More

    ಮದ್ಯದ ಕಿಕ್.. ಕರೊನಾ ಭೀತಿ ಔಟ್

    ಬೆಳಗಾವಿ: ಕೋವಿಡ್-19 ಕಟ್ಟುನಿಟ್ಟಿನ ನಿಯಮ, ನಿಷೇಧಾಜ್ಞೆ ನಡುವೆಯೂ ಹೊಸ ವರ್ಷಾಚರಣೆಗೆ ಮದ್ಯದ ‘ಕಿಕ್’ ಏರಿದೆ. 24 ಗಂಟೆಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 14,758 ಬಾಕ್ಸ್ (1.32 ಲಕ್ಷ ಲೀ.) ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಇಳಿಮುಖವಾಗಿದೆ.

    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 638 ಮದ್ಯದ ಅಂಗಡಿಗಳ ವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ 70 ರಿಂದ 80 ಸಾವಿರ ಲೀಟರ್ ಮದ್ಯ ಮಾರಾಟವಾಗುತ್ತದೆ. ಆದರೆ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಪ್ರಮಾಣ 1,32,822 ಲೀ. ದಾಟಿದೆ. ಪ್ರತ್ಯೇಕ ಮಾರಾಟದಲ್ಲಿ ಬಿಯರ್ ಪ್ರಮಾಣ ಇನ್ನೂ ಹೆಚ್ಚಿದೆ.

    ಮಾರಾಟದಲ್ಲಿ ಇಳಿಮುಖ: 2019-20ನೇ ಸಾಲಿನ ಡಿ. 31ರಂದು 22,349 ಬಾಕ್ಸ್ ಮದ್ಯ ಮಾರಾಟವಾಗಿತ್ತು. ಆದರೆ, ಈ ವರ್ಷ 14,758 (ಡಿ.31, 2020) ಬಾಕ್ಸ್ ಮದ್ಯ ಮಾರಾಟವಾಗಿದೆ. 2014 ರಿಂದ 2019ರ ಅವಧಿಯಲ್ಲಿ ಮದ್ಯ ಮತ್ತು ಬಿಯರ್ ಮಾರಾಟದಲ್ಲಿ ಶೇ.23 ಏರಿಕೆ ಕಂಡಿದೆ. 2020-21ನೇ ಸಾಲಿನಲ್ಲಿ ಕೋವಿಡ್-19, ಚುನಾವಣೆ ನೀತಿ ಸಂಹಿತೆ, ನಿಷೇಧಾಜ್ಞೆ ಜಾರಿಯಿಂದ ವರ್ಷದ ಸರಾಸರಿಯಲ್ಲಿ ಮದ್ಯ ಮಾರಾಟದಲ್ಲಿ ಇಳಿಮುಖವಾಗಿದೆ.

    ಒಂದೇ ದಿನದಲ್ಲಿ ಕೋಟ್ಯಂತರ ರೂ. ಆದಾಯ

    2020 ಡಿ. 31ರಂದು 7,541 ಮದ್ಯ ಮತ್ತು 7,217 ಬಿಯರ್ ಸೇರಿದಂತೆ 14,758 ಬಾಕ್ಸ್ ಮದ್ಯ ಮಾರಾಟವಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 7.13 ಕೋಟಿ ರೂ. ಆದಾಯ ಲಭಿಸಿದೆ. ಅಬಕಾರಿ ಇಲಾಖೆ ಮಾರಾಟ ಮಾಡುವ ಒಂದು ಬಾಕ್ಸ್‌ನಲ್ಲಿ ಬಿಯರ್ 9 ಲೀಟರ್ (ಸರಾಸರಿ 8-9) ಮದ್ಯವಿರುತ್ತದೆ. ಹೊಸ ವರ್ಷಾಚರಣೆಯ ಕೊನೆಯ ದಿನ ಮಾರಾಟವಾದ 14,758 ಬಾಕ್ಸ್‌ಗಳಲ್ಲಿ ಸರಾಸರಿ 9 ಲೀಟರ್‌ನಂತೆ 1,32,822 ಲೀ. ಮದ್ಯ ಮಾರಾಟವಾಗಿದೆ ಎಂದು
    ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿಡ್-19ನಿಂದಾಗಿ ಈ ಬಾರಿ ಹೊಸ ವರ್ಷಾಚರಣೆಗೆ ತಡೆ ಮಾಡಿದ್ದರಿಂದ ಡಿ.31ರ ಮದ್ಯ ಮಾರಾಟದಲ್ಲಿ ಇಳಿಕೆ ಕಂಡಿದೆ. ಆದರೆ, ಡಿಸೆಂಬರ್ ತಿಂಗಳ ಅವಧಿಯಲ್ಲಿ ಸರಾಸರಿ ಪ್ರಮಾಣದಲ್ಲಿ ಮದ್ಯ
    ಮಾರಾಟದಲ್ಲಿ ಏರಿಕೆ ಕಂಡಿದೆ.
    | ಡಾ.ಮಂಜುನಾಥ ವೈ ಜಂಟಿ ಆಯುಕ್ತರು, ಬೆಳಗಾವಿ ಅಬಕಾರಿ ವಿಭಾಗ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts