More

    ಯೋಗಿಗೆ ಮತ್ತೆ ಯೋಗ!: ಉ.ಪ್ರ, ಉತ್ತರಾಖಂಡ, ಮಣಿಪುರಕ್ಕೆ ಕಮಲ; ಆಪ್​ಗೆ ಪಂಜಾಬ್

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ ಪಂಚರಾಜ್ಯಗಳ ಮತ ಸಮರಕ್ಕೆ ತೆರೆಬಿದ್ದ ಕೆಲವೇ ಕ್ಷಣಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಕುತೂಹಲ ಬಹಿರಂಗಗೊಂಡಿದೆ. ಬಹುತೇಕ ಸರ್ವೆಗಳು ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಆಪ್) ನಿಚ್ಚಳ ಬಹುಮತ ಎಂದು ಭವಿಷ್ಯ ನುಡಿದರೆ, ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟಗಳು ಸಮಬಲ ಸಾಧಿಸಿದರೂ ಕೂದಲೆಳೆಯ ಅಂತರದಲ್ಲಿ ಬಹುಮತದಿಂದ ವಂಚಿತವಾಗಬಹುದೆಂದು ಅಂದಾಜಿಸಿವೆ.

    ಉತ್ತರಕ್ಕೆ ಬಿಜೆಪಿಯೇ ಉತ್ತರ: ದೆಹಲಿ ಗದ್ದುಗೆಯ ಕೈಮರ ಎಂದೇ ಹೇಳಲಾಗುವ ಉತ್ತರ ಪ್ರದೇಶದಲ್ಲಿ ಎಲ್ಲ ಸಮೀಕ್ಷೆಗಳು ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಹೀಗಾದಲ್ಲಿ ಸಿಎಂ ಯೋಗಿ ಆದಿತ್ಯನಾಥರ ವರ್ಚಸ್ಸು ರಾಷ್ಟ್ರಮಟ್ಟದಲ್ಲಿ ವೃದ್ಧಿಸಲಿದೆ. ಸಮಾಜವಾದಿ ಪಕ್ಷ ಈ ಸಾರಿ ಹೆಚ್ಚು ಸ್ಥಾನಗಳಿಸುವ ಲಕ್ಷಣ ತೋರಿರುವುದು 2024ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭವಲ್ಲ ಎಂಬ ಸಂದೇಶ ಸೂಚ್ಯಗೊಳಿಸಿದೆ. ಬಿಎಸ್​ಪಿ ಮತ್ತು ಕಾಂಗ್ರೆಸ್​ಗಳು ಬೆರಳೆಣಿಕೆ ಸ್ಥಾನಗಳನ್ನು ಗಳಿಸುವ ಅಂದಾಜಿದ್ದು, ಮತ್ತಷ್ಟು ಅಧಃಪತನಕ್ಕೆ ಇಳಿಯುವುದು ಗೋಚರವಾಗಿದೆ. ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ಬಿಜೆಪಿ ಸಂಖ್ಯೆಯನ್ನು ಕಡಿಮೆ ಮಾಡಿರುವುದು ನಿಚ್ಚಳ.

    ಕೇಜ್ರಿವಾಲ್ ಕಮಾಲ್: ಪಂಜಾಬ್​ನಲ್ಲಿ ಆಪ್ ಜಯ ಗಳಿಸಿದರೆ, ಇದೇ ಮೊದಲ ಬಾರಿಗೆ ರಾಜಧಾನಿ ಹೊರತಾಗಿ ಇನ್ನೊಂದು ರಾಜ್ಯದಲ್ಲಿ ತನ್ನ ಪತಾಕೆ ಹಾರಿಸಲಿದೆ. ಇದು ಪಕ್ಷದ ಸಂಚಾಲಕರೂ ಆದ ದೆಹಲಿ ಸಿಎಂ ಕೇಜ್ರಿವಾಲ್​ಗೆ ನೂರ್ಮಡಿ ಬಲವನ್ನು ಒದಗಿಸಲಿದೆ. ಒಳಜಗಳದಿಂದ ಸೊರಗಿರುವ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಸಮೀಕ್ಷೆಗಳು ಹೇಳಿವೆ.

    ಎನ್​ಡಿಎಯಿಂದ ಹೊರಬಂದ ಅಕಾಲಿದಳ ಸಾಧನೆ ಅಷ್ಟಕಷ್ಟೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆಗೂಡಿದ ಬಿಜೆಪಿ ಬೆರಳೆಣಿಕೆಯ ಸ್ಥಾನಗಳಿಸುವ ಸಾಧ್ಯತೆ ಇದೆ. ಬಿಜೆಪಿ ಉತ್ತರಾಖಂಡ ಉತ್ತರಾಖಂಡದಲ್ಲಿ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಸರ್ಕಾರ ಪತನವಾಗಲಿದ್ದು, ಒಂದೇ ಪಕ್ಷ ಸತತ ಎರಡು ಬಾರಿ ಅಧಿಕಾರಕ್ಕೆ ಮರಳದ ಪರಂಪರೆ ಮುಂದುವರಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ಸರಳ ಬಹುಮತ ಪಡೆಯುವ ಇಲ್ಲವೆ ಬಹುಮತಕ್ಕೆ ಹತ್ತಿರವಾಗಿ ಪಕ್ಷೇತರರ ಮೂಲಕ ಅಧಿಕಾರ ಹಿಡಿಯುವ ಸಾಧ್ಯತೆಯನ್ನು ಈ ಸಮೀಕ್ಷೆ ಸಾರಿದೆ. ಬಿಜೆಪಿ ಗೆಲುವಿಗೆ ರಾಜ್ಯದ ನಾಯಕತ್ವಕ್ಕಿಂತ ಪ್ರಧಾನಿ ಮೋದಿ ವರ್ಚಸ್ಸು ಹೆಚ್ಚು ಕೆಲಸ ಮಾಡಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

    ಈಶಾನ್ಯದಲ್ಲಿ ಕಮಲ: ಮಣಿಪುರದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಸರಳ ಬಹುಮತ ದೊರೆಯುವ ಅಥವಾ ಒಂದೆರಡು ಸ್ಥಾನ ಕೊರತೆಯಾಗುವುದನ್ನು ಸಮೀಕ್ಷೆ ಸೂಚಿಸಿದೆ. ಇದನ್ನು ಎನ್​ಪಿಪಿ ಇಲ್ಲವೆ ಪಕ್ಷೇತರರ ಮೂಲಕ ಪಡೆಯುವ ಸಾಧ್ಯತೆ ಇದೆ.

    ಗೋವಾದಲ್ಲಿ ಜಿದ್ದಾಜಿದ್ದಿ: ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು 16ರಿಂದ 20 ಸ್ಥಾನ ಸಮಬಲದಲ್ಲಿವೆ. ಇದು ನಿಜವಾದಲ್ಲಿ ಎಂಜಿಪಿ ಅಥವಾ ಪಕ್ಷೇತರರ ನೆರವಿಗೆ ಎರಡೂ ಪಕ್ಷಗಳು ಪ್ರಯತ್ನಿಸಿ ಅಧಿಕಾರ ಹಿಡಿಯಲು ಮುಂದಾಗುತ್ತವೆ. ಇದರಿಂದ ಮತ್ತೆ ಇಲ್ಲ ಶಾಸಕರ ಖರೀದಿ ಆರ್ಭಟದ ಲಕ್ಷಣ ಇದೆ.

    ಯೋಗಿಗೆ ಮತ್ತೆ ಯೋಗ!: ಉ.ಪ್ರ, ಉತ್ತರಾಖಂಡ, ಮಣಿಪುರಕ್ಕೆ ಕಮಲ; ಆಪ್​ಗೆ ಪಂಜಾಬ್

    ಉಪ್ರ ಕಡೆಯ ಹಂತದಲ್ಲಿ 54% ಮತದಾನ: ಫೆಬ್ರವರಿ 10ರಂದು ಉತ್ತರ ಪ್ರದೇಶದ ಮೂಲಕವೇ ಆರಂಭವಾದ ಪಂಚರಾಜ್ಯ ಚುನಾವಣೆಯು ಅಂತಿಮ ಮತ್ತು 7ನೇ ಚರಣದ ಮತದಾನ ಸೋಮವಾರ ಇದೇ ರಾಜ್ಯದಲ್ಲಿ ಕೊನೆಗೊಂಡಿತು. ಮಾರ್ಚ್ 10ರಂದು ಐದೂ ರಾಜ್ಯಗಳ ಫಲಿತಾಂಶ ಪ್ರಕಟ ಆಗಲಿದೆ. ಕೊನೆಯ ಹಂತದಲ್ಲಿ ಪೂರ್ವ ಭಾಗದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಸಂಜೆ 5ರವರೆಗೆ ಶೇ. 54.18 ಮತದಾನ ಆಗಿದ್ದು, ಕಣದಲ್ಲಿದ್ದ 613 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts