More

    ರಾಜ್ಯ ನೌಕರರಿಗೆ ಶೀಘ್ರ ನಗದು ರಹಿತ ಚಿಕಿತ್ಸೆ

    ಆಲಮಟ್ಟಿ: ರಾಜ್ಯದ ಕಾರ್ಪೋರೇಟ್ ಆಸ್ಪತ್ರೆ ಸೇರಿ ಯಾವುದೇ ಆಸ್ಪತ್ರೆಯಲ್ಲಿ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಶೀಘ್ರ ಆರಂಭಗೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ಸ್ಥಳೀಯ ಸಮುದಾಯ ಭವನ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಯೋಜನಾ ಘಟಕ ಶುಕ್ರವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ನೂತನ ಯೋಜನೆಯಿಂದ 6 ಲಕ್ಷ ನೌಕರರ ಕುಟುಂಬದವರಿಗೆ ಆರೋಗ್ಯ ಭಾಗ್ಯ ದೊರೆಯಲಿದೆ. ಎಲ್ಲ ರೋಗಗಳಿಗೂ ಚಿಕಿತ್ಸೆ ಸಂಪೂರ್ಣ ನಗದು ರಹಿತವಾಗಲಿದೆ. ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಇದನ್ನು ಜಾರಿಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಜಾರಿಯಾದರೆ ದೇಶದಲ್ಲೇ ವಿನೂತನ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕ ಆಗಲಿದೆ ಎಂದರು.

    ವೇತನ ಆಯೋಗದ ಕುರಿತು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಮುಂದಿನ ವರ್ಷ ಜನವರಿ ತಿಂಗಳಲ್ಲಿ ಏಳನೇ ವೇತನ ಆಯೋಗದ ವರದಿ ಜಾರಿಯಾಗಿ ನೌಕರರಿಗೆ ಕೇಂದ್ರ ಮಾದರಿ ವೇತನ ದೊರೆಯಲಿದೆ ಎಂದರು.

    ನಮ್ಮ ಸಂಘದ ಶಕ್ತಿಯ ಅರಿಕೆ ರಾಜ್ಯ ಸರ್ಕಾರಕ್ಕಿದೆ. ಏಳನೇ ವೇತನ ಆಯೋಗ ಜಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನಿಸಿದ್ದಾರೆ ಎಂದರು.

    ಇ- ಸೇವಾ ಪುಸ್ತಕ ಜಾರಿಗಾಗಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ವ್ಯವಸ್ಥೆ ಜಾರಿಯಾದರೆ ಪ್ರತಿಯೊಬ್ಬ ನೌಕರನ ಸೇವಾ ಪುಸ್ತಕ ಸಂಪೂರ್ಣ ಆನ್‌ಲೈನ್ ವ್ಯವಸ್ಥೆಗೆ ಒಳಪಡಲಿದೆ. ಎಚ್‌ಆರ್‌ಎಂಎಸ್ ಮೂಲಕ ಪ್ರತಿಯೊಬ್ಬರ ಸೇವಾ ಪುಸ್ತಕ ನಿರ್ವಹಣೆಯಾಗಲಿದೆ. ಸದ್ಯಕ್ಕೆ ಏಳನೇ ವೇತನ ಆಯೋಗದ ಜಾರಿ ನಮ್ಮ ಗುರಿ, ಅದರ ಈಡೇರಿಕೆಯ ನಂತರ ನೂತನ ಪಿಂಚಣಿ ಯೋಜನೆ ರದ್ದತಿಗೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

    ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಎಚ್. ಸುರೇಶ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನಾ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ ಅಧ್ಯಕ್ಷತೆ ವಹಿಸಿದ್ದರು.
    ಕೆಬಿಜೆಎನ್‌ಎಲ್ ಇಂಜಿನಿಯರ್ ಡಿ. ಬಸವರಾಜ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಲಕ್ಷ್ಮೀ ಡಿ.ಕೆ., ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ನೌಕರರ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗೌಡರ, ಮೋಹನಕುಮಾರ, ಜುಬೇರ್ ಕೆರೂರ, ವಿಠ್ಠಲ ವಾಲೀಕಾರ, ಶಿವಾನಂದ ಮಂಗಾನವರ, ದಿನೇಶ ಜಹಗೀರದಾರ, ವೈ.ಎಂ. ಪಾತ್ರೋಟ, ಎ.ಎಸ್. ವಕ್ರ, ಎಂ.ಎಸ್. ದಂಧರಗಿ, ಆರ್.ಎ. ನದಾಫ್ ಇದ್ದರು.

    ಬಸ್ ನಿಲ್ದಾಣ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಸ್ವಚ್ಛತಾ ಅಭಿಯಾನದಲ್ಲಿ 400 ಕ್ಕೂ ಅಧಿಕ ನೌಕರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts