More

    ಕೃಷಿ, ಶೈಕ್ಷಣಿಕ ಸಾಲಕ್ಕೆ ಒತ್ತು ನೀಡಿ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಬ್ಯಾಂಕರ್‌ಗಳು ಕೃಷಿ ಮತ್ತು ಶೈಕ್ಷಣಿಕ ಸಾಲಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಲಹೆ ನೀಡಿದರು.
    ಕುವೆಂಪು ರಂಗಮಂದಿರದಲ್ಲಿ ಗುರುವಾರ ಲೀಡ್ ಬ್ಯಾಂಕ್ ಮತ್ತು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಆರ್ಥಿಕ ಸೇವಾ ಇಲಾಖೆ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಮೂಲಕ ವಿಶೇಷ ಸಾಲಸೌಲಭ್ಯಕ್ಕೆ ಒತ್ತು ನೀಡಿದೆ. ಕೇಂದ್ರ ಸರ್ಕಾರದ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
    ವಿಶೇಷವಾಗಿ ಬ್ಯಾಂಕ್‌ಗಳು ಶೈಕ್ಷಣಿಕ ಸಾಲಕ್ಕೆ ಅಲೆದಾಟ ತಪ್ಪಿಸಬೇಕು. ಜತೆಗೆ ಕೃಷಿ, ಗೃಹ ಸಾಲವನ್ನೂ ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಬ್ಯಾಂಕ್‌ಗಳು ನೀಡುವ ಸೌಲಭ್ಯವನ್ನು ಸಾಲ ಎಂದು ಭಾವಿಸದೇ ಬಂಡವಾಳ ಎಂದು ಅರಿತು ಸಕಾಲಕ್ಕೆ ಸಾಲದ ಕಂತುಗಳನ್ನು ಮರುಪಾವತಿ ಮಾಡಬೇಕು ಎಂದರು.
    ಕೆನರಾ ಬ್ಯಾಂಕ್‌ನ ಮಣಿಪಾಲ ವೃತ್ತ ಪ್ರಬಂಧಕ ರಾಮನಾಯ್ಕ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ 28 ಬ್ಯಾಂಕ್‌ಗಳ 324 ಶಾಖೆಗಳಲ್ಲೂ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಾಲ ಸಂಪರ್ಕ ಕಾರ್ಯಕ್ರಮದ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ ಎಂದರು.
    ಇದೇ ವೇಳೆ ಸಾಂಕೇತಿಕವಾಗಿ ಹಲವರಿಗೆ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು. ಶಿವಮೊಗ್ಗ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕ ಸಂದೀಪ್ ರಾವ್, ಉಪ ಪ್ರಾದೇಶಿಕ ಪ್ರಬಂಧಕ ಸಿದ್ದೇಶ್ವರಪ್ಪ, ಎಸ್‌ಎಲ್‌ಬಿಸಿ ಪ್ರಧಾನ ಪ್ರಬಂಧಕ ಚಂದ್ರಶೇಖರ್ ರಾವ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts