More

    ವಾಕ್, ಶ್ರವಣ ಆರೋಗ್ಯಕ್ಕೆ ಶ್ರಮಿಸುತ್ತಿರುವ ಆಯಿಷ್

    ಮಂಜುನಾಥ ತಿಮ್ಮಯ್ಯ ಮೈಸೂರು


    ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್) ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಸಂಸ್ಥೆ.

    ಮಾನಸಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಪಕ್ಕದಲ್ಲಿರುವ 32 ಎಕರೆಗಳ ಹಚ್ಚ ಹಸಿರಿನ ಕ್ಯಾಂಪಸ್‌ನಲ್ಲಿ ನೆಲೆಗೊಂಡಿರುವ ಇದು ಏಷ್ಯಾ ಉಪಖಂಡದಲ್ಲೇ ವಿಶಿಷ್ಟ ಸಂಸ್ಥೆಯೂ ಹೌದು.


    1966ರಲ್ಲಿ ಸ್ಥಾಪನೆಯಾದ ಇದು ಸ್ವಾಯತ್ತೆ ಹೊಂದಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ, ಕ್ಲಿನಿಕಲ್ ಕೇರ್ ಮತ್ತು ಸಂವಹನ ಅಸ್ವಸ್ಥತೆಗಳ ಕುರಿತು ಅಧ್ಯಯನ, ಚಿಕಿತ್ಸೆ, ಸಂಶೋಧನೆ ಮಾಡುವ ರಾಷ್ಟ್ರೀಯ ಪ್ರವರ್ತಕ ಸಂಸ್ಥೆಯಾಗಿದೆ.


    ಅಂತರಶಿಸ್ತೀಯ ಸಂಶೋಧನೆ ನೀಡಲು ಅತ್ಯಾಧುನಿಕ ಸೌಲಭ್ಯ ಹೊಂದಿರುವ 12 ವಿಭಾಗಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ, ಹಾಸ್ಟೆಲ್, ಕ್ಲಿನಿಕಲ್ ವಿಭಾಗಗಳು, ಜ್ಞಾನ ಉದ್ಯಾನ, ಸುಸಜ್ಜಿತ ಗ್ರಂಥಾಲಯ, ಮಾಹಿತಿ ಕೇಂದ್ರ ಇದೆ. 2 ಹೆಚ್ಚುವರಿ ಕ್ಯಾಂಪಸ್‌ಗಳಿವೆ. ವೃತ್ತಿಪರ ತರಬೇತಿ, ವೈದ್ಯಕೀಯ ಸೇವೆ, ಸಂಶೋಧನೆ, ಶ್ರವಣ ದೋಷ, ಬುದ್ಧಿಮಾಂದ್ಯತೆ, ಧ್ವನಿ, ನಿರರ್ಗಳತೆ, ಧ್ವನಿ, ಭಾಷಾ ಸಂವಹನ ಅಸ್ವಸ್ಥತೆ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುತ್ತದೆ.


    ಇದು ದೇಶ-ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಕಳೆದ 5 ದಶಕಗಳಿಂದ ಶ್ರವಣ ಶಾಸ್ತ್ರ, ವಾಕ್ ಭಾಷಾ ರೋಗಶಾಸ್ತ್ರ, ವಿಶೇಷ ಶಿಕ್ಷಣದ ವೃತ್ತಿ ಸುಧಾರಣೆಗೆ ಶ್ರಮಿಸುತ್ತಿದೆ. 1966ರಲ್ಲಿ ಒಸಂದು ಸ್ನಾತಕೋತ್ತರ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಈಗ ಡಿಪ್ಲೊಮಾದಿಂದ ಪಿಎಚ್.ಡಿವರೆಗೆ 18 ಶೈಕ್ಷಣಿಕ ಕಾರ್ಯಕ್ರಮಗಳನ್ನು ಕಲಿಸುತ್ತಿದೆ.


    ಅತ್ಯಾಧುನಿಕ ಉಪಕರಣ, ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಸಂಸ್ಥೆಯು ಸಂವಹನ ಅಸ್ವಸ್ಥತೆ ಹೊಂದಿರುವ ಎಲ್ಲ್ಲ ವಯೋಮಾನದವರಿಗೂ ಕ್ಲಿನಿಕಲ್ ಸೇವೆ ಒದಗಿಸುತ್ತದೆ. ಯಾವುದೇ ರೀತಿಯ ಸಂವಹನ ತೊಂದರೆಗಳಿಗಾಗಿ ಮಕ್ಕಳ, ವಯಸ್ಕರು, ವೃದ್ಧಾಪ್ಯ ಗುಂಪುಗಳಿಗೆ ಮೌಲ್ಯಮಾಪನ, ಪುನರ್ವಸತಿ ಸೇವೆ ಕಲ್ಪಿಸುತ್ತದೆ.

    ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಿವುಡುತನದ ತಡೆಗಟ್ಟುವಿಕೆ, ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ನೋಡಲ್ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇದಕ್ಕಾಗಿ ಮಾನವಶಕ್ತಿಯನ್ನು ಉತ್ಪಾದಿಸುತ್ತದೆ. ಅದರ ಶೈಕ್ಷಣಿಕ, ಸಂಶೋಧನಾ ಉತ್ಕೃಷ್ಟತೆಯ ಕಾರಣದಿಂದಾಗಿ ನ್ಯಾಕ್‌ನಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದೆ. ಯುಜಿಸಿಯಿಂದ ‘ಉತ್ಕೃಷ್ಟತೆಯ ಕಾಲೇಜು’ ಎಂದು ಗುರುತಿಸಲ್ಪಟ್ಟಿದೆ.

    ಶ್ರವಣ ವಿಜ್ಞಾನ ವಿಭಾಗ ಹಿರಿಮೆ


    ಆಯಿಷ್ ಸಂಸ್ಥೆಯಲ್ಲೇ ಶ್ರವಣ ವಿಜ್ಞಾನ ವಿಭಾಗ(ಆಡಿಯೋಲಜಿ) ಪ್ರಮುಖವಾದದು. ಇದು ಆಗ್ನೇಯ ಏಷ್ಯಾದಲ್ಲೇ ಅತಿ ದೊಡ್ಡ ಆಡಿಯೋಲಾಜಿಕಲ್ ವ್ಯವಸ್ಥೆ ಹೊಂದಿದೆ. ಇಲ್ಲಿ 20 ಪರೀಕ್ಷಾ ಘಟಕಗಳಿವೆ. ಒಂದೇ ಬಾರಿ 20 ರೋಗಿಗಳನ್ನು ಪರೀಕ್ಷಿಸಬಹುದಾಗಿದೆ. ಅತ್ಯಾಧುನಿಕ ಉಪಕರಣಗಳಿವೆ.

    ವಾಕ್, ಶ್ರವಣ ಆರೋಗ್ಯಕ್ಕೆ ಶ್ರಮಿಸುತ್ತಿರುವ ಆಯಿಷ್

    ತರಬೇತಿ, ಕ್ಲಿನಿಕಲ್ ಸೇವೆ, ಸಂಶೋಧನಾ ಚಟುವಟಿಕೆ, ವಿಸ್ತರಣಾ ಚಟುವಟಿಕೆಗಳು, ಸಾರ್ವಜನಿಕ ಶಿಕ್ಷಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವಿವಿಧ ಅಲ್ಪಾವಧಿ, ದೀರ್ಘಾವಧಿಯ ತರಬೇತಿ ಕಾರ್ಯಕ್ರಮ ನೀಡುತ್ತಿದೆ. ಈ ವಿಭಾಗವು ಎಲ್ಲ ವಯೋಮಾನದವರಿಗೂ ಕ್ಲಿನಿಕಲ್ ಸೇವೆ ನೀಡುತ್ತದೆ. ಶ್ರವಣ ದೋಷ ತಡೆಗಟ್ಟುವುದು, ಶ್ರವಣದ ಮೌಲ್ಯಮಾಪನ, ಶ್ರವಣ ಸಾಧನಗಳ ಆಯ್ಕೆ, ಫಿಟ್‌ಮೆಂಟ್, ಕಸ್ಟಮ್ ಇಯರ್ ಅಚ್ಚುಗಳನ್ನು ಒದಗಿಸುವುದು. ಶ್ರವಣ ದೋಷವಿರುವ ವ್ಯಕ್ತಿಗಳ ಪುನರ್ವಸತಿಗೆ ಶ್ರಮಿಸುತ್ತಿದೆ.

    ಮಾ.3 ವಿಶ್ವ ಶ್ರವಣ ದಿನ


    ಈ ಬಾರಿಯ ಥೀಮ್ ‘ಮನಸ್ಥಿತಿ ಬದಲಿಸುವಿಕೆ’
    ಮಾ.3 ವಿಶ್ವ ಶ್ರವಣ ದಿನ. ‘3’ ಸಹ ಕಿವಿ ಆಕೃತಿಯ ಸಂಕೇತ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುೃಎಚ್‌ಒ) ಅಂಗ ಸಂಸ್ಥೆಯಾದ ವಿಶ್ವ ಶ್ರವಣ ಸಂಸ್ಥೆಯ ಸದಸ್ಯತ್ವ, ಮಾನ್ಯತೆಯನ್ನೂ ಆಯಿಷ್ ಪಡೆದಿದೆ. ಇದು ಕಿವಿ ರಕ್ಷಣೆಯೊಂದಿಗೆ ಜನೋಪಯೋಗಿ ಕೆಲಸದಲ್ಲೂ ಸಕ್ರಿಯವಾಗಿದೆ. ಥೀಮ್ ಆಧಾರದ ಮೇಲೆ ಜಾಗೃತಿ ಕಾರ್ಯಕ್ರಮ ಮೂಡಿಸುತ್ತಿದೆ. ಈ ಸಮಿತಿಯ ಆಯಿಷ್ ಸಹ ಇದೆ.


    ಈ ಸಲದ ಥೀಮ್ ‘ಮನಸ್ಥಿತಿ ಬದಲಿಸುವಿಕೆ’. ಕಿವುಡರು, ಮೂಗರ ಕುರಿತು ನಿರ್ಲಕ್ಷಿಸುವ, ಅಸಡ್ಡೆ ಮಾಡುವ ಪ್ರವೃತ್ತಿ ಈಗಲೂ ಇದೆ. ಶ್ರವಣ ಉಪಕರಣ ಬಳಕೆದಾರರನ್ನು ನೋಡುವ ರೀತಿಯೂ ಭಿನ್ನವಾಗಿರುತ್ತದೆ. ತಾತ್ಸಾರದಿಂದ ನೋಡುತ್ತಾರೆ. ಈ ಮನಸ್ಥಿತಿ ಸರಿಯಲ್ಲ ಎಂದು ಆಯಿಷ್‌ನ ನಿರ್ದೇಶಕಿ ಡಾ.ಎಂ.ಪುಷ್ಪವತಿ ಹೇಳಿದರು.


    ಶ್ರವಣ ಸಾಧನೆ ಬಳಕೆ ಸಹ ಸಹಜ ಪ್ರಕ್ರಿಯೆ. ಹೇಗೆ ಕನ್ನಡಕ ಧರಿಸುತ್ತಾರೋ ಅದೇ ರೀತಿ ಈ ಸಾಧನ ಕೂಡ. ಇದರಲ್ಲಿ ವ್ಯತ್ಯಾಸ ಇಲ್ಲ. ಹೀಗಾಗಿ, ಪ್ರತಿಯೊಬ್ಬರೂ ಶ್ರವಣ ದೋಷವುಳ್ಳವರನ್ನು ನೋಡುವ ಮನಸ್ಥಿತಿ ಬದಲಾಗಬೇಕು. ಇದುವೇ ಈ ಸಲ ಥೀಮ್‌ನ ಉದ್ದೇಶವಾಗಿದೆ ಎಂದೂ ತಿಳಿಸಿದರು.ಸ

    ವಿವಿಧ ಚಟುವಟಿಕೆಗಳು


    *10 ಲಕ್ಷ ರೂ. ಬೆಲೆಬಾಳುವ ಶ್ರವಣ ಸಾಧನ(ಹಿಯರಿಂಗ್‌ಏಡ್) 110 ಮಕ್ಕಳಲ್ಲಿ ಪ್ರಾಯೋಗಿಕ ಅಳವಡಿಕೆ.
    *ಶ್ರವಣಕ್ಕೆ ಸಂಬಂಧಿಸಿದ ಮಾಹಿತಿ ಪುಸ್ತಕ ಸಿದ್ಧತೆ. ಭಾರತದಲ್ಲಿ ಎಲ್ಲ ಭಾಷೆಗಳಿಗೆ ತರ್ಜುಮೆ. ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ಮೊದಲು ಪ್ರಯೋಗ.
    *ಶ್ರವಣ ದೋಷದ ವ್ಯಕ್ತಿಗಳ ಪತ್ತೆಗಾಗಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ. ಕಿವಿ ತೊಂದರೆ ತಪಾಸಣೆ, ಅದರ ನಿರ್ವಹಣೆ, ಔಷಧ ಕುರಿತು ಸಲಹೆ, ಸೂಚನೆ.
    *ಸಾರ್ವಜನಿಕ ಶಿಕ್ಷಣ ನೀಡುವ ಸಲುವಾಗಿ ರೇಡಿಯೋ ಬಾನುಲಿ ಕಾರ್ಯಕ್ರಮ. ಮಾ.3ರಂದು ಮೈಸೂರು ಆಕಾಶವಾಣಿ ಕಾರ್ಯಕ್ರಮ ಬಿತ್ತರ.
    *ವೈದ್ಯಕೀಯ ಕ್ಷೇತ್ರದ ವೈದ್ಯರಿಗೆ ತರಬೇತಿಯೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮ.
    *ಸಂಸ್ಥೆಯಲ್ಲಿರುವ ಸೌಲಭ್ಯಗಳ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ.
    *ಕಿವಿ, ಶ್ರವಣ ರಕ್ಷಣೆ ಕುರಿತು ದಕ್ಷಿಣ ಭಾರತೀಯ ಶ್ರವಣತಜ್ಞರ ಸೇರಿಸಿ ವಿಚಾರ ಸಂಕಿರಣ.

    ತಪಾಸಣೆ, ಚಿಕಿತ್ಸೆ


    *ಕಿವಿ ತೊಂದರೆ ಇರುವವರಿಗೆ ತಪಾಸಣೆ, ಔಷಧ ವಿತರಣೆ. ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ
    *ಶ್ರವಣ ಸಾಧನ ಬಳಕೆಗೆ ಸೂಚನೆ
    *ಶಾಶ್ವತವಾಗಿ ಕಿವಿ ಹಾನಿಯಾಗಿರುವವರಿಗೆ ಕಿವಿಯ ಒಳಗೆ, ಹೊರಗೆ ವಿಶಿಷ್ಟ ಸಾಧನ ಅಳವಡಿಕೆ. ಅದಕ್ಕೆ ಕಂಪ್ಯೂಟರ್ ಆಧಾರಿತ ಕಾರ್ಯಕ್ರಮ ವಿನ್ಯಾಸ.
    *ಕಿವಿ ತೊಂದರೆ ಇರುವವರಿಗೆ ಥೆರಫಿ

    ಒಂದೇ ಸೂರಿನಡಿ ಚಿಕಿತ್ಸೆ:


    ಶ್ರವಣ, ವಾಕ್ ಸೇರಿದಂತೆ ವಿವಿಧ ವೈದ್ಯಕೀಯ ತೊಂದರೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ. ಸ್ನಾಯು ತೊಂದರೆ, ಪಾರ್ಶ್ವವಾಯು ಸೇರಿದಂತೆ ಇನ್ನಿತರ ಅನಾರೋಗ್ಯಗಳಿಗೂ ಆರೋಗ್ಯ ಸೇವೆ.

    ಎಐ ತಂತ್ರಜ್ಞಾನ ಬಳಕೆ:


    ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಕೆ ಮೂಲಕ ಶ್ರವಣ ನ್ಯೂನತೆಯುಳ್ಳವರಿಗೆ ನೆರವು. ವಾತಾವರಣದಲ್ಲಿರುವ ಸುತ್ತಲಿನ ಗದ್ದಲ ಕಡಿಮೆ ಮಾಡಿ ನಿರ್ದಿಷ್ಟ ಧ್ವನಿ, ಮಾತು ಕೇಳುವಂತೆ ಅನುಕೂಲ ಕಲ್ಪಿಸಲು ಈ ತಂತ್ರಜ್ಞಾನ ಬಳಕೆ. ಸಂಗೀತವನ್ನೂ ಆಸ್ವಾದಿಸಬಹುದಾಗಿದೆ.

    ಸಾಧನ ಖರೀದಿಗೆ ಸರ್ಕಾರದ ನೆರವು


    ಶ್ರವಣ ಉಪಕರಣ ಬೆಲೆ 6 ಲಕ್ಷ ರೂ.ಗಳಿಂದ 17 ಲಕ್ಷ ರೂ.ವರೆಗೆ ಇದೆ. ಇದು ಬಡವರು, ಮಧ್ಯಮವರ್ಗದವರಿಗೆ ಖರೀದಿಗೆ ಕಷ್ಟಕರವಾಗಿದೆ. ಕೇಂದ್ರ, ವಿವಿಧ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ವಿವಿಧ ಯೋಜನೆಯಡಿ ಲಾಭ ಪಡೆದುಕೊಳ್ಳಬಹುದಾಗಿದೆ. ಕಳೆದ ಎರಡ್ಮೂರು ವರ್ಷದಿಂದ ಕೇಂದ್ರ ಸರ್ಕಾರದಿಂದ 300, ರಾಜ್ಯ ಸರ್ಕಾರದಿಂದ 110 ಸೇರದಂತೆ 410 ಶ್ರವಣ ಉಪಕರಣಗಳನ್ನು ಕೊಡಿಸಲಾಗಿದೆ.

    ಟೆಲಿ ಸೇವೆಯಿಂದ ವಿದೇಶದವರಿಗೂ ಅನುಕೂಲ


    ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳಿಗೆ ವೃತ್ತಿಪರ ಚಿಕಿತ್ಸೆ ಹಾಗೂ ಇತರ ಸೇವೆ ನೀಡಲು ಟೆಲಿ ಸೇವೆ ಸಹ ಲಭ್ಯ. ಅದಕ್ಕಾಗಿ ಟೆಲಿ ಸೆಂಟರ್ ತೆರೆಯಲಾಗಿದೆ. ರಾಜ್ಯ, ಹೊರರಾಜ್ಯ ಸೇರಿದಂತೆ ವಿದೇಶದಲ್ಲಿರುವ ಭಾರತೀಯರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ದೂರವಾಣಿ ಮೂಲಕ ಕಿವಿ, ಮಾತು ನಿರ್ವಹಣೆ ಕುರಿತು ಸೂಕ್ತ ಸಲಹೆ, ಔಷಧ ಶಿಫಾರಸು ಮಾಡಲಾಗುತ್ತದೆ.

    ಮಾಹಿತಿ ಸಂಪರ್ಕಕ್ಕಾಗಿ

    ದೂರವಾಣಿ ಸಂಖ್ಯೆ 0821 2502000, 2502100. ವೆಬ್‌ಸೈಟ್: aiishmysore.in.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts