More

    ಐದಾರು ಗ್ರಾಮಗಳ ನಡುವೆ ಒಂದೇ ಬಸ್: ಅಳವಂಡಿಗೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ

    ಅಳವಂಡಿ: ಹೋಬಳಿ ವ್ಯಾಪ್ತಿಯ ಐದಾರು ಗ್ರಾಮಗಳಿಗೆ ಒಂದೇ ಸರ್ಕಾರಿ ಬಸ್ ಸಂಚಾರವಿದ್ದು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜಿನ ನೂರಾರು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ನಿಲೋಗಿಪುರ, ಹಲವಾಗಲಿ, ಕೇಸಲಾಪುರ, ಹೈದರನಗರ, ಹಟ್ಟಿ ಹಾಗೂ ಇತರ ಗ್ರಾಮಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಳವಂಡಿಯ ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ, ಈ ಹಳ್ಳಿಗಳಲ್ಲಿ ಕೇವಲ ಒಂದೇ ಬಸ್ ಓಡಾಡುವುದರಿಂದ ಸಮಸ್ಯೆಯಾಗಿದ್ದು, ಅಳವಂಡಿಗೆ ಬಂದು ವಾಪಸ್ ಊರಿಗೆ ಹೋಗಬೇಕೆಂದರೆ ಹರಸಾಹಸಪಡುವಂತಾಗಿದೆ.

    ತುಂಗಭದ್ರಾ ನದಿ ಪಾತ್ರದಲ್ಲಿರುವ ನಿಲೋಗಿಪುರದಿಂದ ಅಳವಂಡಿ 20 ಕಿಮೀ ದೂರದಲ್ಲಿದೆ. ಈ ಗ್ರಾಮದಿಂದ ಬರುವ ಬಸ್ ಹಲವಾಗಲಿ, ಕೇಸಲಾಪುರ, ಹೈದರನಗರ ಮಾರ್ಗವಾಗಿ ಅಳವಂಡಿ ತಲುಪುತ್ತದೆ. ಒಂದೇ ಬಸ್ ಸಂಚಾರ ಇರುವುದರಿಂದ ಶಾಲಾ-ಕಾಲೇಜು ಸಮಯಕ್ಕೆ ವಿದ್ಯಾರ್ಥಿಗಳು ಹಾಜರಾಗಲು ಆಗುತ್ತಿಲ್ಲ. 150ಕ್ಕೂ ಹೆಚ್ಚು ಮಕ್ಕಳ ಜತೆ ಪ್ರಯಾಣಿಕರು ಹತ್ತುವುದರಿಂದ ಬಸ್ ತುಂಬಿ ತುಳುಕುತ್ತದೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ಮಕ್ಕಳು ಶಾಲೆಗೆ ತೆರಳಲು ಹಾಗೂ ಮರಳಿ ಬರಲು ಯಮಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಪ್ರತಿನಿತ್ಯ ಮಕ್ಕಳು ಅಳವಂಡಿಗೆ ತೆರಳಲು ಹರಸಾಹಸಪಡಬೇಕಾಗಿದೆ. ಶಾಲೆ-ಕಾಲೇಜು ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಕೇವಲ ಒಂದು ಬಸ್ ಇರುವುದರಿಂದ 150ಕ್ಕೂ ಹೆಚ್ಚು ಮಕ್ಕಳು ಅದರಲ್ಲೇ ಸಂಚರಿಸಬೇಕಾಗಿದೆ. ಹಲವಾಗಲಿ, ನಿಲೋಗಿಪುರ, ಕೇಸಲಾಪುರ, ಹೈದರನಗರ ಗ್ರಾಮಗಳ ಮಕ್ಕಳು ನಿತ್ಯ ಸರ್ಕಸ್ ಮಾಡಬೇಕಿದೆ. ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು.
    | ವಿಶ್ವನಾಥ ಹಳ್ಳಿ ಪಾಲಕ, ಹಲವಾಗಲಿ ಗ್ರಾಮ

    ಪ್ರತಿದಿನ ಬಸ್‌ನಲ್ಲಿ ನೂಕುನುಗ್ಗಲಿನ ಮಧ್ಯೆ ಶಾಲೆಗೆ ತೆರಳಬೇಕಿದೆ. ಇದೊಂದು ಸವಾಲಿನ ಕೆಲಸವಾಗಿದೆ. ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ.
    | ಮಂಜುನಾಥ ಅಬ್ಬಿಗೇರಿ ವಿದ್ಯಾರ್ಥಿ, ನಿಲೋಗಿಪುರ

    ಅಳವಂಡಿ-ನಿಲೋಗಿಪುರ ನಡುವೆ ಸಂಚರಿಸುವ ಒಂದು ಬಸ್‌ನಿಂದ ಶಾಲಾ-ಕಾಲೇಜು ಮಕ್ಕಳು ಸಮಸ್ಯೆ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಇನ್ನೆರಡು ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಲಾಗುವುದು.
    | ಬಸವರಾಜ ಬಟ್ಟೂರ ಡಿಪೋ ಮ್ಯಾನೇಜರ್, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts