More

    ಇಂದಿನಿಂದ ಭಾರತ-ಕಿವೀಸ್ ಟೆಸ್ಟ್ ಸರಣಿ; ದ್ರಾವಿಡ್ ತರಬೇತಿಯಲ್ಲಿ ಮೊದಲ ಟೆಸ್ಟ್

    ಕಾನ್ಪುರ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ನಾಯಕ ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ನಡುವೆಯೂ ಭಾರತ ತಂಡ ತವರಿನ ಲಾಭವನ್ನು ಹೊಂದಿದ್ದು, ಗ್ರೀನ್ ಪಾರ್ಕ್‌ನಲ್ಲಿ ಗುರುವಾರದಿಂದ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಅದನ್ನು ಗೆಲುವಾಗಿ ಪರಿವರ್ತಿಸುವ ಹಂಬಲದಲ್ಲಿದೆ.

    ಸೌಥಾಂಪ್ಟನ್‌ನಲ್ಲಿ ಜೂನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕಾಗಿ ನಡೆದ ಹೋರಾಟದಲ್ಲಿ ಸೋಲು ಕಂಡರೂ, ನಂತರದ 5 ತಿಂಗಳಲ್ಲಿ ಭಾರತ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳನ್ನು ಕಂಡಿದೆ. ಇಂಗ್ಲೆಂಡ್‌ನಲ್ಲೇ ಆತಿಥೇಯರ ವಿರುದ್ಧದ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳಲ್ಲಿ 2-1 ಮುನ್ನಡೆ ಸಾಧಿಸಿ ಬೀಗಿದ್ದ ಭಾರತಕ್ಕೆ ಇಲ್ಲಿ ತವರಿನ ಸ್ಪಿನ್ ಪಿಚ್‌ಗಳ ಬಲವಿದೆ. ಎಲ್ಲಕ್ಕಿಂತ ಹೆಚ್ಚಾಗಿ ‘ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೀಗ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಹೀಗಾಗಿ ಕೊಹ್ಲಿ, ರೋಹಿತ್, ಬುಮ್ರಾ, ಶಮಿ, ರಿಷಭ್ ಪಂತ್‌ಗೆ ವಿಶ್ರಾಂತಿ, ಕೆಎಲ್ ರಾಹುಲ್ ಕೊನೇಕ್ಷಣದಲ್ಲಿ ಗಾಯಗೊಂಡ ನಡುವೆ, ರನ್‌ಬರ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಬಹುತೇಕ 2ನೇ ಸ್ತರದ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದರೂ ಭಾರತವೇ ಫೇವರಿಟ್ ಎನಿಸಿದೆ.

    ಒತ್ತಡದಲ್ಲಿ ರಹಾನೆ, ಪೂಜಾರ
    ಹಂಗಾಮಿ ನಾಯಕತ್ವದ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಬೇಕಾದ ಸವಾಲು ಅಜಿಂಕ್ಯ ರಹಾನೆ ಮುಂದಿದೆ. ಮತ್ತೋರ್ವ ಟೆಸ್ಟ್ ತಜ್ಞ ಬ್ಯಾಟರ್ ಹಾಗೂ ಹಂಗಾಮಿ ಉಪನಾಯಕ ಚೇತೇಶ್ವರ ಪೂಜಾರ ಕೂಡ ರನ್‌ಬರ ನೀಗಿಸುವ ಒತ್ತಡದಲ್ಲಿದ್ದಾರೆ. ರಹಾನೆ ಅಸ್ಥಿರ ಬ್ಯಾಟಿಂಗ್ ನಿರ್ವಹಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೆ, ಪೂಜಾರ ಕೂಡ ಕಳೆದ 2 ವರ್ಷಗಳಿಂದ ಶತಕ ಬಾರಿಸಿಲ್ಲ. ಪೂಜಾರ 2018-19ರ ಆಸೀಸ್ ಪ್ರವಾಸದ ಸಿಡ್ನಿ ಟೆಸ್ಟ್‌ನಲ್ಲಿ ಕೊನೇ ಶತಕ ಸಿಡಿಸಿದ್ದರೆ, ರಹಾನೆ 2020-21ರ ಆಸೀಸ್ ಪ್ರವಾಸದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಕೊನೇ ಶತಕ ಬಾರಿಸಿದ್ದರು. ಬಳಿಕ ಡಬ್ಲ್ಯುಟಿಸಿ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಇವರ ರನ್‌ಬರ ತಂಡಕ್ಕೂ ಸಾಕಷ್ಟು ತಲೆನೋವು ತಂದಿತ್ತು. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಇವರಿಬ್ಬರು ಲಯ ಕಂಡುಕೊಳ್ಳುವುದು ಅಗತ್ಯವಾಗಿದೆ.

    ಪಂದ್ಯ ಆರಂಭ: ಬೆಳಗ್ಗೆ 9.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಮುಖಾಮುಖಿ: 60
    ಭಾರತ: 21
    ನ್ಯೂಜಿಲೆಂಡ್: 13
    ಡ್ರಾ: 26
    ಭಾರತದಲ್ಲಿ: 34
    ಭಾರತ: 16
    ನ್ಯೂಜಿಲೆಂಡ್: 2
    ಡ್ರಾ: 16

    22: ಭಾರತ ತಂಡ ಕಾನ್ಪುರದಲ್ಲಿ ಇದುವರೆಗೆ 22 ಟೆಸ್ಟ್ ಆಡಿದ್ದು, 7ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 12 ಟೆಸ್ಟ್ ಡ್ರಾಗೊಂಡಿದೆ. ನ್ಯೂಜಿಲೆಂಡ್ ತಂಡ ಕಾನ್ಪುರದಲ್ಲಿ ಇದುವರೆಗೆ 3 ಟೆಸ್ಟ್ ಆಡಿದ್ದು, 2ರಲ್ಲಿ ಸೋತು, 1ರಲ್ಲಿ ಡ್ರಾ ಸಾಧಿಸಿದೆ.

    ಟೀಮ್ ನ್ಯೂಸ್:

    ಭಾರತ: ಶ್ರೇಯಸ್ ಅಯ್ಯರ್ ಪದಾರ್ಪಣೆ ಖಚಿತಪಡಿಸಿರುವ ನಾಯಕ ಅಜಿಂಕ್ಯ ರಹಾನೆ, ತಂಡದ ಇತರ ಸಂಯೋಜನೆಯ ಗುಟ್ಟುಬಿಟ್ಟುಕೊಡಲು ನಿರಾಕರಿಸಿದ್ದಾರೆ. ಬೌಲಿಂಗ್ ಕಾಂಬಿನೇಷನ್ ಬಗ್ಗೆಯೂ ರಹಾನೆ ಸ್ಪಷ್ಟತೆ ನೀಡಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 27 ವಿಕೆಟ್ ಕಬಳಿಸಿ ಮಿಂಚಿದ್ದ ಅಕ್ಷರ್ ಪಟೇಲ್ 3ನೇ ಸ್ಪಿನ್ನರ್ ಆಗಿ ಆಡುವ ನಿರೀಕ್ಷೆ ಇದೆ. ಇದರಿಂದ ಸೂರ್ಯಕುಮಾರ್, ಜಯಂತ್ ಯಾದವ್ ಹೊರಗುಳಿಯಲಿದ್ದಾರೆ.

    ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ (ವಿ.ಕೀ), ಆರ್. ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಮೊಹಮದ್ ಸಿರಾಜ್/ಇಶಾಂತ್ ಶರ್ಮ.

    ನ್ಯೂಜಿಲೆಂಡ್: ಕೋಚ್ ಗ್ಯಾರಿ ಸ್ಟೆಡ್ ಸುಳಿವು ನೀಡಿದಂತೆ ಮೂವರು ಸ್ಪಿನ್ನರ್ ಆಡುವರೇ ಅಥವಾ ಇಬ್ಬರಷ್ಟೇ ಕಣಕ್ಕಿಳಿಯುವರೇ ಎಂಬ ಕುತೂಹಲವಿದೆ. ಸ್ಪಿನ್ನರ್‌ಗಳ ಸಂಖ್ಯೆ 2ಕ್ಕೆ ಸೀಮಿತಗೊಂಡರೆ, ಮೂವರು ವೇಗಿಗಳು ಆಡಬಹುದು. ಆರಂಭಿಕ ಡೆವೊನ್ ಕಾನ್‌ವೇ ಗಾಯಗೊಂಡು ಸರಣಿಗೆ ಅಲಭ್ಯರಾಗಿರುವುದ ವಿಲ್ ಯಂಗ್ ಅವರ ಸ್ಥಾನ ತುಂಬಲಿದ್ದಾರೆ. ಬಿಜೆ ವಾಟ್ಲಿಂಗ್ ನಿವೃತ್ತಿಯ ಬಳಿಕ ಟಾಮ್ ಬ್ಲಂಡಲ್ ಮೊದಲ ಆದ್ಯತೆಯ ಕೀಪರ್ ಆಗಿದ್ದಾರೆ.

    ಸಂಭಾವ್ಯ ತಂಡ: ಟಾಮ್ ಲಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡಲ್ (ವಿ.ಕೀ), ಮಿಚೆಲ್ ಸ್ಯಾಂಟ್ನರ್/ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ವಿಲ್ ಸೋಮರ್‌ವಿಲ್, ಅಜಾಜ್ ಪಟೇಲ್.

    ದಾಖಲೆ ನಿರೀಕ್ಷೆಯಲ್ಲಿ ಅಶ್ವಿನ್
    ಆರ್. ಅಶ್ವಿನ್ (413) ಇನ್ನು 5 ವಿಕೆಟ್ ಕಬಳಿಸಿದರೆ ಹರ್ಭಜನ್ ಸಿಂಗ್ (417) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ಆ್ ಸ್ಪಿನ್ನರ್ ಎನಿಸಲಿದ್ದಾರೆ. ಈ ಮೂಲಕ ಭಾರತದ 3ನೇ ಗರಿಷ್ಠ ವಿಕೆಟ್ ಟೇಕರ್ ಎನಿಸಲಿದ್ದಾರೆ. ಸರಣಿಯಲ್ಲಿ 22 ವಿಕೆಟ್ ಕಬಳಿಸಿದರೆ ಕಪಿಲ್ ದೇವ್ (434) ಅವರನ್ನೂ ಹಿಂದಿಕ್ಕಲಿದ್ದಾರೆ. ಅನಿಲ್ ಕುಂಬ್ಳೆ (619) ಮುಂಚೂಣಿಯಲ್ಲಿದ್ದಾರೆ. ಅಶ್ವಿನ್ ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿದ ಸಾಧನೆಯನ್ನು 7 ಬಾರಿ ಸಾಧಿಸಿದ್ದು, ಇನ್ನೊಮ್ಮೆ ಇದನ್ನು ಸಾಧಿಸಿದರೆ ಅನಿಲ್ ಕುಂಬ್ಳೆ (8) ಅವರ ಭಾರತೀಯ ದಾಖಲೆ ಸರಿಗಟ್ಟಲಿದ್ದಾರೆ.

    ಕಿವೀಸ್‌ಗೆ ಸ್ಪಿನ್ ಪ್ರಮುಖ ಸವಾಲು
    ಭಾರತದಲ್ಲಿ ಕೇವಲ ಎರಡೇ ಟೆಸ್ಟ್ ಗೆದ್ದಿರುವ ಇತಿಹಾಸ, ಕಳೆದ 33 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಗೆಲ್ಲದ ಕೊರಗು, ಕಳೆದೆರಡು ಪ್ರವಾಸಗಳಲ್ಲಿ ಎಲ್ಲ ಟೆಸ್ಟ್‌ಗಳಲ್ಲಿ ಸೋತ ಹಿನ್ನಡೆಯ ನಡುವೆ ಪ್ರವಾಸಿ ನ್ಯೂಜಿಲೆಂಡ್ ತಂಡವೀಗ ‘ಟೆಸ್ಟ್ ವಿಶ್ವ ಚಾಂಪಿಯನ್’ ಪಟ್ಟಕ್ಕೆ ತಕ್ಕ ನಿರ್ವಹಣೆ ತೋರುವ ಛಲದಲ್ಲಿದೆ. ವಿಶ್ರಾಂತಿ ಬಯಸಿದ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಗಾಯಗೊಂಡ ಡೆವೊನ್ ಕಾನ್‌ವೇ ಬಿಟ್ಟರೆ ಕಿವೀಸ್ ಸರಣಿಗೆ ಪೂರ್ಣಬಲದ ತಂಡವನ್ನು ಹೊಂದಿದ್ದು, ಸ್ಪಿನ್ ಪಿಚ್ ಸಹಿತ ಎಲ್ಲ ರೀತಿಯ ವಾತಾವರಣದಲ್ಲೂ ತಾನು ‘ಚಾಂಪಿಯನ್’ ಆಟವಾಡಬಲ್ಲೆ ಎಂದು ನಿರೂಪಿಸಲು ಬಯಸಿದೆ. ನಾಯಕ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್ ಒಳಗೊಂಡ ಬ್ಯಾಟಿಂಗ್ ವಿಭಾಗದ ಭಾರತದ ಸ್ಪಿನ್ ದಾಳಿಯನ್ನು ಯಾವ ರೀತಿ ಎದುರಿಸಲಿದೆ ಎಂಬ ಆಧಾರದಲ್ಲಿ ಸರಣಿಯ ಭವಿಷ್ಯದ ಕುತೂಹಲ ಅಡಗಿದೆ.

    ಶ್ರೇಯಸ್ ಅಯ್ಯರ್ ಪದಾರ್ಪಣೆ
    ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಕಾನ್ಪುರದಲ್ಲಿ ಟೆಸ್ಟ್ ಪದಾರ್ಪಣೆ ಮಾಡಲಿದ್ದಾರೆ. ನಾಯಕ ರಹಾನೆ ಪಂದ್ಯಕ್ಕೆ ಮುನ್ನಾದಿನ ಸುದ್ದಿಗೋಷ್ಠಿಯಲ್ಲೇ ಇದನ್ನು ಖಚಿತಪಡಿಸಿದ್ದಾರೆ. ಕೆಎಲ್ ರಾಹುಲ್ ಗಾಯದಿಂದಾಗಿ ಶ್ರೇಯಸ್‌ಗೆ ಈ ಅವಕಾಶ ಒಲಿದಿದೆ. ಇಲ್ಲದಿದ್ದರೆ ಶುಭಮಾನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇತ್ತು. ಇದೀಗ ರೋಹಿತ್-ರಾಹುಲ್ ಗೈರಲ್ಲಿ ಮಯಾಂಕ್ ಅಗರ್ವಾಲ್-ಶುಭಮಾನ್ ಗಿಲ್ ಭಾರತದ ಹೊಸ ಆರಂಭಿಕ ಜೋಡಿಯಾಗಲಿದ್ದಾರೆ.

    *ನನ್ನ ಫಾರ್ಮ್ ಬಗ್ಗೆ ಕಳವಳ ಹೊಂದಿಲ್ಲ. ತಂಡಕ್ಕೆ ಸಾಧ್ಯವಾದಷ್ಟು ಕೊಡುಗೆ ನೀಡುವುದಷ್ಟೇ ನನ್ನ ಕೆಲಸ. ಅದು ಪ್ರತಿ ಪಂದ್ಯದಲ್ಲೂ ಶತಕವೇ ಆಗಬೇಕೆಂದಿಲ್ಲ. ಪ್ರತಿ ಇನಿಂಗ್ಸ್‌ನಲ್ಲಿ ಗಳಿಸುವ 30, 40, 50 ರನ್ ಕೂಡ ಪ್ರಮುಖ ಕೊಡುಗೆಯೇ ಆಗಿರುತ್ತದೆ.
    | ಅಜಿಂಕ್ಯ ರಹಾನೆ, ಹಂಗಾಮಿ ನಾಯಕ

    *ಸರಣಿಯಲ್ಲಿ ಸ್ಪಿನ್ ನಿರ್ಣಾಯಕ ಪಾತ್ರ ವಹಿಸಲಿದೆ. ಭಾರತದಲ್ಲಿ ಎಲ್ಲ ತಂಡಗಳು ಸ್ಪಿನ್ ಸವಾಲು ಎದುರಿಸಿವೆ. ನಾವೂ ಅದೇ ನಿರೀಕ್ಷೆಯಲ್ಲಿದ್ದೇವೆ. ಭಾರತದ ಸ್ಪಿನ್ನರ್‌ಗಳ ಎದುರು ಸಾಕಷ್ಟು ರನ್ ಗಳಿಸಲು ಮತ್ತು ಜತೆಯಾಟವಾಡಲು ಪ್ರಯತ್ನಿಸಲಿದ್ದೇವೆ. ಪ್ರಮುಖ ಆಟಗಾರರ ಗೈರಿನಲ್ಲೂ ಭಾರತಕ್ಕೆ ತವರಿನ ಲಾಭವಿದೆ. ಹೀಗಾಗಿ ಈ ಪಂದ್ಯದಲ್ಲಿ ನಾವು ೇವರಿಟ್‌ಗಳಲ್ಲ.
    | ಕೇನ್ ವಿಲಿಯಮ್ಸನ್, ಕಿವೀಸ್ ನಾಯಕ

    ಪಿಚ್ ರಿಪೋರ್ಟ್
    ಭಾರತ ತಂಡ ಕೊನೇ ಬಾರಿ 2016ರಲ್ಲಿ ಕಾನ್ಪುರದಲ್ಲಿ ಕಿವೀಸ್ ವಿರುದ್ಧ ಆಡಿದಾಗ ಅಶ್ವಿನ್-ಜಡೇಜಾ ಜೋಡಿ 16 ವಿಕೆಟ್ ಹಂಚಿಕೊಂಡಿತ್ತು. ಗ್ರೀನ್ ಪಾರ್ಕ್ ಪಿಚ್ ಎಷ್ಟರ ಮಟ್ಟಿಗೆ ಸ್ಪಿನ್ ಸ್ನೇಹಿ ಎಂಬುದನ್ನು ಈ ಅಂಕಿ-ಅಂಶವೇ ಸಾರುತ್ತಿದೆ. ಹೀಗಾಗಿಯೇ ಉಭಯ ತಂಡಗಳು ತಲಾ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಯೋಜನೆಯಲ್ಲಿವೆ.

    ವಿರಾಟ್ ಕೊಹ್ಲಿ ಶತಕವಿಲ್ಲದೆ 2 ವರ್ಷ! ಕರೊನಾ ಕಾಲದಲ್ಲಿ ಸೆಂಚುರಿ ಸಿಡಿಸುವುದನ್ನು ಮರೆತ ಸ್ಟಾರ್ ಬ್ಯಾಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts