More

    ಕಾಲುವೆಗಳಿಗೆ ನೀರು ಹರಿಸುವುದು ಮುಂದುವರಿಸಿ

    ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನ.19ರ ಬಳಿಕವೂ ನೀರು ಹರಿಸುವುದು ಮುಂದುವರಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಕೆಬಿಜೆಎನ್‌ಎಲ್ ಮುಖ್ಯಅಭಿಯಂತರ ಎಚ್. ಸುರೇಶ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತಿದ ತೊಗರಿ ಬೆಳೆ ಸರಿಯಾಗಿ ಮಳೆಯಾಗದ ಕಾರಣ ಸಂಪೂರ್ಣ ಹಾಳಾಗಿವೆ. ಹಿಂಗಾರು ಹಂಗಾಮಿನಲ್ಲಿ ಕಾಲುವೆ ನೀರನ್ನು ನಂಬಿ ಜೋಳ, ಗೋಧಿ, ಕಡಲೆ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಮಳೆಯಿಲ್ಲದೆ ಬೆಳೆಗಳು ಒಣಗುತ್ತಿವೆ. ಇತ್ತ ಕಾಲುವೆಗೆ ನೀರು ಹರಿಸುವುದನ್ನು ನ. 19ರಂದು ಸ್ಥಗಿತಗೊಳಿಸಿದರೆ ಹಿಂಗಾರು ಬೆಳೆಗಳೂ ಸಂಪೂರ್ಣ ಹಾಳಾಗಿ ರೈತರು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

    ರೈತರು ಬದುಕಬೇಕೆಂದರೆ ಹಿಂಗಾರು ಬೆಳೆಗೆ ಇನ್ನೂ ನೀರು ಹರಿಸುವ ಅವಧಿ ವಿಸ್ತರಿಸಬೇಕು. ನವೆಂಬರ್ ತಿಂಗಳಲ್ಲಿ ಐಸಿಸಿ ಸಭೆ ನಡೆಸಬೇಕಿತ್ತಾದರೂ ಇಲ್ಲಿಯವರೆಗೂ ಸಭೆಯ ದಿನಾಂಕ ನಿಗದಿಯಾಗಿಲ್ಲ. ಈಗ ರೈತರು ಐಸಿಸಿ ಸಭೆಯತ್ತ ಚಿತ್ತ ನೆಟ್ಟಿದ್ದಾರೆ. ಐಸಿಸಿ ಸಭೆ ದಾರಿ ನೋಡುತ್ತ ಕುಳಿತರೆ ಹಿಂಗಾರು ಬೆಳೆ ಸಂಪೂರ್ಣ ನೆಲಕಚ್ಚಿ ರೈತರ ಬದುಕು ಮೂರಾಬಟ್ಟೆಯಾಗುತ್ತದೆ. ಆದ್ದರಿಂದ ಮೊದಲು ಕಾಲುವೆಗೆ ನೀರು ಹರಿಸಿ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು ನಂತರ ಐಸಿಸಿ ಸಭೆ ನಡೆಸಲಿ ಎಂದು ಮನವಿ ಮಾಡಿದರು.

    ನ.19ರಿಂದಲೂ ಕಾಲುವೆಗೆ ನಿರಂತರ ನೀರು ಹರಿಸಬೇಕು. ಇಲ್ಲದಿದ್ದರೆ ಮುಖ್ಯ ಅಭಿಯಂತರರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಎ್ಆರ್‌ಎಲ್ ಉಪ ವಿಭಾಗ-2ರನ್ನು ಆಲಮಟ್ಟಿಯಿಂದ ಬೀಳಗಿಗೆ ಸ್ಥಳಾಂತರಿಸಿದ್ದು, ನಮ್ಮ ಭಾಗದ ರೈತರಿಗೆ ತೊಂದರೆಯಾಗುತ್ತವೆ. ಹೀಗಾಗಿ ಅದು ಆಲಮಟ್ಟಿಯಲ್ಲೇ ಮಂದುವರಿಸಬೇಕು ಎಂದು ಆಗ್ರಹಿಸಿದರು.

    ತಾಲೂಕು ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಹೊನಕೇರೆಪ್ಪ ತೆಲಗಿ, ಚಂದ್ರಾಮ ತೆಗ್ಗಿ, ಶೇಖಪ್ಪ ಕರಾಬಿ, ಶಂಕ್ರು ಕಾಜೋಟಿ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮುಂಡಗನೂರ, ರಾಜು ದೇಸಾಯಿ, ದಾದಾಪೀರ ಮಾಚಕನವರ, ಹುಸೇನಸಾಬ ಮುಜಾವರ, ಗುರಪ್ಪ ನಾವದಗಿ, ರಂಜಾನ ಮಾಚಪ್ಪನವರ, ಭೀಮಪ್ಪ ಕುಚನೂರ, ಸಿದ್ದು ಗದ್ಯಾಳ, ಶೇಖರ ಕಲಬೀಳಗಿ, ಎಂ.ಎಸ್. ವಾಲೀಕಾರ ಇತರರಿದ್ದರು.

    ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಮುಂಗಾರು ಹಂಗಾಮಿಗಾಗಿ ನ.19ರ ವರೆಗೆ ಮಾತ್ರ ನೀರು ಹರಿಸಲಾಗುತ್ತದೆ.
    ಎಚ್ ಸುರೇಶ, ಮುಖ್ಯ ಅಭಿಯಂತರ, ಕೆಬಿಜೆಎನ್‌ಎಲ್, ಆಲಮಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts