More

    ಎಐಸಿಸಿ ಅಧ್ಯಕ್ಷರ ಹೇಳಿಕೆ ಶೋಭೆ ತರದು: ಯಡಿಯೂರಪ್ಪ ಕಿಡಿ

    ಶಿವಮೊಗ್ಗ: ಬಿಜೆಪಿ ನ್ಯಾಯದ ಪರವಾಗಿಲ್ಲ. ಮೀಸಲಾತಿಯಲ್ಲಿ ನಂಬಿಕೆ ಇಟ್ಟಿಲ್ಲವೆಂದು ಚಿತ್ರದುರ್ಗದಲ್ಲಿ ನಡೆದ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶದಲ್ಲಿ ಕಾಂಗ್ರೆಸ್ ಮಾಡಿರುವ ಆರೋಪಗಳಲ್ಲಿ ಸತ್ಯವಿಲ್ಲ. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನಬಂದಂತೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.
    ಮೀಸಲಾತಿ ಕುರಿತು ಬಿಜೆಪಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದನ್ನು ತಿರುಚಿ ಕಾಂಗ್ರೆಸ್ಸಿಗರು ಮನಬಂದಂತೆ ಮಾತನಾಡುತ್ತಿದ್ದಾರೆ. ಇದು ಅವರಿಗೆ ಎಷ್ಟು ಗೌರವ ತಂದು ಕೊಡಲಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
    ಕಾಂಗ್ರೆಸ್ ಮುಖಂಡರು ಇನ್ನಾದರೂ ವಾಸ್ತವಿಕ ಸಂಗತಿ ತಿಳಿದು ಮಾತನಾಡಬೇಕಿದೆ. ಅವರಂತೂ ಏನನ್ನೂ ಮಾಡಲಿಲ್ಲ. ನಾವು ಮಾಡಿದ್ದನ್ನು ಸ್ವಾಗತ ಮಾಡಬೇಕಿತ್ತು. ಅದನ್ನು ಬಿಟ್ಟು ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಮೀಸಲಾತಿ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದರು.
    ಸಂಪುಟದ ವಿಸ್ತರಣೆ ವಿಷಯ ಚರ್ಚೆಯಾಗುತ್ತಿದೆ. ಎಷ್ಟು ಸ್ಥಾನಗಳನ್ನು ಭರ್ತಿ ಮಾಡಲಾಗವುದು ಎಂಬ ಬಗ್ಗೆ ತಿಳಿದಿಲ್ಲ. ಕೆ.ಎಸ್.ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು. ಆದರೆ ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಅಪೇಕ್ಷೆ ಎಂದರು.
    ಸ್ಯಾಂಟ್ರೋ ರವಿ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಹೇಳಿದರು. ಬಿಜೆಪಿ ನಾಯಕರ ಜತೆ ಸ್ಯಾಂಟ್ರೊ ರವಿ ಹೆಸರು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಿಎಂ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಕಾನೂನಿನ ಅಡಿಯಲ್ಲಿ ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಸ್ಯಾಂಟ್ರೋ ರವಿಯೊಂದಿಗೆ ಹಲವು ಸಚಿವರ ಹೆಸರು ಕೇಳಿ ಬರುತ್ತಿದೆ. ಈ ವಿಚಾರ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts