More

    ದೇಶದ ಹಿತಾಸಕ್ತಿಗಾಗಿ ಜೆಡಿಎಸ್ ಜತೆ ಹೊಂದಾಣಿಕೆ

    ಕಡೂರು: ವೈಯಕ್ತಿಕ ಹಿತಾಸಕ್ತಿಗಿಂತ ದೇಶ ಮೊದಲು ಎಂಬ ಭಾವನೆಯಡಿಯಲ್ಲಿ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆಯೊಂದಿಗೆ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೈಜೋಡಿಸಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.

    ತಾಲೂಕಿನ ಮಚ್ಚೇರಿ ಸಮೀಪದ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮನ್ವಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವೇ ತಿರುಗಿ ನೋಡುವಂತಹ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಭಾರತ ದೇಶ ವಿಶ್ವನಾಯಕ ಸ್ಥಾನಕ್ಕೇರುವುದರಲ್ಲಿ ಯಾವ ಅನುಮಾನವಿಲ್ಲ. ಮೋದಿ ಆಡಳಿತ ಮತ್ತೋಮ್ಮೆ ನಡೆಸಬೇಕೆಂಬ ಕೂಗುಗಳು ಬಲವಾಗಿ ಕೇಳಿ ಬರುತ್ತಿದೆ ಎಂದರು.
    ದೇಶದ ರೈತರ ಪರವಾಗಿ ಹೋರಾಟ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಶಕ್ತಿಯೂ ಬಿಜೆಪಿ ಜತೆ ಬೆಂಬಲವಾಗಿ ನಿಂತಿರುವುದು ಭವಿಷ್ಯದ ದಿನಗಳಲ್ಲಿ ದೇಶದ ಪ್ರಗತಿಗೆ ಮತ್ತಷ್ಟು ಶಕ್ತಿ ತುಂಬಲಿದೆ. ಈ ನಿಟ್ಟಿನಲ್ಲಿ ಗೆಲುವು ಸಹಜವಾಗಿ ದೊರಕಲಿದೆ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಕಾರ್ಯಕರ್ತರು ಮೈ ಮರೆಯದೇ ನಮ್ಮ ಶಕ್ತಿಯನ್ನು ಬೂತ್ ಮಟ್ಟದಲ್ಲಿ ಪ್ರದರ್ಶಿಸಬೇಕಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪ್ರಚುರ ಪಡಿಸಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
    ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ಅವರನ್ನು ಗೆಲ್ಲಿಸಬೇಕಿದೆ. ಕಡೂರಿಗೂ ದೇವೇಗೌಡರಿಗೂ ಅವಿನಾಭಾವ ಸಂಬಂಧವಿದೆ. ರಾಷ್ಟ್ರ ಹಿತಕ್ಕಾಗಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿದು, ನಮ್ಮ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶಕ್ತಿ ನೀಡಬೇಕಿದೆ ಎಂದು ಮನವಿ ಮಾಡಿದರು.
    ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ಯಾರನ್ನು ಟೀಕಿಸುವ ಅಗತ್ಯವಿಲ್ಲ. ಬೇರೆಯವರ ಟೀಕೆಗೆ ಉದ್ರೇಕಗೊಳ್ಳುವ ಅಗತ್ಯವೂ ಇಲ್ಲ. ನಮ್ಮ ಮುಂದಿರುವ ಗುರಿ, ಪ್ರಮುಖ ಧ್ಯೇಯ ರಾಷ್ಟ್ರ ಹಿತ. ಅದನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷದ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಎರಡೂ ಪಕ್ಷಗಳು ಸಮಾನವಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಶ್ರಮಿಸಿ ಗೆಲ್ಲಿಸಬೇಕು. ನಾವು ನೀಡುವ ಪ್ರತಿ ಮತವೂ ರಾಷ್ಟ್ರ ರಕ್ಷಣೆಗೆ ಎಂಬ ಚಿಂತನೆ ಎಲ್ಲರಲ್ಲೂ ಮೂಡಬೇಕು. ಪ್ರಜ್ವಲ್‌ಗೆ ಗೆಲುವು ನೀಡುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರು ಪಣತೋಡಬೇಕಿದೆ ಎಂದರು.
    ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ವಿರೋಧಿಗಳ ಟೀಕೆಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಕೊಚ್ಚೆಗೆ ಕಲ್ಲು ಹಾಕಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಿಲುವನ್ನು ಗಮನಿಸಬೇಕಿದೆ. ಕಾಂಗ್ರೆಸ್ ದೇಶ ಒಡೆಯುವ ಮಾರ್ಗಸೂಚಿಯಲ್ಲಿದೆ. ಆದರೆ ಮೋದಿ ಅವರು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಚಿಂತನೆಯಲ್ಲಿದ್ದಾರೆ. ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದಲೇ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಸಂಸದನಾಗಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಹೊಲದಲ್ಲಿ ಬೆಳೆಯುವ ಕಳೆಯ ಗಿಡಗಳಂತೆ ಕಾಂಗ್ರೆಸ್‌ನ್ನು ಕಿತ್ತೆಸೆಯಲು ಎರಡೂ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.

    ಗುರು-ಶಿಷ್ಯರ ಸಮಾಗಮಾ!
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಚುನಾವಣಾ ಕಣದಲ್ಲಿ ಜಿದ್ದಾ-ಜಿದ್ದಿಯ ಹೋರಾಟ ನಡೆಸಿದ್ದ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ ಮತ್ತು ಬೆಳ್ಳಿಪ್ರಕಾಶ್ ಸಮನ್ವಯ ವೇದಿಕೆಯಲ್ಲಿ ಇದೇ ಮೊದಲ ಬಾರಿ ವೇದಿಕೆ ಹಂಚಿಕೊಂಡರು. ಕೋಮುವಾದಿ ಪಕ್ಷ ಎಂದೇ ಸದಾ ಹೇಳುತ್ತಿದ್ದ ದತ್ತ ಅವರು, ಬೆಳ್ಳಿಪ್ರಕಾಶ್ ಜತೆಗೂಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಶಾಲು ಧರಿಸಿ ಸಭೆಯ ಗಮನ ಸೆಳೆದರು. ಸಭೆಯ ಮಾತಿನ ಮಧ್ಯೆ ದತ್ತ ಅವರು ಬೆಳ್ಳಿ ನನ್ನ ಶಿಷ್ಯ, ಆತನ ನೇತೃತ್ವದಲ್ಲೇ ನಾವುಗಳೆಲ್ಲರೂ ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು. ಬೆಳ್ಳಿ ಪ್ರಕಾಶ್ ಸಹ ನನ್ನ ಗುರುಗಳಾದ ದತ್ತ ಎಂದು ಭಾಷಣದಲ್ಲಿ ಸಂಬೋಧಿಸಿದರು. ಹೀಗೆ ಗುರು-ಶಿಷ್ಯರ ಸಮಾಗಮಕ್ಕೆ ವೇದಿಕೆ ಸಾಕ್ಷಿಯಾಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts