More

    ಎಲ್ಲ ಸಂಸ್ಕೃತಿಯ ಮೂಲ ನೆಲೆ ಜಾನಪದ

    ಬೆಳಗಾವಿ: ಮಂಗ ಮಾನವನಾದಾಗಲೇ ಜಾನಪದ ಸಂಪ್ರದಾಯ ಮೊಳೆಯಿತು. ಅವನ ಬುದ್ಧಿ, ಮನಸ್ಸುಗಳು ವಿಕಾಸವಾದಂತೆಲ್ಲ ಜಾನಪದ ಕಲೆಗಳು ಹೊರಹೊಮ್ಮಿದವು. ಅವನ ನಾಲಗೆಯ ಮೇಲೆ ಮಾತು ಕುಣಿದಾಗಲೇ ಜಾನಪದ ಸಾಹಿತ್ಯ ಉದ್ಭವವಾಯಿತು ಎಂದು ಉತ್ತರ ಕರ್ನಾಟಕ ಕನ್ನಡ ಜಾನಪದ ಪತಿಷತ್ ಸಂಚಾಲಕ ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ಶಿವಬಸವ ನಗರದ ಸಿದ್ಧರಾಮೇಶ್ವರ ಪ.ಪೂ. ಕಾಲೇಜ್ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾನಪದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಠಿ, ಸಾಮಾಜಿಕ ಜೀವನದ ಸಂಕೇತ. ರಾಷ್ಟ್ರೀಯ ಸಂಸ್ಕೃತಿಯ ತಾಯಿ ಬೇರು. ಅದು ಬಾಯಿಂದ ಬಾಯಿಗೆ ಊರಿಂದೂರಿಗೆ, ಯುಗದಿಂದ ಯುಗಕ್ಕೆ ಹರಿದು ಬರುತ್ತದೆ ಎಂದರು.

    ವಿವಿಧ ಕಾರ್ಯಕ್ರಮ: ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮೋಹನ ಗುಂಡ್ಲೂರ ಮಾತನಾಡಿ, ಕನ್ನಡ ಜಾನಪದ ಪರಿಷತ್ 2015ರಲ್ಲಿ ಸ್ಥಾಪಿತವಾಗಿದೆ. ಈ ಸಂಸ್ಥೆಯು ರಾಜ್ಯದ 31 ಜಿಲ್ಲೆಗಳು, 185ಕ್ಕೂ ಹೆಚ್ಚು ತಾಲೂಕುಗಳು, 654 ಹೋಬಳಿಗಳಲ್ಲಿ 1,800ಕ್ಕೂ ಹೆಚ್ಚು ಗ್ರಾಮ ಘಟಕಗಳಲ್ಲಿ ಶಾಖೆಗಳನ್ನು ಪಸರಿಸಿದೆ.

    ಜಾನಪದ ಕಲಾವಿದರ ಸಮೀಕ್ಷೆ, ವಿಕಾಸಕ್ಕಾಗಿ ಜಾನಪದ, ಮಠದಿಂದ ಮಠಕ್ಕೆ ಜಾನಪದ; ನಮ್ಮ ನಡಿಗೆ ಜಾನಪದದ ಕಡೆಗೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಾನಪದ ಕಲಾವಿದ ಬದುಕಿದರೆ ಜಾನಪದ ಕಲೆ ಹಾಗೂ ಸಾಹಿತ್ಯ ಉಳಿಯುತ್ತದೆ, ಪ್ರಚಾರವಾಗುತ್ತದೆ ಎಂದು ಹೇಳಿದರು.

    ಶಿವನ ಸಾಹಿತ್ಯ: ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಆರ್. ಉಳ್ಳೇಗಡ್ಡಿ ಮಾತನಾಡಿ, ತಾಯಿಯೇ ಜಾನಪದದ ಬೇರು. ಅವಳು ಜಾನಪದದ ಹಾಡುಗಾರಿಕೆಯ ಮೂಲಕ ಮಗುವಿನ ಬದುಕಿನ ಲಯವನ್ನು ಕಲಿಯುವಂತೆ ಮಾಡುತ್ತಾಳೆ. ಹಾಡುವ ಮೂಲಕ ತನ್ನ ಮೊದಲ ಪ್ರೀತಿ ಎರೆಯುತ್ತ, ಮನೆಯ ಒಳಗಿನ ಸಂಬಂಧಗಳನ್ನು ಹಾಡುವ ಮೂಲಕ ಪರಿಚಯಿಸುತ್ತಾಳೆ. ಜಾನಪದ ಸಾಹಿತ್ಯದಲ್ಲಿ ಸತ್ಯ ಮತ್ತು ಸುಂದರತೆ ಇದೆ. ಅದಕ್ಕಾಗಿಯೇ ಜಾನಪದ ಸಾಹಿತ್ಯವನ್ನು ಶಿವನ ಸಾಹಿತ್ಯವೆಂದೂ ಕರೆಯುತ್ತಾರೆ ಎಂದರು. ತಾಳವಾದ್ಯ ಖ್ಯಾತ ಕಲಾವಿದ ಶಿವಜಾತಯ್ಯ ನೇಸರಗಿಮಠ ಅವರನ್ನು ಸನ್ಮಾನಿಸಲಾಯಿತು. ರುದ್ರಾಂಬಿಕಾ ಯಾಳಗಿ ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಿದ್ಯಾರ್ಥಿಗಳಿಂದ ವಿವಿಧ ವೇಷ-ಭೂಷಣ, ನೃತ್ಯ ಕಾರ್ಯಕ್ರಮ ಜರುಗಿದವು. ಬಸವರಾಜ ಮಿಂಡೊಳ್ಳಿ, ಮೋಹನ ಪಾಟೀಲ, ಶಿವಾನಂದ ಸಂಜೀವಗೋಳ, ಶಂಕರ ಕುಂದ್ರಾಳ, ಬಸವಣ್ಣೆಪ್ಪ ಜಗಾಪುರ, ಸಿದ್ಧನಗೌಡ ಚೌಬಾರಿ, ರುದ್ರಾಂಬಿಕಾ ಯಾಳಗಿ, ಪ್ರಾ. ಎ.ಕೆ. ಪಾಟೀಲ
    ಇತರರಿದ್ದರು. ಶ್ರದ್ಧಾ ಹೊರಗಿನಮನಿ ಪ್ರಾರ್ಥಿಸಿದರು. ಡಾ. ಹೇಮಾ ಸೋನೊಳ್ಳಿ ನಿರೂಪಿಸಿದರು. ಆರ್.ಪಿ. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts