನ್‌ದೇವಿ, ಮಧು ಉತ್ತಮ ಪ್ರದರ್ಶನ ನೀಡಿದರು.


    ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ ತಂಡವು 16-8 ಅಂಕಗಳಿಂದ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ವಿರುದ್ಧ ಜಯ ಸಾಧಿಸಿತ್ತು. ಮತ್ತೊಂದು ಪಂದ್ಯದಲ್ಲಿ ಡಾ.ಎಎಂಯು ಔರಂಗಬಾದ್ ವಿವಿ ತಂಡದ ವಿರುದ್ಧ 8-7 ಅಂಕಗಳಿಂದ ಜಯ ಪಡೆದ ಮೈಸೂರು ವಿವಿ ತಂಡ ಫೈನಲ್ ಪ್ರವೇಶಿಸಿತ್ತು.


    ಬಹುಮಾನ ವಿತರಣೆ:
    ಗೆಲುವು ಪಡೆದ ತಂಡಗಳಿಗೆ ಶಾಸಕ ಎಲ್.ನಾಗೇಂದ್ರ ಟ್ರೋಫಿ ವಿತರಿಸಿದರು. ಕುಲಸಚಿವ ಪ್ರೊ.ಬಿ.ಶಿವಪ್ಪ, ಸಿಂಡಿಕೇಟ್ ಸದಸ್ಯರಾದ ವೈ.ಕೆ.ಪವಿತ್ರಾ, ಪ್ರೊ.ದೊಡ್ಡಚಾರಿ, ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ಕ್ರೀಡಾತಜ್ಞ ಪ್ರೊ.ಶೇಷಣ್ಣ, ಡಾ.ಕೃಷ್ಣಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts